ಧರ್ಮ ಯಾವುದೇ ಆಗಿದ್ದರೂ ನಮ್ಮೆಲ್ಲರ ಮನೆಗಳಲ್ಲೂ ದೇವರ ಪೂಜೆ ಹಾಗೂ ಪ್ರಾರ್ಥನೆಗೆ ಒಂದು ಪುಟ್ಟ ಜಾಗವಿರುತ್ತದೆ. ಮನೆಯೇ ಮಂತ್ರಾಲಯ, ಮನಸೇ ದೇವಾಲಯವಾಗಿದ್ದರೂ ಪ್ರತಿ ಮನೆಯಲ್ಲೂ ಒಂದು ಸಣ್ಣ ದೇವಮಂದಿರವಿರುತ್ತದೆ. ಹಿಂದೂ ಧರ್ಮೀಯರಿಗಂತೂ ಮನೆಯ ಒಂದು ಪುಟ್ಟ ಕೋಣೆಯೇ ಪೂಜಾ ಮಂದಿರವಾಗಿ ರೂಪು ತಳೆದಿರುತ್ತದೆ.
ದೇವರ ಮನೆ ಅಥವಾ ಪೂಜಾಗೃಹ ಪ್ರತಿ ಮನೆಯ ಗರ್ಭಗುಡಿ ಇದ್ದಂತೆ. ಮನೆ ಎಷ್ಟೇ ಸಣ್ಣದಾಗಿದ್ದರೂ, ಪ್ರತ್ಯೇಕ ಪೂಜಾಗೃಹ ನಿರ್ಮಿಸಲು ಅವಕಾಶ ಇಲ್ಲದಿದ್ದರೂ ದೇವರಿಗೆ ಅಂತ ಒಂದು ಪುಟ್ಟ ಜಾಗ ನಿಗದಿಯಾಗಿರುತ್ತದೆ. ಇದು ನಮ್ಮ ಸಂಸ್ಕೃತಿ. ನಮ್ಮ ದೈನಂದಿನ ಕಾರ್ಯಗಳಲ್ಲಿ ಪೂಜೆ ಹಾಗೂ ಪ್ರಾರ್ಥನೆಗೆ ಒಂದಿಷ್ಟು ಸಮಯ ಮೀಸಲಿಡುತ್ತೇವೆ. ಹಲವರ ದಿನಚರಿ ಆರಂಭವಾಗುವುದೇ ಸ್ನಾನ, ಪೂಜೆಯೊಂದಿಗೆ.
ನಮ್ಮ ಕನಸಿನ ಮನೆ ಸಿದ್ಧಗೊಳ್ಳುವಾಗ ವರಾಂಡಾ, ಲಿವಿಂಗ್ ರೂಮ್, ಅಡುಗೆ ಮನೆ, ಡೈನಿಂಗ್ ಹಾಲ್, ರೀಡಿಂಗ್ ರೂಂ, ಬೆಡ್ ರೂಮ್ ಎಲ್ಲವೂ ಹೀಗೆಯೇ ಇರಬೇಕು ಎಂದು ಎಲ್ಲರೂ ಯೋಚಿಸುತ್ತಾರೆ. ಪೂಜಾ ಕೊಠಡಿಯ ವಿನ್ಯಾಸದ ಕುರಿತು ನಿರ್ಧರಿಸುವುದೂ ಅಷ್ಟೇ ಮುಖ್ಯ.
ಭಾರತೀಯ ಸಂಸ್ಕೃತಿ, ಸಂಪ್ರದಾಯಗಳ ಪ್ರಕಾರ ಪೂಜಾ ಕೋಣೆ ಮನೆಯೊಂದರ ಅವಿಭಾಜ್ಯ ಅಂಗ. ಮಾನಸಿಕ ಹಾಗೂ ಆಧ್ಯಾತ್ಮಿಕ ನೆಮ್ಮದಿಗಾಗಿ ಎಲ್ಲ ಮನೆಗಳಲ್ಲೂ ದೇವರಮನೆ ಇರುತ್ತದೆ. ಹೀಗಾಗಿ, ಮನೆಯನ್ನು ಕಟ್ಟುವಾಗ ಆಧ್ಯಾತ್ಮಿಕ ಶಕ್ತಿ ಕೇಂದ್ರವಾದ ಪೂಜಾ ಕೋಣೆಯನ್ನೂ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ.
ಸಾಮಾನ್ಯವಾಗಿ ಲಿವಿಂಗ್ ಏರಿಯಾ ಅಥವಾ ಡೈನಿಂಗ್ ಹಾಲಿನಲ್ಲಿ ಪೂಜಾ ಕೋಣೆಗಳು ಇರುತ್ತವೆ. ಯಾವಾಗಲೂ ಇಡೀ ಮನೆಗೆ ಧನಾತ್ಮಕ ಶಕ್ತಿಯನ್ನು ಪಸರಿಸುತ್ತಾ ಇರಲು ದೇವರ ಕೋಣೆಯನ್ನು ಮನೆಯ ಮಧ್ಯಭಾಗದಲ್ಲಿ ನಿರ್ವಿುಸುತ್ತಾರೆ.
