ಶೇಂಗಾ ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿಗಳು :
ಮೈದಾ ಹಿಟ್ಟು - 2 ಕಪ್
ಚಿರೋಟಿ ರವೆ - ಮುಕ್ಕಾಲು ಕಪ್
ಗೋಧಿ ಹಿಟ್ಟು - ಅರ್ಧ ಕಪ್
ಹುರಿದ ಕಡಲೆಕಾಯಿ ಬೀಜ - 2 ಕಪ್
ತುರಿದ ಬೆಲ್ಲ - 1 ಕಪ್
ಹುರಿದು ಪುಡಿ ಮಾಡಿದ ಗಸಗಸೆ - ಕಾಲು ಕಪ್
ಏಲಕ್ಕಿ ಪುಡಿ - ಅರ್ಧ ಚಮಚ
ಎಣ್ಣೆ - ಅರ್ಧ ಕಪ್
ತುಪ್ಪ - ಕಾಲು ಕಪ್
ಶೇಂಗಾ ಹೋಳಿಗೆ ಮಾಡುವ ವಿಧಾನ :
ಚಿರೋಟಿ ರವೆ, ಮೈದಾ ಹಿಟ್ಟು, ಗೋಧಿ ಹಿಟ್ಟು ಮೂರನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಣಕ ತಯಾರಿಸಿ ಅರ್ಧ ಗಂಟೆ ನೆನೆಸಿಡಿ. ಕಡಲೆಕಾಯಿ ಬೀಜಗಳನ್ನು ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ನಂತರ ಬಿಸಿ ಬಾಣಲೆಯಲ್ಲಿ ತುಪ್ಪ ಕರಗಿಸಿ ನಿಧಾನವಾಗಿ ಬೆಲ್ಲ ಹಾಕಿ. ಬೆಲ್ಲ ಕರಗಿದ ನಂತರ ಕಡಲೆಕಾಯಿ ಬೀಜದ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ಗಟ್ಟಿಯಾದ ಮೇಲೆ ಏಲಕ್ಕಿ ಪುಡಿ ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿಕೊಳ್ಳಿ. ನೆನೆಸಿಟ್ಟ ಕಣಕದಿಂದ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಅಂಗೈಯಲ್ಲಿ ತಟ್ಟಿ ಶೇಂಗಾ ಹೂರಣ ತುಂಬಿ ಮುಚ್ಚಿ ಹಿಟ್ಟು ಉದುರಿಸುತ್ತಾ ಮೃದುವಾಗಿ ಲಟ್ಟಿಸಿ ಅದರ ಮೇಲೆ ಗಸಗಸೆ ಹರಡಿ. ಕಾಯಿಸಿದ ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಎರಡು ಬದಿಯನ್ನು ಬೇಯಿಸಿ ತೆಗೆದರೆ ರುಚಿಯಾದ ಶೇಂಗಾ ಹೋಳಿಗೆ ರೆಡಿ. ಇದನ್ನು ತುಪ್ಪದೊಂದಿಗೆ ಸವಿಯಿರಿ.