ಚೌತಿ ಬಂತೆಂದರೆ ಮಣ್ಣಿನ ಗಣಪನನ್ನು ಪೂಜಿಸುವುದು, ಬೇಸಗೆ ಕಾಲಿಟ್ಟರೆ ಮಣ್ಣಿನ ಹೂಜಿಯಲ್ಲಿ ತಣ್ಣೀರನ್ನು ಇರಿಸಿ ಕುಡಿಯುವುದು – ಹೀಗೆ ಈಗ ಎಲ್ಲೆಲ್ಲೂ ಪರಿಸರ ಸ್ನೇಹಿ ವಸ್ತು - ವಿಧಾನಗಳದೇ ಮಾತು.
ಕಲುಷಿತಗೊಂಡಿರುವ ವಾತಾವರಣವನ್ನು ಸರಿದೂಗಿಸಲು ಎಲ್ಲ ತಂತ್ರಜ್ಞಾನಗಳಲ್ಲಿಯೂ ಪರಿಸರಸ್ನೇಹಿಯ ಹುಡುಕಾಟ ಜೋರಾಗಿ ನಡೆದಿದೆ. ಇವುಗಳಲ್ಲಿ ಒಂದು, ಮಣ್ಣಿನ ಮನೆ.
‘ಮಣ್ಣಿನ ಮನೆ’ ಭಾರತದಲ್ಲಿ ಹೊಸತೇನೂ ಅಲ್ಲ. ನಮ್ಮ ತಾತ- ಮುತ್ತಾತರ ಕಾಲದಲ್ಲಿ ಮಣ್ಣು ಎನ್ನುವುದೇ ಪ್ರತಿಯೊಬ್ಬರ ಸೂರಿಗೆ ಆಧಾರವಾಗಿತ್ತು. ಶತಮಾನಗಳೇ ಕಳೆದರೂ ಗಟ್ಟಿಮುಟ್ಟಾಗಿರುತ್ತಿದ್ದ ಮಣ್ಣಿನ ಮನೆಗಳು ಈಗ ಇತಿಹಾಸ ಸೇರಿಹೋಗಿವೆ. ಆದರೆ ‘ಓಲ್ಡ್ ಈಸ್ ಗೋಲ್ಡ್’ ಎನ್ನುವಂತೆ ಮಣ್ಣಿನ ಮನೆಯ ಪರಿಕಲ್ಪನೆ ಮತ್ತೆ ಮುನ್ನೆಲೆಗೆ ಬಂದಿದೆ. ಹೊಸ ಟ್ರೆಂಡ್ ಹುಟ್ಟಿಕೊಂಡಿದೆ.
ಮಣ್ಣಿನ ಮನೆ ನಿರ್ಮಾಣ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಸರಕ್ಕೆ ಪೂರಕವಾಗಿರುತ್ತದೆ. ಸಿಮೆಂಟ್ ನಿರ್ಮಾಣ ಕಾರ್ಖಾನೆಗಳು ಅಪಾರ ಪ್ರಮಾಣದ ಹೊಗೆ, ತ್ಯಾಜ್ಯ ಸೃಷ್ಟಿಗೆ ಕಾರಣವಾಗುತ್ತವೆ. ಮಣ್ಣಿನ ಮನೆ ನಿರ್ಮಿಸಿದರೆ ಮಾಲಿನ್ಯದ ಪ್ರಮಾಣ ತಗ್ಗುವುದು. ಮಣ್ಣಿನ ಇಟ್ಟಿಗೆಗಳ ತಯಾರಿಯಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ವೃದ್ಧಿಸುತ್ತವೆ. ಆಧುನಿಕ ತಂತ್ರಜ್ಞಾನದ ಸಹಾಯ ಪಡೆದು ನಿರ್ವಿುಸುವುದರಿಂದ ದೃಢವಾಗಿಯೂ ಇರುತ್ತವೆ. ಹಿಂದಿನ ಕಾಲದಂತೆ ಒಂದೆರಡು ಮಳೆಗೆ ಗೋಡೆ ಕರಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ವಿದೇಶಗಳಲ್ಲೂ ಬೇಡಿಕೆ :
