ಸ್ವಂತ ಮನೆ ಹೊಂದಿರುವ ಎಲ್ಲರಿಗೂ ನಮ್ಮ ಮನೆಯ ಮುಂದೊಂದು ಚಿಕ್ಕ ಕೈತೋಟ ಇರಬೇಕೆಂಬ ಅಸೆ ಇದ್ದೆ ಇರುತ್ತದೆ. ಅನೇಕ ಬಗೆಯ ಗಿಡಗಳಿದ್ದರೂ ಆ ತೋಟಕ್ಕೆ ಆಕರ್ಷಣೆ ಇಲ್ಲದಿರುವದನ್ನು ಕಂಡರೆ ಅದನ್ನು ನೆಟ್ಟವರಿಗೆ ಬೇಸರವಾಗುವುದು ಸಹಜ. ಕೈತೋಟದಲ್ಲಿ ಗಿಡಗಳನ್ನು ನೆಡುವುದಕ್ಕೂ ಸರಿಯಾದ ಯೋಜನೆ ಇರಬೇಕು. ಆಗ ಮಾತ್ರ ಆ ತೋಟಕ್ಕೊಂದು ಸೌಂದರ್ಯ ಹಾಗೂ ಸುಂದರವಾಗಿರುತ್ತದೆ.
ತೋಟದಲ್ಲಿ ಸೌಂದರ್ಯ ಮತ್ತು ಹಸಿರಾಗಿಸಲು ಕೆಲವು ಸಲಹೆಗಳಿವೆ:
- ಒಂದೇ ಬಗೆಯ ಹಲವು ಗಿಡಗಳನ್ನು ಒಂದು ಸಾಲಿನಲ್ಲಿ ಅಥವಾ ಒಂದು ಗುಂಪಿನಲ್ಲಿ ನೆಡಿ. ಆಗ ಅವು ಹೂಬಿಟ್ಟಾಗ ಆಕರ್ಷಕವಾಗಿ ಕಾಣುತ್ತವೆ.
- ಸಣ್ಣ ಹಾಗೂ ದೊಡ್ಡ ಗಿಡಗಳನ್ನು ಒಟ್ಟಿಗೆ ನೆಡುವುದರಿಂದ ಎತ್ತರದ ಗಿಡಗಳ ಮಧ್ಯೆ ಗಿಡ್ಡನೆಯ ಗಿಡಗಳು ಬೆಳೆಯುವುದೂ ಇಲ್ಲ, ಕಾಣಿಸುವುದೂ ಇಲ್ಲ.
- ಹೂತೋಟದ ಮಧ್ಯೆ ಮಣ್ಣು ಹಾಕಿ ಸ್ವಲ್ಪ ಎತ್ತರದ ಗುಡ್ಡೆ ಮಾಡಿ ಗಿಡ ನೆಟ್ಟರೆ ಅದರ ಸೌಂದರ್ಯವೇ ಬೇರೆ.
- ದಾರಿಯ ಹೊರ ಸುತ್ತಿನಲ್ಲಿ ದೊಡ್ಡಗಿಡಗಳು, ಅದರೊಳಗೆ ಸ್ವಲ್ಪ ಸಣ್ಣ ಗಿಡಗಳು ಮಧ್ಯದಲ್ಲಿ ಸಣ್ಣ ಗಿಡಗಳು ಅಥವಾ ಇದರ ವಿರುದ್ಧ ಕ್ರಮದಲ್ಲಿ ವೃತ್ತಾಕಾರವಾಗಿ ಗಿಡಗಳನ್ನು ನೆಟ್ಟರೆ ಹೂತೋಟ ಸುಂದರವಾಗಿ ಕಾಣುತ್ತದೆ.
- ಅಪರೂಪಕ್ಕೊಮ್ಮೆ ಹೂಬಿಡುವ ಗಿಡಗಳಿಗಿಂತ ಪ್ರತಿ ದಿನವೂ ಹೂಬಿಡುವ ಗಿಡಗಳನ್ನು ನಿಮ್ಮ ತೋಟಕ್ಕಾಗಿ ಆಯ್ದುಕೊಳ್ಳಿ. ಸಾಧ್ಯವಿದ್ದರೆ ಬೆಳಿಗ್ಗೆ ಮತ್ತು ಸಂಜೆ ಹೊತ್ತೂ ಗಿಡಗಳಿಗೆ ನೀರು ಹಾಕಿ ಮತ್ತು ಗಿಡಗಳ ಮೇಲೂ ನೀರು ಚಿಮುಕಿಸಿ. ಇದರಿಂದ ಗಿಡಗಳು ಫ್ರೆಶ್ ಆಗಿ ನಳನಳಿಸುತ್ತವೆ.
