ಮೊದಲೇ ಕಟ್ಟಿದ ಹಳೆಯ ಮನೆಗಳನ್ನು ಕೊಳ್ಳುವ ಮುನ್ನ ಚತುರ್ಥಾಧಿಪತಿ ಯಾವ ಸ್ಥಾನದಲ್ಲಿದ್ದಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಖರೀದಿಸುವುದು ಉತ್ತಮ.
ಕಟ್ಟಿದ ಮನೆಯನ್ನು ಯಾರಾದರೂ ಖರೀದಿ ಮಾಡುವ ಮುನ್ನ ಪ್ರಶ್ನಾ ಲಗ್ನ ಚತುರ್ಥ ಸ್ಥಾನಾಧಿಪತಿಗಳು ಕೇಂದ್ರ ತ್ರಿಕೋಣದಲ್ಲಿ (1,4,7,10,5,9) ಉಚ್ಚ ಮಿತ್ರ ಸ್ವಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ನೋಡಬೇಕು. ಹಾಗಿದ್ದರೆ ಯಾವುದೇ ಆಸ್ತಿ ಮನೆಯನ್ನು ತೆಗೆದುಕೊಳ್ಳಬಹುದು. ಲಗ್ನ ಚತುರ್ಥಾಧಿಪತಿಗಳು 6, 8, 12ನೇ ಭಾವಗಳಲ್ಲಿ ಇದ್ದು ಲಗ್ನ ಮತ್ತು ಚತುರ್ಥ ಭಾವದಲ್ಲಿ ಶನಿ, ರಾಹುವಿದ್ದರೆ ಅಂತಹ ಆಸ್ತಿಯನ್ನು ಕೊಳ್ಳುವುದರಿಂದ ಕಷ್ಟ ನಷ್ಟಗಳು ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡರೆ ಉತ್ತಮ.
ಅಷ್ಟಮಾಧಿಪತಿ ಪಾಪ ಗ್ರಹಗಳಾದ ಶನಿ, ಕುಜರಾಗಿ ಚತುರ್ಥ ಭಾವದಲ್ಲಿ ಇದ್ದರೆ ಅಂತಹ ಆಸ್ತಿ ಅಥವಾ ಮನೆಯನ್ನು ಕೊಳ್ಳುವುದರಿಂದ ಪ್ರಾಣಕ್ಕೆ ಅಪಾಯವಾಗುವ ಸಂಭವ ಇರುತ್ತದೆ. ಶನಿ, ರಾಹು, ಕೇತುವು ಲಗ್ನ ಚತುರ್ಥ ಸ್ಥಾನಗಳಲ್ಲಿ ಇದ್ದರೆ ಆ ಮನೆಯಲ್ಲಿ ರೋಗ, ರುಜಿನಗಳ ಬಾಧೆ ಹೆಚ್ಚಿರುತ್ತದೆ ಎಂಬುದನ್ನು ಮರೆಯಬೇಡಿ.
ಸಪ್ತಮ, ದಶಮ ಸ್ಥಾನದಲ್ಲಿ ಶನಿ, ಕುಜ, ರಾಹು, ಕೇತುಗಳು ಇದ್ದರೆ ಆ ಮನೆಯ ಯಜಮಾನರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವುದರಿಂದ ಆ ಮನೆಯನ್ನು ಮಾರಾಟ ಮಾಡುತ್ತಿದ್ದಾರೆಂದು ತಿಳಿದುಕೊಂಡರೆ ಅತ್ಯುತ್ತಮ.
ಪಂಚಮ ಅಷ್ಟಮಾಧಿಪತಿಗಳು, ಷಷ್ಠ ವ್ಯಯ ಸ್ಥಾನದಲ್ಲಿ ಇದ್ದರೆ ಆ ಮನೆಯ ಯಜಮಾನನು ಸಾಲ ತೀರಿಸಲಾರದೆ ಮನೆಯನ್ನು ಮಾರಾಟ ಮಾಡುತ್ತಿದ್ದಾನೆ ಎಂದು ತಿಳಿಯಬೇಕು.
ಕೇಂದ್ರ ತ್ರಿಕೋಣ ಸ್ಥಾನಗಳಾದ ಲಗ್ನ ಚತುರ್ಥ ಸಪ್ತಮ, ದಶಮ, ಪಂಚಮ, ನವಮ ಸ್ಥಾನಗಳಲ್ಲಿ ಶುಭ ಗ್ರಹಗಳಾದ ಬುಧ-ಗುರು-ಶುಕ್ರ ಚಂದ್ರರು ಉಚ್ಚ ಮಿತ್ರ ಸ್ವಕ್ಷೇತ್ರದಲ್ಲಿ ಇದ್ದರೆ ಆಸ್ತಿ ಅಥವಾ ಮನೆಯ ವ್ಯವಹಾರ ತುಂಬಾ ಅನುಕೂಲಕರವಾಗಿ ಇರುತ್ತದೆಂದು ತಿಳಿಯಬೇಕು.