ಐದು ದೇವತೆಗಳಾದ ಶಿವ, ವಿಷ್ಣು, ದೇವಿ ಅಥವಾ ದುರ್ಗೆ, ಸೂರ್ಯ ಮತ್ತು ಗಣೇಶ ಪಂಚಾಯತನ ಪೂಜೆಯಲ್ಲಿ ಒಳಗೊಳ್ಳುತ್ತದೆ.
ಪಂಚಾಯತವೆಂದರೆ ಐದು ದೇವರುಗಳನ್ನು ಒಂದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಸಮಾಜದ ಎಲ್ಲಾ ಮತದ ಆರಾಧಕರೂ ಒಂದೇ ಸ್ಥಳದಲ್ಲಿ ತಮ್ಮ ತಮ್ಮ ದೇವರನ್ನು ಪೂಜಿಸಿ ಆರಾಧಿಸುವ ಮೂಲಕ ಸರ್ವ ಮತಸ್ಥರಲ್ಲೂ ಸಮನ್ವಯತೆ ಕಂಡುಕೊಳ್ಳುವ ಉದ್ದೇಶವಾಗಿದೆ. ಪಂಚದೇವತೆಗಳನ್ನು ಸೂರ್ಯ, ಗಣಪತಿ, ದುರ್ಗೆ, ಶಿವ ಮತ್ತು ವಿಷ್ಣು ಎಂಬ ಅನುಕ್ರಮದಲ್ಲಿಯೇ ಪೂಜಿಸಬೇಕೆಂದು ಪರಂಪರಾಗತವಾದ ನಂಬಿಕೆ ಇದೆ. ಸೂರ್ಯನು ಸಂಧ್ಯೋಪಾಸನೆಯಂತಹ ನಿತ್ಯಾನುಷ್ಠಾನದ ನೇರ ವಿಸ್ತರಣೆಯಂತಿರುವುದರಿಂದ ಅವನಿಗೆ ಪ್ರಾಥಮ್ಯ. ಇಷ್ಟದೇವತೆಗಳೋ ಕುಲದೇವತೆಗಳೋ ಆಗುವವರ ಮಧ್ಯದಲ್ಲಿ ಗಣೇಶನಿಗೇ ಅಗ್ರಸ್ಥಾನ.
“ಆಯತನ” ಎಂಬ ಶಬ್ದಕ್ಕೆ ಆಶ್ರಯ ಎಂದು ಅರ್ಥ. ಆಶ್ರಯಾತೀತವಾದ ಪರಮಬ್ರಹ್ಮ ಶಕ್ತಿಯನ್ನು ಐದು ಆಶ್ರಯಗಳಲ್ಲಿ ಆವಾಹಿಸಿ ಪೂಜಿಸುವುದೇ ಈ ಪೂಜೆ. ಆಶ್ರಯಾತೀತವಾದುದನ್ನು ಆಶ್ರಯಗಳಲ್ಲಿ ಆವಾಹಿಸುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಏಳುವುದು ಸಹಜ. ಆಶ್ರಯಾತೀತವಾದುದು “ನಿರಾಶ್ರಯ.” ಆಯತನಗಳಲ್ಲಿ ಆವಾಹಿತವಾದುದು “ಸಾಶ್ರಯ”. ಇವೆರಡು ಪರಸ್ಪರ ವಿರುದ್ಧ ಕಲ್ಪನೆಗಳಲ್ಲವೆ? ತನ್ನ ಗುರಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಂಚರಿಸಿದವನು ಗುರಿತಲಪುವ ಬದಲು ಗುರಿಯಿಂದ ದೂರಕ್ಕೇ ಸರಿಯುತ್ತಾನಲ್ಲವೆ? ಎಂದು ವೈಚಾರಿಕರು ಪ್ರಶ್ನಿಸುವುದರಲ್ಲಿ ಆಶ್ಚರ್ಯವಿಲ್ಲ. ಅಲ್ಲದೆ, ಸಾಕಾರೋಪಾಸನೆ ಆಸ್ತಿಕರಲ್ಲೇ ಕೆಲವು ವರ್ಗದವರನ್ನು ಇಂದಿಗೂ ತೃಪ್ತಿಪಡಿಸಿಲ್ಲ.
