ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವಂತಹ ಹಣ್ಣುಗಳಲ್ಲಿ ಬಟರ್ ಫ್ರೂಟ್ (ಅವಕಾಡೋ) ಕೂಡ ಒಂದು. ಕನ್ನಡದಲ್ಲಿ ಬೆಣ್ಣೆಹಣ್ಣು ಎಂಬುದಾಗಿ ಇದನ್ನು ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಂಶವನ್ನು ಹೊಂದಿರುವಂತಹ ಹಣ್ಣು ಇದಾಗಿದೆ.
ಅದು ಒಳ್ಳೆಯ ಕೊಬ್ಬು ಆಗಿರುವುದರಿಂದ ದೇಹಕ್ಕೆ ಉತ್ತಮ, ತನ್ನಲ್ಲಿನ ಅಧಿಕ ಪ್ರಮಾಣದ ಪೋಷಕಾಂಶಗಳಿಂದ ತನ್ನ ಹಿರಿಮೆಯನ್ನು ಆರೋಗ್ಯ ಅನುಕೂಲಕಾರಿ ಗುಣಗಳನ್ನು ಹೆಚ್ಚಿಸಿಕೊಂಡಿದೆ. ವಿಟಮಿನ್ ಕೆ, ವಿಟಮಿನ್ ಸಿ, ಪೋಲೇಟ್, ಪೋಟ್ಯಾಷಿಯಂ, ವಿಟಮಿನ್ ಬಿ5, ವಿಟಮಿನ್ ಬಿ6, ವಿಟಮಿನ್ ಇ ಯನ್ನು ಅವಕಾಡೋ ಹೊಂದಿದೆ. ಜೊತೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೆಗ್ನೀಷಿಯಂ, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಝಿಂಕ್, ಪಾಸ್ಫರಸ್, ವಿಟಮಿನ್ ಎ. ವಿಟಮಿನ್ ಬಿ5 ಹಾಗೂ ಬಿ6 ಕೊಡ ಇದೆ.
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ, ರಕ್ತನಾಳಗಳ ಆರೋಗ್ಯಕ್ಕೆ, ತನ್ಮೂಲಕ ಹೃದಯದ ಆರೋಗ್ಯಕ್ಕೆ ಬಟರ್ ಫ್ರೂಟ್ ಸೇವನೆ ಹೆಚ್ಚು ಸಹಕಾರಿ.
ಹೃದಯಾಘಾತ, ಪಾರ್ಶ್ವವಾಯು, ಕಿಡ್ನಿ ವೈಪಲ್ಯ ಸಂಭವವನ್ನೂ ಕಡಿಮೆ ಮಾಡಬಲ್ಲದು. ಕ್ಯಾನ್ಸರ್ ಬರುವ ಸಾಧ್ಯತೆಯನ್ನೂ ಕಡಿಮೆ ಮಾಡಬಲ್ಲದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಕರಗುವ ನಾರಿನಂಶವಿದ್ದು, ಸರಿಯಾದ ವಿಸರ್ಜನಾಕ್ರಿಯೆಗೆ, ಜೀರ್ಣಕ್ರಿಯೆಗೆ ಅನುಕೂಲ ಮಾಡಿಕೊಡುತ್ತದೆ. ಕೆಟ್ಟ ಕೊಲೆಸ್ಟಾಲ್, ಟ್ರೈಗ್ಲಿಸರೈಡ್ ನ್ನು ಕಡಿಮೆ ಮಾಡಲು, ಬಟರ್ ಫ್ರೂಟ್ ಸೇವನೆ ಸಹಕಾರಿ. ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ನ್ನೂ ಹೆಚ್ಚಿಸುತ್ತದೆ.
ಬಹುಮುಖ್ಯವಾಗಿ ನಾವು ಆರೋಗ್ಯವಂತರಾಗಿರಲು ಸಹಾಯ ಮಾಡುವಂತಹ ಪದಾರ್ಥ ಬಟರ್ ಫ್ರೂಟ್. ಬೇಸಿಗೆಯಲ್ಲಿ ಈ ಹಣ್ಣು ಮಾರುಕಟ್ಟೆಗೆ ತಾಜಾ ಆಗಿ ಬಂದಿರುತ್ತದೆ.