ಪುರಾಣದಲ್ಲಿ ಹೇಳಿರುವಂತೆ ಜಲಂಧರ ( ಶಂಖಚೂಡ) ನನ್ನು ಕೊಲ್ಲಲು ವಿಷ್ಣುವು ಶಂಖಚೂಡನ ವೇಷಧಾರಿಯಾಗಿ ಆತನ ಸತಿ ವೃಂದಾಳ (ತುಳಸಿ) ಪಾತಿವ್ರತ್ಯವನ್ನು ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ವೃಂದಾ ವಿಷ್ಣುವಿಗೆ "ಹೇ ನಾಥ ತೇ ದಯಾ ನಾಸ್ತಿ ಪಾಷಾಣ ಸದೃಶಸ್ಯ ಚ" ಕಲ್ಲಿನಂತಹ ಮನಸ್ಸಿನ ನೀನು ಕಲ್ಲಾಗಿ ಅವತರಿಸು ಎಂದು ಶಾಪವನ್ನು ಕೊಡುತ್ತಾಳೆ. ಪುನಃ ವಿಷ್ಣುವು ನೀನು ನನ್ನನ್ನು ಪತಿಯಾಗಿ ಪಡೆಯಲು ಹಲವು ವರ್ಷ ತಪಸ್ಸನ್ನು ಮಾಡಿರುವೆ, ಆದರೆ ಅದು ನೆರವೇರಲಿಲ್ಲ ನಿನ್ನ ತಪಸ್ಸಿಗೆ ಈಗ ವರವನ್ನು ನೀಡುತ್ತಿರುವೆ, ನೀನು ಗಂಡಕಿ ನದಿಯಾಗಿ ಅವತರಿಸು ನಿನ್ನ ಒಡಲಿನಲ್ಲಿ ಸಾಲಿಗ್ರಾಮ ರೂಪದ ಕಲ್ಲಾಗಿ ನಾನು ನಿನ್ನ ಸಮೀಪದಲ್ಲಿ ಇರುವೆ ಎಂದು ವರವನ್ನು ನೀಡುತ್ತಾರೆ. ಆದ್ದರಿಂದ ವಿಷ್ಣುವಿನ ಅವತಾರವಾದ ಸಾಲಿಗ್ರಾಮಕ್ಕೆ ಮಹತ್ವವನ್ನು ನೀಡಲಾಗಿದೆ.
ಈ ಸಾಲಿಗ್ರಾಮವು ಅವಂತಿ ದೇಶದಲ್ಲಿ ಹರಿಯೆಂಬ ಹೆಸರಿನ ಪರ್ವತ ಇದ್ದು ಅಲ್ಲಿ ಪರಮ ಪವಿತ್ರವಾದ ಶಿಲಾಮಯ ಪ್ರದೇಶದಲ್ಲಿ ಸಾಲಿಗ್ರಾಮ ವೆಂಬ ಹೆಸರಿನ ಕ್ಷೇತ್ರವಿದೆ. ಅಂದರೆ ಈಗಿನ ನೇಪಾಳದ ಮಸ್ತಾಂಗ್ ಪ್ರದೇಶದಲ್ಲಿ ಹರಿಯುವ ಕಾಲಿ-ಗಂಡಕಿ ನದಿಯ ಸಮೀಪ ಸಾಲಿಗ್ರಾಮ ಊರಿದೆ ಅಲ್ಲಿ ಹೆಚ್ಚಾಗಿ ಸಾಲಿಗ್ರಾಮ ಶಿಲೆ ಸಿಗುತ್ತದೆ.
