ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಎಷ್ಟು ಕುಸಿದಿದೆ ಎಂದರೆ, ಅಲ್ಲಿ ಉಸಿರಾಡುವುದೂ ಕಷ್ಟವಾಗುತ್ತಿದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಮಾಲಿನ್ಯ ಎಷ್ಟು ಮಿತಿ ಮೀರಿದೆ ಎಂದರೆ, ಸ್ವಚ್ಛ ಗಾಳಿಗಾಗಿ ಹುಡುಕಾಡಬೇಕಾದ ಅನಿವಾರ್ಯತೆ ಒದಗಿದೆ.
ಗಿಡ-ಮರಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸಲಾಗುತ್ತಿದೆ. ಮನೆಗಳ ಹಿತ್ತಲಿನಲ್ಲೂ ಒಂದು ಗಿಡ ಹಚ್ಚುವುದಕ್ಕೂ ಜಾಗ ಇಲ್ಲ. ಎಲ್ಲಿ ನೋಡಿದರೂ ರಸ್ತೆಗಳು ಹಾಗೂ ಕಟ್ಟಡಗಳೇ ಕಾಣಿಸುತ್ತಿದ್ದರೆ ಶುದ್ಧ ಗಾಳಿ, ಬೆಂದ ಮನಸ್ಸು ಹಾಗೂ ಶರೀರಕ್ಕೆ ತಂಗಾಳಿ ಎಲ್ಲಿಂದ ಸುಳಿಯಬೇಕು?
ವಾಹನಗಳ ಓಡಾಟ, ಧೂಳು ಹೊಗೆ ಇತ್ಯಾದಿಗಳಿಂದ ವಾಯು ಮಾಲಿನ್ಯ ನಮ್ಮನ್ನು ಬಿಡದೆ ಕಾಡುತ್ತಿದೆ. ರಸ್ತೆ ಹಾಗೂ ಇತರ ಸಾರ್ವಜನಿಕ ಸ್ಥಳಗಳ ವಿಚಾರ ಒತ್ತಟ್ಟಿಗಿರಲಿ, ಮನೆ ಹಾಗೂ ಕಚೇರಿಗಳಲ್ಲೂ ಶುದ್ಧ ಗಾಳಿ ಸಿಗುವುದು ದುಸ್ತರವೆನಿಸಿದೆ.
ನಮ್ಮ ಶ್ವಾಸಕೋಶಗಳಿಗೆ ಶುದ್ಧ ಗಾಳಿ ಸಿಕ್ಕಿ, ಆರೋಗ್ಯ ಚೆನ್ನಾಗಿರಬೇಕೆಂದರೆ ಗಿಡಗಳನ್ನು ನೆಡುವುದೊಂದೇ ಪರಿಹಾರ. ಎಲೆಕ್ಟ್ರಾನಿಕ್ ಏರ್ ಪ್ಯೂರಿಫಯರ್ ಗಳು ತಾತ್ಕಾಲಿಕ ಉಪಶಮನಗಳಷ್ಟೇ. ಇದನ್ನರಿತ ಹಲವು ಪ್ರಜ್ಞಾವಂತರು ಮಹಾನಗರಗಳಲ್ಲಿರುವ ತಮ್ಮ ಮನೆಗಳ ಒಳಾಂಗಣದಲ್ಲಿ ಗಿಡಗಳನ್ನು (ಇನ್ ಡೋರ್ ಪ್ಲಾಂಟ್ಸ್) ಬೆಳೆಸುತ್ತಿದ್ದಾರೆ. ಬಿಸಿಲು ಬೀಳುವ ಹಜಾರಗಳು, ಕಿಟಕಿ ಸಮೀಪ, ಟೆರೇಸ್ ಮೇಲೆ ಹೂವು, ತರಕಾರಿ ಹಾಗೂ ಸೊಪ್ಪಿನ ಗಿಡಗಳನ್ನು ಬೆಳೆದು, ಹಣ್ಣು-ತರಕಾರಿ ಖರೀದಿಸುವ ಹಣ ಉಳಿಸುವ ಜತೆಗೆ ತಮ್ಮ ಆಹಾರದಲ್ಲೂ ಪೌಷ್ಟಿಕಾಂಶಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಮನೆಯ ಒಳಾಂಗಣಕ್ಕೆ ಸರಿ ಹೊಂದುವ ಗಿಡಗಳ ಮಾಹಿತಿ ಇಲ್ಲಿದೆ.
ಸ್ಪೈಡರ್ ಪ್ಲಾಂಟ್ :
ಮನೆಯ ಅಂದ ಹೆಚ್ಚಿಸುತ್ತದೆ. ಜಾಸ್ತಿ ಬೆಳಕು ಬೀಳುವ ಕಿಟಕಿ ಬದಿಯ ಜಾಗ ಸೂಕ್ತ. ಹೊರಾಂಗಣದಲ್ಲೂ ಬೆಳೆಸಬಹುದು. ಹೆಚ್ಚಿನ ಪ್ರಮಾಣದಲ್ಲಿ ನೀರು ಹೀರಿಕೊಳ್ಳುವುದು. ಇದು ನೋಡಲು ಸ್ವಲ್ಪ ಜೇಡರ ಬಲೆ ರೀತಿ ಇದೆ. ಇದನ್ನು ಮನೆಯೊಳಗೆ ಅಥವಾ ಕಚೇರಿಯಲ್ಲಿ ಮೇಜಿನ ಬಳಿಯೂ ಚಿಕ್ಕ ಹೂಕುಂಡದಲ್ಲಿಟ್ಟು ಬೆಳೆಸಬಹುದು. ಎರಡು ದಿನಕ್ಕೊಮ್ಮೆ ನೀರು ಹಾಕಿದರೆ ಸಾಕಾಗುತ್ತದೆ. ನೇರವಾಗಿ ಬಿಸಿಲು ಬೀಳುವ ಕಡೆ ಈ ಗಿಡವನ್ನು ಇರಿಸಬೇಡಿ. 15 ದಿನಗಳಿಗೊಮ್ಮೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿಟ್ಟರೆ ಸಾಕು. ಗಿಡದಲ್ಲಿ ಒಣಗಿದ ಒಲೆಗಳನ್ನು ತೆಗೆದರೆ ಹೊಸ ಎಲೆಗಳು ಸೊಂಪಾಗಿ ಬೆಳೆಯುತ್ತವೆ. ಕಡಿಮೆ ಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸುವುದರಿಂದ ಶುದ್ಧ ಗಾಳಿ ದೊರೆಯುವುದು.
ರಬ್ಬರ್ ಪ್ಲಾಂಟ್ :
ರಬ್ಬರ್ ಪ್ಲಾಂಟ್ ಅತಿ ಕಡಿಮೆ ನೀರಿನಾಂಶದಲ್ಲಿ ಬದುಕುತ್ತದೆ. ದಪ್ಪನೆಯ ಹಸಿರು ಎಲೆಗಳನ್ನು ಹೊಂದಿರುವ ಈ ಗಿಡಕ್ಕೆ ಪ್ರಕಾಶಮಾನವಾದ ಬೆಳಕು ಅಗತ್ಯ.. ನಿರ್ವಹಣೆ ಮತ್ತು ಪೋಷಣೆ ಸುಲಭ. ಇದು ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಶುದ್ಧ ಗಾಳಿಯನ್ನು ನೀಡುತ್ತದೆ.
ಸೇವಂತಿಗೆ ಹೂವು
ಸೇವಂತಿಗೆ ಹೂವಿನ ಚೆಲುವು ನೋಡುಗರ ಮನ ಸೆಳೆಯುವುದು. ಸೇವಂತಿಗೆ ಗಿಡವನ್ನು ಬೆಳೆಯಲು ಚಿಕ್ಕ ಹೂಕುಂಡ ಸಾಕಾಗುತ್ತದೆ. ಮನೆ ಮುಂದುಗಡೆ ಸ್ವಲ್ಪ ಬಿಸಿಲಿರುವ ಜಾಗದಲ್ಲಿ ಇಟ್ಟರೆ ಹಳದಿ ಬಣ್ಣದ ಸುಂದರವಾದ ಹೂವುಗಳನ್ನು ಅರಳಿಸುತ್ತದೆ. ಗಾಳಿಯ ದುರ್ಗಂಧವನ್ನು ದೂರ ಮಾಡಿ, ಮನಸ್ಸಿಗೆ ಆಹ್ಲಾದ ನೀಡುವ ಶಕ್ತಿ ಈ ಹೂವಿನ ಸುವಾಸನೆಗಿದೆ.
