ಸಿದ್ಧಾರೂಢರ ಮೂಲ ಹೆಸರು ಸಿದ್ಧಪ್ಪ. ಸಿದ್ಧಪ್ಪ 5 ವರ್ಷದವನಾಗುತ್ತಲೇ ಶಾಲೆಗೆ ಹೋದ.ಶಿಕ್ಷಕರು ಓಂಕಾರವನ್ನು ಬರೆದುಕೊಟ್ಟು ತಿದ್ದಲು ಹೇಳಿದರು. ಸಿದ್ಧ ಅದರ ಅರ್ಥವನ್ನು ಕೇಳಿದ. ಅ+ಉ+ಮ್ ಈ ಅಕ್ಷರಗಳ ಸಂಧಿಯಾಗಿ ಓಂ ಆಗಿದೆ ಎಂದರು ಶಿಕ್ಷಕರು. ಇದು ವ್ಯಾಕರಣವಾಯಿತು, ಅರ್ಥ ಹೇಳಿ ಎಂದ ಸಿದ್ಧ. ಶಿಕ್ಷಕ ಹೇಳಲಿಲ್ಲ. ಆಗ ಸಿದ್ಧನು "ಋಗ್ವೇದದ ಮೊದಲ ಅಕ್ಷರ ಅ, ಯಜುರ್ವೇದದ ಮೊದಲ ಅಕ್ಷರ ಉ, ಸಾಮವೇದದ ಮೊದಲ ಅಕ್ಷರ ಮ್. ಇವು ಆಯಾ ವೇದದ ಸಾರಾರ್ಥವನ್ನು ಪ್ರತಿಪಾದಿಸುತ್ತವೆ. ಸಚ್ಚಿದಾನಂದ ನಿತ್ಯ ಪರಿಪೂರ್ಣಪರಮಾತ್ಮನೇ ಓಂಕಾರದ ನಿಜಾರ್ಥ ಎಂದು ವಿವರಿಸಿದ ಮನೆಗೆ ಹಿಂದಿರುಗಿದ ಸಿದ್ಧ ಮತ್ತೆ ಶಾಲೆಗೆ ಹೋಗಲಿಲ್ಲ.
ವೀರಭದ್ರ ಸ್ವಾಮಿ ಎಂಬ ಆಧ್ಯಾತ್ಮಿಕ ಗುರುಗಳು ಸಿದ್ಧನ ಮನೆಯಲ್ಲಿ ಪ್ರತಿ ದಿನ ವೇದಾಂತ ಪ್ರವಚನ ನೀಡುತ್ತಿದ್ದರು. ಸಿದ್ಧನು ತಾಯಿಯ ತೊಡೆಯ ಮೇಲೆ ಕುಳಿತು ಪ್ರವಚನವನ್ನು ಕೇಳುತ್ತಿದ್ದನು. ಪ್ರವಚನ ಮಾಡುತ್ತಾ ಗುರುಗಳು "ಈ ಪ್ರಪಂಚವೆಲ್ಲಾ ನಶ್ವರ" ಎಂದು ನುಡಿದರು. ಎಲ್ಲರೂ ಹೌದೆಂದು ತಲೆಯಾಡಿಸಿದರು. ಆದರೆ ಸಿದ್ಧ "ಆಕಾಶಕ್ಕೆ ರೂಪವೇ ಇಲ್ಲ! ಅದೂ ಪ್ರಪಂಚದಲ್ಲೇ ಸೇರಿದೆ! ಅದು ಹೇಗೆ ನಾಶವಾಗುತ್ತದೆ?" ಎಂದು ಕೇಳಿದ. ನಿರುತ್ತರರಾದ ಗುರುಗಳು "ಈ ಪ್ರಶ್ನೆಯನ್ನು ಶಾಸ್ತ್ರ ತಿಳಿದ ಯೋಗ್ಯಗುರುಗಳ ಬಳಿ ಕೇಳಿ ತಿಳಿದುಕೋ" ಎಂದು ಸಲಹೆ ನೀಡಿದರು.