"ಪಶ್ಚಾತ್ ಸಹಸ್ರ ವರ್ಷಾಣಾಂ ಸಾಲಿಗ್ರಾಮ ಸ್ಯ ಚಕ್ರಕೇ
ವಜ್ರ ಕೀಟ ಇತಿಖ್ಯಾತೋಜಂತುರ್ಭೂತ್ವಾ ಹರಿಃ ಸ್ವಯಂ" ||
ಈ ಸಾಲಿಗ್ರಾಮದಲ್ಲಿ ಸಾಕ್ಷಾತ್ ವಿಷ್ಣು ಕೀಟ ಜಂತು ವಾಗಿರುವನು ಈ ಸಾಲಿಗ್ರಾಮಗಳು ಹಿರಣ್ಮಯವಾಗಿಯೂ, ಮಹಾ ಶಕ್ತಿಶಾಲಿಯಾಗಿಯೂ, ವಿದ್ಯುತ್ ಸಂಚಾರ ಉಳ್ಳವುಗಳಾಗಿಯೂ, ಪ್ರಕಾಶಮಾನವಾಗಿಯೂ ಇರುವವು.
"ನಾನಾ ವಿಧಾನಿ ಚಕ್ರಾಣಿ ನಾನಾ ರೂಪಾಣಿ ಲೀಲಯಾ"
ಇಂತಹ ಸಾಲಿಗ್ರಾಮ ಗಳಲ್ಲಿ ಚಕ್ರ ಮೊದಲಾದ ಚಿಹ್ನೆಗಳು ನಾನಾ ವಿಧವಾಗಿ, ನಾನಾ ರೂಪದಿಂದ ತಮ್ಮಷ್ಟಕ್ಕೆ ತಾವೇ ಲೀಲಾಯ ಮಾನವಾಗಿ ಚಿತ್ರಿಸಲ್ಪಡುವವು. ಸಹಸ್ರಾರು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಇಂತಹ ಸಾಲಿಗ್ರಾಮಗಳಲ್ಲಿ ಸಾಕ್ಷಾತ್ ಲಕ್ಷ್ಮಿ ಪತಿಯಾದ ಭಗವಾನ್ ವಿಷ್ಣು ಪರಮಾತ್ಮನ ಸಾನ್ನಿಧ್ಯವು ಸದಾಕಾಲ ಇರುವುದು. ಆದ್ದರಿಂದ ಸಾಲಿಗ್ರಾಮದಲ್ಲಿ ವಿಷ್ಣುವಿನ ಆವಾಹನೆ ವಿಸರ್ಜನೆಯ ಅವಶ್ಯಕತೆ ಇರುವುದಿಲ್ಲ.
" ಸಾಲಿಗ್ರಾಮ ಶಿಲಾಯಾಂತು ನಾ$$ವಾಹನ ವಿಸರ್ಜನೇ".
ಒಂದು ಸಾಲಿಗ್ರಾಮವನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ದರ್ಶನ ಮತ್ತು ಪೂಜಿಸಿದ ಫಲ ದೊರೆಯುತ್ತದೆ.
" ಮಹಾಲಿಂಗ ಕೋಟಿಬಿಃ ದೃಷ್ಟಿ ಯದ್ ಫಲಂ ಪೂಜತಿ
ಸಾಲಿಗ್ರಾಮ ಶಿಲಾಯಾಂತು ಏಕಸ್ಯಂ ಇವ ತದ್ಭವೇತ್".
ಇದನ್ನು ಪೂಜಿಸುವುದರಿಂದ ಇಷ್ಟಾರ್ಥಸಿದ್ಧಿ ಆರೋಗ್ಯ ಐಶ್ವರ್ಯ ಶಾಂತಿ ದೊರೆಯುತ್ತದೆ ಇದರ ನೀರಿನ ಸ್ಪರ್ಶದಿಂದ ಚಿಂತೆ ಒತ್ತಡ ಕಡಿಮೆಯಾಗುತ್ತದೆ.
" ನಾ ಮಂತ್ರ ಪೂಜನಂ ನೈವ ಸಾಲಿಗ್ರಾಮ ಶಿಲಾರ್ಚನೇ
ನ ಸ್ತುತಿರ್ನೋಪಚಾರಶ್ಚ ನ ತೀರ್ಥಂ ನ ಚ ಭಾವನಾ".
ಇಂತಹ ಭಗವಂತನ ನಿತ್ಯ ಸಾನ್ನಿಧ್ಯಹೊಂದಿರುವ ಸಾಲಿಗ್ರಾಮದಲ್ಲಿ ಹಲವು ವರ್ಣಗಳು ಹಲವು ವಿಧಗಳು ಇದೆ.