ಸುಖವಾದ ನಿದ್ರೆಯಿಂದ ಆರೋಗ್ಯ, ಶಕ್ತಿ ಪುಷ್ಟಿ, ಜ್ಞಾನ, ವೀರ್ಯವಂತಿಕೆಗಳು ಲಭಿಸುವುವು. ಪೂರ್ಣಾರೋಗ್ಯದ ಸುಖಾನುಭವವು ಸುಖವಾದ ನಿದ್ರೆಯಿಂದ ಮಾತ್ರವೇ ಲಭಿಸಬಲ್ಲದು.
- ನಿದ್ರಾನಾಶದಿಂದ ದುಃಖ, ಸೊರಗುವಿಕೆ, ವೀರ್ಯಹೀನತೆ, ಅಜ್ಞಾನ ದೌರ್ಬಲ್ಯತೆಗಳುಂಟಾಗುವವು. ಆರೋಗ್ಯವಂತಿಕೆಗೆ ಸುಮಾರು ದಿನದಲ್ಲಿ ಆರು ತಾಸುಗಳಿಂದ ಎಂಟು ತಾಸುಗಳಷ್ಟು ನಿದ್ರೆಯು ಸಾಕಾಗುತ್ತದೆ.
- ಮಕ್ಕಳಿಗೆ ಸಾಮಾನ್ಯವಾಗಿ ಅಧಿಕ ಅವಧಿಯ ನಿದ್ದೆಯು ಬೇಕಾಗುತ್ತದೆ. ಒಂದು ವರ್ಷದೊಳಗಿನ ಮಕ್ಕಳಿಗೆ ದಿನದಲ್ಲಿ 20 ತಾಸುಗಳ ನಿದ್ದೆ, ಒಂದರಿಂದ 2 ವರ್ಷದೊಳಗಿನ ಮಕ್ಕಳಿಗೆ 15 ತಾಸುಗಳ ನಿದ್ದೆ ಆ ಮೇಲೆ ಮಕ್ಕಳಿಗೆ 8 ವರುಷದ ಪ್ರಾಯದವರೆಗೆ 12 ತಾಸುಗಳ ನಿದ್ದೆ ಹಾಗೂ ಯುವಕರಿಗೆ 6-8 ತಾಸುಗಳ ನಿದ್ದೆಯು ಬೇಕಾಗಿರುವುದು.
- ಕೊತ್ತಂಬರಿ ಸೊಪ್ಪಿನ 1-3 ಲೀಟರ್ ರಸಕ್ಕೆ 500 ಗ್ರಾಂ ಸಕ್ಕರೆ ಸೇರಿಸಿ, ಶರಬತ್ತಿನ ಪಾಕವಾಗುವಂತೆ ಕಾಯಿಸಿ, ಒಂದೆಳೆ ಬರುವಷ್ಟು ಪಾಕ ಮಾಡಿಕೊಂಡು, ಬೇಕಾದರೆ ಅದಕ್ಕೆ ಸ್ವಲ್ಪ ಪಚ್ಚಕರ್ಪೂರವನ್ನು ಕೇಸರಿಯನ್ನು ಸೇರಿಸಿ, ಸೀಸೆಯಲ್ಲಿಟ್ಟುಕೊಳ್ಳುವುದು. ಪ್ರತಿದಿನ ಇದರಿಂದ 2-3 ಚಮಚದಷ್ಟು ಪಾಕವನ್ನು ನೀರಿನಲ್ಲಿ ಕದಡಿ ಕೆಲವು ದಿನಗಳವರೆಗೆ ಕುಡಿಯುತ್ತಿದ್ದರೆ ನಿದ್ದೆ ಬಾರದಿರುವ ರೋಗ ಖಂಡಿತವಾಗಿ ಗುಣವಾಗುತ್ತದೆ.
- ಬಿಸಿ ನೀರಿನ ಸ್ನಾನಮಾಡಿ ಮಲಗಲಿಕ್ಕೆ ಹೋಗುವಾಗ ಚೆನ್ನಾಗಿ ಬಿಸಿ ಮಾಡಿದ ಒಂದು ಗ್ಲಾಸು ಹಾಲು ಕುಡಿಯುವದರಿಂದ ಸುಖವಾದ ನಿದ್ರೆ ಬರುವುದು.
- ಮಲಗಿದ್ದಲ್ಲಿ ನಿದ್ದೆ ಬರುದಿಲ್ಲವಾದರೆ ಅಂಗಾತ ಮಲಗಿ (ಮುಖ ಮೇಲೆ ಮಾಡಿ ಬೆನ್ನಿನ ಮೇಲೆ ಮಲಗಿ) 15-20 ಸಾರಿ ಮೂಗಿನಿಂದ ದೀರ್ಘ ಶ್ವಾಸದ ಪ್ರಯೋಗ ಮಾಡಿ ಆ ಮೇಲೆ ಒಂದು ಪಕ್ಕಕ್ಕೆ ತಿರುಗಿ ಮಲಗುವುದರಿಂದ ಸುಖಕರ ನಿದ್ರೆಬರಲು ಸಹಾಯವಾಗುವುದು.
- ಆಹಾರದಲ್ಲಿ ಹಾಲು, ಮೊಸರು, ಬೆಣ್ಣೆ, ಮಾಂಸರಸ, ಮಾದಪೇಯ ಮೊದಲಾದವುಗಳ ಸೇವನೆಯಿಂದ ಸುಖವಾದ ನಿದ್ರೆ ಬರಲು ಸಹಾಯವಾಗುವುದು. ಆದರೆ ಇದಕ್ಕಾಗಿ ಮತ್ತನ್ನು ತಯಾರಿಸುವ (sedatives, sleeping pills) ಔಷಧಿಯನ್ನು ಎಂದಿಗೂ ಸೇವಿಸಬಾರದು.
- ಯಾವಾಗಲೂ ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬಾರದು. ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿದರೆ ಮಾನವನ ರಕ್ತನಾಡಿಗಳ ಮೇಲೆ ಉತ್ತರ ಧ್ರುವದ (north pole) ಅಯಸ್ಕಾಂತ ಆಕರ್ಷಣೆಯ ದುಷ್ಪರಿಣಾಮಗಳು ಸಂಭವಿಸುತ್ತವೆ. ಪೂರ್ವಕ್ಕೆ ತಲೆಯನ್ನು ಮಾಡಿ ಮಲಗುವುದು ಆರೋಗ್ಯ ದೃಷ್ಟಿಯಿಂದ ಬಹಳ ಉತ್ತಮ.
- ಅಂಗಾತ ಅಥವಾ ಬೋರಲು ಅಥವಾ ಬಲಗಡೆಯ ಮಗ್ಗಲಿಗೆ ಮಲಗಬಾರದು. ಸದಾ ಎಡಗಡೆಯ ಮಗ್ಗಲಿಗೆ ಮಲಗುವುದರಿಂದ ದೀರ್ಘಾಯುಷಿ ಆಗಲಿಕ್ಕೆ ಅನುಕೂಲವಾಗುತ್ತದೆ.