ಸ್ನೇಕ್ ಪ್ಲಾಂಟ್:
ಹಾವಿನ ಹೆಡೆಯ ಆಕಾರದಲ್ಲಿ ನೇರವಾದ ಎಲೆಗಳನ್ನು ಹೊಂದಿರುವ ಕಾರಣ ಈ ಗಿಡಕ್ಕೆ ಸ್ನೇಕ್ ಪ್ಲಾಂಟ್ ಎಂಬ ಹೆಸರು ಬಂದಿದೆ. ಇದು ಮನೆಯ ವಾತಾವರಣವನ್ನು ತಂಪಾಗಿಡುತ್ತದೆ. ಗಾಳಿಯಲ್ಲಿರುವ ಬೆಂಜೀನ್, ಟ್ರೈಕ್ಲೋರೆಥಿಲೀನ್ಸ್, ಕ್ಸಿಲೀನ್, ಫಾರ್ವಲ್ಡಿಹೈಡ್ ಮತ್ತು ಟೊಲುಯೀನ್ ಎಂಬ ರಾಸಾಯನಿಕಗಳನ್ನು ಬೇರ್ಪಡಿಸಿ, ಶುದ್ಧ ಗಾಳಿಯನ್ನು ನೀಡುತ್ತದೆ. ಇದರ ನಿರ್ವಹಣೆ ಸುಲಭ. ಹೆಚ್ಚು ಬಿಸಿಲು ಬೇಕೆಂದೂ ಇಲ್ಲ. ಈ ಸಸ್ಯವಿದ್ದ ಕಡೆ ಹಾವು ಸುಳಿಯುವುದಿಲ್ಲ. ಈ ಗಿಡವನ್ನು ಸ್ನಾನದ ಕೋಣೆ ಹಾಗೂ ಶಯನಗೃಹದಲ್ಲೂ ಇರಿಸಬಹುದು.
ಪೋಥೋಸ್:
ಪೋಥೋಸ್ ಗಿಡವನ್ನು ಕ್ಯುಬಿಕಲ್ ಪ್ಲಾಂಟ್ ಎಂದೂ ಕರೆಯುತ್ತಾರೆ. ಗಿಡದ ಆಕಾರ ಸಣ್ಣದಾಗಿದ್ದರೂ ಅದರ ಬಳ್ಳಿಗಳು 10 ಅಡಿಗಳಷ್ಟು ಹಬ್ಬುತ್ತವೆ. ಕಡಿಮೆ ಬೆಳಕಿನಲ್ಲಿಯೂ ಪ್ರಕಾಶಮಾನವಾಗಿ ಕಾಣುವ ಈ ಗಿಡ, ಬೆಳಕಿನ ಮೂಲಕ ಗಾಳಿಯನ್ನು ಶುದ್ಧಗೊಳಿಸುತ್ತದೆ. ಸ್ನೇಕ್ ಪ್ಲಾಂಟ್ ಮಾದರಿಯಲ್ಲೇ ಕಾರ್ಯ ನಿರ್ವಹಿಸುತ್ತದೆ.
ಡ್ರಾಕೇನಾಲಿಸಾ:
ಡ್ರಾಕೇನಾಲಿಸಾ ಇದೊಂದು ವಿಭಿನ್ನ ಸಸಿ. ಹೆಚ್ಚು ಬೆಳಕಿನ ಪರಿಸರಕ್ಕೆ ಹೊಂದಿಕೊಳ್ಳುವುದಿಲ್ಲ. ಸೂರ್ಯನ ನೇರ ಬೆಳಕಿನಿಂದ ದೂರವಿಡುವುದು ಉತ್ತಮ. ಇದು ಒಳಾಂಗಣ ತಾಪಮಾನ ಕಡಿಮೆ ಮಾಡುವುದಲ್ಲದೆ ವಾತಾವರಣದ ರಾಸಾಯನಿಕ ಅಂಶಗಳನ್ನು ಶುದ್ಧೀಕರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಬರ್ಡ್ಸ್ ನೆಸ್ಟ್ ಪರ್ನ್:
ಪಕ್ಷಿಗಳ ಗೂಡಿನಂತಿರುವ ಈ ಗಿಡಗಳನ್ನು ಕಿಟಕಿಗಳ ಬಳಿ ನೇತು ಹಾಕಿದರೆ ಮನೆಯ ಅಂದ ಹೆಚ್ಚುತ್ತದೆ. ಗಾಳಿಯನ್ನು ಶುದ್ಧೀಕರಿಸುತ್ತದೆ. ವಾಸ್ತು ರೂಪದಲ್ಲಿಯೂ ಈ ಗಿಡವನ್ನು ಬಳಸಲಾಗುತ್ತದೆ. ಸ್ನಾನಗೃಹದಲ್ಲಿ ತೂಗು ಹಾಕಿದರೆ ಒಳ್ಳೆಯದು ಎನ್ನುತ್ತಾರೆ.