ವಿದೇಶಗಳಲ್ಲೂ ಪಾರಂಪರಿಕ ಹಾಗೂ ಆಧುನಿಕ ಮಣ್ಣಿನ ಕಟ್ಟಡಗಳ ನಿರ್ಮಾಣಕ್ಕೆ ಬೇಡಿಕೆ ಕಂಡುಬರುತ್ತಿದೆ. ಜಾಗತಿಕ ಹವಾಮಾನ ವೈಪರೀತ್ಯ ಕುರಿತ ತಂಡವೊಂದು ಇಂಥ ಮನೆಗಳ ಕುರಿತ ವೈಜ್ಞಾನಿಕ ಅಧ್ಯಯನಕ್ಕೆ ಮುಂದಾಗುವಂತೆ ಕರೆ ನೀಡಿದೆ. ಮನೆಗಳ ಕೊರತೆ ಹಾಗೂ ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳ ಬಳಕೆಯಿಂದ ಮಣ್ಣಿನ ಮನೆ ನಿರ್ಮಾಣ ಮಾಡುವಂತೆ ಪ್ರೇರೇಪಿಸುತ್ತಿದೆ. ಪರಿಣಾಮವಾಗಿ ಜಗತ್ತಿನೆಲ್ಲೆಡೆ ‘ಮರಳಿ ಮಣ್ಣಿಗೆ’ ಜನಪ್ರಿಯವಾಗುತ್ತಿದೆ.
ಮಣ್ಣಿನ ಮನೆಗಳ ಇತಿಹಾಸ :
ಮಣ್ಣಿನ ಕಟ್ಟಡಗಳ ನಿರ್ಮಾಣಕ್ಕೆ ದೊಡ್ಡ ಇತಿಹಾಸ, ಪರಂಪರೆ ಇದೆ. ಸ್ಥಳೀಯ ಸಾಮಗ್ರಿಗಳ ಬಳಕೆ, ಕನಿಷ್ಠ ಪ್ರಮಾಣದ ಮಾಲಿನ್ಯ, ಉತ್ತಮ ಆರೋಗ್ಯ, ತಾಪ ನಿಯಂತ್ರಣ ಮುಂತಾದ ಹಲವು ಉಪಯೋಗಗಳನ್ನು ಕಂಡುಕೊಂಡಿದ್ದ ಆಗಿನ ಜನರು ಮಣ್ಣಿನ ಮನೆಗಳಿಗೆ ಪ್ರಾಶಸ್ತ್ಯ ನೀಡಿದ್ದರು. ಇಡೀ ಕಟ್ಟಡವನ್ನು ಪರಿಸರ ಸ್ನೇಹಿಯಾಗಿ ನಿರ್ವಿುಸುವುದರಿಂದ ಪರಿಸರಕ್ಕೆ ನಮ್ಮ ಕೊಡುಗೆ ನೀಡಬಹುದು ಎಂಬ ಟ್ರೆಂಡ್ ಶುರುವಾಗಿದ್ದು, ಮಣ್ಣಿನ ಮನೆ ನಿರ್ಮಾಣದತ್ತ ಈಗ ಎಲ್ಲರ ಚಿತ್ತ ಹರಿದಿದೆ. ಬೇಸಗೆಯಲ್ಲಿ ತಾರಸಿ ಮನೆಗಳಲ್ಲಿ ಸೆಕೆ ಹೆಚ್ಚು. ಪ್ರಸ್ತುತ ವಾತಾವರಣದ ಉಷ್ಣಾಂಶವೂ ಹೆಚ್ಚುತ್ತಿದೆ. ಮಣ್ಣಿನ ಮನೆ ತಾರಸಿ ಮನೆಯಷ್ಟು ಪ್ರಮಾಣದಲ್ಲಿ ಉಷ್ಣಾಂಶವನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ, ಮನೆಯೊಳಗೆ ಹಿತಕರವಾದ ವಾತಾವರಣವಿರುತ್ತದೆ. ಸರಿಯಾದ ಯೋಜನೆ ಹಾಕಿಕೊಂಡರೆ ಎರಡು ಮಹಡಿಗಳ ವರೆಗೂ ಮನೆ ಕಟ್ಟಬಹುದು.
