ಬೇಕಾಗುವ ಸಾಮಗ್ರಿಗಳು :
ಕಾಳು ಮೆಣಸು 1 ಚಮಚ, ನಿಂಬೆ ಗಾತ್ರದಷ್ಟು ಹುಣಸೆಹಣ್ಣು, ಒಂದು ತುಂಡು ಬೆಲ್ಲ, ಸಾರಿನ ಪುಡಿ 1 ಚಮಚ, ಒಂದು ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ 1 ಚಮಚ, ಸ್ವಲ್ಪ ಎಣ್ಣೆ.
ಮೊದಲು ಮೂರು ಲೋಟಗಳಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲೆ ಇಟ್ಟು ಕುದಿಯಲು ಬಿಡಿ. ನಂತರ ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕಿ. ಈಗ ಹುಣಸೆಹಣ್ಣಿನ ರಸ, ಬೆಲ್ಲ, ಸಾರಿನ ಪುಡಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಸೇರಿಸಿ ಹತ್ತು ನಿಮಿಷ ಕುದಿಸಿ. ನಂತರ ಇಂಗು, ಜೀರಿಗೆಯ ಒಗ್ಗರಣೆ ಕೊಡಿ. ಈಗ ಸೊಗಸಾದ ಮೆಣಸಿನ ಸಾರು ಸಿದ್ಧ. ಬಿಸಿಯಾದ ಅನ್ನಕ್ಕೆ ಒಂದು ಚಮಚ ತುಪ್ಪ ಸೇರಿಸಿ ಮೆಣಸಿನ ಸಾರಿನಲ್ಲಿ ಕಲೆಸಿ ತಿಂದರೆ ತುಂಬಾ ರುಚಿಯಾಗಿರುತ್ತದೆ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಶೀತ, ಗಂಟಲು ಕೆರೆತ ನಿವಾರಣೆಯಾಗಲು ಇದು ಪರಿಣಾಮಕಾರಿ. ಜ್ವರ ಬಂದವರ ಬಾಯಿಗೂ ಇದು ತುಂಬಾ ರುಚಿಕರವೆನಿಸುತ್ತದೆ.