ಸ್ವಂತ ಮನೆ ಅಥವಾ ಫ್ಲ್ಯಾಟ್ ಹೊಂದುವುದು ಪ್ರತಿಯೊಬ್ಬರ ಕನಸು. ಹಾಗೆ ಸ್ವಂತ ಮನೆಗೆ ಹೋಗುವಾಗ ಮಕ್ಕಳ ಕೊಠಡಿ ಹೇಗೆ ವಿಶೇಷವಾಗಿ ಇರಬೇಕು ಎಂಬುದೇ ಹೆತ್ತವರ ದೊಡ್ಡ ಚಿಂತೆ.
ಮಕ್ಕಳ ಕೊಠಡಿ ಸುಂದರವಾಗಿ ರೂಪಿಸಬೇಕು ಎಂಬ ಜೊತೆಗೆ ಅವರ ವಿನ್ಯಾಸ ಹಾಗೂ ಸುರಕ್ಷತೆಯ ಬಗ್ಗೆಯೂ ಗಮನ ಹರಿಸುತ್ತಾರೆ. ಮನೆಯಲ್ಲಿ ಗಂಡು ಮಕ್ಕಳಿದ್ದರೆ ಅದಕ್ಕೆ ಪೂರಕವಾದ ವಿನ್ಯಾಸ, ಹೆಣ್ಣು ಮಕ್ಕಳಿದ್ದರೆ ಅವರಿಗೆ ತಕ್ಕಂತ ಕಲರ್ ಫುಲ್ ಡೈನ್ ಬೇಕಿದೆ. ಮಕ್ಕಳ ಕೊಠಡಿಯ ಇಂಟೀರಿಯರ್ ಡಿಸೈನ್ ಅಂದವಾಗಿಸಲು ಕೆಲವು ಸಲಹೆಗಳು.
ಆಟಕ್ಕೆ ಸ್ಥಳ ಇರಲಿ !
ಮಕ್ಕಳ ಕೊಠಡಿಯನ್ನು ವಿನ್ಯಾಸ ಮಾಡುವಾಗ ಆಟಕ್ಕೆ ಸಾಕಷ್ಟು ಸ್ಥಳವಿರುವಂತೆ ನೋಡಿಕೊಳ್ಳಿ. ಪುಟ್ಟ ಮಕ್ಕಳು ಮನೆಯೊಳಗೆ ಆಡಲು ಹೆಚ್ಚು ಇಷ್ಟಪಡುತ್ತಾರೆ. ಅವರಿಗೆ ಓಡಲು, ನೆಗೆಯಲು, ಕುಣಿಯಲು, ಆಡಲು ಸಾಕಷ್ಟು ಸ್ಥಳಾವಕಾಶ ಇರಲಿ. ಕಾರ್ಟೂನ್ ಕ್ಯಾರೆಕ್ಟರ್ ಗಳ, ಇಷ್ಟದ ಪ್ರಾಣಿ, ಪಕ್ಷಿಗಳ ಚಿತ್ರಗಳು ನೇತಾಡುತ್ತಿರಲಿ.
ಆಟದ ಜೊತೆ ಪಾಠ !
ಮಕ್ಕಳ ಕೊಠಡಿಯಲ್ಲಿ ಕಲಿಕೆಗೆ ಪೂರಕವಾಗಿರುವಂತೆ ಮ್ಯಾಪ್, ಗ್ಲೋಬ್ ಗಳು ಅಲಂಕಾರಕ್ಕೂ ಆಗುತ್ತದೆ. ಕಲಿಕೆಗೂ ಪೂರಕ. ಎಬಿಸಿಡಿ, ನಂಬರ್, ಪ್ರಾಣಿ, ಪಕ್ಷಿಗಳ ಚಾರ್ಟ್ ಗಳು ಗೋಡೆಗಳ ಮೇಲಿರಲಿ. ಮಾರುಕಟ್ಟೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಸಾಕಷ್ಟು ಪೋಸ್ಟರ್ ಗಳು ಸಿಗುತ್ತವೆ. ಇವುಗಳನ್ನು ಮನೆಯ ಗೋಡೆಯಲ್ಲಿ ನೇತಾಡಿಸಿ. ಆದರೆ ಇವು ಕೋಣೆಯ ಅಂದಗೆಡಿಸದಂತೆ ಎಚ್ಚರ ವಹಿಸಿ.
ಕಲರ್ ಮೇಲೆ ಗಮನವಿರಲಿ
ಮಕ್ಕಳ ಕೋಣೆಯ ಗೋಡೆಗಳಿಗೆ ಆಕರ್ಷಕ ಬಣ್ಣವನ್ನು ಪೇಂಟ್ ಮಾಡಿಸಿ. ವಿವಿಧ ಕಾರ್ಟೂನ್ ಗಳ ಚಿತ್ರಗಳನ್ನೂ ಪೇಂಟ್ ನಲ್ಲಿ ಮೂಡಿಸಬಹುದು. ವಾಲ್ ಸ್ಟಿಕ್ಕರ್ ಕೂಡ ಅಂಟಿಸಬಹುದು.