ಸಿದ್ಧನು ತಂದೆತಾಯಿ ಗುರುಹಿರಿಯರ ಅನುಮತಿ ಪಡೆದು ಮನೆ ಬಿಟ್ಟು ಗುರು ಶೋಧನೆಗೆ ಹೊರಟ. ರಾಯಚೂರು ಜಿಲ್ಲೆಯ ಅಮರಗುಂಡದ ಗಜದಂಡ ಶಿವಯೋಗಿಗಳ ಬಳಿ ಬಂದನು. ಗುರುಗಳು ಶಿಷ್ಯನನ್ನು ಪರೀಕ್ಷಿಸಲು "ಆಚೆಗೆ ನಡೆ" ಎಂದು ಒಳಗೆ ಹೋದರು. ಗುರುಕೃಪೆ ಪಡೆಯಲು ಗುರು ಸೇವೆಯೇ ಮೂಲವೆಂದು ತಿಳಿದು ಸಿದ್ಧನು ಮಠದ ಸೇವೆಗೆ ಇಳಿದನು. ನೀರು ತರುವುದು, ಕಟ್ಟಿಗೆ ಒಡೆಯುವುದು, ಅನ್ನಭಿಕ್ಷೆ ಮಾಡುವುದು, ಪಾತ್ರೆ-ಬಟ್ಟೆ ತೊಳೆಯುವುದು, ಕುದುರೆ ಲದ್ದಿ ಬಳಿಯುವುದು ಮೊದಲಾದ ಸೇವೆ ಮಾಡುತ್ತಾ ಪ್ರವಚನ ಆಲಿಸಿದ. ಒಮ್ಮೆ ಸುರಪುರದ ಆಸ್ಥಾನ ವಿದ್ವಾನ್ ಸುಬ್ಬಾಶಾಸ್ತ್ರಿ ಅಲ್ಲಿಗೆ ಬಂದರು. ಉಪನಿಷತ್ತುಗಳನ್ನು ಓದಲು ಹೇಳಲು ಕೇಳಲು ದ್ವಿಜರು ಮಾತ್ರ ಅಧಿಕಾರಿಗಳು ಎಂದು ನುಡಿದರು. ಸಿದ್ಧನು ವಿನೀತನಾಗಿ ಎದ್ದು ಕೈಮುಗಿದು ಶಾಸ್ತ್ರಿಗಳ ಮಾತನ್ನು ಖಂಡಿಸಿದನು. ಗುರುವಿನ ಬಳಿ ಕೊಂಡೊಯ್ದು ಗುರೂಪದೇಶದಿಂದ ಅಜ್ಞಾನವನ್ನು ನಾಶಪಡಿಸಿ ಆತ್ಮಸುಖವನ್ನುಂಟುಮಾಡುವುದು ಉಪನಿಷತ್. ಜ್ಞಾನದ ಹಸಿವಿರುವ ಪ್ರತಿಯೊಬ್ಬನೂ ಇದಕ್ಕೆ ಅಧಿಕಾರಿ. ಬ್ರಹ್ಮ =ಪರಮಾತ್ಮತತ್ತ್ವವನ್ನರಿತವನು ಬ್ರಾಹ್ಮಣ, ಹೊರತು ಹುಟ್ಟಿನಿಂದ ಅಳೆಯುವ ಜಾತಿಬ್ರಾಹ್ಮಣನಲ್ಲ ಎಂದು ವಿವರಿಸಿದನು. ಸುಬ್ಬಾಶಾಸ್ತ್ರಿಗಳು ತಲೆದೂಗಿದರು.
ಗುರುಗಜದಂಡಶಿವಯೋಗಿಗಳು ಸಂತುಷ್ಟರಾದರು. ಸಿದ್ಧನಿಗೆ ಸಂನ್ಯಾಸದೀಕ್ಷೆ ನೀಡಿ "ಸಿದ್ಧಾರೂಢಭಾರತೀ ಸ್ವಾಮಿಗಳು" ಎಂದು ನಾಮಕರಣ ಮಾಡಿದರು.
ಹುಬ್ಬಳ್ಳಿಯಲ್ಲಿ ನೆಲೆ ನಿಂತ ಸಿದ್ಧಾರೂಢರು ಉಪನಿಷತ್ ಬ್ರಹ್ಮಸೂತ್ರ ಭಗವದ್ಗೀತೆ ಶೂನ್ಯಸಂಪಾದನೆ ಕೈವಲ್ಯ ಪದ್ಧತಿ ಮೊದಲಾದ ಗ್ರಂಥಗಳ ಮೇಲೆ ಪ್ರವಚನ ನೀಡಿದರು. ಗುರುನಾಥರೂಢರು ಶಿವಪುತ್ರ ಸ್ವಾಮಿಗಳು ಕಬೀರದಾಸರು ಮುಂತಾದ ಅನೇಕ ಜನ ಶಿಷ್ಯರನ್ನು ಸಿದ್ಧಗೊಳಿಸಿದರು. ಗರಗದ ಮಡಿವಾಳ ಶಿವಯೋಗಿ, ಹಾನಗಲ್ ಕುಮಾರ ಸ್ವಾಮಿಗಳು ಅಥಣಿ ಮುರಘೇಂದ್ರಸ್ವಾಮಿಗಳು, ಗದಗಿನ ಶಿವಾನಂದ ಸ್ವಾಮಿಗಳು ಮೊದಲಾದವರು ಅವರ ಪ್ರವಚನ ಸವಿದರು. ಗುರು ಮುಟ್ಟಿ ಗುರುವಾದ ಸಿದ್ಧಾರೂಢರು ಗುರು ಸಾರ್ವಭೌಮರೆನಿಸಿದರು.
ಡಾ ಆರೂಢಭಾರತೀ ಸ್ವಾಮೀಜಿ.
ಅಧ್ಯಕ್ಷರು ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ.
ರಾಮೋಹಳ್ಳಿ. ಕೆಂಗೇರಿ ಹೋಬಳಿ. ಬೆಂಗಳೂರು ದಕ್ಷಿಣ.