ಹಿಂದೂ ಧರ್ಮದಲ್ಲಿ ಈ ಮೂರೂ ಸಿದ್ಧಾಂತಗಳಿಗೆ ಅದರದ್ದೇ ಮಹತ್ವವಿದೆ. ಈ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳಿಂದ ಮೂಡಿ ಬಂದಿರುವಂತಹದ್ದಾಗಿವೆ. ಶ್ರೀ ಮಧ್ವಾಚಾರ್ಯರರು, ಶ್ರೀಶಂಕರ ಭಗವತ್ಪಾದಾಚಾರ್ಯರರು ಹಾಗೂ ಶ್ರೀ ರಾಮಾನುಜಾಚಾರ್ಯರರು ಈ ಮೂರೂ ಸಿದ್ಧಾಂತಗಳ ಪ್ರತಿಪಾದಕರು. ಪ್ರಸ್ಥಾನತ್ರಯವನ್ನು ಈ ಮೂವರೂ ಆಚಾರ್ಯರು ಮೂರು ಬಗೆಯಾಗಿ ಅರ್ಥೈಸಿ ಭಾಷ್ಯ ಬರೆದು, ಮೂರು ಮತಗಳನ್ನು ಸ್ಥಾಪಿಸಿದರು. ಈ ಮೂವರಿಗೂ ಮೂಲ ಗುರು ಒಬ್ಬರೇ. ಅವರೇ ಶ್ರೀ ವೇದವ್ಯಾಸರು.
ದ್ವೈತ ಮತದ ಪ್ರಕಾರ ಶ್ರೀ ಹರಿಯೇ ಸರ್ವೋತ್ತಮ. ವೇದಗಳಲ್ಲಿ ಹೇಳಿರುವ ಬ್ರಹ್ಮ ಶಬ್ದವು ಶ್ರೀ ಹರಿಯ ಕುರಿತದ್ದಾಗಿದೆ. ಈ ಜಗತ್ತು ಸತ್ಯವೇ ಹೊರತು ಮಿಥ್ಯೆಯಲ್ಲ. ಜೀವರು ಎಂದೆಂದಿಗೂ ಶ್ರೀ ಹರಿಗೆ ಅನುಚರರಾಗಿದ್ದು ಬೇರೆ - ಬೇರೆಯೇ ಆಗಿ ಇರುವವರು. ಜೀವನಿಗೆ ಸ್ವರೂಪದ ಆನಂದ ದೊರೆತಾಗ ಅದೇ ಮುಕ್ತಿಯೆನಿಸಿಕೊಳ್ಳುತ್ತದೆ. ಅಂತಹ ಮುಕ್ತಿಗೆ ಭಕ್ತಿಯೇ ಪ್ರಧಾನ ಸಾಧನ. ಪ್ರತ್ಯೇಕ, ಅನುಮಾನ, ಆಗಮ ಎಂಬ ಮೂರು ಪ್ರಮಾಣಗಳು ಹಾಗು ನಾಲ್ಕು ವೇದಗಳಲ್ಲೂ ಶ್ರೀಹರಿಯೇ ಸರ್ವೋತ್ತಮನೆಂದು ವೇದ್ಯವಾಗಿದೆ.
ಅದ್ವೈತ ಮತದ ಪ್ರಕಾರ #ಸರ್ವಂಖಲ್ವಿದಂಬ್ರಹ್ಮ. ಅಂದರೆ ಏನಿದೆಯೋ ಅದೆಲ್ಲವೂ ಸಚ್ಚಿದಾನಂದ ಬ್ರಹ್ಮ. "ಜೀವೋ ಬ್ರಹ್ಮೈವ ನಾಪರಃ" ಎಂದರೆ ಜೀವನು ಬ್ರಹ್ಮನೇ ಹೊರತು ಬೇರೆಯಲ್ಲ. ಜೀವ ಜಗತ್ತಾಗಿ ಏನೇನು ಗೋಚರಿಸುತ್ತಿದೆಯೋ ಅವೆಲ್ಲವೂ ಪರಬ್ರಹ್ಮದ ಮಾಯಾವಿಲಾಸ. ಜೀವಿಗಳ ಬುದ್ಧಿಗೆ ಕವಿದ ಭ್ರಮೆಯ ಕಾರಣದಿಂದ ಈ ಜಗತ್ತು ಜನನ - ಮರಣ, ಸುಖ - ದುಃಖಾದಿ ದ್ವಂದ್ವಗಳು ಕಾಣಿಸಿಕೊಳ್ಳುತ್ತವೆ. ಭ್ರಮೆಯು ಹರಿದಾಗ ಎಲ್ಲವೂ ಮಾಯವಾಗಿ ಬ್ರಹ್ಮವೊಂದೇ ವಿರಾಜಿಸುತ್ತದೆ. ಈ ಭ್ರಮೆಯ ಪೊರೆಯನ್ನು ಹರಿಯುವುದೇ ಸಾಧನೆಯ ಉದ್ದೇಶ.