ಇಟ್ಟಿಗೆ ತಯಾರಿ ಹೇಗೆ ?
ಸೂಕ್ತವಾದ ಮಣ್ಣನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ನಿರ್ದಿಷ್ಟ ಪ್ರಮಾಣದ ಮರಳು, ಸಿಮೆಂಟ್ ಹಾಗೂ ಸುಣ್ಣವನ್ನು ಮಿಶ್ರಣ ಮಾಡಿ ಇಟ್ಟಿಗೆಗಳನ್ನು ರಚಿಸಿ, ಮನೆ ನಿರ್ಮಿಸಲಾಗುತ್ತದೆ. ಮನೆ ಕಟ್ಟಲು ಮಣ್ಣು ಯೋಗ್ಯವಾಗಿದೆಯೇ ಎಂದು ತಜ್ಞರಿಂದ ಮೊದಲೇ ಪರೀಕ್ಷಿಸಿಕೊಳ್ಳಬೇಕು. ಹೊರಗಿನಿಂದ ತರಿಸುವುದಕ್ಕಿಂತ ಸ್ಥಳೀಯವಾಗಿ ಉತ್ತಮ ಗುಣಮಟ್ಟದ ಕೆಂಪು ಮಣ್ಣು ಸಿಕ್ಕಿದರೆ ಖರ್ಚೂ ಉಳಿಯುತ್ತದೆ. ಜಗಲಿ, ಅಂಗಳದಲ್ಲಿ ಮಣ್ಣಿನ ನೆಲವನ್ನೇ ಉಳಿಸಬಹುದು. ಅಡುಗೆ ಮನೆ ಇತ್ಯಾದಿಗಳ ನಿರ್ವಹಣೆ ಸುಲಭವಾಗಬೇಕಿದ್ದರೆ ಟೈಲ್ಸ್ ಅಥವಾ ಗ್ರಾನೈಟ್ ಬಳಸಬಹುದು.
ಗೋಡೆಗಳಿಗೆ ಮಣ್ಣು ಮತ್ತು ಸಿಮೆಂಟ್ ಬೆರೆಸಿ, ಒತ್ತಡ ಹೇರಿ ತಯಾರಿಸುವ ಇಟ್ಟಿಗೆಗಳನ್ನು ಬಳಸುತ್ತಾರೆ. ಒಣ ಮಣ್ಣನ್ನು ಜರಡಿ ಹಿಡಿದು, ಶೇ. 5ರಿಂದ 10ರಷ್ಟು ಸಿಮೆಂಟ್ ಉಪಯೋಗಿಸಿ, ನೀರು ಹಾಕಿ ಕಲಸಿ, ಅಚ್ಚುಗಳಲ್ಲಿ ಸುರಿದು, ಒತ್ತಡ ಹೇರಿ, ತಯಾರಾಗುವ ಈ ಇಟ್ಟಿಗೆಗಳು ಸಾಕಷ್ಟು ಗಟ್ಟಿಯಾಗಿರುತ್ತವೆ. ಅವುಗಳನ್ನು ಗೋಡೆಯಲ್ಲಿ ಜೋಡಿಸಲು ಸ್ವಲ್ಪ ಪ್ರಮಾಣದ ಸಿಮೆಂಟ್ ಗಾರೆ ಮಾತ್ರ ಸಾಕಾಗುತ್ತದೆ. ಪೂರ್ತಿ ಪ್ಲಾಸ್ಟರ್ ಮಾಡುವ ಅಗತ್ಯವೂ ಇರುವುದಿಲ್ಲ. ಇಟ್ಟಿಗೆ ತಯಾರಿಸುವ ಮೊದಲು ಸುಣ್ಣವನ್ನು ಬೆರೆಸಿದರೆ, ಗೆದ್ದಲು ಹತ್ತುವ ಅಪಾಯವೂ ಕಮ್ಮಿಯಾಗುತ್ತದೆ.
