ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವಿನಂತೆ ಕೇತುವಿಗೂ ಮಹತ್ವದ ಸ್ಥಾನವಿದೆ. ಸುಖ ಸಮೃದ್ಧಿಗೆ ರಾಹುವಿನಂತೆ ಕೇತು ಕೂಡ ಒಲಿಯಲೇಬೇಕಾದ ಅಗತ್ಯವಿರುತ್ತದೆ. ಜನವರಿ ಎರಡರಂದು ಕೇತು ಜಯಂತಿಯಾಗಿರುತ್ತದೆ. ಕೇತುವಿನ ಪ್ರಾಮುಖ್ಯತೆ, ವಿಶೇಷತೆ, ಪ್ರಾಬಲ್ಯ ಮುಂತಾದವುಗಳನ್ನು ಕುರಿತು ಜ್ಯೋತಿಷ್ಯದಲ್ಲಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಭಾರತೀಯ ಶಾಸ್ತ್ರ ಪರಂಪರೆಯಲ್ಲಿ ಅನೇಕ ವಿಷಯಗಳನ್ನು ಕುರಿತು ಸಂಕೇತಗಳ ಮೂಲಕ ತಿಳಿಸಲಾಗಿದೆ. ಸರ್ಪವು ಕಾಮದ ಸಂಕೇತವಾಗಿದೆ. ಸರ್ಪವೇ ಅಮೃತವನ್ನು ಕಣ್ಣ ತಪ್ಪಿಸಿ ಕುಡಿಯಲು ಹೊರಟ ರಾಕ್ಷಸನ ರುಂಡಮುಂಡ ಆಗಿ ರೂಪುಗೊಳ್ಳುತ್ತದೆ. ವಿಪ್ರಚಿತ್ತಿ, ಸಿಂಹಿಕೆಗೆ ಕಶ್ಯಪರ ವಂಶದಲ್ಲಿ ರಾಹುವಿಗೆ ಕೇತುವು ಸಹೋದರ. ವಿಷ್ಣು ಚಕ್ರದ ಹೊಡೆತಕ್ಕೆ ಸಿಕ್ಕಿ ಸರ್ಪರೂಪದ ರಾಕ್ಷಸನೊಬ್ಬ ರಾಹು (ಹಾವಿನ ರುಂಡ) ಕೇತು (ಹಾವಿನ ಮುಂಡ) ಗಳ ರೂಪದಲ್ಲಿ ಛೇದನಗೊಳ್ಳುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇದೇ ರಾಕ್ಷಸನ ರುಂಡವಾದ ರಾಹುವನ್ನು ನರಸಿಂಹನ ಸ್ವರೂಪವೆಂದು ಅಲ್ಲದೇ ಮುಂಡವಾದ ಕೇತುವನ್ನು ಗಣಪತಿಯ ಸ್ವರೂಪವೆಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಕೇತು ಸ್ವರೂಪವಾಗಲೀ ರಾಹು ಸ್ವರೂಪವಾಗಲೀ ನಮ್ಮ ಅನಂತ ಸ್ವರೂಪದ ಛಾಯೆಗಳೇ ಆಗಿವೆ. ಕೇತುವು ಕಶ್ಯಪರ ವಂಶದಲ್ಲಿ ಪಕ್ಷಿಸಂಕುಲದ ಜೊತೆಗೆ ಜನಿಸಿದ್ದರಿಂದ ಪಕ್ಷಿಕಾರಕನಾಗಿ ಗೂಬೆಯನ್ನು ಆರಿಸಿಕೊಂಡನು. ಆಗ ಪರಾಶರರು ಜೈಮಿನಿ ಜೋತಿಷ್ಯ ಶಾಸ್ತ್ರ ರಚಿಸುವಾಗ ಇದನ್ನೇ ಆಧಾರವಾಗಿರಿಸಿಕೊಂಡು ಗೂಬೆ ಕೇತುವಿನ ವಾಹನ ಎಂದು ಕರೆದರು.
ಅಮೂರ್ತದಲ್ಲೇ ಮೂರ್ತ ಸ್ವರೂಪ:
ರಾಹು ಮತ್ತು ಕೇತು ಛಾಯಾ ಗ್ರಹಗಳು. ಸತ್ಯಸ್ವರೂಪದ ಅಸ್ತಿತ್ವ ಈ ಗ್ರಹಗಳಿಗೆ ಇರದಿದ್ದರೂ ಅವು ಅಮೂರ್ತದಲ್ಲೇ ಮೂರ್ತ ಸ್ವರೂಪದಲ್ಲಿವೆ. ನಿರಾಕಾರ ರೂಪ ದೇವರು ಈ ಬ್ರಹ್ಮಾಂಡದಲ್ಲಿ ಸೃಷ್ಟಿ ಸ್ಥಿತಿ ಹಾಗೂ ಲಯಗಳನ್ನು ಉಂಟು ಮಾಡುತ್ತಾನೆ. ಮೂರ್ತ ಹಾಗೂ ಅಮೂರ್ತಗಳಂತೆ ಆಕಾರ ಹಾಗೂ ನಿರಾಕಾರವೂ ಅರ್ಥವಾದ ಅಂಶಗಳಾಗಿವೆ. ಒಟ್ಟಿನಲ್ಲಿ ರಾಹುವಿನಷ್ಟೇ ದುಷ್ಟ ಕೇತುವೂ ಆಗಿದ್ದಾನೆ. ರಾಹು ಒಲಿದಲ್ಲಿ ಅಪಾರ ಸುಖವು ಲಭ್ಯವಾಗುತ್ತದೆ. ಕೇತು ಒಲಿದಲ್ಲಿ ಆಗಲೂ ಬಾನೆತ್ತರದ ಸುಖ ಹಾಗೂ ಸಮೃದ್ಧಿ ಬರುತ್ತದೆ. 7 ವರ್ಷಗಳ ಕೇತು ದಶಾ ಕಾಲದ ಅವಧಿಯಲ್ಲಿ ಕೇತು ಒಳ್ಳೆಯವನೇ ಇರಲಿ ಕೆಟ್ಟವನೇ ಇರಲಿ ವೈಡೂರ್ಯ ರತ್ನ ಧಾರಣೆ ಮಾಡಿಕೊಳ್ಳುವುದು ಹಿತಕಾರಿ ಎಂದು ಜೋತಿಷಶಾಸ್ತ್ರ ಹೇಳುತ್ತದೆ. ಏಳು ವರ್ಷಗಳ ಅವಧಿ ಮುಗಿಯುತ್ತಿದ್ದ ಹಾಗೆ ಈ ರತ್ನವನ್ನು ದೇಹದಿಂದ ತೆಗೆದು ಬಿಡಬೇಕು. ರತ್ನ ಧರಿಸುವುದನ್ನು ಮುಂದುವರಿಸ ಬೇಕಾದಲ್ಲಿ ಕೇತುವಿನ ಸಂಬಂಧವಾದ ಜಪತಪ, ಹೋಮ, ಅನುಷ್ಠಾನ ಹಾಗೂ ಧ್ಯಾನಗಳನ್ನು ಧರಿಸಿದ ವ್ಯಕ್ತಿ ನಡೆಸಬೇಕು.
ಕೇತು ಮೋಕ್ಷಕ್ಕೆ ಕಾರಣ:
ಕೇತುವಿನ ಪ್ರಾಬಲ್ಯಕ್ಕೆ ಶನಿ ಹಾಗೂ ಮಂಗಳರ ದೃಷ್ಟಿಬಲ ದೊರೆತಲ್ಲಿ ಜಾತಕದಲ್ಲಿ ಸೂರ್ಯನು ದಿಗ್ದಲ ಹೊಂದಿ ಬುಧನ ಜೊತೆಯಾದಲ್ಲಿ ಅನುಪಮವಾದ ಬುದ್ಧಿಶಕ್ತಿ ಸಂಚಯನಗೊಳ್ಳುತ್ತದೆ. ಉತ್ತಮ ಸುಖ, ಸ್ವಾನಾಧೀಶ ವಿಜೃಂಭಿಸಿದಲ್ಲಿ ಉತ್ತಮವಾದ ಆತ್ಮಭಾವನ ಮತ್ತು ಅಧೀಶ ಜಾತಕದಲ್ಲಿ ಕೇತುವು ಇದ್ದಲ್ಲಿ ಆಯುಷ್ಯದ ಅಂತ್ಯದಲ್ಲಿ ಮೋಕ್ಷಕ್ಕೆ ಕಾರಣನಾಗುತ್ತಾನೆ. ಭಾರತೀಯ ಪರಂಪರೆ ಮೋಕ್ಷವನ್ನು ಬಹು ಗೌರವದಿಂದ ಕಂಡಿದೆ. ಆದರೆ ಮೋಕ್ಷಸುಲಭದ ಮಾತಲ್ಲ. ಜನ್ಮ ಜನ್ಮಾಂತರದ ಕರ್ಮಫಲಗಳನ್ನು ನಿವಾರಿಸಿಕೊಂಡು ಮೋಕ್ಷ ಸಂಪಾದಿಸುವುದಕ್ಕೆ ಏಳೇಳು ಜನ್ಮಗಳ ಸುಕೃತಫಲಗಳು ದೊರೆತಿರಬೇಕು.
ವೈಡೂರ್ಯದಿಂದ ಕೇತು ಸಿದ್ದಿಯ ಜೊತೆಗೆ ಜ್ಞಾನ ಶ್ರೀಮಂತಿಕೆ ಒಂದೊಮ್ಮೆ ಕೇತು ಗ್ರಹವು ಜಾತಕದ ದುಸ್ಥಾನಗಳಾದ 3 ಅಥವಾ 6 ರಲ್ಲಿ ಅನೇಕ ರೀತಿಯ ಕೇತುವಿನ ಕುರಿತಾದ ಅನುಷ್ಠಾನಗಳೊಂದಿಗೆ ವೈಡೂರ್ಯ ಧರಿಸಿದಲ್ಲಿ ಜ್ಞಾನದ ಸುಧೆಯು ಮನುಷ್ಯನಲ್ಲಿ ಪ್ರಬಲಗೊಳ್ಳುತ್ತದೆ. ವಾಕ್ ಸ್ಥಾನವಾದ 2ನೇ ಮನೆಯಲ್ಲಿ ಕೇತುವಿದ್ದರೆ ಮೋಕ್ಷ, ವಾಕ್ ಸಿದ್ದಿ, ಎಂಥದ್ದೇ ಕ್ರಿಮಿನಲ್ ಕೇಸುಗಳನ್ನು ಗೆಲ್ಲಬಲ್ಲ ತರ್ಕಬದ್ಧ ಚರ್ಚಾವಾಕ್ಷಟುತ್ವ ವಿಶೇಷವಾಗಿ ವಕೀಲರುಗಳಿಗೆ ಇದು ಅನುಕೂಲ. ರಾಜಕಾರಣಿಗಳಿಗೆ ಮಾತಿನಿಂದ ಜನಾಕರ್ಷಣೆಯು ಸಿದ್ಧಿಸುತ್ತದೆ. ಕೇತುವು ಆಯುಷ್ಯದ ಅಂತ್ಯದಲ್ಲಿ ಮೋಕ್ಷಕ್ಕೆ ಕಾರಣನಾಗುತ್ತಾನೆ. ಮರಣಕ್ಕೆ ಯಾತನೆ ಕೊಡಲಾರ. ಕೇತು ಧನ, ವಾಕ್, ನೇತ್ರ, ಕುಟುಂಬ ಸ್ಥಾನ, ಮೋಕ್ಷಸ್ಥಾನ, ಮಾರಕ ಸ್ಥಾನದಲ್ಲಿ ಸ್ಥಿತನಿರುವಾಗ ಗುರುದೃಷ್ಟಿ ಅದ್ಭುತವನ್ನೇ ಸೃಷ್ಟಿಸಿ ಪರಮೋಚ್ಛ ಕೀರ್ತಿ, ಗೌರವಾದರ, ಸಂಪತ್ತು ಮನ್ನಣೆಗಳಿಗೆ ಕಾರಣವಾಗಿ, ಸಕಲ ರಾಜಮರ್ಯಾದೆಗಳಿಗೆ ಸ್ವರಶುದ್ಧಿಗೆ ಕಾರಣನಾಗುತ್ತಾನೆ. ಕೇತುಗ್ರಹದ ಕುರಿತು ರಾಶಿ ಹಾಗೂ ನಕ್ಷತ್ರಗಳ ವಿಚಾರ. ಕೇತುವಿಗೆ ಸಕ್ಷೇತ್ರ ಮೀನ, ಮೂಲ ತ್ರಿಕೋಣ ರಾಶಿ ಸಿಂಹ ರಾಶಿ. ಉಚ್ಚಸ್ಥಾನ ಧನು ರಾಶಿ ಆದರೆ ನೀಚಸ್ಥಾನ ಮಿಥುನ ರಾಶಿ. ಮಿತ್ರಗ್ರಹಗಳು-ರವಿ, ಚಂದ್ರ, ಕುಜ, ಹಾಗೂ ಗುರು.ಶುಕ್ರ ಮತ್ತು ಶನಿ ಶತೃಗಳು. ಬುಧನು ಸಮ. ಗೋಚಾರದಲ್ಲಿ ಶುಭಸ್ಥಾನ 3, 6, 11.ವೇಧಸ್ಥಾನ 5, 9, 12. ಗೋಚಾರದಲ್ಲಿ ಸಾಧಾರಣ ಫಲಕಾರಿ 18 ತಿಂಗಳು. ಗೋಚಾರದಲ್ಲಿ ವಿಶೇಷ ಫಲಕಾಲ ಅಂತ್ಯದಲ್ಲಿ 3 ತಿಂಗಳು. ಅಶ್ವಿನಿ, ಮಘ ಹಾಗೂ ಮೂಲನಕ್ಷತ್ರಗಳು ಕೇತುವಿನ ಸಿರಿತನಕ್ಕೆ ಬದ್ಧತೆ ಪಡೆದ ನಕ್ಷತ್ರಗಳಾಗಿವೆ. ಅಶ್ವಿನಿ ನಕ್ಷತ್ರಕ್ಕೆ ಸೂರ್ಯನನ್ನು ಪ್ರಬಲವಾಗಿಸುವ ಶಕ್ತಿ ಇದೆ. ಮಖಾ ನಕ್ಷತ್ರದಲ್ಲಿ ಸ್ಥಿತಗೊಂಡಾಗ ತುಸು ತ್ರಾಸದಾಯಕನಾಗುತ್ತಾನೆ. ಆತ್ಮಕ್ಕೆ ಭಯ, ಸ್ವಂತ ವಿಚಾರದಲ್ಲಿ ನಂಬಿಕೆ ಉತ್ಸಾಹ ರಹಿತ ಜೀವನ ಪರಿಸ್ಥಿತಿ ನಿರ್ಮಿಸುತ್ತಾನೆ. ಮೂಲಾ ನಕ್ಷತ್ರದಲ್ಲಿ ಚಂದ್ರನಿದ್ದರೆ ಹುಡುಗಿಯರ ವೈವಾಹಿಕ ಜೀವನಕ್ಕೆ ಅಡೆತಡೆಗಳನ್ನು ತರುತ್ತಾನೆ. ಸಾಮಾನ್ಯವಾಗಿ ದುಷ್ಟರ ಜೊತೆ ಸೇರಿದಾಗ ಸಂಘದೋಷ ಆಘಾತಕಾರಿಯಾಗುತ್ತದೆ. ಆದರೆ ಮೂಲಾ ನಕ್ಷತ್ರದಲ್ಲಿ ಕುಳಿತ ಕೇತು ಉತ್ತಮವಾದ ಅಭಿವೃದ್ಧಿ ಸಂಪದಗಳಿಗೆ ಕಾರಣನಾಗುತ್ತಾನೆ. ಅಶ್ವಿನ್ಯಾದಿ 27 ನಕ್ಷತ್ರಗಳಲ್ಲಿ ಅಕಸ್ಮಾತ್ ಎಂಥದ್ದೇ ದುಷ್ಟ ಪ್ರಭಾವಗಳು ಚಂದ್ರನಿಗಾಗಲೀ ಕೇತುಗಾಗಲೀ ಇದ್ದರೂ ಮಂಗಳಗ್ರಹದ, ಗುರುಗ್ರಹದ ಬಲಗಳು ಬಲವಾಗಿದ್ದಲ್ಲಿ ದೋಷಗಳು ನಿವಾರಣೆಯಾಗುತ್ತವೆ.
ಉದ್ಯೋಗ ಫಲ ಏನು?:
ಕೇತುವು ಉದ್ಯೋಗ ಸ್ಥಾನವಾದ ದಶಮದಲ್ಲಿದ್ದರೆ ಕೆಲಸಕ್ಕಾಗಿ ಬಹಳ ಪ್ರಯತ್ನ ಮಾಡಬೇಕಾಗುತ್ತದೆ. ಕೇತುವು ಸಂಶೋಧನೆ, ಸಾಹಿತ್ಯ, ಕಲೆ, ಶೃಂಗಾರ, ಭೂಮಿ ವ್ಯವಹಾರಗಳನ್ನು ನಿರ್ದೇಶಿಸುತ್ತಾನೆ. ಕೇತುವು ಅಂಗಾರಕನ ಫಲವನ್ನೇ ನೀಡುತ್ತಾನೆ. ಯಂತ್ರದ ಬಿಡಿಭಾಗಗಳು, ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು ಕಂಪ್ಯೂಟರ್ ಭಾಗಗಳು ವಿದ್ಯುನ್ಮಾನ ಉಪಕರಣಗಳ ಮಾರಾಟ ವೈದ್ಯಕೀಯ ತಂತ್ರಜ್ಞಾನದ ತಾಂತ್ರಿಕ ಹುದ್ದೆಗಳು ಮುಂತಾದ ವ್ಯಾಪಾರ ವ್ಯವಹಾರಗಳ ಮೂಲಕ ಹಣ ಪ್ರಾಪ್ತವಾಗಿ ಬದುಕು ಸ್ಥಿರವಾಗುತ್ತದೆ. ಭೂಮಿ, ವಾಹನ, ವಜ್ರಾಭರಣ ವ್ಯವಹಾರಗಳಲ್ಲಿ ಕೇತು ವೃತ್ತಿಗಳನ್ನು ನೆಲೆಗಳನ್ನು ನೆಲೆಗೊಳಿಸುತ್ತಾನೆ.
ಕೇತು ದೋಷ ನಿವಾರಣೆಗಾಗಿ ಈ ಮಂತ್ರವನ್ನು ದಿನಕ್ಕೆ 108 ಬಾರಿ ಪಠಿಸಿರಿ;
ಓಂ ಸ್ತ್ರಾಂ ಸ್ತ್ರೀಂ ಸೌಂ ಸಃ ಕೇತವೇ ನಮಃ