ಸಾಮಾನ್ಯವಾಗಿ ಮೈಸೂರು ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಮದ್ದೂರು ವಡೆ ಚಿರಪರಿಚಿತ ಖಾದ್ಯ. ಬಾಯಲ್ಲಿ ನೀರೂರಿಸುವ ಈ ತಿನಿಸು ಮನೆಯಲ್ಲೇ ಮಾಡಿ ಸವಿದರೆ ರುಚಿ, ಶುಚಿಯಾಗಿ ಹಾಗೂ ಅರೋಗ್ಯಕರವಾಗಿರುತ್ತದೆ. ಸುಲಭವಾಗಿ ಕೂಡ ಮಾಡಬಹುದು.
ಮದ್ದೂರು ವಡೆ ಮಾಡಲು ಬೇಕಾಗುವ ಸಾಮಗ್ರಿ:
ಅಕ್ಕಿ ಹಿಟ್ಟು - 2 ಕಪ್
ಚಿರೋಟಿ ರವೆ - 1 ಕಪ್
ಮೈದಾ ಹಿಟ್ಟು - ಅರ್ಧ ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ - ಕಾಲು ಕಪ್
ಸಣ್ಣಗೆ ಹೆಚ್ಚಿದ ಕರಿಬೇವು - ಕಾಲು ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ - 1 ಕಪ್
ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ - 6
ತುಪ್ಪ - ಕಾಲು ಕಪ್
ಇಂಗು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು,
ಎಣ್ಣೆ - ಕರಿಯಲು ತಕ್ಕಷ್ಟು
ಮದ್ದೂರು ವಡೆ ಮಾಡುವ ವಿಧಾನ:
ಬಟ್ಟಲಿಗೆ ಅಕ್ಕಿ ಹಿಟ್ಟು, ಮೈದಾ, ರವೆ ಹಾಕಿ ಚೆನ್ನಾಗಿ ಕಲಸಿರಿ. ಇದಕ್ಕೆ ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ ,ಉಪ್ಪು, ಇಂಗು, ಈರುಳ್ಳಿ ಹಾಕಿ ಕಲಸಿ. ಬಳಿಕ ತುಪ್ಪ ಹಾಕಿ. ನಂತರ ಸ್ವಲ್ಪವೇ ನೀರು ಹಾಕಿ, ಪೂರಿನ ಹಿಟ್ಟಿನ ಹದಕ್ಕೆ ಬರುವವರೆಗೂ ಕಲಸಿ. ಹತ್ತು ನಿಮಿಷ ಬಿಟ್ಟು ಚಿಕ್ಕ ಉಂಡೆಗಳನ್ನು ಮಾಡಿ. ಕೈಗೆ ತುಸು ಎಣ್ಣೆ ಸವರಿಕೊಂಡು ಉಂಡೆಗಳನ್ನು ನಿಪ್ಪಟ್ಟಿನಂತೆ ತಟ್ಟಿ, ಬಿಸಿ ಎಣ್ಣೆಯಲ್ಲಿ ಕೆಂಪು ಬಣ್ಣ ಬರುವ ತನಕ ಕರಿದರೆ ರುಚಿ ರುಚಿಯಾದ ಮದ್ದೂರು ವಡೆ ಸವಿಯಲು ರೆಡಿ.