ಸಾಮಾನ್ಯವಾಗಿ ಜೂನ್ ತಿಂಗಳಿಂದ ಆಗಸ್ಟ್ ವರೆಗೂ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ವಿದೇಶಗಳಲ್ಲಿರುವ ಕಾಲೇಜುಗಳಲ್ಲೂ ಆನ್ಲೈನ್ ದಾಖಲಾತಿ ಆರಂಭವಾಗಿದೆ. ಬ್ರಿಟನ್ನಲ್ಲಿ ಈಗಾಗಲೇ ಚಾಲ್ತಿಯಲ್ಲಿದ್ದರೆ, ಅಮೆರಿಕಾದಲ್ಲಿ ಆಗಸ್ಟ್ ನಲ್ಲಿ ಆರಂಭವಾಗಬಹುದು. ಹೊಸದಾಗಿ ಸೇರಬಯಸುವ ವಿಶೇಷವಾಗಿ ವಿದೇಶಗಳಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಹೊರದೇಶಗಳ ಕಾಲೇಜುಗಳಲ್ಲಿ ಓದಲು ನೀವು ಬಯಸಿದ್ದರೆ ಅದಕ್ಕಾಗಿ ನೀವು ಬಹಳ ಮುಂಚೆಯೇ ತಯಾರಿಯನ್ನು ಆರಂಭಿಸಬೇಕಾಗುತ್ತದೆ. ಅಂದರೆ ಪ್ರೌಢಶಾಲೆಯಲ್ಲಿ ಇರುವಾಗಲೇ ನೀವು ಮುಂದಿನ ಗುರಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವ ವಿಷಯದಲ್ಲಿ ಪದವಿ ಗಳಿಸಬೇಕು ಹಾಗೂ ಉದ್ಯೋಗ ಪಡೆಯಬೇಕು ಎಂಬುದರ ಬಗ್ಗ್ಗೆ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ, ಇದರ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿ. ನಿಮ್ಮ ಆಸಕ್ತಿ, ಅಭಿರುಚಿಯೇ ಮುಖ್ಯವಾಗಲಿ, ಇದರ ಬಗ್ಗೆ ಗೊಂದಲವಿದ್ದರೆ ನಿಮ್ಮ ಪೋಷಕರ ಸಲಹೆಯನ್ನು ಪಡೆದುಕೊಳ್ಳಿ. ಬಹುಪಾಲು ಕಾಲೇಜುಗಳಲ್ಲಿ ಸಮಾಲೋಚನೆ(councilling) ದೊರೆಯುತ್ತದೆ, ಅದರ ಪ್ರಯೋಜನವನ್ನು ಪಡೆದುಕೊಳ್ಳಬಹದು. ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದರಿಂದ ಮುಂದೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವುದೂ ಸರಾಗವಾಗುತ್ತದೆ.
ಹೆಚ್ಚಿನ ಯೂನಿವರ್ಸಿಟಿಗಳು ನೀವು ಗಳಿಸಿದ ಅಂಕಗಳಿಗಿಂತ ನಿಮ್ಮ ವ್ಯಯಕ್ತಿಕ ಸಾಮರ್ಥ್ಯ, ಕೋರ್ಸ್ ಬಗೆಗಿನ ಸಂಶೋಧನಾ ಆಸಕ್ತಿಯನ್ನು ಹೆಚ್ಚು ಗಮನಿಸುತ್ತವೆ. ಕೋರ್ಸ್ ಆಯ್ಕೆಗಳ ಬಗ್ಗೆ ನಿಮ್ಮ ನಿರ್ಧಾರ ಧೃಡವಾದ ನಂತರ ಅದಕ್ಕೆ ಸಂಬಂಧಿಸಿದ ಕೌಶಲ್ಯವನ್ನು ಗಳಿಸುವತ್ತ ನಿಮ್ಮ ಗಮನ ಹರಿಸಬೇಕು, . ಕಾಲೇಜು ಪ್ರವೇಶ ಪಡೆಯುವುದಕ್ಕೆ ಇದು ಮುಖ್ಯವಾಗುತ್ತದೆ. ಬಿಡುವಿನ ಸಮಯದಲ್ಲಿ ಹೊಸ ವಿದೇಶಿ ಭಾಷೆಗಳನ್ನು ಕಲಿಯಿರಿ, ಅಲ್ಲಿನ ಕಾಲೇಜುಗಳಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಅನೇಕ ವಿದೇಶಿ ಕಾಲೇಜುಗಳಲ್ಲಿ ಪ್ರವೇಶ ನೀಡುವ ಮುನ್ನ ನೀವು ಬಯಸಿದ ಕೋರ್ಸ್ ಗಳ ಬಗ್ಗೆ ಪ್ರಬಂಧ ಬರೆಯಬೇಕಾಗುತ್ತದೆ. ಆದ್ದರಿಂದ ನೀವು ತೆಗೆದುಕೊಳ್ಳುವ ಕೋರ್ಸಿನ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಿ. ಒಬ್ಬ ವೃತ್ತಿಪರರಂತೆ ನೀವು ಅರ್ಜಿ ಸಲ್ಲಿಸಿದರೆ ಪ್ರತಿಷ್ಠಿತ ವಿದೇಶಿ ಕಾಲೇಜುಗಳಲ್ಲಿ ಸೀಟು ಪಡೆಯುವುದು ಕಷ್ಟವಾಗದು.