ಇಂಟರ್ ಲಾಕ್ ಬೇಡ, ಕಲ್ಲಿನ ದಾರಿ ಸಾಕು
ಸೈಜು ಕಲ್ಲಿನ ಪಾಯ ನಿರ್ಮಿಸಿ, ಅದರ ಒಳಭಾಗದಲ್ಲಿ ಸಿಮೆಂಟ್ ತುಂಬುವ ಬದಲು ಮಣ್ಣನ್ನು ಬಳಸಿದರೆ ಬೇಸಗೆಯಲ್ಲಿ ನೆಲ ತಂಪಾಗಿರುತ್ತದೆ. ಮಣ್ಣಿನ ಅಂಗಳವನ್ನು ಸ್ವಚ್ಛ ಮಾಡಲು ಕಷ್ಟ, ಮಳೆಗಾಲದಲ್ಲಿ ಕಳೆಗಿಡ ಹಾಗೂ ಹುಲ್ಲು ಬೆಳೆಯುತ್ತದೆ, ಜಾರುತ್ತದೆ ಎನ್ನುವ ಕಾರಣಕ್ಕೆ ಮನೆಯ ಅಂಗಳಕ್ಕೆ ಈಗ ಹಲವರು ಇಂಟರ್ ಲಾಕ್ ಬಳಸುತ್ತಾರೆ. ಆದರೆ, ಇದು ಮಳೆ ನೀರು ಅಂತರ್ಜಲವನ್ನು ಸೇರಲು ಅವಕಾಶ ಕೊಡುವುದಿಲ್ಲ. ಬೇಸಗೆಯಲ್ಲೂ ಬಿಸಿ ಗಾಳಿಯ ಸೃಷ್ಟಿಗೆ ಕಾರಣವಾಗುತ್ತದೆ. ಹಾಗಾಗಿ, ಮನೆಯ ಸುತ್ತ ಓಡಾಡಲು ಕಲ್ಲಿನಿಂದ ಕಾಲು ದಾರಿಯನ್ನು ನಿರ್ಮಿಸಿಕೊಂಡು, ಮಿಕ್ಕ ಜಾಗದಲ್ಲಿ ಮಣ್ಣಿನ ನೆಲವನ್ನೇ ಉಳಿಸಿಕೊಂಡರೆ ಗಿಡಗಳನ್ನೂ ಬೆಳೆಸಬಹುದು. ಚೆಂದದ ಹುಲ್ಲುಹಾಸು ಕೂಡ ಮಾಡಬಹುದು. ಸಂಜೆಯ ವೇಳೆ ಕುಟುಂಬದೊಂದಿಗೆ ಆರಾಮವಾಗಿ ಕೂತು ಹರಟಬಹುದು.
ಕೂಲ್ ಕೂಲ್
ಮಣ್ಣಿನಲ್ಲಿ ಉತ್ತಮ ಉಷ್ಣ ನಿರೋಧಕ ಗುಣವಿದೆ. ಹೀಗಾಗಿ, ಇತ್ತೀಚೆಗೆ ಕೆಲವರು ಸೂರಿನ ಮೇಲೆ ಒಂಭತ್ತು ಇಂಚು ಮಣ್ಣು ಹಾಕಿ, ರೂಫ್ ಗಾರ್ಡನ್ ನಿರ್ಮಿಸಿಕೊಂಡಿದ್ದಾರೆ. ಬಿಸಿಲು ಎಷ್ಟೇ ಪ್ರಖರವಾಗಿದ್ದರೂ ಮನೆಯೊಳಗೆ ತಂಪಾಗಿರುತ್ತದೆ. ಆದರೆ, ನಿಮ್ಮ ಸೂರಿನ ಮೇಲೆ ಹೀಗೆ ಹೆಚ್ಚುವರಿ ಭಾರವನ್ನು ಹೇರುವ ಮೊದಲು ನುರಿತ ಆರ್ಕಿಟೆಕ್ಟ್ ಒಬ್ಬರಿಂದ ಕಟ್ಟಡದ ಧಾರಣ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ.