ಕಲಾಕೃತಿಗಳ ಕೆತ್ತನೆ
ದೇವರ ಮನೆಯನ್ನು ಅಚ್ಚುಕಟ್ಟಾಗಿ ರೂಪಿಸುವುದು ತುಂಬ ಮುಖ್ಯ. ಹಬ್ಬ-ಹರಿದಿನಗಳಲ್ಲಿ ಮಾತ್ರವಲ್ಲದೆ ನಿತ್ಯವೂ ಅಲಂಕಾರವಾಗಿ ಇಟ್ಟುಕೊಳ್ಳಬಹುದು. ಬಾಗಿಲು, ಚೌಕಟ್ಟಿನಲ್ಲಿ ಕೆತ್ತನೆಗಳಿದ್ದರೆ ಇನ್ನೂ ಆಕರ್ಷಕ. ಗೋಡೆಗಳು ಬಿಳಿ ಅಥವಾ ಹಳದಿಯಂತಹ ತಿಳಿಯಾದ ಬಣ್ಣಗಳಿಂದ ಕೂಡಿದ್ದರೆ ದೇವರ ಕೋಣೆಯ ಅಂದ ಹೆಚ್ಚುತ್ತದೆ. ಈ ಗೋಡೆಗಳನ್ನು ಆಕರ್ಷಕ ಟೈಲ್ಸ್ ಬಳಸಿ ರಚಿಸಿದರೆ ಅಂದವೂ ಹೆಚ್ಚುತ್ತದೆ, ನಿರ್ವಹಣೆಯೂ ಸುಲಭವಾಗುತ್ತದೆ. ದೇವರ ಮನೆಯ ನೆಲಕ್ಕೆ ಅಮೃತಶಿಲೆಯಂತಹ ಕಲ್ಲುಗಳನ್ನು ಬಳಸಿದರೆ ಸೂಕ್ತ.
ವಾಸ್ತುಶಿಲ್ಪಿಗಳ ಸಲಹೆ ಪಡೆಯಿರಿ
ಸಾಂಪ್ರದಾಯಿಕ ಶೈಲಿಯಲ್ಲಿ ಮನೆ ನಿರ್ವಿುಸುವವರು ವಾಸ್ತುತಜ್ಞರ ಸಲಹೆ ಪಡೆದು, ಯಾವ ಕೊಠಡಿ ಎಲ್ಲಿ ಬರಬೇಕು ಎಂದು ತಿಳಿಯುವರು. ದೇವರ ಕೋಣೆಯ ನಿರ್ಮಾಣದ ಸಂದರ್ಭದಲ್ಲೂ ವಾಸ್ತುಶಿಲ್ಪಿಗಳ ಸಲಹೆಯನ್ನು ಪಡೆಯುವುದು ಉತ್ತಮ.
ಎಲ್ಇಡಿ ಬಲ್ಪ್ಗಳು
ದೇವರ ಕೋಣೆಯಲ್ಲಿ ಮಂದ ಬೆಳಕಿನ ದೀಪಗಳನ್ನು ಹಾಕಬಾರದು. ಎಲ್ಇಡಿ ಬಲ್ಬ್ ಗಳಿಂದ ದೇವರ ಕೋಣೆ ಸದಾ ಪ್ರಕಾಶಮಾನವಾಗಿರುತ್ತದೆ. ಉರಿಯುವ ನಂದಾದೀಪ ಇದ್ದರಂತೂ ದೇವರ ಪೋಟೊ, ಮೂರ್ತಿಗಳು ಸ್ಪಷ್ಟವಾಗಿ ಕಾಣುತ್ತವೆ. ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ದೇವರ ಕೋಣೆಗೆ ಮಾಡುವ ದೀಪಾಲಂಕಾರ ನೋಡುಗರನ್ನು ಆಕರ್ಷಿಸುತ್ತದೆ.
ನಿತ್ಯವೂ ಸ್ವಚ್ಛಗೊಳಿಸಿ
ದೇವರ ಕೋಣೆಯನ್ನು ನಿತ್ಯವೂ ಸ್ವಚ್ಛ ಮಾಡಬೇಕು. ಹಳೆಯ ಹೂವುಗಳನ್ನು ಬದಲಿಸಿ, ಕಸ ಗುಡಿಸಿ, ನೆಲ ಒರೆಸಬೇಕು. ರಂಗೋಲಿ ಹಾಗೂ ಹೂವುಗಳಿಂದ ಅಲಂಕರಿಸಬೇಕು. ಹೆಣಿಗೆಯ ವಸ್ತುಗಳು ಮತ್ತು ಶುಭ ಸಂಕೇತಗಳನ್ನೂ ಅಲಂಕಾರಕ್ಕಾಗಿ ಬಳಸುವರು. ಕೋಣೆ ಆಕರ್ಷಕವಾಗಿದ್ದು, ಭಕ್ತಿಯನ್ನು ಉದ್ದೀಪಿಸುವಂತಿರಬೇಕು.
ಸಣ್ಣದಾಗಿದ್ದರೂ ಸೂಕ್ತವಾಗಿರಲಿ
ಪೂಜಾ ಕೊಠಡಿ ಸಣ್ಣದಾದರೂ ಸೂಕ್ತ ಸ್ಥಳದಲ್ಲಿರಬೇಕು. ಸ್ಥಳಾವಕಾಶದ ಕೊರತೆ ಇದ್ದವರು ದೇವರಿಗಾಗಿ ಪ್ರತ್ಯೇಕ ಕೋಣೆಯನ್ನು ನಿರ್ಮಿಸದೆ ಅಡುಗೆ ಮನೆಯ ಅಥವಾ ಡೈನಿಂಗ್ ಹಾಲಿನ ಗೋಡೆಯಲ್ಲೇ ಸ್ಟ್ಯಾಂಡ್ ಅಥವಾ ಪೀಠದ ಮೇಲಿಟ್ಟು ಪೂಜಿಸುತ್ತಾರೆ. ಬಿಳಿ ಪ್ರಭಾವಳಿಯಂತಹ ರಚನೆ ಮತ್ತು ಅದರ ಮೇಲಿನ ಗಂಟೆ ಹಾಗೂ ಸ್ವಸ್ತಿಕಗಳನ್ನು ವಾಸ್ತುಶಾಸ್ತ್ರದ ಆಧಾರದ ಮೇಲೆ ರಚಿಸಬಹುದಾಗಿದೆ.
ಎಲ್ಲಿರಬಾರದು? ಹೇಗಿರಬಾರದು?
ಸ್ನಾನದ ಮನೆ ಅಥವಾ ಶೌಚಾಲಯದ ಗೋಡೆಗೆ ತಾಗಿಕೊಂಡು ದೇವರ ಕೋಣೆ ಇರಬಾರದು. ಕೈಕಾಲು ತೊಳೆಯಲು ದೇವರ ಮನೆಯನ್ನು ದಾಟಿ ಹೋಗುವಂತಿರಬಾರದು. ನಮ್ಮ ಶಯನ ಕೊಠಡಿಯಲ್ಲಿ ದೇವರ ಮನೆ ಇಲ್ಲದಂತೆ ಎಚ್ಚರಿಕೆ ವಹಿಸಬೇಕು. ದೇವರ ಮನೆಯತ್ತ ಕಾಲು ಚಾಚಿ ಮಲಗಬಾರದು. ದೇವರ ಮೂರ್ತಿ ಭಿನ್ನವಾಗಿದ್ದರೆ, ಸವಕಳಿ ಅಥವಾ ಬಿರುಕು ಉಂಟಾಗಿದ್ದರೆ ಅದು ಪೂಜೆಗೆ ಸೂಕ್ತವಲ್ಲ.
ಧನಾತ್ಮಕ ಶಕ್ತಿಸಂಚಯ
ಮನೆ ದೇವರು, ಕುಲದೇವರು ಹಾಗೂ ಗ್ರಾಮದೇವರ ಫೋಟೋ ಅಥವಾ ಮೂರ್ತಿ ಇಟ್ಟು ಪೂಜಿಸಿದರೆ ಸೂಕ್ತ. ಪ್ರಾರ್ಥನೆ ಮಾಡುವಾಗ ನಾವು ಪೂರ್ವಾಭಿಮುಖವಾಗಿ ನಿಂತಿರಬೇಕು ಅಥವಾ ಕುಳಿತಿರಬೇಕು.
ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರ ಜಾಗವಿದ್ದರೆ ಧನಾತ್ಮಕ ಶಕ್ತಿಯ ಸಂಚಯನವಾಗುತ್ತದೆ. ಕೊಠಡಿಯ ಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿಗೇ ಇರಬೇಕು, ಸಾಕಷ್ಟು ಗಾಳಿ-ಬೆಳಕು ಆಡುವಂತಿರಬೇಕು. ಕೋಣೆ ಚೌಕ ಅಥವಾ ಆಯತಾಕಾರದಲ್ಲಿರಬೇಕು. ದೇವರ ಮನೆಯೊಳಗೆ ತಾಮ್ರದ ಪಾತ್ರೆಯಲ್ಲಿ ಸದಾ ನೀರು ಇರಿಸಿರಬೇಕು. ಮುಂಜಾನೆ ಸ್ನಾನದ ಬಳಿಕ ಪೂಜೆಯ ಸಂದರ್ಭದಲ್ಲಿ ಅದನ್ನು ನಿತ್ಯವೂ ಬದಲಾಯಿಸಬೇಕು. ದೇವರ ಮನೆಯಲ್ಲಿ ನಂದಾದೀಪ ಬೆಳಗುತ್ತಿದ್ದರೆ ಮನೆಯಲ್ಲಿ ಸಮೃದ್ಧಿ ಹಾಗೂ ಸಂತೋಷಗಳು ನೆಲೆಗೊಳ್ಳುತ್ತವೆ ಎಂದು ಹಿರಿಯರು ಹೇಳುತ್ತಾರೆ.