ಅನಾನಸ್ ಹಣ್ಣಿನಿಂದ ತಯಾರಿಸಿದ ಶರಬತ್ತು, ಸಾರು, ಗೊಜ್ಜು ನಾಲಿಗೆಗೆ ರುಚಿಯಾಗಿರುವುದು. ಚೆನ್ನಾಗಿ ಮಾಗಿದ ಅನಾನಸ್ ಹಣ್ಣು ಸತ್ವಶಾಲಿ ಮತ್ತು ಆರೋಗ್ಯವರ್ಧಕ. ಈ ಹಣ್ಣಿನ ರಸ ದೇಹಕ್ಕೆ ತಂಪನ್ನುಂಟು ಮಾಡುವುದು, ಉತ್ತಮ ಜೀರ್ಣಕಾರಿ, ಹೊಟ್ಟೆಯಲ್ಲಾಗುವ ಉರಿ ಮತ್ತು ಸಂಕಟವನ್ನು ಶಮನಗೊಳಿಸುವುದು.
ಅನಾನಸ್ ಹಣ್ಣಿನ ರಸ ಗಂಟಲಿನ ರೋಗಗಳಿಗೆ ವಿಶೇಷ ಗುಣಕಾರಿ, ಬೀಡಿ, ಸಿಗರೇಟು ಸೇದುವ ದುರಭ್ಯಾಸವುಳ್ಳವರು ಈ ಹಣ್ಣನ್ನು ಕ್ರಮವಾಗಿ ಉಪಯೋಗಿಸುತ್ತಿದ್ದರೆ ಧೂಮಪಾನದಿಂದಾಗುವ ದುಷ್ಪರಿಣಾಮಗಳಿಂದ ಪಾರಾಗುವ ಸಾಧ್ಯತೆ ಬಹಳಷ್ಟು ಇದೆ. ಉರಿ ಮೂತ್ರ ಮತ್ತು ಅಲ್ಪಾಂಶ ಮೂತ್ರ ವಿಸರ್ಜನೆಯಾಗುವ ಸಂದರ್ಭಗಳಲ್ಲಿ ಈ ಹಣ್ಣಿನ ರಸದ ಸೇವನೆಯಿಂದ ಗುಣ ಕಂಡುಬರುವುದು. ಅರಿಶಿನ ಕಾಮಾಲೆಯಿಂದ ನರಳುವ ರೋಗಿಗಳಿಗೆ ಈ ಹಣ್ಣು ದಿವ್ಯೌಷಧಿ. ಹಣ್ಣಿನ ಸಣ್ಣ ಸಣ್ಣ ಹೋಳುಗಳನ್ನು ಅಪ್ಪಟ ಜೇನುತುಪ್ಪದಲ್ಲಿ ನಾಲ್ಕೈದು ದಿನಗಳ ಕಾಲ ನೆನೆಹಾಕಬೇಕು; ಆನಂತರ ದಿನಕ್ಕೆ ಎರಡಾವರ್ತಿಯಂತೆ ಬೆಳಗ್ಗೆ ಮತ್ತು ಸಂಜೆ ಹೋಳುಗಳನ್ನು ಸೇವಿಸುತ್ತಿರಬೇಕು. ಕೆಲವೇ ದಿನಗಳಲ್ಲಿ ಗುಣ ಕಂಡುಬರುವುದು.
ಮಕ್ಕಳಿಗೆ ಅನಾನಸ್ ಹಣ್ಣಿನ ರಸ ಕೊಡುವುದರಿಂದ ಜೀರ್ಣ ಶಕ್ತಿ ಹೆಚ್ಚಿ ಬಲವೃದ್ಧಿಯಾಗುವುದು. ಅಡುಗೆ ಉಪ್ಪು ಮತ್ತು ಕರಿಮೆಣಸಿನಪುಡಿ ಸೇರಿಸಿ ಪ್ರತಿದಿನವೂ ಒಂದು ಬಟ್ಟಲು ಅನಾನಸ್ ಹಣ್ಣಿನ ರಸ ಸೇವಿಸುತ್ತಿದ್ದರೆ ಹೊಟ್ಟೆ ತೊಳೆಸುವಿಕೆ, ತಲೆಸುತ್ತು ಬರುವಿಕೆ, ನೆಗಡಿ, ರಕ್ತಹೀನತೆ, ಮೂಲವ್ಯಾಧಿ- ಈ ಕಾಯಿಲೆಗಳಲ್ಲಿ ಉತ್ತಮ ಗುಣ ಕಂಡುಬರುವುದು. ತುರಿಕಜ್ಜಿ, ಇಸಬು, ಗಜಕರ್ಣ ಇನ್ನಿತರ ಚರ್ಮರೋಗಗಳಲ್ಲಿ ಈ ಹಣ್ಣಿನ ರಸವನ್ನು ಚರ್ಮದ ಮೇಲೆ ಹಚ್ಚುವುದರಿಂದ ಸಾಕಷ್ಟು ಗುಣ ಕಂಡುಬರುವುದು.
ಅನಾನಸ್ ಹಣ್ಣಿನ ರಸವನ್ನು ಊಟಕ್ಕೆ ಮೊದಲು ಸೇವಿಸುವುದು ಉತ್ತಮ, ಯಾವುದೇ ಹಣ್ಣಿನ ರಸವನ್ನು ಬೆಳಗಿನ ಹೊತ್ತು ಬರಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅತ್ಯಧಿಕ ಪ್ರಯೋಜನವುಂಟು. ಆದರೆ ಚೆನ್ನಾಗಿ ಮಾಗಿದ ಹಣ್ಣಿನ ರಸ ಸೇವಿಸುವುದರಿಂದ ಅನಾರೋಗ್ಯವೇ ಹೆಚ್ಚು ಎಂಬುದನ್ನು ನೆನಪಿನಲಿಡಬೇಕು, ಮಾಗದ ಹಣ್ಣಿನ ರಸ ಸೇವಿಸುವುದರಿಂದ ಗರ್ಭಿಣಿಯರಿಗೆ ಗರ್ಭಪಾತವಾಗುವುದು ಉಂಟು.