ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆಗೆ ಹೆಚ್ಚು ಆದ್ಯತೆ. ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಅವಲಂಬಿಸಿದೆ. ಮೂರ್ತಿ ಪೂಜೆ ಮಾಡುವುದರಿಂದ ಪೂಜೆಯಲ್ಲಿ ಏಕಾಗ್ರತೆ ಹೆಚ್ಚು ಎಂಬುದು ಅಧ್ಯಯನಕಾರ, ತಜ್ಞರ, ಧಾರ್ಮಿಕ ಪಂಡಿತರ ಅಂಬೋಣ.
ಇಲ್ಲಿ ಧಾರ್ಮಿಕ ವಿಧಿ ವಿಧಾನ ಮಾತ್ರವಲ್ಲ, ಮೂರ್ತಿ ಪೂಜೆ ಮನೋವಿಜ್ಞಾನಿಗಳ ಪ್ರಕಾರವೂ ಸೂಕ್ತ.
ಮನುಷ್ಯ ಒಂದೇ ವಸ್ತುವನ್ನು ನೋಡುವುದರ ಆಧಾರದ ಮಲೆ ಆಲೋಚನೆ ಮಾಡುತ್ತಾನಂತೆ. ಮನುಷ್ಯನ ಮುಂದೆ ಕೆಲವು ವಸ್ತುಗಳಿದ್ದರೆ ಅವುಗಳ ಪೈಕಿ ಯಾವುದರ ಮೇಲೆ ದೃಷ್ಟಿ ಹೆಚ್ಚಾಗಿ ಇಡುತ್ತಾನೋ ಅದರ ಆಧಾರದ ಮೇಲೆ ಭಾವನೆಗಳು ಬದಲಾವಣೆ ಆಗುವುದು ಎನ್ನುವುದು ಮನೋವಿಜ್ಞಾನಿಗಳ ವಿಶ್ಲೇಷಣೆ.
ಇದೇ ಕಾರಣಕ್ಕಾಗಿ ಅನಾದಿಕಾಲದಿಂದಲೂ ಮೂರ್ತಿ ಪೂಜೆ ಆರಂಭಗೊಂಡಿತು. ದೇವರ ಮೂರ್ತಿಯನ್ನು ತದೇಕಚಿತ್ತದಿಂದ ನೋಡುತ್ತಿದ್ದರೆ ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದ ಧ್ಯಾನಕ್ಕೆ ಯಾವುದೇ ರೀತಿಯ ಭಂಗ ಬರುವುದಿಲ್ಲ. ಜತೆಗೆ ಆಧ್ಯಾತ್ಮಿಕ ಶಕ್ತಿಯೂ ವೃದ್ಧಿಸುತ್ತದೆ.
ದೇವರ ಮೂರ್ತಿ ಭಿನ್ನವಾದರೆ ಏನು ಮಾಡಬೇಕು ?
ಮನೆಯಲ್ಲಿ ಅಥವಾ ಇತರೆಡೆ ಕೆಲವೊಮ್ಮೆ ಕೈಜಾರಿ ಅಥವಾ ಬೇರಾವುದೋ ಕಾರಣದಿಂದ ವಿಗ್ರಹ, ಮೂರ್ತಿ ಬಿದ್ದು ಭಿನ್ನವಾಗಿಬಿಡುತ್ತದೆ. ಇಂಥ ಸಮಯದಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸುತ್ತದೆ.
ದೇವರ ಮೂರ್ತಿ ಬಿದ್ದರೆ ಅಥವಾ ಬಿದ್ದು ಭಗ್ನವಾದರೆ ಏನು ಪರಿಹಾರೋಪಾಯ ?
ಮನೆಯಲ್ಲಿರುವ ಮೂರ್ತಿ ಭಗ್ನವಾಗಿದ್ದರೆ ಅಥವಾ ಮೂರ್ತಿಯು ಬಿದ್ದು ಭಗ್ನವಾದರೆ ಅದು ಅಪಶಕುನವೆಂದು ತಿಳಿಯಲಾಗುತ್ತದೆ. ದೇವತೆಯ ಮುಕುಟ ಬಿದ್ದರೆ, ಅದೂ ಅಪಶಕುನ ಎನ್ನುತ್ತಾರೆ ಕೆಲವರು. ಇಂತಹ ಸಮಯದಲ್ಲಿ ಆ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ ಹೊಸದಾದ ಮೂರ್ತಿಯ ಪ್ರತಿಷ್ಠಾಪನೆ ಮಾಡಬೇಕು.
ದೇವಸ್ಥಾನದಲ್ಲಿರುವ ಮೂರ್ತಿಗಳಲ್ಲಿ ಸ್ಥಿರ ಮತ್ತು ಚಲ ಹೀಗೆ ಎರಡು ವಿಧಗಳಿವೆ.
1. ಸ್ಥಿರ ಮೂರ್ತಿ :
ಈ ಮೂರ್ತಿಯನ್ನು ದೇವಸ್ಥಾನದಲ್ಲಿ ಶಾಶ್ವತವಾಗಿ ಪ್ರತಿಷ್ಠಪನೆ ಮಾಡುವುದರಿಂದ ಅದು ಅಲುಗಾಡುವುದಿಲ್ಲ. ಯಾವಾಗ ಮೂರ್ತಿಯು ಭಗ್ನವಾಗುತ್ತದೋ ಆಗ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ ಹೊಸ ಮೂರ್ತಿಯ ಪ್ರತಿಷ್ಠಾಪನೆ ಮಾಡಬೇಕು.
2. ಚಲ ಮೂರ್ತಿ :
ಇದು ದೇವಸ್ಥಾನದಲ್ಲಿರುವ ಉತ್ಸವಮೂರ್ತಿ. ಇದನ್ನು ಸಾಮಾನ್ಯವಾಗಿ ಎಲ್ಲೆಡೆ ತೆಗೆದುಕೊಂಡು ಹೋಗುವುದು, ಮೆರವಣಿಗೆ ಮಾಡುವುದು ಹೀಗೆ ಸಂಚಾರ ಮೂರ್ತಿಯಾಗಿರುತ್ತದೆ. ಆ ಮೂರ್ತಿಯು ಭಗ್ನವಾದಲ್ಲಿ ಅದನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ ಹೊಸದಾದ ಮೂರ್ತಿಯ ಪ್ರತಿಷ್ಠಾಪನೆ ಮಾಡಬೇಕು.
ಮನೆ ಮತ್ತು ದೇವಸ್ಥಾನದಲ್ಲಿರುವ ಭಗ್ನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಸಮಾನ ಅಂಶಗಳು
ಮೂರ್ತಿ ಭಗ್ನ ಆಗಿರುವ ಮೂರ್ತಿಯನ್ನು ಇಟ್ಟುಕೊಳ್ಳಬಾರದು. ಮನೆ ಮತ್ತು ದೇವಸ್ಥಾನದಲ್ಲಿರುವ ಭಗ್ನ ಮೂರ್ತಿ ಇದ್ದರೆ ಕೂಡಲೇ ವಿಸರ್ಜನೆ ಮಾಡಿ ಹೊಸ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಅದಕ್ಕೂ ಮೊದಲು ಅಘೋರ ಹೋಮ, ತತ್ತ್ವೋತ್ತಾರಣ ವಿಧಿ (ಭಗ್ನಮೂರ್ತಿಯಲ್ಲಿರುವ ದೇವತೆಯ ತತ್ತ್ವವನ್ನು ತೆಗೆದು ಅದು ಹೊಸದಾದ ಮೂರ್ತಿಯಲ್ಲಿ ಪ್ರತಿಷ್ಠಾಪಿಸುವುದು) ಹೀಗೆ ಮುಂತಾದ ವಿಧಿ ಮಾಡಲು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ವಿಧಿಗಳಿಂದ ಅನಿಷ್ಟಗಳು ನಿವಾರಣೆಯಾಗಿ ಶಾಂತಿ ಸಿಗುತ್ತದೆ.
ಕೇವಲ ವ್ಯತ್ಯಾಸವಿಷ್ಟೇ, ಮನೆಯಲ್ಲಿ ಈ ವಿಧಿಗಳ ಪ್ರಮಾಣ ಅಲ್ಪ ಸ್ವರೂಪದಲ್ಲಿರುತ್ತದೆ ಮತ್ತು ದೇವಸ್ಥಾನದಲ್ಲಿ ದೊಡ್ಡಪ್ರಮಾಣದಲ್ಲಿ ಶಾಸ್ತ್ರೋಕ್ತ ಪದ್ಧತಿಯಿಂದ ಈ ವಿಧಿ ಮಾಡಬೇಕಾಗುತ್ತದೆ. ಈ ರೀತಿ ಮಾಡಿದರೆ ಎಲ್ಲ ದೋಷಗಳು ಪರಿಹಾರವಾಗಿ, ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಸಿದ್ಧಿಸುತ್ತದೆ. ಈ ರೀತಿಯ ಸಂಕಲ್ಪಗಳು ಸಂತೋಷವನ್ನು ತಂದುಕೊಡುತ್ತದೆ.