ಮಹಾನ್ ಶಕ್ತಿಶಾಲಿ ಶನಿದೇವನು ದ್ವಾದಶ ಭಾವಗಳಲ್ಲಿ ಇದ್ದಾಗ ಲಭ್ಯವಾಗುವ ಫಲಗಳನ್ನು ಈ ಕೆಳಗೆ ಸೂಕ್ಷ್ಮವಾಗಿ ವಿವರಿಸಲಾಗಿದೆ.
ಸೌರಮಂಡಲದಲ್ಲಿ ಶನಿ ಎರಡನೆಯ ಅತ್ಯಂತ ದೊಡ್ಡ ಗ್ರಹ. ಸೂರ್ಯ ಮತ್ತು ಶನಿ ನಡುವಿನ ದೂರ ಬಹಳ ಹೆಚ್ಚು. ಎರಡು ಭಾರೀ ಗಾತ್ರದ ಉಂಗುರಗಳು ಸುತ್ತುವರಿದಿರುವ ಈ ಶನಿ ನೋಡಲು ನವ ಗ್ರಹಗಳಲ್ಲಿಯೇ ಬಹಳ ಸುಂದರ. ಶನಿಗೆ ಮಕರ, ಕುಂಭ ರಾಶಿಗಳು ಸ್ವಕ್ಷೇತ್ರಗಳು.
ಈ ಶನಿ ಸೂರ್ಯನ ಸುತ್ತ ಒಂದು ಸುತ್ತು ಹಾಕಲು ಮೂವತ್ತು ವರ್ಷಗಳು ಬೇಕಾಗುತ್ತವೆ. ಆಲಸ್ಯ, ಜಾಡ್ಯ, ಮಾಂದ್ಯ ಇವನ ಸ್ವಭಾವ. ಕಾಲ ಪುರುಷನ ಕಾಲನ್ನು ಸೂಚಿಸುವನು. ಈತನಿಂದ ರಕ್ಷಣೆಗಾಗಿ ಪ್ರಾಣ ದೇವರು ಹಾಗೂ ಶಾಸ್ತ್ರಾರರನ್ನು ಚಿಂತಿಸಬೇಕು. ಕಬ್ಬಿಣ ಈತನ ದ್ರವ್ಯ. ನೀಲ ಇವನ ರತ್ನ, ತನ್ನ ಸ್ಥಾನದಿಂದ 3, 7,10ರಲ್ಲಿ ಪೂರ್ಣ ದೃಷ್ಟಿ ಇದೆ. ಆಯುಷ್ಯ, ಮರಣ ಜೀವನ ಈತನಿಗೆ ಸಂಬಂಧಿಸಿವೆ. ಶನಿ ಮತ್ತು ಮಾಂದಿ ಯೋಗ ಅತ್ಯಂತ ದೋಷಪ್ರದ.
ಗೋಚಾರದಲ್ಲಿ 1, 12, 2, 4, 5, 7, 8, 9, 10ರಲ್ಲಿ ದೋಷಪ್ರದನು. ಅದರಲ್ಲಿಯೂ ಸಾಡೇಸಾತ್, ಪಂಚಮ, ಅಷ್ಟಮ, ಅರ್ಧಾಷ್ಟಮ, ಶನಿಗಳು ದೋಷಪ್ರದರು. ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತಾನೆ. ಪುಷ್ಯ, ಅನುರಾಧಾ, ಉತ್ತರಾಭಾದ್ರಾ ನಕ್ಷತ್ರದಲ್ಲಿ ಶನಿದೆಶೆ ಆರಂಭವಾಗುತ್ತದೆ.
ಶನಿಯು ಲಗ್ನದಲ್ಲಿ /ಜನ್ಮ ರಾಶಿಯಲ್ಲಿ ಇರುವಾಗ :
ಲಗ್ನದಲ್ಲಿ ಅಥವಾ ಜನ್ಮರಾಶಿಯಲ್ಲಿ ಪ್ರಥಮ ಭಾವದಲ್ಲಿ ಇರುವಾಗ ಆಲಸ್ಯ, ಜಾಡ್ಯ, ನಿದ್ರೆಗಳಿಗೆ ಕಾರಣನಾಗುವನು. ಬಾಲ್ಯದಲ್ಲಿ ಅನಾರೋಗ್ಯ ಪೀಡಿತನಾಗುವನು. ಮೂಳೆ, ಹಲ್ಲು ಹಾಗೂ ನರಕ್ಕೆ ಸಂಬಂಧಪಟ್ಟ ತೊಂದರೆಗಳು ಬರಬಹುದು. ಮಕರ, ಕುಂಭ, ತುಲಾ, ವೃಷಭ ಲಗ್ನಗಳಿಗೆ ಶನಿಯು ಶುಭ ಫಲವನ್ನೇ ನೀಡುವನು.
ದ್ವಿತೀಯ ಭಾವದಲ್ಲಿ ಇರುವಾಗ :
ಶನಿ ತೃತೀಯದಲ್ಲಿರುವಾಗ ಜಾತಕನು ಕುಟುಂಬ ಸುಖವನ್ನು ಅನುಭವಿಸಲಾರ. ಮಾತಿನಿಂದಾಗಿ ವೈಮನಸ್ಸಿಗೆ ಪಾತ್ರನಾಗುವನು. ಉಚ್ಚರಾಶಿ ಅಥವಾ ಸ್ವಕ್ಷೇತ್ರರಾಶಿಯಾದ ತುಲಾ, ಮಕರ, ಕುಂಭಗಳ ಧನ ಸ್ಥಾನದ ಶನಿಯು ಆರ್ಥಿಕ ಭದ್ರತೆಯನ್ನು ನೀಡಿದರೂ ಕಠಿಣವಾದ ದುಡಿಮೆಗೂ ಕಾರಣನಾಗುವನು. ಮೀನ ಲಗ್ನದ ದ್ವಿತೀಯದ ಶನಿ, ತುಲಾ ಲಗ್ನದ ದ್ವಿತೀಯಾದ ಶನಿ ಹಾಗೂ ಕರ್ಕಾಟಕ ಲಗ್ನದ ದ್ವಿತೀಯಾದ ಶನಿಯು ಹಿಂದೆ ಸಂಪಾದಿಸಿದ ದ್ರವ್ಯ ಕ್ಷಯಕ್ಕೂ ಕುಟುಂಬ ವರ್ಗದ ವೈಮನಸ್ಸಿಗೂ ಹೆಚ್ಚಾಗಿ ಕಾರಣನಾಗುವನು.
ತೃತೀಯ ಭಾವದಲ್ಲಿ ಇರುವಾಗ :
ತೃತೀಯದಲ್ಲಿರುವ ಶನಿಯು ಜಾತಕನನ್ನು ಸಂಪತ್ತು, ಗುಣವುಳ್ಳವನನ್ನಾಗಿ ಮಾಡುತ್ತಾನೆ. 'ಶೀತಲಮ್ ನೈವ ಚಿತ್ತಮ್' ಎನ್ನುವಂತೆ ಯಾವಾಗಲೂ ಚಿಂತಿಸುವ ಸ್ವಭಾವವಿರುತ್ತದೆ. ಗುರು ಕ್ಷೇತ್ರ, ಸ್ವಕ್ಷೇತ್ರ ಹಾಗೂ ಉಚ್ಚದಲ್ಲಿದ್ದರೆ ಗ್ರಾಮ, ಪಟ್ಟಣ ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರವನ್ನು ಹೊಂದುವನು. ರಾಹು, ಕುಜ ಮಾಂದಿ, ರವಿಯುತನಾದರೆ ಸಹೋದರ ಹಂತಕನಾದರೂ ಆಶ್ಚರ್ಯವಿಲ್ಲ.
ಶನಿ ಸುಖ ಭಾವದಲ್ಲಿ ಇರುವಾಗ :
ಚತುರ್ಥದಲ್ಲಿ ಶನಿಯಿರುವಾಗ ಜಾತಕನು ಬಾಲ್ಯದಲ್ಲಿ ದುಃಖಿಯೂ ತಾಯಿ, ವಾಹನ, ಮನೆಗಳಿಂದ ರಹಿತನೂ ರೋಗಿಯೂ ಆಗುವನು. ಸುಖ ಹಾಗೂ ಮನಃ ಶಾಂತಿರಹಿತನಾಗುವನು. ದಿನನೂ, ಬಂಧುರಹಿತನೂ ಕಲಹದಲ್ಲಿ ಪರಾಜಿತನೂ ಆಗುವನು, ಹೃದಯ ಸಂಬಂಧಿಸಿದ ಸಮಸ್ಯೆ ಇರುವವನು ಆಗಿರುತ್ತಾನೆ.
