ಎಷ್ಟೇ ಸುಸ್ತಾಗಿದ್ದರೂ ಒಂದು ಲೋಟ ನೀರು ದೇಹಕ್ಕೆ ಮರುಜೀವ ನೀಡುತ್ತದೆ. ನೀರು ಭೂಲೋಕದ ಅಮೃತವೆನಿಸಿದ ನೀರಿಲ್ಲದೇ ಬದುಕೇ ಇಲ್ಲ. ಜಲವಿಲ್ಲದೇ ಜಗವಿಲ್ಲ. ನೀರನ್ನು ಸೂಕ್ತ ರೀತಿಯಲ್ಲಿ ಸೇವಿಸಿದಲ್ಲಿ ಹಲವು ರೋಗ ನಿವಾರಣೆಗೆ ಅದು ಸಂಜೀವಿನಿ. ಬೇಸಿಗೆ ಸಮಯದಲ್ಲಂತೂ ದೇಹದಲ್ಲಿ ನೀರಿನ ಪ್ರಮಾಣ ಉಳಿಸಿಕೊಂಡು ತಂಪಾಗಿರಲು, ಸಾಕಷ್ಟು ನೀರನ್ನು ಕುಡಿಯಲೇ ಬೇಕು.
ಇತ್ತೀಚೆಗೆ ಸಾಕಷ್ಟು ಮಳೆ ಬಂದಿದ್ದರೂ ಈ ಬಾರಿಯ ಬೇಸಿಗೆಯಲ್ಲಿ ಬಿಸಿಲಿನ ಧಗೆ, ಸೆಖೆ ಸ್ವಲ್ಪ ಹೆಚ್ಚಾಗಿಯೇ ಇದೆ. ಇಂತಹ ಬೇಸಿಗೆಯಲ್ಲಿ ದೇಹ ಬಹಳ ಬೇಗ ದಣಿಯುತ್ತದೆ. ಜೊತೆಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಈ ಸೆಖೆಯಲ್ಲಿ ಬಾಯಾರಿಕೆ ಇಳಿಸಿಕೊಳ್ಳಲು ಮತ್ತು ದೇಹಕ್ಕೆ ಅಗತ್ಯವಾದ ನೀರಿನ ಅಂಶ ತುಂಬಿಸಲು ಪದೇಪದೆ ನೀರು ಸೇವಿಸುವುದು ಅನಿವಾರ್ಯ. ದೇಹಕ್ಕೆ ದಿನಾಲು ಐದರಿಂದ ಆರು ಲೀಟರ್ ನೀರಿನ ಅಗತ್ಯವಿರುತ್ತದೆ. ದೇಹದ ಆರೋಗ್ಯ ಮತ್ತು ಚರ್ಮದ ಆರೈಕೆಗಾಗಿ ನಿಗದಿತ ಅವಧಿಗೊಮ್ಮೆ ನೀರು ಕುಡಿಯುತ್ತಿರಬೇಕು ಎಂದು ವೈದ್ಯರು ಮತ್ತು ಆರೋಗ್ಯ ಪರಿಣತರು ಅಭಿಪ್ರಾಯ ಪಡುತ್ತಾರೆ.
ಮಕ್ಕಳಿಂದ ಹಿಡಿದು ಹಿರಿಯ ವಯಸ್ಕರವರೆಗೆ ಹೆಚ್ಚುತ್ತಿರುವ ಬಿಸಿಲಿನ ಧಗೆ ಮತ್ತು ತಾಪಮಾನದಿಂದ ತೊಂದರೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ವಯಸ್ಸಾದವರು, ಬಿಸಿಲಿನಲ್ಲಿ ಹೆಚ್ಚು ಸಮಯ ಇರುವ ಕ್ರೀಡಾಪಟುಗಳು, ಕೆಲಸಗಾರರು, ವಿವಿಧ ಅಂಗಾಂಗಗಳ ಅಂದರೆ ಮೂತ್ರಪಿಂಡ, ಹೃದಯ, ಶ್ವಾಸಕೋಶ ಮುಂತಾದವುಗಳ ತೊಂದರೆಯಿಂದ ಬಳಲುತ್ತಿರುವವರಿಗೆ ಬಿಸಿಲಿನ ಹೊಡೆತ ಮಾರಕವೂ ಆಗಬಹುದು. ದೇಹದ ಒಳಗಿನ ತಾಪಮಾನ ಹೆಚ್ಚುವುದರಿಂದ ತಲೆನೋವು, ಸುಸ್ತು, ವಾಕರಿಕೆ, ಉಸಿರಾಟದ ತೊಂದರೆ ಉಂಟಾಗುವುದಲ್ಲದೇ ಪ್ರಜ್ಞೆ ತಪ್ಪಬಹುದು. ಇಂತಹ ಪ್ರಕರಣಗಳಲ್ಲಿ ತುರ್ತಾಗಿ ವೈದ್ಯರ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು.