ಪೀಸ್ಲಿಲ್ಲಿ :
ಇತರ ಒಳಾಂಗಣ ಸಸ್ಯಗಳಿಗೆ ಹೋಲಿಸಿದರೆ ಇದರ ನಿರ್ವಹಣೆ ತುಸು ಕಷ್ಟ. ಕಡಿಮೆ ತೇವಾಂಶದ ನೆರಳಿನ ಸ್ಥಳದಲ್ಲಿ ಇರಿಸಿ ಪೋಷಿಸಬೇಕು. ರಾತ್ರಿ ಸಮಯದಲ್ಲಿ ಆಮ್ಲಜನಕ ಉತ್ಪಾದಿಸುವ ವಿಶೇಷ ಗಿಡವಾದ್ದರಿಂದ ಶಯ್ಯಾಗೃಹದಲ್ಲಿ ಇರಿಸಬಹುದು. ಆದರೆ, ಈ ಗಿಡವು ಹೊರಸೂಸುವ ಸುವಾಸನೆ ಕೆಲವರಿಗೆ ಅಲರ್ಜಿ ಉಂಟುಮಾಡುತ್ತದೆ.
ಲೋಳೆಸರ :
ಲೋಳೆಸರ ಒಳ್ಳೆಯ ಮನೆ ಮದ್ದು, ಕೂದಲು, ತ್ವಚೆಯ ಆರೈಕೆಯಲ್ಲಿ ಬಳಸುತ್ತಾರೆ, ಇದನ್ನು ಬೆಳೆಸುವುದು ಕಷ್ಟವೇನಿಲ್ಲ. ಒಂದು ಕುಂಡದಲ್ಲಿ ಸ್ವಲ್ಪ ಮಣ್ಣು ಹಾಕಿ, ಲೋಳೆಸರವನ್ನು ನೆಟ್ಟು, ಮೂರು ದಿನಗಳಿಗೊಮ್ಮೆ ನೀರುಣಿಸಿದರೂ ಸಾಕಾಗುತ್ತದೆ. ಒಂದು ವಾರ ನೀರು ಹಾಕದಿದ್ದರೂ ಗಿಡ ಒಣಗುವುದಿಲ್ಲ. ಶುದ್ಧ ಗಾಳಿಯನ್ನು ನೀಡುತ್ತದೆ.
ಶತಾವರಿ :
ನರಸಂಬಂಧಿ ರೋಗ, ಗ್ಯಾಸ್ಟ್ರಿಕ್, ಅಲ್ಸರ್ ಮುಂತಾದ ಕಾಯಿಲೆಗಳಿಗೆ ತಯಾರಿಸುವ ಆಯುರ್ವೇದ ಔಷಧಗಳಲ್ಲಿ ಶತಾವರಿಯನ್ನು ಬಳಸುತ್ತಾರೆ. ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸಲೂ ನೀಡುತ್ತಾರೆ. ಈ ಗಿಡವಿದ್ದರೆ ಗಾಳಿಯನ್ನೂ ಶುದ್ಧೀಕರಿಸಿ ಕೊಡುತ್ತದೆ. ಬ್ಯಾಕ್ಟೀರಿಯಾ ಹಾಗೂ ಸೋಂಕಿನ ವೈರಾಣುಗಳನ್ನು ಕೊಲ್ಲುತ್ತದೆ.
