ಗ್ಯಾಸ್ ಗೀಸರ್ ಬೆಲೆಯೂ ಕಡಿಮೆ, ಅಡುಗೆ ಸಿಲಿಂಡರ್ ಬಳಸುವುದರಿಂದ ದರದಲ್ಲೂ ತೀರಾ ಅಗ್ಗ. ನೀರು ತಕ್ಷಣ ಬಿಸಿ ಆಗುತ್ತದೆ, ಇದಲ್ಲೇವನ್ನು ಗಮಿನಿಸಿ ಜನರು ಗ್ಯಾಸ್ ಗೀಸರ್ ನತ್ತ ವಾಲತೊಡಗಿದ್ದಾರೆ.
ಗ್ಯಾಸ್ ಗೀಸರ್ ಗೆ ಇಂಧನವಾಗಿ ಬಳಕೆಯಾಗುವುದು ಎಲ್.ಪಿ.ಜಿ. ಇದು ಆಮ್ಲಜನಕ ಹೆಚ್ಚಾಗಿರುವ ಕಡೆ ಉರಿದು ಕಾರ್ಬನ್ ಡೈ ಆಕ್ಸೈಡ್ ಆಗುತ್ತದೆ. ಆದರೆ, ಆಮ್ಲಜನಕದ ಕೊರತೆಯಾದರೆ ಮಾತ್ರ ಇದು ಪೂರ್ಣವಾಗಿ ಉರಿಯದೇ ಕಾರ್ಬನ್ ಮಾನಾಕ್ಸೈಡ್ ಆಗಿ ವಿಷಕಾರಿಯಾಗುತ್ತದೆ. ಇದನ್ನು ಸೇವಿಸಿದರೆ ಸಾವು ಖಚಿತ. ಉತ್ತಮವಾಗಿ ಗಾಳಿ ಆಡುವ ವ್ಯವಸ್ಥೆ ಇಲ್ಲದಿದ್ದರಂತೂ ಈ ಸಾಧ್ಯತೆ ಹೆಚ್ಚು. ವಿಚಿತ್ರ ಎಂದರೆ ಈ ವಿಷಾನಿಲಕ್ಕೆ ಯಾವುದೇ ವಾಸನೆಯಾಗಲಿ, ಬಣ್ಣವಾಗಲಿ ಇರುವುದಿಲ್ಲ. ಇದರಿಂದ ವಿಷಾನಿಲ ಹೊರಹೊಮ್ಮುವುದು ತಿಳಿಯುವುದೇ ಇಲ್ಲ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಸಾಕು ಅಪಾಯ ಗ್ಯಾರಂಟಿ.
ಇದರಿಂದ ಆಗುವ ಅಪಾಯಗಳೇನು ?
ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಆಯಾಸ, ತಲೆನೋವು, ತಲೆಸುತ್ತು, ಗಲಿಬಿಲಿ, ಫಿಟಸ್, ಮರೆಗುಳಿತನ ಬರುತ್ತದೆ. ಗರ್ಭಿಣಿಯರ ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಗ್ಯಾಸ್ ಗೀಸರ್ ನಿಂದ ನೀರು ಕಾಯಿಸಿ ಪ್ರತಿ ದಿನವೂ ಕಿಟಿಕಿ ಮುಚ್ಚಿ ಸ್ನಾನ ಮಾಡುವವರು ದಿನವೂ ಸ್ವಲ್ಪ ಸ್ವಲ್ಪವೇ ವಿಷಕಾರಿ ಅನಿಲವನ್ನು ಸೇವಿಸುತ್ತಿದ್ದಂತೆ ದೀರ್ಘಕಾಲೀಕವಾದ ನರರೋಗಗಳೂ ಬರುತ್ತವೆ. ಮತಿಭ್ರಮಣೆಯುಂಟಾಗುತ್ತದೆ. ಒಂದು ವೇಳೆ ಹೆಚ್ಚಾಗಿ ಸೇವಿಸಿದರೆ ಸಾವು ಕೂಡ ಸಂಭವಿಸುತ್ತದೆ.
ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗೆ ಹೇಗೆ ?
ಗ್ಯಾಸ್ ಗೀಸರ್ ಬಳಸುವ ಕೋಣೆಯಲ್ಲಿ ಆಮ್ಲಜನಕ ಆಡುವಷ್ಟು ವಿಶಾಲವಾದ ಕಿಟಕಿಗಳು ಇರಬೇಕು. ಗೀಜರ್ ಆನ್ ಮಾಡಿದಾಕ್ಷಣ ಕಿಟಕಿಗಳನ್ನು ತೆರೆಯಬೇಕು. ಯಾವುದೇ ಕಾರಣಕ್ಕೂ ಕಿಟಿಕಿ ಮುಚ್ಚಿ ಗ್ಯಾಸ್ ಗೀಸರ್‌ನ್ನು ಆನ್ ಮಾಡಬಾರದು. ಒಂದು ವೇಳೆ ಕಿಟಕಿ ಮುಚ್ಚಲೇ ಬೇಕು ಎನಿಸಿದರೆ ಸ್ನಾನಕ್ಕೂ ಮುಂಚೆಯೇ ಗ್ಯಾಸ್ ಗೀಸರ್ ನಿಂದ ಸಾಕಷ್ಟು ಪ್ರಮಾಣದಲ್ಲಿ ಬಿಸಿ ನೀರು ಸಂಗ್ರಹಿಸಬೇಕು. ಈ ವೇಳೆ ಕಿಟಕಿಯನ್ನು ತೆರೆದಿರಬೇಕು.