ನವದುರ್ಗೆ ಪಾಹಿಮಾಂ
ಪ್ರಥಮಂ ಶೈಲಪುತ್ರೀ ಚ ದ್ವಿತೀಯಮ್ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೀತಿ ಕೂಷ್ಮಾಂಡೇತಿ ಚತುರ್ಥಕಮ್ |
ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ |
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ |
ನವಮಂ ಸಿದ್ಧಿಧಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ ||
ನವರಾತ್ರಿಯಂದು ದೇವಿಯನ್ನು ನವದುರ್ಗೆಯಾಗಿ ಒಂಬತ್ತು ನಾಮ ರೂಪಗಳಲ್ಲಿ ಆರಾಧಿಸುತ್ತೇವೆ. ಮೊದಲನೆಯ ದಿನದಿಂದ ಕೊನೆಯ ದಿನದವರೆಗೂ ಪಾಲಿಸುವ ಅರಾಧನೆಯ ಕ್ರಮ ಹೀಗಿರುತ್ತದೆ
ಮೊದಲ ದಿನ (ಕೆಂಪು ಬಣ್ಣ)
ನವರಾತ್ರಿಯ ಮೊದಲ ದಿನಕ್ಕೆ ದುರ್ಗಾ ಮಾತೆಗೆ ‘ಶೈಲಪುತ್ರಿ’ ಎಂದು ಕರೆಯುತ್ತಾರೆ (ಪರ್ವತ ರಾಜನ ಸುಪುತ್ರಿ). ಈ ದಿನದಂದು ದುರ್ಗೆಯನ್ನು ಶಿವನ ಪತ್ನಿಯಾಗಿ ಪೂಜಿಸಲಾಗುತ್ತದೆ. ಕೆಂಪು ಬಣ್ಣವು ಉತ್ಸಾಹ ಮತ್ತು ಸಂಭ್ರಮಗಳನ್ನು ಪ್ರತಿಬಿಂಬಿಸುತ್ತದೆ. ಹಬ್ಬವನ್ನು ಪ್ರಾರಂಭಿಸಲು ಅತಿ ಸೂಕ್ತವಾದ ಬಣ್ಣ.
ಎರಡನೆಯ ದಿನ (ಕಡುನೀಲಿ ಬಣ್ಣ)
ದ್ವಿತೀಯ ದಿನ ದುರ್ಗೆಯು ಬ್ರಹ್ಮಚಾರಿಣಿಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಸಂತೋಷ ಮತ್ತು ಸಮೃದ್ಧಿಯನ್ನು ಕೊಡುತ್ತಾಳೆ. ಕಡುನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯನ್ನು ಪ್ರತಿಪಾದಿಸುತ್ತದೆ.
ಮೂರನೆಯ ದಿನ (ಹಳದಿ ಬಣ್ಣ)
ತೃತಿಯ ದಿನದಂದು ದೇವಿಯು ‘ಚಂದ್ರಘಂಟೆ’ಯ ರೂಪದಲ್ಲಿ ಪೂಜೆಗೊಳ್ಳುತ್ತಾಳೆ. ಈ ರೂಪದಲ್ಲಿ ದುರ್ಗೆಯ ಹಣೆಯ ಮೇಲೆ ಅರ್ಧಚಂದ್ರಾಕೃತಿಯಿಂದ ಅಲಂಕಾರ ಮಾಡುತ್ತಾರೆ. ಇದು ಸೌಂದರ್ಯ ಮತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ‘ದೇವಿಯು ರಾಕ್ಷಸರೊಂದಿಗೆ (ದುಷ್ಟಶಕ್ತಿಗಳೊಂದಿಗೆ) ಹೋರಾಡಿ, ಲೋಕವನ್ನುರಕ್ಷಿಸಿದ ಶಕ್ತಿ. ಲೋಕದ ಎಲ್ಲರ ಮನಸ್ಸಿನಲ್ಲಿ ಈ ಹಳದಿ ಬಣ್ಣವು ಉತ್ಸಾಹವನ್ನು ತುಂಬುತ್ತದೆ.
ನಾಲ್ಕನೆಯ ದಿನ (ಹಸಿರು ಬಣ್ಣ)
ಚತುರ್ಥಿಯ ದಿನದಂದು ದೇವಿಯು ‘ಕೂಷ್ಮಾಂಡೆ’ಯ ರೂಪ ಪಡೆಯುತ್ತಾಳೆ. ಈಕೆಯನ್ನು ಜಗತ್ತಿನ ಸೃಷ್ಟಿಕರ್ತೆ ಎನ್ನಲಾಗುತ್ತದೆ. ಈಕೆ ಭೂಮಿಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತಾಳೆ.
