ಮನೆ ಎಂಬುದು ಕೇವಲ ಕಟ್ಟಡವಲ್ಲ, ಅದು ನಮ್ಮ ಬದುಕಿನ ಸ್ಪೂರ್ತಿದಾಯಕ ತಾಣ. ನಾವು ನಮ್ಮ ಕುಟುಂಬದವರೊಂದಿಗೆ ವಾಸಿಸುವ ನೆಮ್ಮದಿಯ ನೆಲೆ. ಇಂತಹ ಮನೆಯನ್ನು ನಾವು ಕಟ್ಟುವಾಗ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ನಮ್ಮ ಮನೆ ನಮ್ಮ ಅಗತ್ಯಗಳನ್ನು ಪೂರೈಸುವುದಶ್ಟೇ ಅಲ್ಲ, ಅದರಲ್ಲಿ ನೆಮ್ಮದಿ, ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ.
ನಿವೇಶನ ಖರೀದಿಸಿದ ಮೇಲೆ ಮನೆ ಕಟ್ಟುವ ಮೊದಲು ಸುತ್ತಲಿನ ಪರಿಸರವನ್ನು ಅವಲೋಕಿಸಿ, ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಕಟ್ಟಬೇಕು.ಉಷ್ಣ ವಲಯದಲ್ಲಿದ್ದರೆ ಎಲ್ಲ ಕೋಣೆಗಳಿಗೂ ಸಾಕಷ್ಟು ಗಾಳಿ ಬೆಳಕು ಬರುವಂತೆ ಕಿಟಕಿಗಳನ್ನು ಯೋಜಿಸಬೇಕು. ತುಂಬಾ ಶೀತ ಪ್ರದೇಶದಲ್ಲಿದ್ದರೆ ಮನೆಯ ಕಿಟಕಿ,ಬಾಗಿಲುಗಳನ್ನು ಪರಿಸರಕ್ಕೆ ಪೂರ್ತಿ ತೆರೆದಿಡುವ ರೀತಿಯಲ್ಲಿ ಕಟ್ಟಬಾರದು. ಮನೆಯ ಒಳಗೆ ಅಡಿಗೆ ಮನೆಯು ಪೂರ್ವಾಭಿಮುಖವಾಗಿ ಇರುವಂತೆ ನೋಡಿಕೊಳ್ಳಬೇಕು, ಆಗ ಅಲ್ಲಿನ ಕಿಟಕಿಯಿಂದ ಬೆಳಗಿನ ಸಮಯದಲ್ಲಿ ಬರುವ ಸೂರ್ಯನ ಕಿರಣಗಳು ಹೆಚ್ಚು ತೀಕ್ಷ್ಣವಾಗಿರುವುದಿಲ್ಲ ಹಾಗೂ ಮಧ್ಯಾಹ್ನದ ನಂತರ ತಾಪವು ಕಡಿಮೆಯಾಗುವುದರಿಂದ ಅಡಿಗೆ ಮನೆಯು ತಂಪಾಗಿರುತ್ತದೆ. ಡೈನಿಂಗ್ ಕೋಣೆಯು ಅಡಿಗೆ ಮನೆಗೆ ಹೊಂದಿಕೊಂಡಂತಿರಲಿ ಮತ್ತು ಹಜಾರದಿಂದ ಅಂತರವಿರಲಿ. ಆಗ ಅಡಿಗೆ ಮಾಡುವಾಗ ಹೊಗೆ ಬಂದರೆ ಅದು ಹಜಾರಕ್ಕೆ ಹರಡುವುದಿಲ್ಲ. ಮಲಗುವ ಕೋಣೆಗಳ ದ್ವಾರಗಳು ಹಜಾರದ ಕಡೆಗೆ ಇರದಂತೆ ನೋಡಿಕೊಳ್ಳಿ, ಇದರಿಂದ ನಿಮ್ಮ ಖಾಸಗಿತನವನ್ನು(privacy) ಕಾಪಾಡಿಕೊಳ್ಳಬಹುದು.
ಮನೆಯನ್ನು ಸಣ್ಣ ನಿವೇಶನದಲ್ಲಿ ಕಟ್ಟಿದ್ದಾರೆ ಚಿಕ್ಕದಾಯಿತು ಎಂದು ಚಿಂತಿಸಬೇಡಿ, ಮನೆಯೊಳಗೇ ನಾವು ಅರೇಂಜ್ ಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಅಡಿಗೆ ಮನೆ ಮತ್ತು ಇತರ ಕೊಠಡಿಗಳಲ್ಲಿ ಸ್ವಲ್ಪ ಎತ್ತರದಲ್ಲಿ ಸಾಧ್ಯವಾದಷ್ಟು ಶೆಲ್ಫ್ , ಕಪಾಟುಗಳನ್ನು ಮಾಡಿಸಿ ಸಾಮಾನುಗಳನ್ನು ಜೋಡಿಸಿಕೊಳ್ಳಿ. ಡ್ಯುಪ್ಲೆಕ್ಸ್ ಮನೆಯಾಗಿದ್ದರೆ ಮೆಟ್ಟಿಲುಗಳ ಕೆಳಭಾಗದಲ್ಲಿ ಕೂಡ ಕಪಾಟುಗಳನ್ನು ನಿರ್ಮಿಸಿ ಅಂದಗಾಣಿಸಬಹುದು. ಎಲ್ಲಕಿಂತ ಮುಖ್ಯ ವಿಚಾರವೇನೆಂದರೆ ಮನೆ ಸಣ್ಣದಿರಲಿ, ದೊಡ್ಡದಿರಲಿ, ಸೂಕ್ತವಾದ ಗಾಳಿ, ಬೆಳಕಿನ ವ್ಯವಸ್ಥೆಯಂತೂ ಇರಲೇಬೇಕು ಕತ್ತಲೆ ತುಂಬಿದ, ಗಾಳಿಯಾಡದ ಮನೆಗಳಲ್ಲಿ ಆರೋಗ್ಯಕರ ವಾತಾವರಣ ಸಾಧ್ಯವಾಗುವುದಿಲ್ಲ. ಮನೆಯನ್ನು ನಾವು ಎಷ್ಟು ಸ್ವಚ್ಛ ಮತ್ತು ವ್ಯವಸ್ಥಿತವಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟು ಆರೋಗ್ಯಕರವಾದ ನೆಮ್ಮದಿಯ ನೆಲೆ ನಮ್ಮದಾಗುತ್ತದೆ.