ಶನಿ ಪಂಚಮ ಭಾವದಲ್ಲಿರುವಾಗ :
ಜಾತಕನು ಬುದ್ಧಿ ಭ್ರಮೆಯುಳ್ಳವನು, ಅಜ್ಞಾನಿಯೂ, ಮಕ್ಕಳು ಮತ್ತು ಸಂಪತ್ತಿನಿಂದ ರಹಿತನೂ ಮೂರ್ಖನೂ, ಸಂತಾನ ದುಃಖ ನಾಸ್ತಿಕ ಬುದ್ಧಿಯುಳ್ಳವನೂ, ಪ್ರೇತ-ಪಿಶಾಚಿಗಳ ಪೀಡೆಯವನೂ ಹಟ ಉಳ್ಳವನೂ ಆಗಿರುತ್ತಾನೆ.
ಆರನೇ ಭಾವದಲ್ಲಿ ಇರುವಾಗ :
ಶನಿ ಭಾವದಲ್ಲಿ ಇದ್ದಾಗ ರವಿ-ಕುಜರಂತೆ ವ್ಯಕ್ತಿಯನ್ನು ಅತಿ ಪ್ರಬಲ, ಬಲಾಢ, ರಾಜಯೋಗವುಳ್ಳವನನ್ನಾಗಿ ಮಾಡುವನು. ಇತರರು ಇವನ ಆಜ್ಞಾವರ್ತಿಗಳಾಗುವರು. ನ್ಯಾಯ ತೀರ್ಮಾನ ಮಾಡುವ ಶಕ್ತಿಯುಳ್ಳವನೂ ಆಗುತ್ತಾನೆ. ಪೊಲೀಸ್, ಸೈನಿಕ, ಗಣಿ ಉದ್ಯಮಿ ಆಗಿರುತ್ತಾನೆ. ವಾತ, ಕಾಲಿನ ನೋವು, ಬೆವರುವ ಸಮಸ್ಯೆ ಇರುತ್ತದೆ.
ಸಪ್ತಮ ಭಾವದಲ್ಲಿ ಇದ್ದಾಗ :
ಶನಿ ಸಪ್ತಮದಲ್ಲಿದ್ದಾಗ ವಿವಾಹ ವಿಳಂಬವಾಗುತ್ತದೆ. ವಯಸ್ಸಾದ ಪತ್ನಿ ಅಥವಾ ವೃದ್ಧಳಂತೆ ಕಾಣುವ ಪತ್ನಿಗೆ ಪತಿಯಾಗುವನು. ಅತಿ ದುಃಖ, ಅನೇಕ ಸ್ತ್ರೀ ಸಂಗ, ಪತ್ನಿಯ ಅನಾರೋಗ್ಯ, ದಂತದೋಷ, ಶರೀರ ದೋಷವಿರುತ್ತದೆ. ಈತನ ಜೊತೆಗೆ ಕೇತು-ಕುಜ ಯಾ ಶುಕ್ರರು ಸೇರಿದರೆ ಅತಿ ಕಾಮುಕತೆ ಉಂಟಾಗುವುದು. ರಾಹು ಸೇರಿದಲ್ಲಿ ಅನ್ಯಜಾತಿ ವಿವಾಹ, ವಿಧವಾ ವಿವಾಹಾದಿಗಳು ಉಂಟಾಗಬಹುದು.
ಶನಿಯು ಅಷ್ಟಮ ಭಾವದಲ್ಲಿರಲು:
ಸಾಲ ಸೋಲವನ್ನುಂಟು ಮಾಡುವನು. ಆಯುಷ್ಯವೇನೋ ಹೆಚ್ಚಾಗಿರುತ್ತದೆ. ಆದರೆ ನರಳಾಟ ಇರುತ್ತದೆ. ದೃಷ್ಟಿ ಬಾಧೆ, ದೀರ್ಘ ವ್ಯಾಧಿಗಳು, ಲೈಂಗಿಕವಾಗಿ ಅಸಂತೃಪ್ತಿ ಇರುತ್ತದೆ. ಮೂಲವ್ಯಾಧಿ, ಅವಮಾನ, ಬಹುಕೋಪ, ಕೆಟ್ಟ ದೃಷ್ಟಿ ಇರುತ್ತದೆ. ದೇಶಾಂತರ ವಾಸ ಇರುತ್ತದೆ.
