ತೋಟಗಾರಿಕೆ ಎಲ್ಲ ಕಾಲದ ಉಲ್ಲಾಸದ ಚಟುವಟಿಕೆ ಎಂದರೆ ತಪ್ಪಾಗಲಾರದು. ಅತಿ ಸಣ್ಣ ಜಾಗದಲ್ಲೇ ತರಕಾರಿ, ಹೂವುಗಳನ್ನು ಬೆಳೆಸುವ ಮೂಲಕ ನೀವು ವರ್ಣಮಯ ಉದ್ಯಾನದ ಸಂತಸವನ್ನು ವರ್ಷವಿಡೀ ಸವಿಯಬಹುದು. ಆಯಾ ಕಾಲಕ್ಕೆ ಹೊಂದುವಂಥ ಗಿಡಗಳನ್ನು ತಂದು ಬೆಳೆಸುವ ಕಲೆ ನಿಮಗೆ ಕರಗತವಾದರೆ ನಿಮ್ಮ ನೆರೆಯವರು ಅಸೂಯೆ ಪಡುವಂಥ ಸುಂದರ ಉದ್ಯಾನ ಸಿದ್ಧವಾಗುವುದು!
ಮನೆಯ ಸುತ್ತ ಹೂವು, ತರಕಾರಿ ಹಾಗೂ ಆಲಂಕಾರಿಕ ಗಿಡಗಳನ್ನು ಬೆಳೆಸುವ ಆಸೆ ಎಲ್ಲರಿಗೂ ಇರುತ್ತದೆ. ಕೆಲವರು ಈ ವಿಚಾರದಲ್ಲಿ ಎಷ್ಟು ಸ್ವಾವಲಂಬನೆ ಸಾಧಿಸಿದ್ದಾರೆಂದರೆ, ಮಾರುಕಟ್ಟೆಯಿಂದ ಹೂವು, ಹಣ್ಣು, ಸೊಪ್ಪು ಹಾಗೂ ತರಕಾರಿಗಳನ್ನು ಖರೀದಿಸುವ ಅಗತ್ಯವೇ ಇಲ್ಲ. ತಮಗೆ ಬೇಕಾದ್ದನ್ನು ತಾವೇ ಬೆಳೆದುಕೊಳ್ಳುತ್ತಿದ್ದಾರೆ. ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ ಹಾಗೂ ಹಣ್ಣುಗಳಿಂದ ಸಾಕಷ್ಟು ಪೌಷ್ಟಿಕಾಂಶಗಳು ಲಭ್ಯವಾಗಿ, ಉತ್ತಮ ಆರೋಗ್ಯವೂ ನಮ್ಮದಾಗುತ್ತದೆ. ಈ ತುಟ್ಟಿ ಕಾಲದಲ್ಲಿ ಜೇಬಿಗೂ ಹಿತಕರವಾಗಿರುತ್ತದೆ. ಪುಟ್ಟ ಜಾಗದಲ್ಲೇ ತರಹೇವಾರಿ ಹೂವು, ತರಕಾರಿಗಳನ್ನು ಬೆಳೆಸಿ, ಮಾರಾಟ ಮಾಡಿ, ಕೈತುಂಬ ಕಾಸು ಸಂಪಾದಿಸುವವರೂ ಇದ್ದಾರೆ. ಇಂತಹ ಸುಂದರವಾದ ಪುಟ್ಟ ಉದ್ಯಾನವನ್ನು ರೂಪಿಸಿ, ಬಂದವರಿಗೆಲ್ಲ ಹೆಮ್ಮೆಯಿಂದ ತೋರಿಸುವುದು ಗೃಹಿಣಿಯರಿಗೆ ಪ್ರೀತಿಯ ವಿಷಯ.