ತುಳಸಿ:
ಮನೆ ಮುಂದೆ ತುಳಸಿ ಗಿಡವಿದ್ದರೆ ಒಂದು ಶೋಭೆ. ಗರಿಷ್ಠ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುವ ಗಿಡವಿದು. ಸೊಳ್ಳೆ ಕಾಟದಿಂದಲೂ ಮುಕ್ತಿ ನೀಡುತ್ತದೆ. ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ತುಳಸಿ ಗಿಡ ಮನೆಗೆ ಸಂತೋಷ, ಸಮೃದ್ಧಿಯ ಜೊತೆಗೆ ಪಾಸಿಟಿವ್ ಎನರ್ಜಿಯನ್ನು ತರುವುದು.
ಜೆರ್ಬೆರಾ ಡೈಸಿ:
ಜರ್ಬೆರಾ ಗಿಡಗಳು 30ಕ್ಕೂ ಅಧಿಕ ಬಣ್ಣಗಳಲ್ಲಿ ದೊರೆಯುತ್ತವೆ. ಬೆಳೆಸುವುದು ಸುಲಭ. ಸ್ವಲ್ಪ ಬಿಸಿಲಿರುವ ಕಡೆ ಇರಿಸಬೇಕು. ಈ ಗಿಡ ಹೂ ಬಿಟ್ಟಾಗ ಕಣ್ಣಿಗೆ ಸೊಗಸು ಹಾಗೂ ಮನಸ್ಸಿಗೆ ಮುದ ನೀಡುತ್ತದೆ. ಮನೆಯ ಪರಿಸರದಲ್ಲಿದ್ದರೆ ಗಾಳಿಯನ್ನು ಶುದ್ಧಗೊಳಿಸುತ್ತದೆ.
ಡ್ರ್ಯಾಗನ್ ಗಿಡ:
ನೋಡಲು ಆಕರ್ಷಕವಾಗಿರುವ ಈ ಗಿಡವನ್ನು ಮನೆ ಹಾಗೂ ಕಚೇರಿಗಳಲ್ಲಿ ಅಲಂಕಾರಕ್ಕೆ ಬಳಸುವರು. ಈ ಗಿಡ ಪೇಂಟ್, ಸಿಗರೇಟ್, ವಾಹನದ ಹೊಗೆಯ ದುರ್ವಾಸನೆಯಿಂದ ಮುಕ್ತಿ ನೀಡುತ್ತದೆ. ಇದನ್ನು ಬೆಳೆಸುವುದೂ ಸುಲಭ.
ಇತರ ಸಸ್ಯಗಳು:
ಮನೆಯ ಒಳಾಂಗಣಕ್ಕೆ ಬಿದಿರು ಸಸ್ಯವೂ ಸೂಕ್ತ. ಈ ಗಿಡಕ್ಕೆ ಮಣ್ಣಿನ ಅಗತ್ಯವಿಲ್ಲ. ಗೋಲಿಗಳನ್ನು ತುಂಬಿದ ಹೂದಾನಿಯಲ್ಲಿ ಈ ಗಿಡದ ಕಾಂಡವನ್ನಿಟ್ಟು, ನೀರುಣಿಸಿ ಬೆಳೆಸಬಹುದು. ತಾಳೆ ಸಸ್ಯಕ್ಕೆ ಹೆಚ್ಚು ನೀರು ಬೇಕೆಂದಿಲ್ಲ. ಅದರ ಬುಡದಲ್ಲಿರುವ ಮಣ್ಣು ಒಳಗದಂತೆ ಸ್ವಲ್ಪವೇ ನೀರು ಚಿಮುಕಿಸಿದರೂ ಸಾಕಾಗುತ್ತದೆ. ಲ್ಯಾವೆಂಡರ್ ಸಸ್ಯದಿಂದ ಆರೋಗ್ಯ ಹೆಚ್ಚುತ್ತದೆ. ಮಲ್ಲಿಗೆ ತನ್ನ ಸುವಾಸನೆಯಿಂದ ಉದ್ವೇಗವನ್ನು ಕಡಿಮೆ ಮಾಡಿ, ಶಾಂತಿ ನೀಡುತ್ತದೆ. ಆರ್ಕಿಡ್ ಸಸ್ಯಗಳು ಮನೆಯ ಒಳಭಾಗದಲ್ಲಿ ಇಡುವುದರಿಂದ ಒತ್ತಡ ನಿವಾರಣೆಗೆ ಸಹಾಯವಾಗುತ್ತದೆ. ಜೇಡ್ ಹಾಗೂ ಪೀಸ್ ಲಿಲ್ಲಿ ಸಸ್ಯಗಳು ಮನೆಯಲ್ಲಿ ಸಮೃದ್ಧಿ, ಅದೃಷ್ಟ, ಆರೋಗ್ಯವನ್ನು ತರುತ್ತವೆ. ಮನೆಯವರಿಗೆ ಒಳ್ಳೆಯದಾಗಬೇಕೆಂಬ ಭಾವನೆಯಿದ್ದರೆ ಹವಾಯಿ ಟ್ರೀ ಬೆಳೆಸಿ.
