ಸಿರಿಧಾನ್ಯದ ಬಿಸಿಬೇಳೆ ಬಾತ್ ಪರಿಪೂರ್ಣವಾದ ಬೆಳಗಿನ ಉಪಹಾರ ಅಥವಾ ಊಟಕ್ಕೆ ಉತ್ತಮವಾದ ಆಹಾರ.
ಸಿರಿಧಾನ್ಯದ ಬಿಸಿಬೇಳೆ ಮಾಡಲು ಬೇಕಾಗುವ ಪಾದಾರ್ಥಗಳು :
- ನವಣೆ -1 ಕಪ್
- ತೊಗರಿ ಬೇಳೆ- 1/2 ಕಪ್
- ಸಾಸಿವೆ - 1 ಚಮಚ
- ತುಪ್ಪ – 2 ಚಮಚ
- ಕರಿಬೇವಿನ ಎಲೆಗಳು – 5 ರಿಂದ 10
- ಇಂಗು – ಒಂದು ಚಿಟಕೆ
- ಈರುಳ್ಳಿ – 1 ಬೇಕಾದರೆ
- ಟೊಮೇಟೊ – 2
- ಬಟಾಣಿ – 200 ಗ್ರಾಂ
- ಕ್ಯಾರೆಟ್ - 2
- ಆಲುಗಡ್ಡೆ - 2
- ಬಿಸಿಬೇಳೆಬಾತ್ / ಸಾಂಬಾರ್ ಪುಡಿ -1 ಟೇಬಲ್ ಚಮಚ
- ಉಪ್ಪು – ¾ ಟೇಬಲ್ ಚಮಚ ( ರುಚಿಗೆ ತಕ್ಕಷ್ಟು )
- ಹುಣಸೆ ಹಣ್ಣು -1/2 ನಿಂಬೆ ಗಾತ್ರ
- ಬೆಲ್ಲ -1/2 ನಿಂಬೆ ಗಾತ್ರ
- ಬಿಸಿ ನೀರು – 6 ಕಪ್
ಸಿರಿಧಾನ್ಯದ ಬಿಸಿಬೇಳೆ ಮಾಡುವ ವಿಧಾನ :
ಕುಕ್ಕರ್ ನಲ್ಲಿ ತುಪ್ಪ ಹಾಕಿ, ಬಿಸಿಯಾದ ನಂತರ ಸಾಸಿವೆ ಹಾಕಿ ಸಿಡಿಯಲು ಬಿಡಿ.
ನಂತರ ಕರಿಬೇವಿನ ಎಲೆಗಳು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ .
ಈಗ ತರಕಾರಿಗಳಾದ ಈರುಳ್ಳಿ, ಬಟಾಣಿ, ಕ್ಯಾರೆಟ್, ಆಲೂಗೆಡ್ಡೆ ಮತ್ತು ಟೊಮೇಟೊವನ್ನು ಒಂದರ ನಂತರ ಒಂದನ್ನು ಹಾಕಿ ಬಾಡಿಸಿ.
2 ನಿಮಿಷಗಳ ಕಾಲ ಹಸಿ ವಾಸನೆ ಹೋಗುವವರೆಗೆ ಮಿಶ್ರಣ ಮಾಡಿ.
ಈಗ ಸಿರಿಧಾನ್ಯವನ್ನು ತೊಳೆದು ಹಾಕಿ.
ತೊಳೆದ ತೊಗರಿ ಬೇಳೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಎರಡು ನಿಮಿಷಗಳ ಕಾಲ ಚೆನ್ನಾಗಿ ಬಾಡಿಸಿ ನಂತರ ಇದಕ್ಕೆ ಬಿಸಿ ನೀರು ಸೇರಿಸಿ.
ಬಿಸಿಬೇಳೆ ಬಾತ್ ಪುಡಿ ಅಥವಾ ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಕಲಸಿ.
ಉಪ್ಪು, ಬೆಲ್ಲ ಸೇರಿಸಿ ಯಾವುದೇ ಗಂಟುಗಳಾಗದಂತೆ ಕೈಯಾಡಿಸಿ ಅಥವಾ ಬಿಸಿಬೇಳೆಬಾತ್ ಪುಡಿ ಮತ್ತು ಉಪ್ಪು ಅನ್ನು ಚೆನ್ನಾಗಿ ಗಂಟಿಲ್ಲದೆ ಮಿಶ್ರಣ ಮಾಡಿ ನಂತರ ಹಾಕಿ ಬೇಯಿಸಿ.
ಹುಣಿಸೇ ಹಣ್ಣು ರಸ ಸೇರಿಸಿ ಮಿಶ್ರಣ ಮಾಡಿ. ಜಾಸ್ತಿ ಹುಳಿ ಬಯಸಿದರೆ ಇನ್ನಷ್ಟು ಹುಣಸೆ ರಸ ಸೇರಿಸಿ.
ಮುಚ್ಚಳವನ್ನು ಮುಚ್ಚಿ ಮತ್ತು 3 ಕೂಗು ಬರುವತನಕ ಬೇಯಿಸಿ.
ತಣ್ಣಗಾದ ಮೇಲೆ ಮುಚ್ಚಳವನ್ನು ತೆಗೆಯಿರಿ.
ಈರುಳ್ಳಿ, ಸೌತೆಕಾಯಿ ಮೊಸರು ಬಜ್ಜಿಯೊಂದಿಗೆ ಸಿರಿಧಾನ್ಯದ ಬಿಸಿಬೇಳೆಬಾತ್ ಸವಿಯಲು ಶುರು ಮಾಡಿ.