ಜಾಗದ ಸಮಸ್ಯೆ ಇಲ್ಲ
ಕೆಲವರಿಗೆ ಆಸೆಯಿದ್ದರೂ ಗಿಡ ಬೆಳೆಸಲು ಜಾಗವಿರುವುದಿಲ್ಲ. ಆದರೆ, ಗಾರ್ಡನ್ ಪ್ರಿಯರು ನೀವಾಗಿದ್ದರೆ, ಹೂಗಿಡಗಳನ್ನು ಬೆಳೆಸುವ ಹವ್ಯಾಸ ನಿಮಗಿದ್ದರೆ ಮನೆಯ ಮುಂದೆ ಅಂಗಳ ಇರಬೇಕೆಂದೇನೂ ಇಲ್ಲ. ಮನೆಯಲ್ಲಿ ಟೆರೇಸ್, ಬಾಲ್ಕನಿ, ಕಿಟಕಿ ಹಾಗೂ ಪ್ಯಾಸೇಜುಗಳಲ್ಲಿ ಹೂಕುಂಡಗಳನ್ನಿಟ್ಟು, ಅಲ್ಲಿ ಗಿಡಗಳನ್ನು ಬೆಳೆಸಬಹುದು. ಈಗ ಹೈಡ್ರೋಫೋನಿಕ್ಸ್ ತಂತ್ರಜ್ಞಾನದಲ್ಲಿ ಟೊಮೇಟೊ, ಮೆಣಸು, ಓಕ್ರಾ, ಸೊಪ್ಪುಗಳು, ಗೋಧಿ ಹುಲ್ಲು, ಮೊಳಕೆ ಕಾಳಿನ ಗಿಡಗಳನ್ನು ಬೆಳೆಸುವವರೂ ಇದ್ದಾರೆ.
ಟೆರೇಸ್ ಗಾರ್ಡನ್
ಮನೆಯ ಟೆರೇಸ್ ಮೇಲೆ ಗಾರ್ಡನಿಂಗ್ ಮಾಡುವ ಇಚ್ಛೆ ನಿಮ್ಮದಾಗಿದ್ದರೆ ಟೆರೇಸ್ ವಾಟರ್ ಪ್ರೂಫ್ ಆಗಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಗಿಡಗಳಿಗೆ ಎರೆದ ನೀರು ಮನೆಯೊಳಗೆ ಸೋರುತ್ತದೆ. ಟೆರೇಸ್ ಮೇಲೆ ಸೂರ್ಯನ ಬೆಳಕು ಧಾರಾಳವಾಗಿ ಬೀಳುವುದರಿಂದ ಅದಕ್ಕೆ ಮೈಯೊಡ್ಡಿ ಸೊಂಪಾಗಿ ಬೆಳೆಯಬಲ್ಲ ಹೂವು, ತರಕಾರಿ ಗಿಡಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇಂಥ ಗಿಡಗಳಿಗೆ ಸಾಮಾನ್ಯವಾಗಿ 6ರಿಂದ 8 ಗಂಟೆ ಬಿಸಿಲು ಬೇಕಾಗುವುದು. ಒಳಾಂಗಣದಲ್ಲಿ ಇಡಬಹುದಾದ ಆಲಂಕಾರಿಕ ಗಿಡಗಳಿಗೆ ಅರ್ಧ ಗಂಟೆ ಬಿಸಿಲು ಸಾಕಾಗುತ್ತದೆ.
