ಬ್ರಹ್ಮನಿಂದ ಸಾಕಷ್ಟು ವರಗಳನ್ನು ಪಡೆದಿದ್ದ ಅಂಧಕಾಸುರ ಮದೋನ್ಮತ್ತನಾಗಿದ್ದ. ದೇವತೆಗಳಿಗೆ ಕಾಟ ಕೊಡುತ್ತಿದ್ದ. ಅಸುರನ ಕಾಟ ತಡೆಯಲಾರದ ಸುರರು ಕೈಲಾಸದತ್ತ ಧಾವಿಸಿದರು. ಶಿವನಲ್ಲಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು. ದೇವತೆಗಳ ಸಮಸ್ಯೆಯನ್ನು ಪರಮೇಶ್ವರನು ಆಲಿಸುತ್ತಿರುವಾಗ, ಅಂಧಕಾಸುರ ಕೈಲಾಸದಲ್ಲಿ ಪ್ರತ್ಯಕ್ಷನಾಗುತ್ತಾನೆ. ಪಾರ್ವತಿಯನ್ನು ತನ್ನೊಂದಿಗೆ ಕೊಂಡೊಯ್ಯಲು ಉದ್ಯುಕ್ತನಾಗುತ್ತಾನೆ. ಆಗ ಶಿವ ಅಂಧಕಾಸುರನ ಮೇಲೆ ಎರಗುತ್ತಾನೆ. ಭಗವಾನ್ ವಿಷ್ಣು ಸಹ ಶಿವನ ನೆರವಿಗೆ ಧಾವಿಸುತ್ತಾನೆ. ಕೊನೆಗೆ ಶಿವನು ತನ್ನ ಬಾಣದಿಂದ ಅಸುರನನ್ನು ಗಾಯಗೊಳಿಸುತ್ತಾನೆ. ಸೋಜಿಗವೆನ್ನುವಂತೆ, ಅಂಧಕಾಸುರನಿಂದ ಹರಿದ ಒಂದೊಂದು ರಕ್ತ ಬಿಂದುವೂ ಮತ್ತೊಬ್ಬ ಅಂಧಕಾಸುರನಾಗಿ ರೂಪ ತಳೆಯುತ್ತದೆ. ಹೀಗ ಹುಟ್ಟಿಕೊಂಡ ಸಾವಿರಾರು ಅಂಧಕಾಸುರರು ಶಿವನ ಮೇಲೆ ಎರಗಿ ಹೋಗುತ್ತಾರೆ.
ಅಸುರನ ದೇಹದಿಂದ ಸೋರುವ ರಕ್ತ ಭೂಮಿಗೆ ಬೀಳದಂತೆ ಮಾಡಲು ಶಿವನು ತನ್ನ ಬಾಯಿಯಿಂದ ಯೋಗೇಶ್ವರಿ ಎನ್ನುವ ಶಕ್ತಿಯನ್ನು ಸೃಷ್ಟಿಸುತ್ತಾನೆ. ಅಂತೆಯೇ ಇಂದ್ರ ಮತ್ತಿತರ ದೇವತೆಗಳಿಂದಲೂ ಶಕ್ತಿಯರು ಉತ್ಪನ್ನರಾಗುತ್ತಾರೆ. ಅವರೆಂದರೆ, ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಾ. ಅವರೆಲ್ಲರೂ ಬ್ರಹ್ಮ, ಮಹೇಶ್ವರ, ಕುಮಾರ, ವಿಷ್ಣು, ವರಾಹ, ಇಂದ್ರ ಮತ್ತು ಯಮನಿಂದ ಆವಿರ್ಭವಿಸಿದ ಸ್ತ್ರೀರೂಪಗಳು. ಅವರ ವಾಹನಗಳು, ದಿವ್ಯಾಭರಣಗಳು ಮೂಲಕರ್ತೃಗಳಂತೆಯೇ ಇದೆ. ಹೀಗೆ ಸಪ್ತಮಾತೃಕೆಯರ ಅವತಾರವಾಯಿತು.
ವರಾಹ ಪುರಾಣದಲ್ಲಿ, ಮಾತ್ರ ಯೋಗೇಶ್ವರಿ ದೇವಿಯನ್ನು ಸೇರಿಸಿಕೊಂಡು ಅಷ್ಟಮಾತೃಕೆಯರಿದ್ದಾರೆ ಎನ್ನುವ ಉಲ್ಲೇಖವಿದೆ. ವರಾಹ ಪುರಾಣದಲ್ಲಿ, ಮಾತೃಕೆಯನ್ನು ಮನಸ್ಸಿನ ಎಂಟು ಗುಣಗಳಿಗೆ ಹೋಲಿಸಿದ್ದಾರೆ. ಇಲ್ಲಿ ಯೋಗೇಶ್ವರಿ ಕಾಮದ ಸಂಕೇತವಾಗಿದ್ದರೆ, ಮಾಹೇಶ್ವರಿಯು ಕ್ರೋಧ, ವೈಷ್ಣವಿಯು ಲೋಭ, ಬ್ರಾಹ್ಮಣಿಯು ಮದ, ಕೌಮಾರಿಯು ಮೋಹ, ಇಂದ್ರಾಣಿಯು ಮಾತ್ಸರ್ಯ, ಚಾಮುಂಡಾ ಪೈಷುಣ್ಯವನ್ನು ಮತ್ತು ವಾರಾಹಿಯು ಅಸೂಯೆಯನ್ನು ಪ್ರತಿನಿಧಿಸುತ್ತಾಳೆ.