ನವಮಾದ ಶನಿ ವೈರಾಗ್ಯ:
ತೀರ್ಥಯಾತ್ರೆಗೆ ಕಾರಣನಾಗುವನು. ಪಾಪಗ್ರಹರ ಯುತಿ ಬಂದಲ್ಲಿ ಸ್ವಲ್ಪ ಆಧಾರ್ಮಿಕ ಪ್ರವೃತ್ತಿ, ನಾಸ್ತಿಕತೆಗಳಿಗೆ ಕಾರಣನಾಗುವನು. ಕುಜ ಅಥವಾ ರವಿಯಿಂದ ಕೂಡಿ ಬಂದಲ್ಲಿ ಪಿತೃ ಕಲಹ, ಸಹೋದರರಲ್ಲಿಯೂ ಘರ್ಷಣೆ ಉಂಟಾಗುವುದು. ಸಂತಾನದಲ್ಲಿಯೂ ದೋಷ ಕಾಣಿಸುತ್ತದೆ.
ದಶಮ ಭಾವದಲ್ಲಿ ಇರುವಾಗ :
ಶನಿಯು ಉಚ್ಚ ಸ್ವಕ್ಷೇತ್ರ, ತುಲಾ- ಮಕರ- ಕುಂಭದ ಶನಿ ರಾಜಯೋಗವನ್ನು ಉಂಟು ಮಾಡುವನು. ಉಳಿದ ಸಂದರ್ಭದಲ್ಲಿ ಶನಿಯು ದುರ್ಬಲನಾದರೆ ಜಾತಕನು ವೇತನದಿಂದ ಬದುಕುವವನಾಗುವನು, ಬಲಿಷ್ಠ ಶನಿಯು ಜಾತಕನನ್ನು ನ್ಯಾಯಾಧೀಶನನ್ನಾಗಿ ಮಾಡುವನು. ಶನಿಯು ಮೆಕ್ಯಾನಿಕ್, ತಂತ್ರಜ್ಞಾನಗಳ ಉದ್ಯೋಗಕ್ಕೂ ದಶಮದ ಶನಿಯೇ ಕಾರಣನು. ನೀಲಮಣಿಯ ವ್ಯಾಪಾರದಲ್ಲಿ ದಶಮದ ಶನಿ ಅಪಾರ ನಾಯಕನನ್ನಾಗಿ ಮಾಡುವನು.
ಶನಿಯು ಏಕಾದಶದಲ್ಲಿ ಲಾಭ :
ಕ್ಷೇತ್ರದಲ್ಲಿ ಇರುವಾಗ ದೋಷವಿಲ್ಲದೆ ಹೋದರೆ ಜಾತಕನು ದೀರ್ಘಾಯುಷ್ಯವನ್ನು ಹೊಂದುವನು. ನ್ಯಾಯಾಧೀಶರಿಗೂ, ವಕೀಲರಿಗೂ ಏಕಾದಶದ ಶನಿಯು ಶುಭಪ್ರದನು.
ವ್ಯಯ ಭಾವದಲ್ಲಿ ಚರ :
ರಾಶಿಯಾಗಿ ಶನಿಯಿದ್ದಲ್ಲಿ ದೇಶಭ್ರಷ್ಟನಾಗುವನು. ವಾತರೋಗಿಯೂ ಪಾದಗಳಿಗೆ ಸಂಬಂಧಪಟ್ಟ ತೊಂದರೆಯುಳ್ಳವನೂ ನೇತ್ರ ದೋಷ ಉಳ್ಳವನೂ ದುಂದುವೆಚ್ಚ ಮಾಡುವವನು, ಕಪಟಿಯು, ಸಾಲಗಾರನೂ ಆಗುವನು.
ಶನಿ ದೋಷ :
ಶನಿ ಭಗವಾನನು ರೋಗಭಾವವಾದ ಆರಕ್ಕೆ ಮೃತ್ಯುಭಾವವಾದ ಎಂಟಕ್ಕೆ, ಕರ್ಮ ಭಾವವಾದ ಹತ್ತು ಹಾಗೂ ವ್ಯಯ ಭಾವವಾದ ಹನ್ನೆರಡಕ್ಕೂ ಕಾರಕನು. ಶನಿಯು ಕುಜ,ರಾಹು, ಮಾಂದಿಯಿಂದ ಯುತನಾದರೆ ದೋಷವನ್ನು ಉಂಟು ಮಾಡುವನು.