ಐದನೆಯ ದಿನ (ಬೂದು ಬಣ್ಣ)
ಪಂಚಮಿಯಂದು ದೇವಿಯು 'ಸ್ಕಂದಮಾತೆ'ಯ ರೂಪ ಪಡೆಯುತ್ತಾಳೆ. ಈ ದಿನದಂದು ದೇವಿಯು ಕಾರ್ತಿಕೇಯನನ್ನು ತನ್ನ ಶಕ್ತಿಯುತವಾದ ಕೈಯಲ್ಲಿ ಹಿಡಿದಿರುತ್ತಾಳೆ. ಬೂದು ಬಣ್ಣವು ತಾಯಿ ಮಗುವನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗಲೂ ತಯಾರಿರುತ್ತಾಳೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಆರನೆಯ ದಿನ (ಕೇಸರಿ)
ಆರನೆಯ ದಿನದಂದು ದೇವಿಯು 'ಕಾತ್ಯಾಯನಿ'ಯ ರೂಪ ಧರಿಸುತ್ತಾಳೆ. ಕೆಲವು ದಂತಕತೆಗಳ ಪ್ರಕಾರ 'ಕಾತ' ಎಂಬ ಋಷಿಯು ದೇವಿ ದುರ್ಗೆಯನ್ನು ಮಗಳಾಗಿ ಪಡೆಯಲು ಯಜ್ಞ ಮಾಡಿದ. ಅವನ ಭಕ್ತಿಗೆ ಮೆಚ್ಚಿ ದುರ್ಗೆಯು ಪ್ರಸನ್ನಳಾಗಿ, ಕೇಸರಿ ಬಣ್ಣದ ದಿರಿಸು ಧರಿಸಿ ಮಗಳಾಗಿ ಜನಿಸಿ ಬರುತ್ತಾಳೆ. ಈ ಬಣ್ಣವು ಧೈರ್ಯವನ್ನು ಪ್ರತಿಬಿಂಬಿಸುತ್ತದೆ.
ಏಳನೆಯ ದಿನ (ಬಿಳಿಯ ಬಣ್ಣ)
ಏಳನೆಯ ದಿನದಂದು ದೇವಿಯನ್ನು 'ಕಾಲರಾತ್ರಿ'ಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಂದು ದೇವಿಯನ್ನು ಬಿಳಿಯ ಬಣ್ಣದ ಸೀರೆಯನ್ನು ಉಡಿಸಿ, ಕ್ರೋಧಭರಿತ ಕಣ್ಣುಗಳಿಂದ ಅಲಂಕರಿಸುತ್ತಾರೆ. ಬಿಳಿಯ ಬಣ್ಣವು ಭಕ್ತಿ ಮತ್ತು ಶಾಂತಿಯ ಪ್ರತೀಕವಾಗಿದೆ.
ಎಂಟನೆಯ ದಿನ (ಗುಲಾಬಿ ಬಣ್ಣ)
ಅಷ್ಟಮಿಯಂದು ಮಹಾಗೌರಿಯ ರೂಪದಲ್ಲಿ ದೇವಿಯನ್ನು ಎಲ್ಲ 'ಪಾಪ-ಪರಿಹಾರಕಳು' ಎಂದು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವು ಭರವಸೆ ಮತ್ತು ನವೀನತೆಯ ಪ್ರತೀಕವಾಗಿದೆ.
ಒಂಬತ್ತನೆಯ ದಿನ (ತಿಳಿನೀಲಿ ಬಣ್ಣ)
ನವಮಿಯಂದು ದೇವಿಯು 'ಸಿದ್ಧಿಧಾತ್ರಿ'ಯ ರೂಪ ಧರಿಸುತ್ತಾಳೆ. ತಿಳಿನೀಲಿ ಬಣ್ಣದಿಂದ ಅಲಂಕರಿಸಲಾಗುತ್ತದೆ. 'ಸಿದ್ಧಿಧಾತ್ರಿ'ಯು ಸಿದ್ಧಿಯನ್ನು ಪಡೆದುಕೊಳ್ಳಲು ನಿರಂತರ ಅನುಗ್ರಹ ಮಾಡುತ್ತಾಳೆ.