ಹೀಗೆ ಸೃಷ್ಟಿಯಾದ ಸಪ್ತಮಾತೃಕೆಯರು ಅಂಧಕಾಸುರನ ದೇಹದಿಂದ ಚಿಮ್ಮಿದ ರಕ್ತದ ಬಿಂದುಗಳು ನೆಲಕ್ಕೆ ಬೀಳದಂತೆ ತಡೆಯುತ್ತಾರೆ. ಅಂಧಕಾಸುರನ ಮಾಯಾಶಕ್ತಿ ಉಡುಗುತ್ತದೆ. ವರಾಹ ಪುರಾಣ ಸಪ್ತ ಮಾತೃಕೆಯರ ಹಿಂದಿರುವ ಆತ್ಮ ವಿದ್ಯೆಯನ್ನು ಬೋಧಿಸುತ್ತದೆ. ಅಂಧಕಾಸುರನನ್ನು ‘ಏತತ್ತೇ ಸರ್ವಮ್ ಅಖ್ಯಾತಮಾತ್ಮ ವಿದ್ಯಾಮೃತಮ್’ಎಂದು ಸಂಬೋಧಿಸುತ್ತದೆ.
ಸಪ್ತಮಾತೃಕೆಯರು
ಬ್ರಾಹ್ಮಿ ದೇವಿ :
ನಾಲ್ಕು ತಲೆಗಳನ್ನು ಹೊಂದಿದ್ದು ಆರು ಕೈಗಳಿವೆ. ಬ್ರಹ್ಮನನ್ನೇ ಸೃಷ್ಟಿಸಿದವಳೀಕೆ ಎನ್ನುವ ನಂಬಿಕೆಯಿದೆ. ಅಭಯ ಮುದ್ರಾಧಾರಿಣಿ, ಬ್ರಹ್ಮನಂತೆ ಈಕೆಯೂ ತನ್ನ ಕೈಯಲ್ಲಿ ಕುಣಿಕೆ, ಕಮಂಡಲು, ಪುಸ್ತಕವನ್ನು ಹಿಡಿದುಕೊಂಡಿದ್ದಾಳೆ. ಈಕೆ ಹಂಸವಾಹಿನಿ, ಕರಂಡ ಮುಕುಟ ಎನ್ನುವ ಕಿರೀಟವನ್ನು ಧರಿಸಿದ್ದಾಳೆ. ಶ್ರೀಚಕ್ರಾರ್ಚನೆಯಲ್ಲಿ ಬ್ರಾಹ್ಮಿ ಪಶ್ಚಿಮ ದಿಕ್ಕನ್ನೂ ಪ್ರತಿನಿಧಿಸುತ್ತಾಳೆ. ಕಾಮದ ಪ್ರತೀಕವಾಗಿದ್ದಾಳೆ.
ಬ್ರಾಹ್ಮಿ ದೇವಿಗೆ ಶ್ವೇತ ವರ್ಣದಿಂದ ಅಲಂಕಾರವನ್ನು ಮಾಡುತ್ತಾರೆ. ಅಂದರೆ ಈಕೆಯ ಅಲಂಕಾರದಲ್ಲಿ ಶ್ವೇತ ವರ್ಣದ ಮುತ್ತುಗಳು, ಬೆಳ್ಳಿ, ಬಿಳಿ ಹರಳು ಬಳಕೆಯಾಗುತ್ತದೆ. ಶ್ವೇತ ಕಮಲ ಅಥವಾ ಮಲ್ಲಿಗೆ ಹೂವಿನ ಅರ್ಚನೆ ಈಕೆಗೆ ಶ್ರೇಷ್ಠ.
ಮಂತ್ರ:
ಓಂ ದೇವೀ ಬ್ರಾಹ್ಮಿಣಿ ವಿದ್ಮಹೇ |
ಮಹಾ ಶಕ್ತಿಯೈಚ ಧೀಮಹೀ |
ತನ್ನೋ ದೇವಿ ಪ್ರಚೋದಯಾತ್ ||
ಪುಷ್ಪ : ಬ್ರಹ್ಮಕಮಲ
ರಾತ್ರಿಯ ಹೊತ್ತು ಅರಳುವ ಹೂವು ಬ್ರಹ್ಮಕಮಲ. ಈ ಹೂವು ರಾತ್ರಿ 11 ಗಂಟೆಯ ಬಳಿಕವೇ ಅರಳುತ್ತದೆ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ. ಸೌಂದರ್ಯಕ್ಕಿಂತಲೂ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಬ್ರಹ್ಮಕಮಲದ ಸೌಂದರ್ಯ ಕೇವಲ ಒಂದು ರಾತ್ರಿಗೆ ಮಾತ್ರ ಸೀಮಿತ. ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ ‘ಕಮಲಭವ’ ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮಕಮಲ ಎನ್ನುವ ಹೆಸರು ಬಂದಿದೆ. ಮಹಿಳೆಯರಿಗೆ ಈ ಹೂವು ಪೂಜನೀಯ. ರಾತ್ರಿ ವೇಳೆ ಈ ಹೂವು ಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುತ್ತಾರೆ. ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಗೆ ಸಂಪತ್ತು, ಶ್ರೀಮಂತಿಕೆ ಬರುತ್ತದೆ ಎನ್ನುವ ನಂಬಿಕೆ ಕೂಡ ಇದೆ.
