- ವೃದ್ಧರು ತಮ್ಮ ವಯಸ್ಸು ಹೆಚ್ಚಾದಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಅದು ವೈಯಕ್ತಿಕ ಸ್ವಚ್ಚತೆ, ಉತ್ತಮ ಪೋಷಕಾಂಶ, ಸೂಕ್ತ ವ್ಯಾಯಾಮ, ವಿಶ್ರಾಂತಿ, ಕಡಿಮೆ ಪ್ರಮಾಣದ ಆಹಾರ ಸೇವನೆಯ ಹವ್ಯಾಸವನ್ನು ಒಳಗೊಂಡಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ. ಸಕಾರಾತ್ಮಕ ಮಾನಸಿಕ ಧೋರಣೆಯನ್ನು ಹೊಂದಿರಬೇಕು.
- ನೀವು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಕ್ರಿಯರಾಗಿರಿ. ಸಮರ್ಪಕ ಬೆಳಕಿನ ವ್ಯವಸ್ಥೆಯಲ್ಲಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ.
- ಆರೋಗ್ಯಕ್ಕೆ ಸಂಬಂಧಪಟ್ಟ ಯಾವುದೇ ಅಸಾಮಾನ್ಯ ಮತ್ತು ಶಂಕೆಯಿರುವ ಲಕ್ಷಣಗಳು, ಚಿಹ್ನೆಗಳು ಕಂಡುಬಂದರೆ ನಿರ್ಲಕ್ಷಿಸಬಾರದು. ನೀವು ಆರೋಗ್ಯವಾಗಿ ಇರುವುದಾಗಿ ಕಂಡು ಬಂದರೂ ದೇಹದ ಒಳಗಿನ ಭಾಗದಲ್ಲಿ ಆಗುವ ಪರಿಣಾಮ ತಿಳಿಯುವುದಿಲ್ಲ, ಆಗಾಗ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು.
- ವೃದ್ಧರಿಗೆ ನಿರ್ದಿಷ್ಟ ಆಹಾರ ಕ್ರಮದ ಅವಶ್ಯಕತೆ ಇರುವುದಿಲ್ಲ. ಆರೋಗ್ಯಕರವಾದ ಆಹಾರಗಳನ್ನು ಸೇವಿಸಿ ಮತ್ತು ಅತಿ ಹೆಚ್ಚು ತಿನ್ನುವುದನ್ನು ನಿಯಂತ್ರಿಸಿ. ಉಪ್ಪು ಕಡಿಮೆ ಇರುವ ಆಹಾರ ಸೇವಿಸಿದರೆ ಉತ್ತಮ. ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ.
- ನಿಮ್ಮ ಆಹಾರದಲ್ಲಿ ಅಧಿಕ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಸಾಧ್ಯವಾದಷ್ಟು ಕೊಬ್ಬು ಮತ್ತು ಸಾಂಬಾರ ಮಸಾಲೆ ಪದಾರ್ಥಗಳು ಹೆಚ್ಚಾಗಿರುವ ಆಹಾರವನ್ನು ನಿಯಂತ್ರಿಸಿ.
- ನಿಮ್ಮ ಜೀವನದಲ್ಲಿ ಯಾವುದೇ ಘಟನೆಗಳು ಆಗಿದ್ದರೂ ಅದನ್ನು ಮರೆತು ಸಾಧ್ಯವಾದಷ್ಟು ಮಟ್ಟಿಗೆ ಹತಾಶೆ, ಖಿನ್ನತೆ, ಯೋಚನೆ, ಚಿಂತೆ, ಆತಂಕ, ಕೋಪ, ಭಯ, ದು:ಖ, ಅಸೂಯೆ, ದ್ವೇಷಗಳಂಥ ಉದ್ವೇಗಗಳನ್ನು ನಿಯಂತ್ರಿಸಿಕೊಳ್ಳಿ. ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು, ದೈಹಿಕ ಅಸಾಮರ್ಥ್ಯ ತಂದು ಬಿಡುತ್ತದೆ. ಉದ್ವೇಗ ನಿಮ್ಮ ಹೃದಯದ ಮೇಲೆ ಹೆಚ್ಚಿನ ಒತ್ತಡ ಉ೦ಟು ಮಾಡುವ ಸಂಭವವಿರುತ್ತದೆ.
- ಸ್ವಯಂ ಔಷಧ ಸೇವನೆ ಮತ್ತು ತಾವೇ ಸ್ವತಃ ಚಿಕಿತ್ಸೆಯನ್ನು ತೆಗೆದುಕೊಳ್ಳಬಾರದು, ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳಿರುವ ಫೈಲ್ ನಿಮ್ಮ ಬಳಿ ಇಟ್ಟುಕೊಳ್ಳಿ. ಅಗತ್ಯವಿದ್ದಾಗ ನಿಮ್ಮ ಕುಟುಂಬದವರಿಗೂ ಈ ಮಾಹಿತಿಯನ್ನು ನೀಡಿ.
- ವ್ಯಾಯಾಮದಲ್ಲಿ ಕಠಿಣ ಪರಿಶ್ರಮ ಮಾಡಬೇಡಿ. ವಾಕಿಂಗ್‌ನಂಥ ವ್ಯಾಯಾಮ ಉತ್ತಮ. ಯಾವಾಗಲೂ ವಿಶ್ರಾಂತಿಯ ಮೊರೆ ಹೋಗಬೇಡಿ. ಸದಾ ಚುರುಕಾಗಿರಿ.
- ನಿಮ್ಮ ಹೆಸರು, ವಿಳಾಸ, ಸಂಪರ್ಕಿಸಬೇಕಾದ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳು ಮತ್ತು ನಿಮ್ಮ ವೈದ್ಯರ ಮೊಬೈಲ್ ನಂಬರ್ ಮತ್ತು ನೀವು ತೆಗೆದುಕೊಳ್ಳುವ ಔಷಧಿಗಳ ವಿವರಗಳನ್ನು ಒಳಗೊಂಡ ಮಾಹಿತಿ ಚೀಟಿ ಸದಾ ನಿಮ್ಮೊಂದಿಗೆ ಇಟ್ಟುಕೊಳ್ಳಿ.