ಶಿವ ಮತ್ತು ವಿಷ್ಣು ಎಂಬುವರು ಮುಖ್ಯ ಸಾಕಾರದೇವತೆಗಳಾಗಿ ರೂಪುಗೊಂಡರು. ವಿಷ್ಣುವಿನೊಂದಿಗೆ ಅಭಿನ್ನನಾದ ಸೂರ್ಯನಾರಾಯಣನೂ ಶಿವತತ್ತ್ವದ ಉಪದೇವತೆಗಳಾದ ದುರ್ಗಾ-ಗಣಪತಿಗಳೂ ಆರಾಧನಾ ಪದ್ಧತಿಯ ಅಂಶಗಳಾಗಿ ರೂಪುಗೊಂಡರು. ಹೀಗೆ ಐದು ಮುಖ್ಯ ದೇವತೆಗಳು ಜನಪ್ರಿಯರಾಗಿ ಪಂಚಾಯತನಪೂಜೆಯ ಉಪಾಸ್ಯ ಸಂಕೇತಗಳಾದರು. ಪಂಚಾಯತನ ಪೂಜೆಯಂತಹದರಲ್ಲಿ ಉಪಯುಕ್ತವಾಗುವ ಪ್ರತಿಮೆಗಳ ಬಗೆಗೂ ಸ್ವಲ್ಪ ವಿವರಣೆ ಅಗತ್ಯ. ಸಗುಣೋಪಾಸನೆಯಲ್ಲಿ ಶಿವ-ವಿಷ್ಣುಗಳೇ ಪ್ರಮುಖ ದೇವತೆಗಳೆಂಬುದನ್ನು ಹಿಂದೆ ಸೂಚಿಸಲಾಗಿದೆ. ಐವರು ದೇವತೆಗಳು ಅನುಕ್ರಮವಾಗಿ ಆರೋಗ್ಯ, ನಿರ್ವಿಘ್ನತೆ, ಐಶ್ವರ್ಯ, ಜ್ಞಾನ ಮತ್ತು ಮೋಕ್ಷಗಳನ್ನು ಕೊಡತಕ್ಕವರೆಂದು ಪರಂಪರಾಗತವಾದ ಕಲ್ಪನೆಯಿದೆ. “ಈ ಪಂಚಫಲಗಳಿಗಾಗಿ ಈ ಐವರು ದೇವತೆಗಳನ್ನು ಪೂಜಿಸುತ್ತೇವೆ” ಎಂಬುದು ಸಂಕಲ್ಪವಾಕ್ಯ. ಪಂಚಾಯತನ ಪೂಜೆಯಲ್ಲಿ ಅರ್ಚನ ವಿಧಾನವು ಐದು ದೇವತೆಗಳಿಗೂ ಸಮಾನವಾಗಿದ್ದು ನಾಮನಿರ್ದೇಶನಗಳು ಮಾತ್ರ ಬೇರೆ ಬೇರೆ ಇರುತ್ತವೆ.
ಪಂಚದೇವತೆಗಳು ಪಂಚಭೂತಗಳ ಅಧಿಪತಿಗಳಾದುದರಿಂದ “ಪಂಚ” ಎಂಬ ಸಂಖ್ಯೆ ವಿಶಿಷ್ಟವಾಗುತ್ತದೆ. ಪಂಚಭೂತಗಳಲ್ಲಿ ಆಕಾಶಕ್ಕೆ ವಿಷ್ಣುವೂ, ಅಗ್ನಿಗೆ ದುರ್ಗೆಯೂ, ವಾಯುವಿಗೆ ಸೂರ್ಯನೂ, ಭೂಮಿಗೆ ಶಿವನೂ, ನೀರಿಗೆ ಗಣೇಶನೂ ಅಧಿಪತಿಗಳಾಗುತ್ತಾರೆ. ಸೂರ್ಯನು ವಾಯುವಿನ ಅಧಿಪತಿಯಾದುದರಿಂದ ಮತ್ತು ವಾಯು ಆಯುರ್ವೇದೀಯ ತ್ರಿದೋಷಗಳಲ್ಲಿ ಪ್ರಮುಖವಾಗಿರುವುದರಿಂದ ಅವನು ವಾಯು ನಿಯಾಮಕನಾಗಿ ಆರೋಗ್ಯಕಾರಕನಾಗುತ್ತಾನೆ. ಸೂರ್ಯಾರಾಧನೆಯಿಂದ ಆರೋಗ್ಯ ಪಡೆದ ಬಗ್ಗೆ ಕಥೆಗಳು ಇವೆ. ಗಣೇಶನು ನೀರಿನ ಅಧಿಪತಿ. ನೀರು ಪಂಚಭೂತಗಳಲ್ಲಿ ಮೊದಲನೆಯ ಸೃಷ್ಟಿಯೆಂದು ಮನುಸ್ಮೃತಿ ತಿಳಿಸುತ್ತದೆ. ಇದರಿಂದಲೇ ಅವನಿಗೆ ಮೊದಲ ಪೂಜೆ. ಅವನನ್ನು ನೀರಿನಲ್ಲಿ ವಿಸರ್ಜಿಸುವುದರ ರಹಸ್ಯವೂ ಇದೇ ಆಗಿದೆ. ಶಿವನು ಪೃಥ್ವೀತತ್ತ್ವದ ಅಧಿಪತಿಯಾದುದರಿಂದ ಅವನಿಗೆ ಪಾರ್ಥಿವಲಿಂಗವೇ ಇಷ್ಟವಾದುದು. ವಿಷ್ಣುವು ಆಕಾಶತತ್ತ್ವದ ಅಧಿಪತಿ. ಆಕಾಶವು ಶಬ್ಧವನ್ನು ತನ್ನ ಗುಣವನ್ನಾಗಿ ಹೊಂದಿರುವಂತಹುದು. ಶಬ್ಧವೆಂದರೂ ನಾಮರೂಪ ಪ್ರಪಂಚವೆಂದರೂ ಒಂದೇ. ಆದ್ದರಿಂದಲೇ ವಿಷ್ಣುವಿಗೆ ನಾಮ ಸಂಕೀರ್ತನೆಯು ಇಷ್ಟವಾದುದು.
ಆಧ್ಯಾತಿಕ ಚಿಂತಕರು ಹಾಗೂ ಪುರೋಹಿತರು
ವೇದಬ್ರಹ್ಮ ಶ್ರೀ ಗಣೇಶ್ ಭಟ್ : ಮೊಬೈಲ್ : 9980010722, 9036239373