ಮಾನವ ದೇಹದಲ್ಲಿ ಶೇ. 75ರಷ್ಟು, ಮಿದುಳಿನಲ್ಲಿ ಶೇ. 85ರಷ್ಟು ಭಾಗ ನೀರೇ ಆಗಿದೆ. ಆದ್ದರಿಂದ ದೇಹದ ನೀರಿನಂಶ ಕಾಪಾಡಿಕೊಳ್ಳಲು ಬೇಸಿಗೆಯಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಅನುಸರಿಸುವುದು ಒಳ್ಳೆಯದು. ಜೊತೆಗೆ ನಮಗೆ ಅಗತ್ಯವಾದ ಪೋಷಕಾಂಶಗಳು ಆಹಾರಕ್ಕಿಂತಲೂ ನೀರಿನಿಂದಲೇ ಲಭಿಸುತ್ತವೆ. ದೈನಂದಿನ ಚಟುವಟಿಕೆಗೆ ಬೇಕಾದ ಆರೋಗ್ಯ ಕಾಪಾಡಿಕೊಳ್ಳಲು ಜೊತೆಗೆ ಆಹಾರ ಸೇವನೆಯ ಕ್ರಮದಲ್ಲಿ ಸೂಕ್ತ ಸಮತೋಲನ ಉಳಿಸಿಕೊಳ್ಳಲು ನೀರು ನೆರವಾಗುತ್ತದೆ.
- ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮೈತುಂಬಾ ಬಟ್ಟೆ ಧರಿಸಿ.
- ದೇಹಕ್ಕೆ ಹಗುರವಾದ, ಬಿಗಿಯಿಲ್ಲದ ಮತ್ತು ಸಡಿಲವಾದ, ತೆಳ್ಳನೆಯ ಬಟ್ಟೆಗಳಿಂದ ತಯಾರಿಸಿದ ಉಡುಪುಗಳನ್ನು ಹಾಕಿಕೊಳ್ಳಿ.
- ಬಿಸಿಲಿನ ಧಗೆ ಹೆಚ್ಚಾಗಿರುವಾಗ ಕಸರತ್ತು ಮಾಡಬೇಡಿ. ದೇಹದಿಂದ ಹೆಚ್ಚಿನ ಬೆವರು ಹೊರಹರಿದರೆ, ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣದ ತೊಂದರೆ ಕಾಡಬಹುದು.
- ಶ್ರಮದ ಕೆಲಸ ಆರಂಭಿಸುವ ಮೊದಲು ಅಲ್ಲದೇ ಕೆಲಸದ ನಡುವೆ, ಭೋಜನಕ್ಕೆ ಮುನ್ನ, ಪ್ರಯಾಣ ಮಾಡುವಾಗ ನೀರು ಕುಡಿಯುವ ನಿಯಮ ಇಟ್ಟುಕೊಳ್ಳಿರಿ.
- ಮುಂಜಾನೆ ಹಾಸಿಗೆಯಿಂದ ಏಳುತ್ತಿದ್ದಂತೆ ಮೊದಲು ಒಂದು ಲೀಟರ್ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿರಿ.
ಹೊರಗಡೆ ಬಿಸಿಲಲ್ಲಿ ಸುತ್ತಾಡಲು ಹೋಗುವ ಮುನ್ನ ಸನ್ ಸ್ಕ್ರೀನ್ ಲೋಷನ್ ಲೇಪಿಸುವುದರಿಂದ ತ್ವಚೆ ಗಾಢವರ್ಣಕ್ಕೆ ತಿರುಗುವುದನ್ನು ತಡೆಯಬಹುದು. - ಬೇಸಿಗೆಯ ಧಗೆಯಲ್ಲಿ ಮೈ, ಮನಸ್ಸುಗಳಿಗೆ ಸುಸ್ತಾಗುವುದು ಸಾಮಾನ್ಯ. ದೇಹಕ್ಕೆ ಶಕ್ತಿ ನೀಡುವ ಸೂಕ್ತ ಪೋಷಕಾಂಶವಿರುವ ಆಹಾರ ಸೇವನೆ ಮಾಡುವುದರಿಂದ ಬಿಸಿಲಿನ ಧಗೆಯಿಂದ ಉಂಟಾಗುವ ತೊಂದರೆಗಳನ್ನು ಇಲ್ಲವಾಗಿಸಬಹುದು.
- ಹೆಚ್ಚು ಬಿಸಿಯಾದ ನೀರಿನಿಂದ ಸ್ನಾನ ಮಾಡಬೇಡಿ. ಮೈಗೆ ಹಿತವಾಗುವಂತಹ ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ ಬಳಸಿ
ಬಿಸಿಯಾದ ಕಾಫಿ, ಟೀ ಬದಲು ನೀರನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ.