ನಿಮಗೆ ಜಾತಕದಲ್ಲಿ ಸಾಡೇಸಾತಿ ಇದೆ ಎಂದು ಹೇಳಿದರೆ ಸಾಕು, ಭಯಪಡುವವರು ಬಹಳ ಜನ. ಆದರೆ ಅಂತಹ ಸಂದರ್ಭದಲ್ಲಿ ಒಂದಿಷ್ಟು ಮುನ್ನೆಚ್ಚರಿಕೆ ವಹಿಸಿದಲ್ಲಿ ಶನಿಯ ಕಾಟದ ಪ್ರಭಾವದ ಪರಿಣಾಮಗಳಿಂದ ತಕ್ಕಮಟ್ಟಿಗೆ ಪಾರಾಗಲು ಸಾಧ್ಯವಿದೆ. ತಮ್ಮ ಜನ್ಮ ನಕ್ಷತ್ರ, ರಾಶಿ ಯಾವುದು ಎಂಬುದು ತಿಳಿದಿರಬೇಕು. ಆದ್ದರಿಂದ ನಿಮ್ಮ ಹುಟ್ಟಿದ ದಿನಾಂಕ, ಸಮಯ, ಹುಟ್ಟಿದ ಸ್ಥಳದ ಆಧಾರದಲ್ಲಿ ಜಾತಕವೊಂದನ್ನು ಈಗಾಗಲೇ ಮಾಡಿಸಿಟ್ಟುಕೊಂಡಿದ್ದಲ್ಲಿ ಉತ್ತಮ. ಒಂದು ವೇಳೆ ಜಾತಕ ಇಲ್ಲ ಎಂದಾದಲ್ಲಿ ಈಗಲಾದರೂ ಜನ್ಮ ಜಾತಕವನ್ನು ಮಾಡಿಸಿಟ್ಟುಕೊಳ್ಳಿ.
ಸಾಡೇಸಾತ್ ಅಥವಾ ಏಳರಾಟ ಶನಿ ಎಂದರೇನು ?
ಯಾವುದೇ ವ್ಯಕ್ತಿಯ ಜನ್ಮ ಜಾತಕದಲ್ಲಿ ಚಂದ್ರ ಎಲ್ಲಿರುತ್ತದೋ ಅದನ್ನು ಜನ್ಮರಾಶಿ ಎನ್ನಲಾಗುತ್ತದೆ. ಆ ರಾಶಿಗೆ ಹನ್ನೆರಡನೇ ಮನೆ, ಒಂದನೇ ಮನೆ (ಜನ್ಮ ರಾಶಿ) ಹಾಗೂ ಎರಡನೇ ಮನೆಯಲ್ಲಿ ಶನಿ ಗ್ರಹದ ಸಂಚಾರ ಆಗುವಾಗ ಸಾಡೇಸಾತ್ ಅಥವಾ ಏಳರಾಟ ಶನಿ ಎಂದು ಕರೆಯಲಾಗುತ್ತದೆ. ಸಾಡೇಸಾತ್ ಎಂಬುದು ಹಿಂದಿ ಪದ. ಹೀಗೆ ಈ ಪದವನ್ನು ಬಳಸುವುದರ ಹಿಂದೆ ಒಂದು ಲೆಕ್ಕಾಚಾರ ಇದೆ. ಅದೇನೆಂದರೆ, ಶನಿ ಗ್ರಹವು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಕಾಲ ಸಂಚಾರ ಮಾಡುತ್ತದೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಒಂದು ರಾಶಿಯಲ್ಲಿ ಅತಿ ದೀರ್ಘ ಕಾಲ ಇರುವ ಗ್ರಹ ಕೂಡ ಶನಿಯೇ. ಇದನ್ನು ಮಂದ ಗ್ರಹ, ಅಂದರೆ ನಿಧಾನಕ್ಕೆ ಚಲಿಸುವಂಥ ಗ್ರಹ ಎಂದೂ ಕರೆಯಲಾಗುತ್ತದೆ. ಹೀಗೆ ಮೂರು ಹಂತಗಳಲ್ಲಿ ಶನಿ ಗ್ರಹ ಮನುಷ್ಯರಿಗೆ ಪರೀಕ್ಷೆಗಳು, ಸವಾಲು, ಕಷ್ಟಗಳನ್ನು ತಂದೊಡ್ಡುತ್ತದೆ. ಅದೇ ಸಂದರ್ಭದಲ್ಲಿ ಆ ವ್ಯಕ್ತಿಗೆ ದೈವ ಭಕ್ತಿಯನ್ನು ಮತ್ತು ಜೀವನದ ಪಾಠಗಳನ್ನು ಸಹ ಕಲಿಸುತ್ತದೆ. ಇನ್ನು ಶನೈಶ್ಚರ ಅಂದರೆ ನ್ಯಾಯದ ತಕ್ಕಡಿ ಇದ್ದಂತೆ. ಈ ಅವಧಿಯಲ್ಲಿ ಒಬ್ಬ ವ್ಯಕ್ತಿ ಅದೆಷ್ಟು ಪ್ರಾಮಾಣಿಕ ಹಾಗೂ ನ್ಯಾಯ ತತ್ಪರನಾಗಿರುತ್ತಾರೋ ಅಷ್ಟು ಪ್ರಮಾಣದಲ್ಲಿ ಪರಿಣಾಮವು ಸೌಮ್ಯ ಗತಿಯದ್ದಾಗಿರುತ್ತದೆ.
ಪರಿಹಾರಗಳನ್ನು ಗಮನಿಸಿ :
ಸಾಮಾನ್ಯವಾಗಿ ಸಾಡೇಸಾತ್ ಆರಂಭದ ಹಂತದಲ್ಲೇ ಶನೈಶ್ಚರ ಶಾಂತಿ ಮಾಡಿಸಿಕೊಳ್ಳುವುದಕ್ಕೆ ಸಲಹೆ ನೀಡಲಾಗುತ್ತದೆ. ಇದರ ಜತೆಗೆ ಈ ಅವಧಿಯ ಉದ್ದಕ್ಕೂ ಈಶ್ವರ, ಆಂಜನೇಯನ ಆರಾಧನೆ ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಇದರ ಜತೆಗೆ ಲೋಕಾರೂಢಿಯಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಉತ್ತಮ. ಏಳರಾಟ ಶನಿಯ ಕಾಲದಲ್ಲಿ ಈ ಏಳು ಸಮಸ್ಯೆಗಳು ಎದುರಾಗಬಹುದು. ಇದರಿ೦ದ ದೂರವಿರುವಂತೆ ಅಥವಾ ಸಾಧ್ಯವಾದಷ್ಟು ಸಮಸ್ಯೆ ದೊಡ್ಡದಾಗದಿರುವಂತೆ ನೋಡಿಕೊಳ್ಳಿ. ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ದೊಡ್ಡ ದೊಡ್ಡ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು.
- ಸಾಡೇಸಾತ್ ಅವಧಿಯಲ್ಲಿ ಕಡಿಮೆ ಬಡ್ಡಿಗೆ ಅಥವಾ ಬಡ್ಡಿರಹಿತ ಸಾಲ: ಹಣ ಕೊಡುವುದಾಗಿ ಕೆಲವರು ಅಥವಾ ಹಣಕಾಸು ಸಂಸ್ಥೆಗಳು ಮುಂದೆ ಬರಬಹುದು. 'ಒಂದು ವರ್ಷ ಬಿಟ್ಟು ಕೊಟ್ಟರೂ ಪರವಾಗಿಲ್ಲ ಎಂದು ಹೇಳಿದ್ದಾರೆ, ಸಾಲ ತೆಗೆದುಕೊಂಡು ಬಿಡೋಣ' ಎಂದೆನಿಸುತ್ತದೆ. ಹೀಗೆ ಅಂದರೂ, ಯಾವ ಕಾರಣಕ್ಕೂ ಸಾಲವನ್ನು ಪಡೆಯದಿರಿ. ಆಪ್ತ ಸ್ನೇಹಿತರು, ಸಂಬಂಧಿಕರು, ಉದ್ಯೋಗ ಸ್ಥಳ ಹೀಗೆ ವಿವಿಧ ಕಡೆಗಳಿಂದ ಸಾಲ ತೆಗೆದುಕೊಳ್ಳುವಂತೆ ನಿಮಗೆ ಆಮಿಷಗಳು ಬರುತ್ತವೆ. ಆದರೆ ಯಾವುದೇ ಕಾರಣಕ್ಕೂ, ತೀರಾ ಅನಿವಾರ್ಯ ಪರಿಸ್ಥಿತಿ ಅಲ್ಲದ ಹೊರತು, ಸಾಲವನ್ನು ಮಾಡಬೇಡಿ.
- ಇನ್ನು ನಿಮ್ಮ ಬಳಿಯೇ ಆಪತ್ಕಾಲಕ್ಕೆ ಅಂತ ಒಂದಿಷ್ಟು ಹಣ ಇಟ್ಟುಕೊಂಡಿದ್ದೀರಿ ಅಥವಾ ಒಡವೆ ಇದೆ, ಆಸ್ತಿ ಮಾರಿದ್ದು ಅಥವಾ ಮನೆಯಲ್ಲೇ ಹಣ ಇದೆ ಅಂತಾದರೆ, ಬೇರೆಯವರಿಗೆ ಹೆಚ್ಚಿನ ಬಡ್ಡಿ ಆಸೆಗೋ ಅಥವಾ ಅವರು ತೋರಿಸುವ ಮತ್ಯಾವುದೇ ಆಮಿಷಕ್ಕೊ ಬಲಿಯಾಗಿ, ಕೈಯಲ್ಲಿರುವ ಹಣವನ್ನು ಕಳೆದುಕೊಳ್ಳಬೇಡಿ. ಬ್ಯಾಂಕ್ ಗಿಂತ ಹೆಚ್ಚಿನ ಬಡ್ಡಿ, ಅವರು ತಮ್ಮದೇ ಮನೆಯ ಅಥವಾ ಬೇರಾವುದೋ ಆಸ್ತಿಯ ಪತ್ರ ನೀಡುತ್ತಾರಂತೆ ಅಥವಾ ಅವರಿಗೆ ಅಗತ್ಯವಿರುವುದು ಕೇವಲ ಒಂದೆರಡು ತಿಂಗಳಿಗೆ ಮಾತ್ರವಂತೆ... ಹೀಗೆ ಏನೇ ಕಾರಣಗಳು ಇದ್ದರೂ ನಿಮ್ಮ ಹಣವನ್ನು ಮತ್ತೊಬ್ಬರಿಗೆ ನೀಡಬೇಡಿ.
- ನನ್ನ ಸಾಮರ್ಥ್ಯಕ್ಕೆ ಈಗ ಕೆಲಸ ಮಾಡುತ್ತಿರುವ ಸಂಬಳಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ದುಡಿಯುವ ತಾಕತ್ತು ಇದೆ. ಆದ್ದರಿಂದ ಇರುವ ಕೆಲಸ ಬಿಟ್ಟು ಸ್ವಂತ ವ್ಯಾಪಾರ ಮಾಡುತ್ತೇನೆ ಅಂತ ಹುಚ್ಚು ಸಾಹಸಕ್ಕೆ ಕೈಹಾಕಬೇಡಿ. ಅಥವಾ ಈಗಿರುವ ಕೆಲಸ ಬಿಟ್ಟು ಬಂದ ತಕ್ಷಣವೇ ಬೇರೆ ದೇಶದಲ್ಲಿ ಅಥವಾ ಬಹಳ ಒಳ್ಳೆ ಕಂಪನಿಯಲ್ಲಿ ಭಾರೀ ಸಂಬಳದೊಂದಿಗೆ ಕೆಲಸ ಕೊಡಿಸುವುದಾಗಿ ಯಾರೋ ಪರಿಚಯಸ್ಥರು ಹೇಳಿದ್ದಾರೆ ಎಂದು ಹೇಳಿದ್ದನ್ನು ಹಾಗೇ ನಂಬಬೇಡಿ. ಹೊಸ ಉದ್ಯೋಗದ ಖಾತ್ರಿ ಸಿಗುವ ಮುನ್ನವೇ, ಈಗಿರುವ ಕೆಲಸವನ್ನು ಬಿಡಬೇಡಿ. ಏಕೆಂದರೆ ಈ ಅವಧಿಯಲ್ಲಿ ನಿಮ್ಮಲ್ಲಿ ಅತಿ ಆತ್ಮವಿಶ್ವಾಸ ಮೂಡುವ ಅಪಾಯ ಇರುತ್ತದೆ ಎಂಬುದನ್ನು ನೆನಪಿಡಿ.
- ಈ ಎಚ್ಚರಿಕೆಯು ಸಂಬಂಧಗಳು, ಸ್ನೇಹಗಳ ವಿಚಾರಕ್ಕೆ ಸಂಬಂಧಿಸಿದೆ. ಪುರುಷರಾದರೆ ಸ್ತ್ರೀಯರ ವಿಚಾರದಲ್ಲಿ ಸ್ತ್ರೀಯರಾದರೆ ಸ್ತ್ರೀಯರಾದರೆ ಪುರುಷರ ವಿಚಾರದಲ್ಲಿ ವಿಪರೀತ ಆಸಕ್ತಿ ತೋರಬೇಡಿ. ನಿಮಗೆ ಇದು ಸಹಾಯ ಎಂದು ಎನಿಸಬಹುದು. ಆದರೆ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಅಥವಾ ಅವರಿಗೇನೋ ನಾನು ನೆರವಾಗಿ ಬಿಡುತ್ತೇನೆ ಎನ್ನುವ ಭ್ರಮೆಗಳು ಬೇಡ. ಏಕೆಂದರೆ ನಿಮ್ಮ ಉದ್ದೇಶಕ್ಕಿಂತ ಹೆಚ್ಚಾಗಿ ಅಪಪ್ರಚಾರಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ನಿಂದನೆಗೆ ಗುರಿ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಇದರ ಬಗ್ಗೆ ಎಚ್ಚರ ವಹಿಸಿ.
- ಮುಖ್ಯವಾಗಿ ಈಗಾಗಲೇ ವ್ಯವಹಾರ- ಉದ್ಯಮವನ್ನು ಮಾಡುತ್ತಿರುವವರೂ ಎಚ್ಚರ ವಹಿಸಬೇಕು. ನೀವು ಈಗಾಗಲೇ ಒಂದು ವ್ಯವಹಾರ ಮಾಡುತ್ತಿದ್ದೀರಿ ಅಂತಾದಲ್ಲಿ ನಿಮ್ಮದೇ ಹಣ ಕೈಯಲ್ಲಿ ಇದ್ದರೂ ಅದನ್ನು ಹೊಸದಾಗಿ ವ್ಯಾಪಾರದಲ್ಲಿ ಹೂಡಿಕೆ ಮಾಡಬೇಡಿ, ಇನ್ನು ಸಾಲ ಮಾಡಿ, ಆ ಹಣವನ್ನು ಹೊಸ ವ್ಯವಹಾರಗಳಲ್ಲಿ ಹೂಡಲಿಕ್ಕೆ ಹೋಗಲೇಬೇಡಿ. ಈಗ ಹೇಗಿದೆಯೋ ಹಾಗೆಯೇ ಅದನ್ನು ಮುಂದುವರಿಸಿಕೊಂಡು ಹೋಗಿ. ಬದಲಾವಣೆ ಬೇಡ. ಭಾರೀ ಸಲಹೆ-ಸೂಚನೆ ನೀಡುವಂಥವರು, ಭಾರೀ ಲಾಭ ಬರುತ್ತದೆ ಎಂದು ಆಮಿಷ ಒಡ್ಡುವವರು ಇದ್ದೆ ಇರುತ್ತಾರೆ. ಆದರೆ ಅಂಥ ಮಾತುಗಳು, ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕಿವಿಗೊಡಬೇಡಿ.
- ಸಾಡೇಸಾತ್ ನಡೆಯುವಾಗ ಅತಿ ಮುಖ್ಯವಾಗಿ ಗಮನಿಸಬೇಕಾದದ್ದು ಆರೋಗ್ಯದ ಬಗ್ಗೆ ಆದ್ದರಿಂದ ಅನಾರೋಗ್ಯ ವಿಚಾರಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಇದಕ್ಕೆ ಮನೆ ಮದ್ದು ಪರಿಹಾರ ಅಲ್ಲ, ನನಗೇನೋ ಶುಗರ್ಬಾರ್ಡರ್ ನಲ್ಲಿದೆ ಅಂತ ವೈದ್ಯರು ಹೇಳ್ತಾರೆ ಅಷ್ಟೇ, ಅಂಥ ಯಾವ ಲಕ್ಷಣವೂ ಕಾಣಿಲ್ಲ' ಎಂದು ನಿಮಗೆ ನೀವೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ಈ ಅವಧಿ ಯಲ್ಲಿ ಅಲರ್ಜಿಗಳು ಅಂದರೆ ಮಾತ್ರೆ- ಔಷಧಗಳಿಂದ ಅಲರ್ಜಿ ಅಥವಾ ದೀರ್ಘ ಕಾಲದ ಔಷಧೋಪಚಾರ ಮಾಡಿಕೊಳ್ಳಬೇಕಾದ ಸ್ಥಿತಿ ಬರಬಹುದು. ಇದನ್ನು ಗಮನದಲ್ಲಿರಿಸಿ ಕೊಳ್ಳುವುದು ಒಳ್ಳೆಯದು.
- ನೀವು ಅದೆಷ್ಟೇ ಪರಿಣಿತ ಚಾಲಕರಿದ್ದರೂ, ಸಾಡೇ ಸಾತ್ ಅವಧಿಯಲ್ಲಿ ವಾಹನ ಚಾಲನೆಯಲ್ಲಿ ಅದೆಷ್ಟೇ ಎಚ್ಚರದಿಂದ ಇದ್ದರೂ ಸಾಕಾಗುವುದಿಲ್ಲ. ಅದರಲ್ಲೂ ವೃತ್ತಿಯಲ್ಲಿ ಚಾಲಕರಾದವರು ಮತ್ತೂ ಎಚ್ಚರಿಕೆಯಿಂದ ಇರಬೇಕು. ಕೆಲವರಿಗೆ ಇನ್ನೊಬ್ಬರ ವಾಹನವನ್ನು ಉಪಯೋಗಿಸುವ ಅಭ್ಯಾಸ ಇರುತ್ತದೆ. ಇದನ್ನಂತೂ ಖಂಡಿತ ಮಾಡಬೇಡಿ.
ಜಾತಕದಲ್ಲಿ ಶನಿಗ್ರಹದ ಪರಿಣಾಮ ಶುರುವಾದಾಗ ಉಪಾಯಗಳೊಂದಿಗೆ ಎಚ್ಚರ ವಹಿಸಿ. Part-2