- ದಾಸವಾಳದಂತಹ ಗಿಡಗಳಿಂದ ಹೂತೋಟಕ್ಕೆ ಸುತ್ತ ಬೇಲಿ ನಿರ್ಮಿಸಿ. ಇದರ ಹೂಗಳು ಚಿಟ್ಟೆಗಳನ್ನು ಆಕರ್ಷಿಸುತ್ತವೆ.
- ಕಾಲಕಾಲಕ್ಕೆ ಹೂತೋಟದ ಕಳೆಯನ್ನು ಕೀಳುತ್ತಿರಿ. ಗೊಬ್ಬರ ಹಾಕಿ. ಗಿಡಗಳನ್ನು ಟ್ರಿಮ್ ಮಾಡುತ್ತಿರಿ. ಕೀಟ ಅಥವಾ ಹುಳಗಳ ಕಾಟ ಕಂಡುಬಂದರೆ ಸಾವಯವ ಕೀಟನಾಶಕ ಬಳಸಿ.
- ಹುಲ್ಲುಹಾಸಿನ ಮಧ್ಯೆ ನದಿ ತೀರದಲ್ಲಿ ಸಿಗುವ ಗುಂಡಗಿರುವ ಕಲ್ಲುಗಳನ್ನು ಹರಡಿ ಪುಟ್ಟದೊಂದು ಕಾಲು ದಾರಿ ನಿರ್ಮಿಸಿ. ಅದರಿಂದ ನಿಮ್ಮ ಹೂತೋಟಕ್ಕೆ ಆಕರ್ಷಣೆಯವಾಗಿ ಸುಂದರವಾಗಿರುತ್ತದೆ.
- ಒಂದೇ ರೀತಿಯ ಪ್ಲಾಸ್ಟಿಕ್ ಬಾಟಲ್‌ಗಳನ್ನು ಅಡ್ಡವಾಗಿಟ್ಟು ಮಧ್ಯೆ ಸ್ವಲ್ಪ ಭಾಗ ಕತ್ತರಿಸಿ ಮಣ್ಣು ತುಂಬಿಸಿ ಗಿಡ ನೆಟ್ಟು ತೂಗು ಹಾಕಿ. ಮನೆಯಲ್ಲಿ ಸಿಗುವ ವಿವಿಧ ಪ್ಲಾಸ್ಟಿಕ್ ಅಥವಾ ಬೇರೆ ಉಪಯೋಗವಿಲ್ಲದ ವಸ್ತುಗಳನ್ನು ತಂದು ಜಾಡಿಗಳಲ್ಲಿ ಕಳ್ಳಿ ಗಿಡಗಳಂತಹ ಗಿಡಗಳನ್ನು ಬೆಳೆಸಬಹುದು.
- ಬಳ್ಳಿ ಗಿಡಗಳನ್ನು ಎತ್ತರದಲ್ಲಿ ಕಟ್ಟಿದ ಹಗ್ಗಗಳಲ್ಲಿ ಹಬ್ಬಿಸಿದರೆ ಅಥವಾ ಹಳೆಯ ದೊಡ್ಡ ಕೊಡೆ ಮೇಲೆ ಹಬ್ಬಿಸಿದರೆ ಬಹಳ ಸುಂದರವಾಗಿ ಕಾಣುತ್ತದೆ.
ಮನೆಯ ಮುಂದಿನ ಹೂತೋಟದಿಂದ ಮನೆಯ ಸೌಂದರ್ಯ ಇಮ್ಮಡಿಸುವುದಷ್ಟೇ ಅಲ್ಲ ಪ್ರಶಾಂತ ವಾತಾವರಣವೂ, ಮನಸ್ಸಿನ ಒತ್ತಡಗಳೂ ದೂರವಾಗುತ್ತವೆ. ಬಿಡುವಿನ ವೇಳೆಯ ಸದುಪಯೋಗವಾಗುತ್ತದೆ.