ಜನಪ್ರಿಯವಾದ ವಾಸ್ತುವಿನ್ಯಾಸ
ಕೇರಳದ ಕೊಲ್ಲಂ ಜಿಲ್ಲೆಯ ವಾಸ್ತುಶಿಲ್ಪಿ ಯುಗೇನು ಪಾಂಡಲ ಅವರು 1996ರಿಂದಲೂ ಕಡಿಮೆ ವೆಚ್ಚದಲ್ಲಿ ಇಂತಹ ಪರಿಸರಸ್ನೇಹಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಮಣ್ಣಿನ ಮನೆಗಳ ಗತವೈಭವವನ್ನು ಮರುಸ್ಥಾಪಿಸುತ್ತಿದ್ದಾರೆ. ಕೇರಳದ ಐಎಎಸ್ ಅಧಿಕಾರಿಯೊಬ್ಬರಿಗೆ ಅವರು ನಿರ್ಮಿಸಿಕೊಟ್ಟ ‘ಬೋಧಿ’ ಎನ್ನುವ ಹೆಸರಿನ ಮಣ್ಣಿನ ಮನೆ ಸಾಕಷ್ಟ ಜನಪ್ರಿಯತೆ ಪಡೆದಿತ್ತು. ಒಣಹುಲ್ಲು, ಬಿದಿರು, ಉಕ್ಕು ಹಾಗೂ ಬಿದಿರಿನಂತಹ ವಸ್ತುಗಳನ್ನು ಸಂಯೋಜಿಸಿ ಇವರು ಸೊಗಸಾದ ವಾಸ್ತು ವಿನ್ಯಾಸಗಳನ್ನು ರೂಪಿಸುತ್ತಿದ್ದಾರೆ.
ಮಿತವ್ಯಯಕಾರಿ
ಮರಗಳು ಮತ್ತು ಜಲಮೂಲಗಳಿಗೆ ತೊಂದರೆಯಾಗದಂತೆ ಮನೆಗಳನ್ನು ನಿರ್ಮಿಸುವುದು ನಮ್ಮ ನೀತಿಯಾಗಬೇಕು. ಮನೆಯಲ್ಲಿ ಎಸಿಗಳು, ಫ್ಯಾನ್‌ಗಳು ಮತ್ತು ಹೀಟರ್¬ಗಳ ಬಳಕೆಯನ್ನು ಕಡಿಮೆ ಮಾಡಲು ಮನೆ ಕಟ್ಟುವ ಜಾಗದಲ್ಲಿನ ಗಾಳಿಯ ದಿಕ್ಕು ಮತ್ತು ನೈಸರ್ಗಿಕ ಬೆಳಕನ್ನು ಅಧ್ಯಯನ ಮಾಡುವುದು ಬಹುಮುಖ್ಯ ಎಂದು ಇವರು ಅಭಿಪ್ರಾಯಿಸುತ್ತಾರೆ. ಮಣ್ಣಿನ ಮನೆಯ ವಸ್ತುಗಳನ್ನು ಮರುಬಳಕೆ ಮಾಡಬಹುದು. ಹೀಗಾಗಿ, ಇಂತಹ ಮನೆಗಳು ಮಾಲಿನ್ಯ ಮುಕ್ತವಾಗಿವೆ. ಮಳೆಯಿಂದ ಗೋಡೆಯನ್ನು ರಕ್ಷಿಸುವಂತೆ ಛಾವಣಿಗಳನ್ನು ಗೋಡೆಗಿಂತ ಎರಡು ಅಡಿಗಳಷ್ಟು ಹೊರ ಚಾಚಿ ನಿರ್ಮಿಸಿದರೆ ಇಂಥ ಮನೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಸಾಮಾನ್ಯ ಮನೆಯ ಒಂದು ಚದರ ಅಡಿ ನಿರ್ಮಾಣಕ್ಕೆ 1,000 ರೂ. ವೆಚ್ಚ ತಗಲುತ್ತದೆ. ಪರಿಸರಸ್ನೇಹಿ ಮಣ್ಣಿನ ಮನೆಗಳಲ್ಲಿ ಒಂದು ಚದರ ಅಡಿಗೆ ತಗಲುವ ವೆಚ್ಚ 600 ರೂ. ಮಾತ್ರ ಎನ್ನುತ್ತಾರೆ ಅವರು.