ಮಾಹೇಶ್ವರಿ :
ಶಿವನ ಶಕ್ತಿಯನ್ನು ಹೊಂದಿದ್ದಾಳೆ. ಈಕೆಯನ್ನು ರೌದ್ರ, ರೌದ್ರಿಣಿ ಮತ್ತು ಮಹಿಷಿ ಎಂತಲೂ ಕರೆಯುತ್ತಾರೆ. ಈ ಅನ್ವರ್ಥ ನಾಮಗಳು ರುದ್ರ ಮತ್ತು ಮಹೇಶ ಎನ್ನುವ ಪದದಿಂದ ಬಂದಿದೆ. ಶಿವನಂತೆ ಮಾಹೇಶ್ವರಿಯೂ ನಂದಿಯ ಮೇಲೆ ಆಸೀನನಾಗಿದ್ದಾಳೆ. ನಾಲ್ಕು ಅಥವಾ ಆರು ಕೈಗಳನ್ನು ಹೊಂದಿದ್ದಾಳೆ. ಪೀತವರ್ಣೆ, ಮೂರು ಕಣ್ಣುಗಳನ್ನು ಹೊಂದಿದ್ದಾಳೆ. ತನ್ನ ಕೈಯಲ್ಲಿ ತ್ರಿಶೂಲ, ಡಮರು, ಅಕ್ಷಮಾಲೆ, ಪಾನಪಾತ್ರೆ ಅಥವಾ ಕೊಡಲಿ ಅಥವಾ ಕಪಾಲ ಅಥವಾ ಚಿಗರೆ ಅಥವಾ ಸರ್ಪವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಈಕೆ ನಾಗಾಭರಣ ಭೂಷಿತೆ, ಜಟಾ ಮುಕುಟ ಎನ್ನುವ ಕಿರೀಟವನ್ನು ಧರಿಸಿದ್ದಾಳೆ. ಶ್ರೀಚಕ್ರಾರ್ಚನೆಯಲ್ಲಿ ಮಾಹೇಶ್ವರಿ ಉತ್ತರ ದಿಕ್ಕನ್ನು ಪ್ರತಿನಿಧಿಸುತ್ತಾಳೆ. ಈಕೆಯನ್ನು ಕ್ರೋಧದ ಪ್ರತೀಕವೆನ್ನುತ್ತಾರೆ. ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುತ್ತಿದ್ದ ಸಂದರ್ಭದಲ್ಲಿ ಮೈಸೂರು ಅರಸರು ಜೆಸಿ ನಗರದಲ್ಲಿರುವ ಮಾಹೇಶ್ವರಿ ದೇವಸ್ಥಾನದಲ್ಲಿ ದೇವತಾರ್ಚನೆ, ಪೂಜಾವಿಧಿಗಳನ್ನು ನಡೆಸಿಕೊಂಡು ಬರುತ್ತಿದ್ದರು.
ಮಂತ್ರ :
ಓಂ ವೃಶತ್ ವಜಾಯ ವಿದ್ಮಹೇ | ಮೃಗ ಹಸ್ತಾಯ
ಧೀಮಹೇ | ತನ್ನೋ ಮಾಹೇಶ್ವರಿ ಪ್ರಚೋದಯಾತ್ ||
ಪುಷ್ಪ: ಸ್ಫಟಿಕ
ನೇರಳೆ ವರ್ಣ ಪ್ರಜ್ಞಾವಂತಿಕೆಯ ಸಂಕೇತ. ನೇರಳೆ ವರ್ಣದ ಸ್ಫಟಿಕ ದೇವತಾರ್ಚನೆಗೆ ಅನನ್ಯ ಮೆರಗು ನೀಡುತ್ತದೆ. ಕಣ್ಮನಗಳನ್ನು ತಣಿಸುತ್ತದೆ. ದೈವೀ ಭಾವನೆಯನ್ನು ಪ್ರಚೋದಿಸುತ್ತದೆ. ಮೊದಲಿಗಿದು ಅಲಂಕಾರ ಪುಷ್ಪವಾಗಿ ಬಳಕೆಯಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ಈ ಹೂಗಳನ್ನು ಹೆಂಗಳೆಯರು ಮಾಲೆ, ದಂಡೆಗಳನ್ನಾಗಿ ಮಾಡಿ ಮದುವೆ-ಮುಂಜಿ ಆದಿಯಾಗಿ ಎಲ್ಲ ಸಂದರ್ಭಗಳಲ್ಲಿಯೂ ತಮ್ಮ ಮುಡಿಗೇರಿಸಿಕೊಳ್ಳುತ್ತಾರೆ. ಹಳದಿ, ಬಿಳಿ, ತಿಳಿನೀಲಿ, ತಿಳಿನೇರಳೆ, ತಿಳಿಗುಲಾಬಿ, ನೇರಳೆ, ಗುಲಾಗಿ ನೀಲಿ ಬಿಳಿ ಮಿಶ್ರಿತ ಪಟ್ಟೆ ಕೆಂಪು ಮಿಶ್ರಿತ ನೀಲಿ ಬಣ್ಣಗಳಲ್ಲಿ ಗೆಂಟಿಗೆ ಹೂವು ಗಮನ ಸೆಳೆಯುತ್ತದೆ. ಇವು ಸಾಮಾನ್ಯವಾಗಿ ಸಮಶೀತೋಷ್ಣ, ಉಷ್ಣವಲಯದಲ್ಲಿ ಬೆಳೆಯುತ್ತದೆ. ದೇವನಾಗರಿಯಲ್ಲಿ ಕುರಂಟಾ, ಮರಾಠಿಯಲ್ಲಿ ವಜ್ರದಂತಿ ಎಂದು ಕರೆಯುತ್ತಾರೆ. ಸ್ಫಟಿಕದ ಹೂವಿನ ಕುಚ್ಚನ್ನು ದೇವರ ಕಲಶಕ್ಕೆ ಸುತ್ತುವ ವಾಡಿಕೆಯಿದೆ.
