"ದೇಹ ಜಾವೋ ಅಥವಾ ರಾಹೋ ಪಾಂಡುರಂಗಿ
ದೃಢಭಾವೊ ಚರಣ ನ ಸೋಡಿ ಸರ್ವಥಾ ತುಜೆ ಆಣ ಪಂಢರಿನಾಥ'
ಎಂದರೆ ಜೀವ ಹೋದರೂ, ಇದ್ದರೂ ಪಾಂಡುರಂಗ ನಿನ್ನಪಾದ ಬಿಡುವುದಿಲ್ಲ.
ಸಂತರೊಬ್ಬರ ಅಭಂಗದ ಸಾಲುಗಳಿವು. ಈ ಮಾತಿಗೆ ಸಾಕ್ಷಿಯಾಗಿ ನಿಂತವರೇ ವಾರಕರಿ ಸಂಪ್ರದಾಯಸ್ಥರಾದ ತುಕಾರಾಂ ಮಹಾರಾಜರು. ಸಂತ ತುಕಾರಾಮರು ಹಿಂದುಳಿದ ವರ್ಗದಲ್ಲಿ ಜನ್ಮತಾಳಿದರೂ, ತಮ್ಮ ಅಭಂಗಗಳಿಂದ, ಕೀರ್ತನೆಗಳಿಂದ ಭಾರತದಾದ್ಯಂತ ಭಕ್ತಿ ಸಿಂಚನವನ್ನು ಮೂಡಿಸಿದರು.
ಸಂತ ತುಕಾರಾಮರು ಮಹಾರಾಷ್ಟ್ರದ ಚಿಕ್ಕ ಗ್ರಾಮ ದೇಹುವಿನಲ್ಲಿ ಜನಿಸಿದರು. ಇವರ ತಂದೆ ಬೊಳ್ಹೋಬಾ, ತಾಯಿ ಕನಕಾಯಿ. ಅವರ ಪೂರ್ವನಾಮ ತುಕಾರಾಮ ವಿಠೋಬಾ ಅಂಬೆ. ಬಾಲ್ಯದಲ್ಲೇ ತಂದೆ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರಿಂದ ಸಂಸಾರದ ಭಾರ ಹೊರುವ ಜವಾಬ್ದಾರಿ ಇವರ ಹೆಗಲ ಮೇಲೆ ಬಿದ್ದಿತು. ಅದಾದ ಸ್ವಲ್ಪ ಕಾಲದಲ್ಲೇ ತಂದೆ, ತಾಯಿ ಇವರನ್ನು ಅನಾಥ ಮಾಡಿ ಹೋದರು. ಕೆಲವು ದಿನಗಳ ನಂತರ ತುಕಾರಾಮರು ಸಂಕಷ್ಟದ ಸರಮಾಲೆಯನ್ನೇ ಎದುರಿಸಬೇಕಾಯಿತು.
ಸಂಸಾರದ ಜಂಜಢದಲ್ಲಿದ್ದ ತುಕಾರಾಮರು ಭಕ್ತಿ ಪಂಥ ತುಳಿದದ್ದು ಆಕಸ್ಥಿಕವೇ. ಭಕ್ತಿ ಮಾರ್ಗದತ್ತ ತೆರಳಲು ತುಕಾರಾಮರಿಗೆ ಸ್ವಪ್ನ ದೃಷ್ಟಾಂತವೇ ಕಾರಣವಾಯಿತೆಂದು ಹೇಳಲಾಗುತ್ತದೆ. ತುಕಾರಾಮರು ಶ್ರೀಹರಿ ಕುರಿತಂತೆ ಸುಮಾರು ಐದು ಸಾವಿರ ಮರಾಠಿ ಅಭಂಗಗಳನ್ನು ರಚಿಸಿದ್ದಾರೆ. ಅದರಲ್ಲಿ
ಘೇಯಿನ ಮಿ ಜನ್ಮ ಯಾಚಸಾಠಿ ದೇವಾ ತುಜಿ
ಚರಣಸೇವಾ ಸಾಧಾವಯಾ
ಎಂಬ ಅಭಂಗ ಜನಪ್ರಿಯವಾಗಿದೆ.
ಸಂತ ತುಕಾರಾಮರ ಅಭಂಗಗಳಲ್ಲಿ ಅವರ ಜೀವನದಲ್ಲಿ ಆಗಿ ಹೋದ ಘಟನೆಗಳು, ಆಧ್ಯಾತ್ಮ ಚಿಂತನೆಗಳನ್ನು ಕಾಣಬಹುದು. ಸಂತ ತುಕಾರಾಮರು ರಚಿಸಿದ ಜ್ಲಾನೇಶ್ವರಿ ಇಂದಿಗೂ ಪಾರಾಯಣ ಗ್ರಂಥವಾಗಿ ಪ್ರಸಿದ್ಧವಾಗಿದೆ.