ಹಳೆಯ ಗೋಡೆ ಗಡಿಯಾರಗಳಿಗೆ ಹೊಸ ಟ್ರೆಂಡ್ ಶುರುವಾಗಿದೆ !
ಡಿಜಿಟಲ್ ಯುಗದಲ್ಲಿ ಗೋಡೆಗೆ ನೇತುಹಾಕುವ ಗಡಿಯಾರಗಳು ಬಹುತೇಕ ಕಡಿಮೆಯಾಗುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಮತ್ತೆ ಗೋಡೆಗೆ ನೇತುಹಾಕುವ ಟ್ರೆಂಡ್ ಸೃಷ್ಟಿಯಾಗುತ್ತಿದೆ ಎಂದೇ ಹೇಳಬಹುದು.
ಒಂದು ಕಾಲದಲ್ಲಿ ಗಡಿಯಾರ ಮನೆಯ ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿತ್ತು. ಅದೇ ರೀತಿ ಈಗ ಹಳೆಯ ಕಾಲದ ಗೋಡೆ ಗಡಿಯಾರಗಳಿಗೆ ಬೇಡಿಕೆ ಬಂದಿದೆ. ಇವು ಕೊಠಡಿಯ ಅಂದವನ್ನು ಹೆಚ್ಚಿಸಲು ನೆರವಾಗುತ್ತವೆ. ಹೀಗಾಗಿ ಇಂತಹ ದೊಡ್ಡ ಗೋಡೆ ಗಡಿಯಾರಗಳನ್ನು ಮನೆಯಲ್ಲಿಡುವ ಟ್ರೆಂಡ್ ಹೆಚ್ಚು ಜನಪ್ರಿಯವಾಗುತ್ತಿದೆ.
ಆಗಿನ ಕಾಲದಲ್ಲಿ ಕಂಚು, ಸ್ಟೀಲ್ ಪ್ರೇಮ್ ಳಲ್ಲಿ ಕಂಗೊಳಿಸುವ ಗೋಡೆ ಗಡಿಯಾರಗಳು ಮನೆಯ ಅವಿಭಾಜ್ಯ ಅಂಗವಾಗಿದ್ದವು. ಕ್ರಮೇಣ ಡಿಜಿಟಲ್ ಗಡಿಯಾರಗಳು ಈ ಜಾಗವನ್ನು ಆಕ್ರಮಿಸಿದವು. ಈಗ ಮತ್ತೆ ಮನೆಗೆ ವಿಂಟೇಜ್ ಲುಕ್ ನೀಡಲು ಜನರು ಮುಂದಾಗುತ್ತಿದ್ದಾರೆ. ಒಂದಿಷ್ಟು ಜಾಗವನ್ನು ಅಡ್ಜಸ್ಟ್ ಮಾಡಿದರೆ ಇಂತಹ ಗಡಿಯಾರವನ್ನು ಮನೆಯಲ್ಲಿ ಇಟ್ಟು ಮೆರುಗು ಹೆಚ್ಚಿಸಬಹುದು.
ಹೊಸ ಮೆರುಗು
ಈಗಿನ ಹೊಸ ಯುಗದಲ್ಲಿ ಯಾವ ರೀತಿ ಗಡಿಯಾರ ಬೇಕಾದರೂ ತಯಾರಿಸಿ ಕೊಡುತ್ತಾರೆ. ಗಡಿಯಾರ ಮೇಲೆ ನಿಮ್ಮ ನೇಮ್ ಪ್ಲೇಟ್ ಹಿತ್ತಾಳೆ ಫಲಕದಲ್ಲಿ ಕೆತ್ತಿಸಬಹುದು ಮತ್ತು ಟಿಕ್ ಟಿಕ್ ಶಬ್ದ ಕೂಡ ಕೇಳಿಸುವುದರಿಂದ ಮನೆಯಲ್ಲಿ ಯಾವಾಗಲು ಜೀವ ಕಳೆ ಸದಾ ತುಂಬಿರುತ್ತದೆ.
ಗಡಿಯಾರಕ್ಕೂ ಬೇಕಾಗುತ್ತೆ ವಾಸ್ತು ?
ವಾಸ್ತು ಶಾಸ್ತ್ರದಲ್ಲೂ ಗೋಡೆ ಗಡಿಯಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಗೋಡೆ ಗಡಿಯಾರವನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಉತ್ತಮ. ದಕ್ಷಿಣ, ವಾಯುವ್ಯ ಅಥವಾ ನೈರುತ್ಯ ದಿಕ್ಕಿನ ಗೋಡೆಯಲ್ಲಿ ತೂಗು ಹಾಕಿದರೆ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾಗುವುದು. ಮುಖ್ಯ ದ್ವಾರದ ಸಮೀಪದಲ್ಲಿ ಇದನ್ನು ಹಾಕಲೇಬಾರದು. ಇದರಲ್ಲಿ ಸಮಯ ಯಾವಾಗಲೂ ಸರಿಯಾಗಿ ಇರುವಂತೆ ನೋಡಿಕೊಂಡರೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡಬಹುದು. ಗಡಿಯಾರದ ಗಾಜು ಒಡೆದು ಹೋಗಿದ್ದರೆ ತಕ್ಷಣವೇ ಬದಲಾಯಿಸಿಕೊಳ್ಳಿ.