ಕೌಮಾರಿ :
ಕುಮಾರಿ, ಕಾರ್ತಿಕೇಯಿನಿ ಮತ್ತು ಅಂಬಿಕಾ ಎಂಬ ಹೆಸರಿನಿಂದಲೂ ಪ್ರಖ್ಯಾತಳಾಗಿದ್ದಾಳೆ. ಕಾರ್ತಿಕೇಯ ಅಥವಾ ಕುಮಾರ ಅಥವಾ ಸುಬ್ರಹ್ಮಣ್ಯನ ಶಕ್ತಿಯ ಸಂಕೇತವಾಗಿದ್ದಾಳೆ. ಈಕೆ ಸಮರ ದೇವತೆ. ನವಿಲು ವಾಹನಧಾರಿಯಾಗಿದ್ದಾಳೆ. ನಾಲ್ಕು ಅಥವಾ ಹನ್ನೆರಡು ಕೈಗಳನ್ನು ಹೊಂದಿದ್ದಾಳೆ. ಈಕೆ ಈಟಿ, ಕೊಡಲಿ, ಶಕ್ತಿ, ಟಂಕ ನಾಣ್ಯ ಮತ್ತು ಬಿಲ್ಲು ಬಾಣವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಕೆಲವೊಮ್ಮೆ ಆರು ತಲೆಗಳುಳ್ಳವಳಂತೆ ಕಾಣುತ್ತಾಳೆ. ಊದುಕೊಳವೆಯಾಕಾರದ ಕಿರೀಟವನ್ನು ಧರಿಸಿದ್ದಾಳೆ. ಶ್ರೀಚಕ್ರಾರ್ಚನೆಯಲ್ಲಿ ಕೌಮಾರಿ ಪೂರ್ವ ದಿಕ್ಕನ್ನು ಪ್ರತಿನಿಧಿಸುತ್ತಾಳೆ. ಲೋಭ ಗುಣವನ್ನು ಸಂಕೇತಿಸುತ್ತಾಳೆ. ಕೆಲವರು ಈಕೆಯನ್ನು ಕನ್ಯಾಕುಮಾರಿ ಎಂತಲೂ ಗುರುತಿಸುತ್ತಾರೆ.
ಮಂತ್ರ :
ಓಂ ಸಿಕ್ದ ವಾಜಾಯ ವಿದ್ಮಹೇ | ವಜ್ರ ಹಸ್ತಾಯ
ಧೀಮಹೇ | ತನ್ನೋ ಕೌಮಾರಿ ಪ್ರಚೋದಯಾತ್ ||
ಪುಷ್ಪ: ಶಂಖಪುಷ್ಟ
ಶಂಖಪುಷ್ಟದ ಬಣ್ಣವೂ ತಂಪು. ಆರಾಧನೆಗೂ ಹಿತಕರ. ವರ್ಷಪೂರ್ತಿ ಹೂ ಬಿಡುವ ಶಂಖಪುಷ್ಪ ಔಷಧಿಯಾಗೂ ಉಪಯುಕ್ತ. ನವರಾತ್ರಿ ಸಂದರ್ಭದಲ್ಲಿ ದೇವೀ ಮಂಟಪಕ್ಕೆ ಅಲಂಕಾರಿಕ ಹೂವಾಗಿ ಬಳಸುತ್ತಾರೆ. ದೇವನಾಗರಿಯಲ್ಲಿ ಮುದ್ಗಪರ್ಣಿ ಎಂದು ಕರೆಯುತ್ತಾರೆ. ಈ ಬಗೆಯ ಸಸ್ಯಗಳಲ್ಲಿ ಒಂಟಿ ಎಸಳು ಹಾಗೂ ಬಹು ಎಸಳು ಹೊಂದಿದ ಎರಡು ವಿಧಗಳಿವೆ. ಗಾಢ ನೀಲಿ, ಬಿಳಿ, ತಿಳಿ ಗುಲಾಬಿ, ತಿಳಿ ನೀಲಿ ಬಣ್ಣಗಳಲ್ಲಿ ಶಂಖಪುಷ್ಟ ಹೂ ಬಿಡುತ್ತದೆ. ಮೊಗ್ಗು ಅರಳಲು ನಾಲ್ಕು ದಿನಗಳ ಕಾಲ ಬೇಕು. ಆದರೆ, ಅರಳಿದ ಹೂವು ಒಂದೇ ದಿನಲ್ಲಿ ಬಾಡಿ ಹೋಗುತ್ತದೆ. ಒಂಟಿ ಎಸಳಿನ ಹೂವು ಗೋವಿನ ಕಿವಿಯನ್ನು ಹೋಲುವಂತಿದ್ದರೆ, ಹೆಚ್ಚು ಎಸಳನ್ನು ಹೊಂದಿದ ಹೂವು ಶಂಖವನ್ನು ಹೋಲುತ್ತದೆ.
