ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥದತ್ತ. ಅವರ ತಂದೆಯ ಹೆಸರು ವಿಶ್ವನಾಥದತ್ತ ಹಾಗೂ ತಾಯಿ ಭುವನೇಶ್ವರಿದೇವಿ. ವಿಶ್ವನಾಥ ದತ್ತರು ಸುಪ್ರಸಿದ್ಧವಕೀಲರಾಗಿದ್ದರು. ತಮ್ಮ ಮಗನು ಕೂಡ ತಮ್ಮ ಹಾಗೇ ವಕೀಲನಾಗಬೇಕು ಎಂಬುದು ಅವರ ಮಹಾದಾಸೆಯಾಗಿತ್ತು. ಆಗಿನ ಕಾಲದಲ್ಲಿ ಕೋಲ್ಕತ್ತಾದಲ್ಲಿ ದೊಡ್ಡ ದೊಡ್ಡ ಜಮೀನ್ಹಾರರು, ಬ್ರಿಟಿಷ್ ಅಧಿಕಾರಿಗಳು ಸಾರೋಟಿನಲ್ಲಿ ಓಡಾಡುತ್ತಿದ್ದರು.
ಕುದುರೆಗಳನ್ನು ಕಟ್ಟಿದ ಆ ಸಾರೋಟಿಗೆ ಒಬ್ಬಸಾರಥಿ ಇರುತ್ತಿದ್ದ ಬಾಲಕ ನರೇಂದ್ರನಿಗೆ ತಾನು ದೊಡ್ಡವನಾದ ಮೇಲೆ ಸಾರೋಟಿನ ಸಾರಥಿಯಾಗಬೇಕೆಂಬ ಆಸೆಯುಂಟಾಗುತ್ತಿತ್ತು.
ಒಮ್ಮೆ ನರೇಂದ್ರನ ತಂದೆ ಅವನನ್ನು ಹತ್ತಿರಕ್ಕೆ ಕರೆದು ದೊಡ್ಡವನಾದ ಮೇಲೆ ನೀನೇನಾಗುತ್ತಿಯಾ? ಎಂದು ಕೇಳಿದರಂತೆ. ಅದಕ್ಕೆ ಏನೂ ಅರಿಯದ ನರೇಂದ್ರನು ದೊಡ್ಡವನಾದ ಮೇಲೆ ನಾನು ಸಾರೋಟಿನ ಸಾರಥಿಯಾಗುತ್ತೇನೆ ಎಂದು ಹೇಳಿದನು. ಇವನ ಮಾತಿನಿಂದ ತಂದೆಯವರಿಗೆ ತುಂಬಾ ಕೋಪ ಬಂದಿತು. ಅವರು ಅವನ ಕಪಾಳಕ್ಕೊಂದು ಏಟು ಕೊಟ್ಟೆ ಬಿಟ್ಟರು. ಆಗ ಬಾಲಕ ನರೇಂದ್ರನು ಅಳುತ್ತ ತಾಯಿಯ ಬಳಿಗೆ ಹೋದನು.
ತಾಯಿ ಭುವನೇಶ್ವರಿದೇವಿ ಅವನನ್ನು ಸಮಾಧಾನಪಡಿಸಿ ದೇವರ ಕೋಣೆಗೆ ಕರೆದುಕೊಂಡು ಹೋದಳು. ದೇವರ ಕೋಣೆಯ ಗೋಡೆಯ ಮೇಲೆ ಶ್ರೀಕೃಷ್ಣ ಅರ್ಜುನರು ಯುದ್ಧರಂಗದಲ್ಲಿ ರಥದ ಮೇಲೆ ಕುಳಿತಿರುವ ಒಂದು ಪಟವಿತ್ತು. ಅದನ್ನು ಅವರ ತಾಯಿ ನರೇಂದ್ರನಿಗೆ ತೋರಿಸಿ ಈ ಪಠದಲ್ಲಿರುವ ಶ್ರೀಕೃಷ್ಣನ ಕೂಡ ಸಾರಥಿಯೇ. ಆದ್ದರಿಂದ ನಿನಗೆ ಸಾರಥಿಯೇ ಆಗಬೇಕೆಂಬ ಆಸೆ ಇದ್ದರೆ, ಜಗತ್ತಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವ ಸಾರಥಿಯಾಗು ಎಂದು ಆಶೀರ್ವಾದ ಮಾಡಿ ಹೇಳಿದಳು.
ಆ ಮಾತು ಬಾಲಕ ನರೇಂದ್ರನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡಿತು. ತಾನು ಈ ಲೋಕಕ್ಕೆಲ್ಲ ದಾರಿ ತೋರಿಸುವ ಸಾರಥಿಯಾಗಬೇಕು ಎಂದು ಅಂದೇ ಮನದಲ್ಲಿ ನಿರ್ಧರಿಸಿದ. ಮುಂದೆ ದೊಡ್ಡವನಾದ ಮೇಲೆ ವಿಶ್ವಕ್ತೆ ಆಧ್ಯಾತ್ಮಿಕ ಜ್ಞಾನ ನೀಡುವ ಮಾರ್ಗದರ್ಶಕನಾದ.
ತಾಯಂದಿರು ತಮ್ಮಮಕ್ಕಳ ವ್ಯಕ್ತಿತ್ವವನ್ನು ಹೇಗೆ ರೂಪಿಸಬೇಕೆಂಬುದಕ್ಕೆ ಈ ಘಟನೆಯೊಂದು ಉತ್ತಮ ಉದಾಹರಣೆಯಾಗುತ್ತದೆ ಅಲ್ಲವೇ?