ನಿವೇಶನ ಖರೀದಿದಾರರಿಗೆ ಬೆಂಗಳೂರಿನ ಹೊರವಲಯಗಳಲ್ಲಿ ನಿವೇಶನ ಖರೀದಿಸಲು ಸಾಕಷ್ಟು ಆಯ್ಕೆ, ಆಫ಼ರ್ ಗಳು ದೊರಕುತ್ತಿರುತ್ತವೆ, ಜನರು ತಮ್ಮ ಬಜೆಟ್ ಮತ್ತು ಅನುಕೂಲಕ್ಕೆ ತಕ್ಕಂತೆ ನಗರದೊಳಗೆ ಅಥವಾ ಹೊರವಲಯಗಳಲ್ಲಿ ಸೈಟ್ ಖರೀದಿಸುತ್ತಾರೆ. ಆ ಪ್ರದೇಶದಲ್ಲಿ ಶುದ್ಧಗಾಳಿ, ಬೆಳಕು, ಸಮರ್ಪಕ ರಸ್ತೆ, ಮೂಲಸೌಕರ್ಯ ಇತ್ಯಾದಿಗಳು ಸಮರ್ಪಕವಾಗಿದೆಯೇ ಎಂದು ದೃಢಪಟ್ಟ ಮೇಲೆ ನಿವೇಶನ ಖರೀದಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಹೊರವಲಯಗಳಲ್ಲಿ ನಿವೇಶನ ಖರೀದಿಸುವಾಗ ಒಂದಿಷ್ಟು ಎಚ್ಚರಿಕೆ ವಹಿಸಬೇಕು.
ನಿಮ್ಮ ಕನಸಿನ ಮನೆ ಕಟ್ಟಲು ತಾವು ಖರೀದಿಸುವ ನಿವೇಶನ ಸ್ಥಳದ ಆಯ್ಕೆ ಸಂದರ್ಭದಲ್ಲಿ ಎಚ್ಚರ ವಹಿಸಬೇಕಾದ ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.
- ನಿವೇಶನ ಖರೀದಿಸುವ ಸ್ಥಳಕ್ಕೆ ಕನಿಷ್ಟ ಐದಾರು ಸಲ ಭೇಟಿ ನೀಡಿ. ಅಲ್ಲಿನ ಪರಿಸರ, ಜನಜೀವನ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
- ನಿವೇಶನ ಖರೀದಿಸಲಿರುವ ಸ್ಥಳವು ಭವಿಷ್ಯದಲ್ಲಿ ಅಭಿವೃದ್ಧಿಯಾಗುವ ಸೂಚನೆಗಳಿವೆಯೇ ಎಂದು ಗಮನಿಸಿ. ಜೊತೆಗೆ ಸರಕಾರದ ಯಾವುದಾದರೂ ಬೃಹತ್ ಪ್ರಾಜೆಕ್ಟ್ ಗಳು ಅಥವಾ ಹೈ ವೇ ರಸ್ತೆ ಬಂದು ನಿವೇಶನ ಬಿಟ್ಟುಕೊಡಬೇಕಾಗ ಪರಿಸ್ಥಿತಿ ಬರಬಹುದು. ಇಂತಹ ಸಂಗತಿಗಳನ್ನು ಗಮನಿಸಿ.
- ಅರಣ್ಯ ಅಥವಾ ಕೆರೆ ಒತ್ತುವರಿ ಇತ್ಯಾದಿ ಅಂಶಗಳನ್ನೂ ಗಮನಿಸಿರಿ.
- ಶಾಪಿಂಗ್, ಮನರಂಜನೆ, ಶಿಕ್ಷಣ ಮತ್ತು ಆಸ್ಪತ್ರೆ ಇತ್ಯಾದಿ ಮೂಲಸೌಕರ್ಯಗಳು ಹತ್ತಿರದಲ್ಲಿ ಇದೆಯಾ ಎಂದು ತಿಳಿದುಕೊಳ್ಳಿ.
- ಕಾರ್ಖಾನೆಯ ವಿಷಕಾರಿ ವಾಸನೆ ಮತ್ತು ಶಬ್ದ ಮಾಲಿನ್ಯ ಗಳ ಬಗ್ಗೆಯೂ ಗಮನ ನೀಡಬೇಕು. ನೀವು ನಿವೇಶನ ಖರೀದಿಸುವ ಹತ್ತಿರದಲ್ಲಿ ರಾಜಕಾಲುವೆ, ಒಳಚರಂಡಿ, ಕೊಳಚೆ ಪ್ರದೇಶ ಇರಬಹುದು. ಕಸ ಡಂಪ್ ಯಾರ್ಡ್ ಆಗಿರಬಹುದು. ಅಲ್ಲಿ ಮೂಗು ತೆರೆಯಲು ಕಷ್ಟವಾಗುವಂತಹ ವಾಸನೆ ಇರಬಹುದು.
- ನಿಮ್ಮ ನಿವೇಶನ ಸಮತಟ್ಟಿನಲ್ಲಿದೆಯೇ, ಬೆಟ್ಟಗುಡ್ಡಗಳ ಅಂಚಿನಲ್ಲಿದೆಯೇ ತಿಳಿದುಕೊಳ್ಳಿ. ನೈಸರ್ಗಿಕ ವಿಪತ್ತು ಸಂಭವಿಸಿದಾಗ ಹಾನಿಯಾಗಬಹುದೇ ಎಂಬುದರ ಕುರಿತು ಗಮನ ನೀಡಿ.
- ನೀರು ತುಂಬಾ ಅಗತ್ಯವಾದದ್ದು. ಎಲ್ಲಾ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. ಬೋರ್ ವೆಲ್ ಲಭ್ಯತೆ, ಗ್ರಾಮ ಪಂಚಾಯತ್ ನಲ್ಲಿ ನೀರಿನ ವ್ಯವಸ್ಥೆ ಇತ್ಯಾದಿಗಳ ಕಡೆಗೂ ಗಮನ ನೀಡಿ. ಹೀಗೆ ಒಂದು ನಿವೇಶನ ಖರೀದಿಸುವ ಸಮಯದಲ್ಲಿ ಹತ್ತು ಹಲವು ಯಾಕೆ, ನೂರಾರು ವಿಷಯಗಳ ಕುರಿತು ಗಮನಹರಿಸಬೇಕಾಗುತ್ತದೆ. ನಿವೇಶನ ಖರೀದಿಯು ಪ್ರತಿಯೊಬ್ಬರ ಜೀವನದಲ್ಲೂ ಒಂದು ಶುಭ ಸಮಯ ಮತ್ತು ಜೀವಮಾನದ ಅತ್ಯುತ್ತಮ ಹೂಡಿಕೆ ಆಗಿರುವುದರಿಂದ ಸಾಕಷ್ಟು ಎಚ್ಚರಿಕೆಯಿಂದ ಮಾಹಿತಿಗಳನ್ನು ಕಲೆಹಾಕಿ ಮುಂದುವರೆಯುವುದು ಒಳ್ಳೆಯದು.
- ನಿವೇಶನ ಖರೀದಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ಪರಿಚಿತರಿದ್ದರೆ ಅಥವಾ ಅಕ್ಕಪಕ್ಕದ ಏರಿಯಾಗಳಲ್ಲಿ ವಾಸಿಸುತ್ತಿದ್ದರೆ ಅವರಲ್ಲಿ ವಿಚಾರಿಸಿ. ಆಗ ನಿಮಗೆ ಆ ಸ್ಥಳದ ಕುರಿತು ಇನ್ನಷ್ಟು ಸ್ಪಷ್ಟ ಚಿತ್ರಣ ದೊರಕಲಿದೆ. ಆ ಸ್ಥಳದ ಬಗ್ಗೆ ಬಂದಿರುವ ಸುದ್ದಿಗಳ ಬಗ್ಗೆಯೂ ಇಂಟರ್ ನೆಟ್ ನಲ್ಲಿ ಸರ್ಚ್ ಮಾಡಿ ಹುಡುಕಿನೋಡಿ.