ಸೂರ್ಯ ತನ್ನ ಪಥವನ್ನು ಬದಲಿಸುವ ಪರ್ವ ಕಾಲವೇ ಸಂಕ್ರಾಂತಿ. ಭಾರತ ದೇಶದಲ್ಲಿ ಸೂರ್ಯಾರಾಧನೆಗೆ ಮಹತ್ವವಿರುವುದರಿಂದ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಸೂರ್ಯನು ಧನುರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದು ಮಕರ ಸಂಕ್ರಮಣ. ಮಕರ ಸಂಕ್ರಾಂತಿಯ ಆಚರಣೆಯು ಸೂರ್ಯನ ಚಲನೆಯನ್ನು ಆಧರಿಸಿದ್ದು, ಮಕರ ರಾಶಿಗೆ ಪ್ರವೇಶಿಸುವ ಈ ಕಾಲವು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲ್ಪಡುತ್ತದೆ. ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುವ ಈ ದಿನವು ಅತ್ಯಂತ ಪುಣ್ಯಪ್ರದವಾದುದು ಎಂದು ನಮ್ಮ ಶಾಸ್ತ್ರಗಳು ಹೇಳಿವೆ.
ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗ ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಮಕರ ಸಂಕ್ರಾಂತಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ. ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ. ವೇದಶಾಸ್ತ್ರ
ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಪ್ರಚೋದಿಸುವ ಕಾಲ. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯುವ ರೂಢಿ ಬೆಳೆದು ಬಂದಿದೆ. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು ಉತ್ತರಾಯಣದಲ್ಲಿ ತೆರೆಯುತ್ತದೆ ಎಂಬ ಪ್ರತೀತಿ ಇದೆ. ಈ ಅವಧಿಯಲ್ಲಿ ಮರಣ ಹೊಂದುವವರು ಸ್ವರ್ಗವನ್ನುಪಡೆಯುತ್ತಾರೆ ಎಂಬ ಐತಿಹ್ಯವಿದೆ.
ಭಗವದ್ಗೀತೆಯಲ್ಲಿರುವ 8ನೇ ಅಧ್ಯಾಯದ 24ನೇ ಶ್ಲೋಕದಲ್ಲಿ :
ಅಗ್ನಿ: ಜ್ಯೋತಿರಹಃ ಶುಕ್ಷಃ ಷಣ್‌ಮಾಸ ಉತ್ತರಾಯಣಂ ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬಹ್ಮವಿದೋ ಜನಾಃ ।।
- ಎಂದು ಶ್ರೀ ಕೃಷ್ಣನು ಹೇಳಿದ್ದಾನೆ.
ಅಗ್ನಿ ಜ್ಯೋತಿ, ಹಗಲು, ಶುಕ್ಲಪಕ್ಷ ಉತ್ತರಾಯಣದ ಆರು ತಿಂಗಳುಗಳಲ್ಲಿ ಬ್ರಹ್ಮವಿದರಾದ ಯೋಗಿಗಳ ಪ್ರಾಣಗಳು ಬ್ರಹ್ಮದಲ್ಲಿ ವಿಲೀನವಾಗುವವು ಎಂಬುದು ಇದರರ್ಥ.
ಉಳಿದಂತೆ ಧೂಮ, ರಾತ್ರಿ, ಕೃಷ್ಣಪಕ್ಷ ಮತ್ತು ದಕ್ಷಿಣಾಯನದ ಆರು ತಿಂಗಳು ಪ್ರಯಾಣ ಮಾಡಿದ ಯೋಗಿಗಳ ಪ್ರಾಣಗಳು ಚಂದ್ರಜ್ಯೋತಿಯನ್ನು ಸೇರಿ ಮತ್ತೆ ಸಂಸಾರಕ್ಕೆ ಮರಳುವುದು. ಆದರೆ ಉತ್ತರಾಯಣದಲ್ಲಿ ಮರಣ ಹೊಂದಿದ ಯಾರೂ ಮರಳಿ ಸಂಸಾರಕ್ಕೆ ಬರುವುದಿಲ್ಲ ಅವರು ಮುಕ್ತಿಯನ್ನು ಹೊಂದುತ್ತಾರೆ ಎಂದು ಪ್ರಾಚೀನ ಶಾಸ್ತ್ರಗಳು ಹೇಳುತ್ತವೆ. ಈ ಕಾರಣದಿಂದಾಗಿಯೇ ಇಚ್ಛಾಮರಣಿಯಾಗಿದ್ದ ಕುರುಕುಲ ಪಿತಾಮಹ ಭೀಷ್ಠರು ಶರಶಯ್ಯೆಯಲ್ಲಿ ಉತ್ತರಾಯಣದ ಆಗಮನಕ್ಕಾಗಿ ಕಾಯುತ್ತಿದ್ದರೆಂದು ಮಹಾಭಾರತ ಕಥೆಯಲ್ಲಿ ಕಾಣುತ್ತದೆ.