ವೈಷ್ಣವಿ :
ಭಗವಾನ್ ವಿಷ್ಣುವಿನ ಅಂಶವನ್ನು ಹೊಂದಿದ್ದಾಳೆ. ವೈಷ್ಣವಿ ಗರುಡ ವಾಹಿನಿ.ನಾಲ್ಕು ಅಥವಾ ಆರು ಕೈಗಳನ್ನು ಹೊಂದಿದ್ದಾಳೆ. ಈಕೆ ತನ್ನ ಕೈಯಲ್ಲಿ ಶಂಖ, ಚಕ್ರ, ರಾಜದಂಡ ಮತ್ತು ಕಮಲ, ಬಿಲ್ಲು ಬಾಣ ಮತ್ತು ಕತ್ತಿಯನ್ನು ಹೊಂದಿದ್ದಾಳೆ. ಅಭಯ ಮತ್ತು ವರದ ಮುದ್ರಾಧಾರಿಣಿಯಾಗಿ ಕಣ್ಮನ ಸೆಳೆಯುತ್ತಿದ್ದಾಳೆ. ಹೇಗೆ ಶ್ರೀಮನ್ ನಾರಾಯಣ ಅಲಂಕಾರ ಪ್ರಿಯನೋ ಹಾಗೇ ವೈಷ್ಣವಿಯೂ ಅಲಂಕಾರ ಪ್ರಿಯಳು. ಕಂಠೀಹಾರ, ಕೈಬಳೆ, ಕಿವಿಯೋಲೆ, ತೋಳಂದಿಗೆ ಮತ್ತಿತರ ಆಭರಣಗಳನ್ನು ಆಕೆಯ ಅಲಂಕಾರಕ್ಕೆ ಬಳಸುತ್ತಾರೆ. ಈಕೆ ಕಿರೀಟ ಮುಕುಟವನ್ನು ಧರಿಸಿದ್ದಾಳೆ. ಮೋಹದ ಪ್ರತೀಕವಾಗಿದ್ದಾಳೆ. ಶ್ರೀಚಕ್ರಾರ್ಚನೆಯಲ್ಲಿ ದಕ್ಷಿಣ ದಿಕ್ಕನ್ನು ಪ್ರತಿನಿಧಿಸುತ್ತಾಳೆ. ಈಕೆಯ ಸಾಧನಾ ಮಂತ್ರ. ವೈಷ್ಣೋದೇವಿ ಮಂದಿರ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸೇರಿದ ತ್ರಿಕೂಟ ಪರ್ವತದಲ್ಲಿದೆ. ಈ ಪವಿತ್ರ ಗುಹೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳು ಭೇಟಿ ಕೊಡುತ್ತಾರೆ.
ಮಂತ್ರ :
ಓಂ ತ್ರಾಕ್ಷ ಯತ್ವಜಾಯ ವಿದ್ಮಹೇ | ಚಕ್ರ ಹಸ್ತಾಯ
ಧೀಮಹಿ | ತನ್ನೋ ವೈಷ್ಣವಿ ಪ್ರಚೋದಯಾತ್ ||
ಪುಷ್ಪ: ಉಮ್ಮಿಗೊಂಡೆ
ಕನ್ನಡದಲ್ಲಿ ಉಮ್ಮಿಗೊಂಡೆ ಎಂದು ಕರೆಯಲ್ಪಡುವ ಈ ಹೂವನ್ನು ಬ್ಯಾಚುಲರ್ ಬಟನ್, ಗ್ಲೋಬ್ ಅಮರಂತ್ ಎಂದು ಕರೆಯುತ್ತಾರೆ. ಈ ಹೂವುಗಳನ್ನು ಮಾಲೆ ಮಾಡಿ ದೇವರಿಗೆ ಅರ್ಪಿಸುತ್ತಾರೆ. ಇದೊಂದು ವಾರ್ಷಿಕ ಸಸ್ಯವಾಗಿದ್ದು 24 ಇಂಚುಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ನೇರಳೆ, ಕೆಂಪು, ಬಿಳಿ ಹಾಗೂ ನಸುಗೆಂಪು ಬಣ್ಣದ ಹೂಗಳು ಕಂಡುಬರುತ್ತವೆ.
ಹಬ್ಬಗಳ ಸಂದರ್ಭದಲ್ಲಿ ದೇವಸ್ಥಾನವನ್ನು ಅಲಂಕರಿಸಲು ಉಮ್ಮಿಗೊಂಡೆ ಹೂವುಗಳನ್ನು ಬಳಸುತ್ತಾರೆ. ಈ ಹೂಗಳು ಬಹಳ ದಿನಗಳವರೆಗೆ ಹಾಗೆಯೇ ಇರುತ್ತದೆ. ಬಣ್ಣವೂ ಕಳೆಗುಂದುವುದಿಲ್ಲ. ಹಾಗಾಗಿ ದೊಡ್ಡ ದೊಡ್ಡ ಹೂವಿನ ಹಾರಗಳಾಗಿ ಬಳಸಬಹುದು. ಅಮರಾಂತೇಸಿಯಾ ಕುಟುಂಬಕ್ಕೆ ಸೇರಿದ ಈ ಹೂವನ್ನು ಮಲೆಯಾಳದಲ್ಲಿ ಚೆಂಡು ಮಲ್ಲಿ, ವಡಮಲ್ಲಿ, ಇಂಗ್ಲಿಷ್ ನಲ್ಲಿ ಗ್ಲೋಬ್ ಅಮರಂತ್, ಬ್ಯಾಚುಲರ್ಸ್ ಬಟನ್ ಎಂದು ಕರೆಯುತ್ತಾರೆ.
ವಾರಾಹಿ :
ವೈರಾಳಿ ಎಂತಲೂ ಕರೆಯುತ್ತಾರೆ. ಈಕೆಯ ಲಕ್ಷಣಗಳು ಭಗವಾನ್ ಮಹಾವಿಷ್ಣುವಿನ ವರಾಹ ಅವತಾರವನ್ನು ನೆನಪಿಸುತ್ತದೆ. ವಾರಾಹಿ ವಿಷ್ಣುಸ್ವರೂಪಿಣಿಯಾಗಿದ್ದಾಳೆ. ಕಾಲಪುರುಷನನ್ನು ಪ್ರತಿನಿಧಿಸುತ್ತಾಳೆ. ಎಮ್ಮೆ ಈಕೆಯ ವಾಹನ, ವಾರಾಹಿ ತನ್ನ ಕೈಯಲ್ಲಿ ದಂಡ ಅಥವಾ ನೇಗಿಲನ್ನು ಹಿಡಿದಿದ್ದಾಳೆ. ಇನ್ನುಳಿದಂತೆ ವಜ್ರ ಅಥವಾ ಕತ್ತಿ, ಪಾನಪಾತ್ರೆಯನ್ನು ಹಿಡಿದುಕೊಂಡಿದ್ದಾಳೆ. ಕೆಲವೊಮ್ಮೆ ಈಕೆಯ ಕೈಗಳಲ್ಲಿ ಘಂಟೆ, ಚಕ್ರ, ಚಾಮರ ಮತ್ತು ಬಿಲ್ಲುಬಾಣವನ್ನು ನೋಡಬಹುದು. ಕರಂಡ ಮುಕುಟ ಎನ್ನುವ ಕಿರೀಟವನ್ನು ಧರಿಸಿದ್ದಾಳೆ. ಶ್ರೀಚಕ್ರಾರ್ಚನೆಯಲ್ಲಿ ವಾರಾಹಿ ವಾಯವ್ಯ ದಿಕ್ಕನ್ನು ಪ್ರತಿನಿಧಿಸುತ್ತಾಳೆ. ಮದಗುಣದ ಪ್ರತೀಕವಾಗಿಯೂ ಗಮನ ಸೆಳೆಯುತ್ತಾಳೆ. ಬಗೆ ಬಗೆ ಆಭರಣಗಳಿಂದ ಸಾಲಂಕೃತವಾಗಿದ್ದಾಳೆ.