ಹಾಸುಹೊಕ್ಕಾದ ಸ್ಥಳವಿರಲಿ
ಮಕ್ಕಳ ಕೋಣೆಯ ನೆಲವು ಜಾರಿ ಬೀಳದಂತೆ ಸೂಕ್ತ ಎಚ್ಚರಿಕೆಯಿಂದ ಮಾಡುವುದು ಸೂಕ್ತ. ಇದರಿಂದ ಮಕ್ಕಳು ಆಡುವಾಗ, ನಡೆದಾಡುವಾಗ ಜಾರಿ ಬೀಳದಂತೆ ಎಚ್ಚರಿಕೆ ವಹಿಸಬಹುದು. ಜೊತೆಗೆ ಮಕ್ಕಳ ಕೊಠಡಿಯ ಸ್ವಚ್ಛಗೊಳಿಸಲು ಪೂರಕವಾಗಿರುವಂತೆ ಇರಲಿ. ಪ್ರತಿದಿನ ಗುಡಿಸಲು ಕಷ್ಟವಾಗದಂತೆ ಮಕ್ಕಳ ಡೆಸ್ಕ್, ಹಾಸಿಗೆ ಇರಲಿ. ಆಟದ ಸಾಮಾನುಗಳನ್ನು ಜೋಡಿಸಲು ಒಂದು ಪೆಟ್ಟಿಗೆ ಅಥವಾ ಸ್ಥಳ ನಿಗದಿಪಡಿಸಿ.
ಕಿಟಕಿ
ಮಕ್ಕಳ ಕೊಠಡಿಗೆ ನೈಸರ್ಗಿಕ ಬೆಳಕು ಮತ್ತು ಗಾಳಿ ಸಮರ್ಪಕವಾಗಿ ಬರುವಂತೆ ಇರಲಿ. ಕಿಟಕಿಯ ಕರ್ಟನ್ ಗಳು ಆಕರ್ಷಕವಾಗಿರಲಿ. ಸಿಂಗಲ್ ಕಲರ್ ಕರ್ಟನ್ ಅಥವಾ ಕರ್ಟನ್ ರಾಡ್ ಗಳಿದ್ದರೆ ಮಕ್ಕಳಿಗೆ ಇಷ್ಟವಾಗುವ ಬಣ್ಣಗಳನ್ನು ಹಚ್ಚಿ. ಇದು ಇಡೀ ಕೋಣೆಗೆ ಹೊಸ ಲುಕ್ ನೀಡಿ ಮಕ್ಕಳು ಕೊಠಡಿಯಲ್ಲಿ ಕಾಲ ಕಳೆಯಲು ಇಷ್ಟವಾಗುವಂತೆ ಮಾಡುತ್ತದೆ.
ಕ್ರಿಯಾಶೀಲತೆ ಇರಲಿ
ಮಕ್ಕಳ ಕೋಣೆ ನಿರ್ಮಿಸಲು ಹಲವು ಲಕ್ಷ ಖರ್ಚು ಮಾಡಬೇಕಾದ ಅವಶ್ಯಕತೆ ಇಲ್ಲ. ಇರುವ ಸೌಲಭ್ಯವನ್ನು ಬಳಸಿಕೊಂಡು ಒಂದಿಷ್ಟು ಕ್ರಿಯೆಟಿವಿಟಿ ತೋರಿಸಿ. ಮಕ್ಕಳ ಕೋಣೆಯನ್ನು ಆಕರ್ಷಕವಾಗಿರಿಸಬಹುದು. ಮಕ್ಕಳಿಗೆ ಯಾವುದೇ ಕಾರಣಕ್ಕೂ ಅವರ ಕೋಣೆಯು ಸೆರೆಮನೆಯಂತೆ ಭಾಸವಾಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಒಳಾಂಗಣ ಡಿಸೈನ್ ಮಾಡಿ.
ಮಕ್ಕಳ ಸೃಜನಾತ್ಮಕ ಬೆಳವಣಿಗೆ ಆದ್ಯತೆ ಕೊಡಿ
ಮಕ್ಕಳ ಕೋಣೆಯನ್ನು ಮಕ್ಕಳೇ ಅಲಂಕರಿಸಲು ಸೂಕ್ತವಾಗುವಂತೆ ನಿರ್ಮಿಸಿ. ಕೊಂಚ ದೊಡ್ಡ ಮಕ್ಕಳಾದರೆ ಅವರಿಂದಲೇ ಚಿತ್ತಾರ ಮೂಡಿಸಿ. ಆದರೆ ಮಕ್ಕಳ ಕೈಗೆ ಪೇಂಟ್ ಕೊಡುವ ಮೊದಲು ಕೆಮಿಕಲ್ ತಾಗದಂತೆ ಗ್ಲೌಸ್ ಬಳಸುವುದನ್ನು ಮರೆಯಬೇಡಿ. ಪೇಟಿಂಗ್ ಮುಗಿದ ಬಳಿಕ ಮಕ್ಕಳ ಕೈಗಳನ್ನು ಚೆನ್ನಾಗಿ ತೊಳೆಯಿರಿ. ತುಂಬಾ ಚಿಕ್ಕ ಮಕ್ಕಳಾಗಿದ್ದರೆ ಅವರಿಂದ ಚಿತ್ತಾರ ಬರೆಸುವ ಪ್ರಯತ್ನ ಮಾಡದೇ ಇರುವುದೇ ಉತ್ತಮ.