ಇನ್ನು ವಿಶೇಷಣಗಳಿಂದ ಕೂಡಿದ ಅದ್ವೈತವೇ ಮತವೆನಿಸಿದೆ. #ಚಿತ್ ಮತ್ತು ಅಚಿತ್ ಎಂಬುವುಗಳೇ ವಿಶೇಷಣಗಳು. ಚಿತ್ ಎಂದರೆ ಚೇತನ. ಅಚಿತ್ ಎಂದರೆ ಜಡವಸ್ತು. ಈ ಚಿತ್ ಮತ್ತು ಅಚಿತ್ ಸೇರಿ ಪರಮಾತ್ಮನ ಶರೀರವೆನಿಸಿಕೊಳ್ಳುತ್ತದೆ. ಹೀಗೆ ಚಿತ್ ಮತ್ತು ಅಚಿತ್‍ಗಳು ಬೇರೆ ಬೇರೆಯಾಗಿ ಕಂಡರೂ ಪರಮಾತ್ಮನೊಂದಿಗೆ ಸೇರಿಕೊಂಡಿವೆ.
ತಂತಮ್ಮ ಮತದ ಪ್ರಕಾರ ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕೆನ್ನುವವರು ಆಯಾ ಸಂಪ್ರದಾಯದ ಗುರುಗಳ ಬಳಿಗೆ ಹೋಗಬೇಕು. ಸಾಧನೆಯ ವಿವರಗಳನ್ನು ಅರಿತು ಮುನ್ನಡೆಯಬೇಕು. ಈ ಮೂರು ಮತಗಳ ಉದ್ದೇಶ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಅವುಗಳ ಬಗ್ಗೆ ನಾವು ವಾದ - ವಿವಾದ ಮಾಡುತ್ತಾ ಗೊಂದಲವೆಬ್ಬಿಸುವುದು ಉಚಿತವಲ್ಲ.
ಮೂರು ಮತಗಳಿಗೂ ಇರುವ ವ್ಯತ್ಯಾಸವೇನು?
ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಮತಗಳು ವೈದಿಕ ಸಂಪ್ರದಾಯದಲ್ಲೇ ಬರುತ್ತದೆ. ಇವು ವೇದಾಂತ ದರ್ಶನಗಳು. ಅನುಭವದ ಆಧಾರದ ಮೇಲೆ ಆಚಾರ್ಯರು ಜನರಿಗೆ ಇವನ್ನು ತಿಳಿಸಿದರು. ಮೊದಲು ಶಂಕರಾಚಾರ್ಯರು ಅದ್ವೈತ ದರ್ಶನವನ್ನು ಸಾದರಪಡಿಸಿದರು. ಆ ನಂತರ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನೂ, ಮಧ್ವಾಚಾರ್ಯರು ದ್ವೈತ ವೇದಾಂತವನ್ನು ಮುಂದಿಟ್ಟರು.
ಅದ್ವೈತದ ಪ್ರಕಾರ ಬ್ರಹ್ಮವೊಂದೇ ಸತ್ಯ. ಜಗತ್ತು ಮಿಥ್ಯ. ಜೀವವು ಬ್ರಹ್ಮವೇ ಹೊರತು ಬೇರೆಯಲ್ಲ. ಜ್ಞಾನಬಲದಿಂದ ಜೀವವು ಬ್ರಹ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಇನ್ನು ದ್ವೈತವೆಂದರೆ ಎರಡು ಎಂದರ್ಥ. ಜಗತ್ತು ಸತ್ಯ. ಆದರೆ ಜೀವಾತ್ಮ, ಪರಮಾತ್ಮ ಎರಡೂ ಬೇರೆ ಬೇರೆ. ಅದ್ವೈತದ ಪ್ರಕಾರ ಪಾರಮಾರ್ಥಿಕವಾಗಿ ಜಗತ್ತು ಮಿಥ್ಯೆ ಎಂದಿದೆ. ಅದೇ ವ್ಯವಾಹಾರಿಕವಾಗಿ ಅದು ಸತ್ಯವೆಂದರೆ ದ್ವೈತವು ಎರಡೂ ಅರ್ಥದಲ್ಲಿ ಅದನ್ನು ಸತ್ಯವೆಂದಿದೆ. ಹರಿಯೇ ಸರ್ವೋತ್ತಮ, ಅವನನ್ನು ಭಕ್ತಿಮಾರ್ಗದಿಂದ ಭಜಿಸಿ ಅವನನ್ನು ಸೇರುವುದೇ ಮೋಕ್ಷ ಎಂದಿದೆ.
ವಿಶಿಷ್ಟಾದ್ವೈತ ಎಂದರೆ ಪರಮಾತ್ಮನು ವಿಶಿಷ್ಟಾನಾಗಿರುವವನು. ಶ್ರೀಮನ್ನಾರಾಯಣನೇ ಪರಬ್ರಹ್ಮ. ಅವನು ಚಿತ್ ಮತ್ತು ಅಚಿತ್‍ನಿಂದ ತುಂಬಿದ್ದಾನೆ. ಜೀವಾತ್ಮ ಅದರ ಒಂದು ಅಂಶ. ಶರಣಾಗತಿಯಿಂದ ಭಕ್ತಿಯಿಂದ ಪರಮಾತ್ಮನೊಡನೆ ಇರುವುದೇ ಮೋಕ್ಷ. ಅವರವರ ಅನುಭವ ಅವರವರಿಗೆ ನಿಜ, ಅದೇ ಪ್ರಮಾಣ, ಇವೆಲ್ಲಾ ಒಂದಕ್ಕೊಂದು ವಿರೋಧವಲ್ಲ. ಪೂರಕವಾಗಿದೆ. ಭಗವಂತನ ಉಪಾಸನೆಯ ವಿಷಯದಲ್ಲಿ ನಮಗೆ ಸ್ವಾತಂತ್ರ್ಯವಿದೆ. ಅದರಂತೆ ನಮ್ಮ ಅನುಭೂತಿ, ಅನುಭವ, ಅಭಿರುಚಿ ಸಿದ್ಧಿಸುತ್ತದೆ. ಇದು ವಿಶಿಷ್ಟಾದ್ವೈತ.
ನಮಗೆ ದೇಹಭಾವ, ಜೀವಭಾವ, ಆತ್ಮಭಾವವಿದೆ. ದೇಹಬುದ್ಧಿ, ಜೀವಬುದ್ಧಿ ಮತ್ತು ಆತ್ಮಬುದ್ಧಿ ನಮಗಿದೆ. ಆಯಾ ದೃಷ್ಟಿಕೋನದಿಂದ ಅನುಭವವೂ ಭಿನ್ನವಾಗುತ್ತದೆ.
"ದೇಹಬುಧ್ಯಾತು ದಾಸೋಹಂ ಜೀವಬುಧ್ಯಾ ತ್ವದಂಶಕಃ |
ಆತ್ಮಬುಧ್ಯಾ ತ್ವಮೇವಾಹಂ ಇತಿ ಮೇ ನಿಶದಚಿತಾಮತಿಃ ||"
ಅಂದರೆ ದೇಹ ಬುದ್ಧಿಯಿಂದ ನಾನು ದಾಸ. ನೀನು ಈಶ - ಇದು ದ್ವೈತ. ಜೀವಬುದ್ಧಿ ಇರುವಾಗ ನಾನು ಅಂಶ. ನೀನು ಅಂಶಿ - ಇದು ವಿಶಿಷ್ಟಾದ್ವೈತ. ಆತ್ಮಬುದ್ಧಿ ಬಂದಾಗ ನೀನು - ನಾನು ಎಂಬ ಬೇಧವಿಲ್ಲ- ಇದು ಅದ್ವೈತ. ದೇಹ ಭಾವದಲ್ಲಿ ಸಖ್ಯ, ಜೀವಭಾವದಲ್ಲಿ ದಾಸ್ಯ, ಆತ್ಮ ಭಾವದಲ್ಲಿ ಸಾಮರಸ್ಯ ಸಿದ್ಧಿಸುತ್ತದೆ. ನಾವು ಯಾರೂ ಒಂದೇ ಸಲ ದ್ವೈತಿಗಳು, ಅದ್ವೈತಿಗಳು ಅಥವಾ ವಿಶಿಷ್ಟಾದ್ವೈತಿಗಳು ಆಗಲು ಸಾಧ್ಯವಿಲ್ಲ. ಒಬ್ಬನಿಗೆ ಈ ಮುರೂ ಅನುಭವ ಆಗಬಹುದು.