ಲಲಿತಾ ಸಹಸ್ರನಾಮವು ಲಲಿತಾ ತ್ರಿಪುರ ಸುಂದರಿಯನ್ನು ‘ಶ್ರೀಮಾತಾ ಶ್ರೀಮಹಾರಾಜ್ಞಿ ಶ್ರೀಮತ್ ಸಿಂಹಾಸನೇಶ್ವರಿ’ ಎಂದು ವರ್ಣಿಸುತ್ತದೆ. ಲಲಿತಾ ಎಂದರೆ ನಿರಂತರವಾಗಿ ಹರಿವ ಸುಪ್ತ ಚೈತನ್ಯ ಎಂತಲೂ ಅರ್ಥೈಸಬಹುದು. ಶ್ರೀಚಕ್ರದ ಕೇಂದ್ರಬಿಂದುವೇ ತ್ರಿಪುರ ಸುಂದರಿ. ಮಹಾತ್ರಿಪುರ ಸುಂದರಿ, ಷೋಡಶಿ, ಲಲಿತಾ, ರಾಜರಾಜೇಶ್ವರಿ ಎಂತಲೂ ಕರೆಯುತ್ತಾರೆ. ತ್ರಿಪುರ ಸುಂದರಿಯನ್ನು ಅರ್ಥ ಮಾಡಿಕೊಳ್ಳುವ ವಿದ್ಯೆಯೇ ಮಹಾವಿದ್ಯೆಯಾಗಿದೆ. ದಶ ಮಹಾವಿದ್ಯೆಗಳಲ್ಲಿ ಆಕೆಯೇ ಪ್ರಮುಖಳು. ಶಾಕ್ತ ಸಂಪ್ರದಾಯಸ್ಥರ ಆರಾಧ್ಯ ದೈವ. ಷೋಡಶಿ ಎಂದರೆ ಹದಿನಾರು. ಶ್ರೀವಿದ್ಯಾ ಉಪಾಸಕ ಮೊದಲಿಗೆ ಅರಿಷಡ್ವರ್ಗಗಳನ್ನು ಗೆಲ್ಲಬೇಕಾಗುತ್ತದೆ. ಅರಿಷಡ್ವರ್ಗಗಳೇ ಅಷ್ಟ ದಿಕ್ಕುಗಳು. ಅದನ್ನು ಪ್ರತಿನಿಧಿಸುವ ಅಷ್ಟ ಮಾತೃಕೆಯರು. ತ್ರಿಪುರ ಸುಂದರಿಯನ್ನು ಮಹಾಮಾಯೆ ಎಂತಲೂ ಕರೆಯುವುದುಂಟು. ಆಕೆ ಚಂಪಕ, ಅಶೋಕ ಮತ್ತು ಪುನ್ನಾಗ ಪುಷ್ಪಗಳಿಂದ ಅರ್ಚಿಸಲ್ಪಡುತ್ತಾಳೆ. ತ್ರಿಪುರ ಸುಂದರಿಯನ್ನು ಪದ್ಮರಾಗ ಮತ್ತಿತರ ಆಭರಣಗಳಿಂದ ಅಲಂಕರಿಸುತ್ತಾರೆ. ತ್ರಿಪುರ ಸುಂದರಿಯ ವಕ್ಷಸ್ಥಳದ ಮೇಲ್ಬದಿಯಲ್ಲಿ ಮಂಗಳಸೂತ್ರ ಮತ್ತು ಕಂಠೀಹಾರವನ್ನು ನೋಡಬಹುದು. ಹೊಂಬಣ್ಣದಿಂದ ಕಂಗೊಳಿಸುತ್ತಾಳೆ.
ಮಂತ್ರ :
ಓಂ ಏನ ತ್ರಿಪುರದೇವ್ಯೇ ವಿದ್ಮಹೇ | ಕ್ಲೀಂ ಕಾಮೇಶ್ವರ್ಯೈ ಧೀಮಹಿ | ಸೌಸ್ತನ್ನಃ ಕ್ಲನ್ನೋ ಪಚೋದಯಾತ್ ||
ಪುಷ್ಪ : ಸುಂಗಧರಾಜ ಹೂವು
ದೇವಿ ಪೂಜೆಗೆ ಸುಗಂದರಾಜ ಪುಷ್ಪ ಬಳಕೆಯಾಗುತ್ತದೆ. ಸುಗಂಧರಾಜ ಪುಷ್ಪ ದೀರ್ಘಕಾಲಿಕ ಹೂ ಬಿಡುವ ಸಸ್ಯ. ಐದು ದಳಗಳನ್ನು ಹೊಂದಿರುವ ಈ ಹೂವು ಪೂಜೆಯಲ್ಲಿ ವಿಶೇಷವಾಗಿ ಬಳಕೆಯಾಗುತ್ತದೆ. ಸುಗಂಧರಾಜ ಹೂಗಳು ಗಾಢ ಪರಿಮಳ ಹೊಂದಿದ್ದು, ಆಹ್ಲಾದಕರ ಘಮವನ್ನು ಹೊಂದಿದೆ. ಈ ಹೂವುಗಳಿಂದ ಎಣ್ಣೆ ತೆಗೆದು ಅದನ್ನು ಸುಗಂಧ ತಯಾರಿಕೆಯಲ್ಲಿ ಬಳಸುತ್ತಾರೆ. ಅಲ್ಲದೇ ಅಲಂಕಾರಕ್ಕೆ, ಹೂಗಳನ್ನು ಮಾಲೆ ಮಾಡಿ ಬಳಸಲಾಗುತ್ತದೆ. ದಕ್ಷಿಣ ಭಾರತದ ಮದುವೆಗಳಲ್ಲಿ ಹೆಚ್ಚಾಗಿ ಸುಗಂಧರಾಜ ಹೂವಿನ ಮಾಲೆಯನ್ನು ಬಳಸುತ್ತಾರೆ. ಬಿಳಿ ಬಣ್ಣದ ಹೂಗಳಾಗಿದ್ದು, ಚಳಿಗಾಲದಲ್ಲಿ ಕಿಟಕಿಯಲ್ಲಿ ಸುಗಂಧರಾಜ ಹೂವಿನ ಕುಂಡಗಳನ್ನು ಅಲಂಕಾರಿಕ ಗಿಡವನ್ನಾಗಿ ಬಳಸಬಹುದು.