ಎಲ್ಲೆಲ್ಲಿ ಬೆಳೆಸಬಹುದು?
ಅಡುಗೆ ಮನೆ, ಡ್ರಾಯಿಂಗ್ ರೂಂ, ಬೆಡ್ ರೂಂ, ಕಚೇರಿ ಮುಂತಾದ ಕಡೆಗಳಲ್ಲಿ ಒಳಾಂಗಣ ಗಿಡಗಳನ್ನು ಬೆಳೆಸಿದರೆ ಆಮ್ಲಜನಕದ ಪ್ರಮಾಣ ತಾನಾಗಿ ವೃದ್ಧಿಸುವುದು. ಸುವಾಸಿತ ಎಲೆ ಹಾಗೂ ಹೂಗಳ ಗಿಡಗಳು ಕೋಣೆಯನ್ನು ಫ್ರೆಷ್ ಆಗಿ ಇಡಲು ಸಹಾಯಕ. ಕೃತಕ ರೂಂ ಫ್ರೆಷ್ನರ್ ಬಳಸುವ ಬದಲು ಇಂತಹ ಗಿಡಗಳು ನೈಸರ್ಗಿಕ ಸುವಾಸನೆ ಬೀರುತ್ತವೆ. ಗಾಳಿಯಲ್ಲಿರುವ ರಾಸಾಯನಿಕಗಳನ್ನು ಹೀರಿ, ಮಾಲಿನ್ಯವನ್ನು ಕಡಿಮೆಗೊಳಿಸುತ್ತವೆ. ಒಳಾಂಗಣದಲ್ಲಿ ಬೆಳೆಸಿದ ಗಿಡಗಳು ಗಾಳಿಯನ್ನು ಶುದ್ಧ ಮಾಡುವುದಲ್ಲದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಶಾಂತಿ ಹಾಗೂ ಉಲ್ಲಾಸದಿಂದಿರಲು ಸಹಾಯ ಮಾಡುತ್ತವೆ.
ಗಿಡಗಳನ್ನು ನೆಲದಲ್ಲಿ ಬೆಳೆಸುವ ಬದಲು ಆಕರ್ಷಕ ಕುಂಡಗಳಲ್ಲಿ ಬೆಳೆಸಿ, ಆಲಂಕಾರಿಕವಾಗಿ ಜೋಡಿಸಿ ಕೋಣೆಯ ಅಂದ ಹೆಚ್ಚಿಸಲು ಸಾಧ್ಯ. ಗಿಡದ ಕುಂಡಗಳನ್ನು ಬೆಂಚ್ ಗಳಲ್ಲಿ ಇರಿಸಿದರೆ, ನಿರ್ವಹಣೆ ಸುಲಭವಾಗುತ್ತದೆ. ಗಿಡ ಬೆಳೆಯುವ ಬದಲು ಬಾಲ್ಕನಿ ಗೋಡೆಗಳಿಗೆ ಗಿಡದ ಕೊಂಬೆಗಳು, ಬಳ್ಳಿಗಳು ಹರಡುವಂತೆ ಮಾಡಿ, ಗೋಡೆಗಳು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಒಳಾಂಗಣ ಗಿಡಗಳ ಎಲೆಗಳು ಸದಾ ಹಸಿರಾಗಿರಬೇಕು. ಗಿಡಗಳ ಮೇಲೆ ಧೂಳು ಕೂರದಂತೆ ಎಚ್ಚರ ವಹಿಸಬೇಕು. ನೀರು ಚಿಮುಕಿಸಿ ಅಥವಾ ನೀರಿನಲ್ಲಿ ಅದ್ದಿದ ಸ್ಪಾಂಜ್ ಅಥವಾ ಬಟ್ಟೆಯಿಂದ ಗಿಡಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು ಮುಖ್ಯ.