ಮಂತ್ರ :
ಓಂ ವಾರಾಹ ಮುಖೀ ವಿದ್ಮಹೇ | ಅಂತರ್ ಧ್ಯಾನಿ
ಧೀಮಹೇ | ತನ್ನೋ ಯಮುನಃ ಪ್ರಚೋದಯಾತ್ ||
ಪುಷ್ಪ: ಡೇರೆ ಹೂವು
ಅಂಗೈಯಗಲ ಅರಳಿ ನಿಲ್ಲುವ ಡೇರಾ ಸೌಂದರ್ಯವನ್ನು ಕಣ್ದುಂಬಿಸಿಕೊಳ್ಳುವುದೇ ಚೆಂದ. ಅದರಲ್ಲೂ ಮಂಟಪ ಅಲಂಕಾರಕ್ಕೆ ಡೇರೆಗೆ ಹೊರತಾದುದು ಮತ್ತೊಂದಿಲ್ಲ. ಡೇರೆ ಹೂಗಳನ್ನು ಹೂದಾನಿಯಲ್ಲಿ ಇಡಲು, ಹಾರ ತುರಾಯಿಯ ಅಲಂಕಾರದ ವಸ್ತುವಾಗೂ ಬಳಕೆಯಾಗುತ್ತದೆ. ಅಂಗೈ ಅಗಲದ ಹೂಗಳನ್ನು ದೇವಿಯ ಮುಡಿಗೇರಿಸಿದಾಗ ಅದರ ಅಂದ ಇಮ್ಮಡಿಯಾಗಿ ಇಡೀ ಪರಿಸರಕ್ಕೆ ಒಂದು ಶೋಭೆ ಬರುತ್ತದೆ. ಹಳದಿ, ಕಿತ್ತಳೆ, ಕೆಂಪು, ನೀಲಿ, ಗುಲಾಬಿ ಹಾಗೂ ಬೂದು ಬಣ್ಣಗಳಲ್ಲಿ ಡೇರಾ ಹೂವು ಗಮನ ಸೆಳೆಯುತ್ತದೆ.
ಇಂದ್ರಾಣಿ :
ಈಕೆಗೆ ಐಂದ್ರೀ ಎಂತಲೂ ಕರೆಯುತ್ತಾರೆ. ಐಂದ್ರೀ ದೇವಿಗೆ ಮಾಹೇಂದ್ರಿ, ಶಾಕ್ರಿ, ಶಚಿ, ವಜ್ರಿ ಎಂತಲೂ ಹೆಸರು. ಸಂಕ್ಷೇಪವಾಗಿ ಹೇಳಬೇಕೆಂದರೆ ಈಕೆ ಇಂದ್ರನ ಸಖಿ. ಸ್ವರ್ಗಲೋಕದ ಅಧಿಪತಿಯ ಪತ್ನಿ. ಆನೆಯ ಮೇಲೆ ವಿರಾಜಮಾನಳಾಗಿದ್ದಾಳೆ. ಐಂದ್ರಿಯದು ಕಡು ಮೈಬಣ್ಣ. ಎರಡು ಅಥವಾ ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಆಕೆಗೆ ಇಂದ್ರನಷ್ಟೇ ಪ್ರಾಮುಖ್ಯತೆಯಿದೆ. ತಾಪಜ್ವರದ ಶಮನಕ್ಕಾಗಿ ಇಂದ್ರಾಕ್ಷಿ ಸ್ತೋತ್ರವನ್ನು ಪಠಿಸುವ ವಾಡಿಕೆಯನ್ನು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು. ಇಂದ್ರನಂತೆ ಈಕೆಯೂ ಸಹಸ್ರಾಕ್ಷಿ. ವಜ್ರಾಯುಧ, ಕುಣಿಕೆ ಮತ್ತು ತಾವರೆಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ವಜ್ರಕವಚ ಧಾರಣೆಯ ಜತೆಗೆ ಬಗೆಬಗೆ ಆಭರಣಗಳನ್ನು ಧರಿಸಿದ್ದಾಳೆ. ಶ್ರೀಚಕ್ರಾರ್ಚನೆಯಲ್ಲಿ ಈಶಾನ್ಯ ದಿಕ್ಕನ್ನು ಪ್ರತಿನಿಧಿಸುತ್ತಾಳೆ.
ಮಂತ್ರ :
ಓಂ ಗಜತ್ವಾಜಾಯಿ ವಿದ್ಮಹೇ | ವಜ್ರಹಸ್ತಾಯ ಧೀಮಹೀ |
ತನ್ನೋ ಇಂದ್ರಾಣಿ ಪ್ರಚೋದಯಾತ್ ||
ಪುಷ್ಪ: ಸೇವಂತಿಗೆ
ವರ್ಷವಿಡೀ ಬೆಳೆವ ಸೇವಂತಿಗೆ ದೇವೀ ಆರಾಧನೆಗೆ ಶ್ರೇಷ್ಠ. ಕನ್ನಡದಲ್ಲಿ ಸೇವಂತಿಗೆ, ತೆಲುಗಿನಲ್ಲಿ ಚಮಂತಿ ಎಂದು ಕರೆಯುತ್ತಾರೆ. ಹೂವಿನ ಹಾರಕ್ಕೆ ಹೆಚ್ಚಾಗಿ ಬಳಕೆಯಾಗುತ್ತದೆ. ಬಿಡಿ ಹೂಗಳು ಅಲಂಕಾರಕ್ಕೆ, ಅರ್ಚನೆಗೆ ಉಪಯುಕ್ತವಾಗಿದೆ. ಗಿಡದಲ್ಲಿ ಅರಳಿ ನಿಂತ ಹೂಗಳು ಒಂದು ತಿಂಗಳವರೆಗೂ ಹಾಗೇ ಇರುತ್ತದೆ. ಆಯುಧ ಪೂಜೆಯ ಸಂದರ್ಭದಲ್ಲಿ ವಾಹನ ಪೂಜೆಗೆ ಸೇವಂತಿಗೆ ಇದ್ದರೇ ಭೂಷಣ. ಇತ್ತೀಚಿನ ದಿನಗಳಲ್ಲಿ ಕಸ್ತೂರಿ ಶಾವಂತಿಗೆ ಹೆಚ್ಚು ಪ್ರಚಲಿತವಾಗುತ್ತಿದೆ.
ಚಾಮುಂಡಾ :
ಚಾಮುಂಡಿ, ಚರ್ಚಿಕಾ ಎಂತಲೂ ಕರೆಯುತ್ತಾರೆ. ಸಾಮಾನ್ಯವಾಗಿ ಚಾಮುಂಡಿಯನ್ನು ಕಾಳಿಯೊಂದಿಗೆ ಹೋಲಿಸುವುದುಂಟು. ದೇವೀ ಮಹಾತ್ಮೆಯಲ್ಲಿ ಕಾಳೀದೇವಿಯ ಉಲ್ಲೇಖವನ್ನು ನೋಡಬಹುದು. ಚಾಮುಂಡಾಳ ಬಣ್ಣವೇ ಕಪ್ಪು. ಈಕೆ ಕಪಾಲಮಾಲಾ ಧಾರಿಣಿ ಎಂತಲೂ ಕರೆಯುತ್ತಾರೆ. ತನ್ನ ಕೈಯಲ್ಲಿ ಡಮರು, ತ್ರಿಶೂಲ, ಕತ್ತಿ ಮತ್ತು ಪಾನಪಾತ್ರೆಯನ್ನು ಹಿಡಿದುಕೊಂಡಿದ್ದಾಳೆ. ನರಿ ಈಕೆಯ ವಾಹನ. ಕೆಲವೊಮ್ಮೆ ಅಸುರೀ ಸ್ವಭಾವವನ್ನು ತುಳಿಯುತ್ತಿರುವವಳೇನೋ ಎನ್ನುವಂತೆ ಮನುಷ್ಯನ ಮೇಲೆ ನಿಂತಿರುತ್ತಾಳೆ. ಆಕೆಯ ವದನವೇ ಕಠೋರವಾಗಿದೆ. ರುದ್ರ ಭಯಂಕರವಾಗಿ ಕಾಣುತ್ತಾಳೆ. ಇದು ಈಕೆಯ ಸಾಧನಾ ಮಂತ್ರ. ಪಾಪ ಮತ್ತು ಅಭಿಚಾರ ಗುಣವನ್ನು ಸಂಕೇತಿಸುತ್ತಾಳೆ. ಶ್ರೀಚಕ್ರಾರ್ಚನೆಯಲ್ಲಿ ಆಗ್ನೇಯ ದಿಕ್ಕನ್ನು ಪ್ರತಿಬಿಂಬಿಸುತ್ತಾಳೆ.
ಮಂತ್ರ :
ಓಂ ಪಿಸಾಸಾತ್ ವಾಜಾಯ ವಿದ್ಮಹೇ | ಶೂಲ ಹಸ್ತಾಯ
ಧೀಮಹಿ | ತನ್ನೋ ಕಾಳಿ ಪ್ರಚೋದಯಾತ್ ||
ಪುಷ್ಪ: ಕೆಂಪು ದಾಸವಾಳ
ಗಣಪತಿ ಹಾಗೂ ದೇವಿ ಪೂಜೆಗೆ ದಾಸವಾಳ ಶ್ರೇಷ್ಠ. ಗಾಢ ಬಣ್ಣದ ಆಕರ್ಷಕ ಹೂವುಗಳು ಪೂಜಾ ಮಂದಿರದ ಅಂದವನ್ನೇ ಹೆಚ್ಚಿಸುತ್ತವೆ. ವರ್ಷವಿಡೀ ಹೂಗಳನ್ನು ಬಿಡುತ್ತವೆ. ಬಿಳಿ ಹಾಗು ಕೆಂಪು ದಾಸವಾಳದಲ್ಲಿ (ಹೈಬಿಸ್ಕಸ್ ರೋಸಾ-ಸಿನೆನ್ಸಿಸ್), ಔಷಧೀಯ ಗುಣಗಳಿವೆ. ಬೇರುಗಳಲ್ಲಿರುವ ಹಲವಾರು ಔಷಧೀಯ ಗುಣದ ಮಿಶ್ರಣಗಳನ್ನು ಕೆಮ್ಮಿನಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇತರ ಪದಾರ್ಥಗಳೊಂದಿಗೆ ಹೂವುಗಳನ್ನು ಎಣ್ಣೆಯಲ್ಲಿ ಕುದಿಸಿ ಔಷಧಯುಕ್ತ ತೈಲವನ್ನು ತಯಾರಿಸುತ್ತಾರೆ. ಇದರಿಂದ ತಯಾರಾದ ಮಿಶ್ರಣವನ್ನು ನರೆಗೂದಲು ಹಾಗೂ ಕೂದಲುದುರುವಿಕೆ ತಡೆಗಟ್ಟಲು ಬಳಸುತ್ತಾರೆ. ಕಂಡೀಶನರ್ ಆಗಿಯೂ ಬಳಕೆಯಾಗುತ್ತದೆ.