ಟೆರೇಸ್ ಮೇಲೆ ನೀವು ಗಾರ್ಡನ್ ಮಾಡುವುದಿದ್ದರೆ, ಟೆರೇಸಿನ ತಾಳಿಕೆ ಎಷ್ಟೆಂಬುದನ್ನು ತಿಳಿದುಕೊಳ್ಳಿ. ಮಣ್ಣು, ಗೊಬ್ಬರ, ನೀರು, ಕುಂಡಗಳು ಹಾಗೂ ಗಿಡಗಳ ಭಾರವನ್ನು ಅದು ತಡೆದುಕೊಳ್ಳುವುದೇ ಎಂದು ಪರೀಕ್ಷಿಸಿ. ಟೆರೇಸಿನ ಆಕಾರ, ಗಾತ್ರ ನೋಡಿಕೊಂಡು ಯಾವ ಗಿಡಗಳನ್ನು ಎಲ್ಲಿ ಬೆಳೆಸಿದರೆ ಸೂಕ್ತ ಎನ್ನುವ ಯೋಜನೆ ಸಿದ್ಧಪಡಿಸಿಕೊಳ್ಳಿ. ಹೂಕುಂಡಗಳು, ಚಿಕ್ಕ ಪ್ಲಾಸ್ಟಿಕ್ ಚೀಲಗಳು, ಕಬ್ಬಿಣದ ತೊಟ್ಟಿಗಳನ್ನು ಟೆರೇಸ್ ಗಾರ್ಡನ್ನಿಗೆ ಬಳಸಬಹುದು. ಇವುಗಳನ್ನು ಮಾರುಕಟ್ಟೆಯಿಂದ ಖರೀದಿಸಲು ಹಣ ಖರ್ಚು ಮಾಡುವ ಬದಲು ಮನೆಯಲ್ಲೇ ಹಳೆಯ ಬಾಟಲ್, ಬಕೆಟ್, ಸಿಂಟೆಕ್ಸ್ ಟ್ಯಾಂಕ್ ಇತ್ಯಾದಿಗಳನ್ನು ಆಕರ್ಷಕವಾಗಿ ಕತ್ತರಿಸಿ ಬಳಸಬಹುದು. ಇವುಗಳನ್ನೇ ಆಕರ್ಷಕ ವಿನ್ಯಾಸದಲ್ಲಿ ಜೋಡಿಸಿ, ಮಧ್ಯದಲ್ಲಿ ಆಲಂಕಾರಿಕವಾಗಿ ಹುಲ್ಲನ್ನು ಬೆಳೆಸಿದರೆ ಹಾಗೂ ಬಣ್ಣದ ಕಲ್ಲುಗಳನ್ನು ಜೋಡಿಸಿದರೆ ಉದ್ಯಾನಕ್ಕೆ ರಾಯಲ್ ಲುಕ್ ಸಿಗುತ್ತದೆ. ಗಿಡಗಳಿಗೆ ದಿನಕ್ಕೆ ಎರಡು ಬಾರಿ ನೀರು ಸಿಂಪಡಿಸುವುದರಿಂದ ತೇವಾಂಶ ಕಾಪಾಡಬಹುದು. ಇದರಿಂದ ಮನೆಯೊಳಗೂ ತಂಪಾಗಿರುತ್ತದೆ.
ಬಣ್ಣಗಳ ಹೊಂದಾಣಿಕೆ
ಸೂರ್ಯನ ಬೆಳಕು ಬೀಳದೆ ಇರುವ ಜಾಗಗಳಲ್ಲಿ ಹೂವಿನ ಗಿಡಗಳನ್ನು ಬೆಳೆಸಬಾರದು. ತಂಪಾದ ಗಾಳಿ ಹೆಚ್ಚು ಬೀಸುವೆಡೆಯಲ್ಲೂ ಹೂಗಿಡಗಳನ್ನು ಇಡಬಾರದು. ಕಿಟಕಿಯಿಂದ ಸೂರ್ಯನ ಬೆಳಕು ಬೀಳುವಂತಿರಲಿ. ಸೂರ್ಯನ ಬೆಳಕು ಬೀಳುವಲ್ಲಿ ಒಂದರ್ಧ ಗಂಟೆ ಇಟ್ಟು ಅನಂತರ ಹೂವು, ಕ್ರೋಟನ್ ಗಿಡಗಳನ್ನು ಒಳಾಂಗಣದಲ್ಲಿ ಜೋಡಿಸಬಹುದು. ಇಂಥ ಹೂಕುಂಡಗಳನ್ನು ತಿಂಗಳಿಗೊಮ್ಮೆಯಾದರೂ ಬದಲಾಯಿಸಿ. ಫಲವತ್ತಾದ ಮಣ್ಣು ಹೂತೋಟಕ್ಕೆ ಆವಶ್ಯಕ. ಮಣ್ಣಿನಲ್ಲಿರುವ ಕಳೆ ಮತ್ತಿತರ ಸಸ್ಯಗಳನ್ನು ಬೇರ್ಪಡಿಸಿ. ಹದಗೊಳಿಸಿದ ಕಾಂಪೋಸ್ಟ್ ಗೊಬ್ಬರವನ್ನು ಸೇರಿಸಿ ಮಿಶ್ರಣ ಮಾಡಿ. ಗಿಡಗಳು ಬಿಡುವ ಹೂವಿನ ಬಣ್ಣಗಳಿಗೆ ಅನುಗುಣವಾಗಿ ಜೋಡಿಸಿಟ್ಟರೆ ಮನೆಯ ಅಂದ ಹೆಚ್ಚುವುದು. ಬಣ್ಣಗಳ ಹೊಂದಾಣಿಕೆ ಇದ್ದಲ್ಲಿ ಗಾರ್ಡನ್ ಕೂಡ ಆಕರ್ಷಕವಾಗಿ ಕಾಣುವುದು.
