ಗಂಗಾಷ್ಟಮಿ ದಿನಕ್ಕೆ ವಿಶೇಷ ಮಹತ್ವವಿದೆ. ಗೋಕರ್ಣದ ಗಂಗಾಮಾತೆ ಮಂದಿರದ ಬಳಿ ಇರುವ ಗಂಗಾವಳಿ ನದಿಯಲ್ಲಿ ಅಂದು ತೀರ್ಥೋದ್ಭವವಾಗುತ್ತದೆ. ಈ ಸಂದರ್ಭದಲ್ಲಿ ಶಿವ ಮತ್ತು ಗಂಗಾದೇವಿಯ ನಿಶ್ಚಿತಾರ್ಥ ಸಮಾರಂಭವನ್ನು ಅಲ್ಲಿ ಸಾಂಕೇತಿಕವಾಗಿ ಆಚರಿಸುತ್ತಾರೆ.
ಗಂಗಾಷ್ಟಮಿಯ ಹಿಂದೊಂದು ಕಥೆಯಿದೆ. ಒಮ್ಮೆ ರೋಮಪಾದ, ಕಾಂಡು ಮತ್ತು ಪ್ರುತಗ್ರೀವ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುತ್ತಾರೆ. ಅದೇ ಸಂದರ್ಭದಲ್ಲಿ ಅಶರೀರವಾಣಿಯೊಂದು ಕೇಳುತ್ತದೆ. ಅಶರೀರವಾಣಿಯ ಮಾತಿನಂತೆ ಅವರೆಲ್ಲರೂ ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಅವರ ತಪಸ್ಸಿಗೆ ಮೆಚ್ಚುವ ಮಹಾಬಲೇಶ್ವರನು ಅವರ ಪಾಪವನ್ನು ಕಳೆಯಲೋಸುಗ ಗಂಗೆಯನ್ನು ಅಲ್ಲಿ ಹರಿಸುತ್ತಾನೆ. ಹೀಗೆ ಶಿವನ ಜಟೆಯಿಂದ ಹರಿದ ಗಂಗೆಯೇ ಶಾಲ್ಮಲಿ ನದಿಯಾಗುತ್ತದೆ. ಗಂಗಾಷ್ಟಮಿಯಂದು ಈ ನದಿಯಲ್ಲಿ ಸ್ನಾನ ಮಾಡುವುದರಿಂದ ದೋಷಗಳು ಪರಿಹಾರವಾಗುತ್ತವೆಂಬ ನಂಬಿಕೆಯಿದೆ.
ಒಮ್ಮೆ ಸೂತ ಮಹರ್ಷಿಯ ಮುಂದೆ ಜನ್ನು ಋಷಿಯು ತಾನು ಮಾಡಿದ ತಪ್ಪನ್ನು ಹೇಳಿಕೊಂಡು ಪಶ್ಚಾತ್ತಾಪ ಪಡುತ್ತಾನೆ. ಆತ ಸೂತ ಮಹರ್ಷಿಗಳು ಜನ್ನುವಿಗೆ ಗೋಕರ್ಣ ಕ್ಷೇತ್ರದಲ್ಲಿರುವ ಶಾಲ್ಮಲಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಜಗತ್ಪಾವನಿಯನ್ನು ಆರಾಧಿಸು. ಶ್ರೀಮಾತೆಯ ಕೃಪೆಯಿಂದ ನಿನ್ನೆಲ್ಲಾ ಪಾಪಗಳು ಕಳೆದು ಹೋಗುತ್ತವೆ ಎನ್ನುತ್ತಾರೆ. ಸೂತ ಮಹರ್ಷಿಗಳ ನಿರ್ದೇಶನದಂತೆ ಜನ್ನು ಮಹಾಮುನಿಯು ಶಾಲ್ಮಲಿ ನದಿ ತೀರದಲ್ಲಿ ಗಂಗಾಮಾತೆಯನ್ನು ಪ್ರತಿಷ್ಠಾಪಿಸುತ್ತಾನೆ. ನಂತರ ಆಕೆಯನ್ನು ಸ್ತುತಿ ರೂಪದಲ್ಲಿ ಆರಾಧಿಸುತ್ತಾನೆ. ಪ್ರಾರ್ಥನೆಯಿಂದ ಸಂತೃಪ್ತಳಾದ ಗಂಗಾಮಾತೆಯು ಜನ್ನು ಋಷಿಗೆ ವರವನ್ನು ನೀಡುತ್ತಾಳೆ. ಅವರ ಸಕಲ ಅಪರಾಧಗಳನ್ನು ಕ್ಷಮಿಸುತ್ತಾಳೆ. ನೀನು ತಪಸ್ಸನ್ನು ಆಚರಿಸಿದ ಈ ಸ್ಥಳದಲ್ಲಿ ನಾನು ಗುಪ್ತಗಾಮಿನಿಯಾಗಿರುತ್ತೇನೆ. ಆಶ್ವಯುಜ ಶುದ್ಧ ಕೃಷ್ಣ ಅಷ್ಟಮಿಯ ದಿನ ಸೂರ್ಯೋದಯಕ್ಕೆ ಮುನ್ನ ಶಾಲ್ಮಲಿ ನದಿಯಲ್ಲಿ ಸ್ನಾನ ಮಾಡಿ ನನ್ನ ದರ್ಶನ ಮಾಡಿ, ನೀನು ರಚಿಸಿದ ಸ್ತ್ರೋತ್ರವನ್ನು ಪಠಿಸಿದರೆ ಅವರ ಸರ್ವ ಪಾಪಗಳು ಮುಕ್ತವಾಗುತ್ತವೆ ಎಂದು ಆಶೀರ್ವದಿಸುತ್ತಾಳೆ. ಮುಂದಿನ ದಿನಗಳಲ್ಲಿ ಶಾಲ್ಮಲಿ ನದಿಯು ಗಂಗಾವಳಿ ಎಂದೇ ಹೆಸರಾಗುತ್ತದೆ ಎಂದು ಅಭಯ ನೀಡುತ್ತಾಳೆ.
ಶ್ರೀ ವಾದಿರಾಜ ತೀರ್ಥರು ಈ ನದಿಯ ದಂಡೆಯ ಮೇಲೆ ಕುಳಿತು ತಪಸ್ಸನ್ನು ಆಚರಿಸಿದ್ದಾರೆ. ಈ ಕುರಿತಂತೆ ಅವರು ತಮ್ಮ 73ನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾರೆ. ಆಶ್ವಯುಜ ಕೃಷ್ಣ ಅಷ್ಟಮಿಯ ದಿನದಂದು ಗಂಗಾಮಾತೆ ಸಾಕ್ಷಾತ್ ಇಲ್ಲಿ ಪ್ರಕಟಗೊಳ್ಳುತ್ತಾಳೆ ಎಂದಿದ್ದಾರೆ. ಆಕೆಯ ಆಗಮನದ ಕ್ಷಣಗಳಲ್ಲಿ ನದಿಯು ಶುಭ್ರವಾಗಿ ಕಾಣುತ್ತದೆ. ನೀರು ಸಿಹಿಯಾಗಿರುತ್ತದೆ ಎಂದು ಬರೆದಿದ್ದಾರೆ.