ಆಕರ್ಷಕ ಹೂಕುಂಡಗಳು
ಸೂಕ್ತ ಹೂಕುಂಡಗಳನ್ನು ಆರಿಸಿದರೆ ಮಾತ್ರ ನಿಮ್ಮ ಮನೆಯ ಉದ್ಯಾನ ಸುಂದರವಾಗಿ ಕಾಣುತ್ತದೆ. ಕರಕುಶಲ ಕಲೆಯಿರುವ ಹೂಕುಂಡಗಳು ಬೇರೆ ಬೇರೆ ಗಾತ್ರ ಹಾಗೂ ರೂಪಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಗಿಡಗಳು ಬೆಳೆಯುವ ಗಾತ್ರಗಳಿಗೆ ಅನುಗುಣವಾಗಿ ಕುಂಡಗಳನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳು ನಿಮ್ಮ ಗೃಹೋದ್ಯಾನದ ಸೌಂದರ್ಯ ಹೆಚ್ಚಿಸುತ್ತವೆ. ಉತ್ತಮ ವಿನ್ಯಾಸದ, ಉತ್ತಮ ಗುಣಮಟ್ಟದ ಹೂಕುಂಡಗಳು ನಿಮ್ಮ ವೈಯಕ್ತಿಕ ಅಭಿರುಚಿಯನ್ನು ಸಾರುತ್ತವೆ. ನಿಮ್ಮ ಉದ್ಯಾನ ಇತರ ಹೂದೋಟಗಳಿಗಿಂತ ಭಿನ್ನವಾಗಿರಬೇಕು ಎಂದರೆ, ನೀವು ಸೆರಾಮಿಕ್ ಹೂಕುಂಡಗಳಿಗೆ ಖರ್ಚು ಮಾಡಬೇಕಾಗುತ್ತದೆ. ಇವುಗಳನ್ನು ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಿದ್ದು, ನಿರ್ವಹಣೆಯೂ ಸುಲಭವಾಗಿರುತ್ತದೆ. ಹಲವು ವರ್ಷಗಳ ಕಾಲ ಬಾಳಿಕೆ ಬರುವ ಇವು ನಿಮ್ಮ ಉದ್ಯಾನಕ್ಕೆ ಹೊಸ ರಂಗು ನೀಡುತ್ತವೆ. ಕಂಟೈನರ್ ಅಥವಾ ಹೂಕುಂಡಗಳಲ್ಲಿ ವಿವಿಧ ಜಾತಿಯ ಹೂವು, ಆಲಂಕಾರಿಕ ಗಿಡಗಳನ್ನು ಬೆಳೆಸಬಹುದು.
ಕೀಟನಾಶಕ ಸಿಂಪಡಿಸಿ
ವಿವಿಧ ಜಾತಿಯ ಸಸ್ಯಗಳು ವಿವಿಧ ಕೀಟಗಳನ್ನು ಆಕರ್ಷಿಸುತ್ತವೆ. ಕೆಲವು ಕೀಟಗಳು ಸಸ್ಯಗಳಿಗೆ ಹಾನಿಕಾರಕ. ಕಾಟ ಕೊಡುವ ಕೀಟಗಳ ಬಗ್ಗೆ ಗಮನಹರಿಸಿ, ಅವುಗಳನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಬಳಸಿ.