ಈ ಸೈಕಲ್‌ಗಳು ಫಿಟ್‌ನೆಸ್ ಕಾಯ್ದುಕೊಳ್ಳಲು ಪ್ರಯೋಜನಕಾರಿ, ಹಾಗೇ ಪರಿಸರ ಸ್ನೇಹಿ ಸಹ. ಹಾಗಾಗಿ ಇತ್ತೀಚೆಗೆ ಸೈಕಲ್ ಗಳ ಬಳಕೆ ಜಾಸ್ತಿಯಾಗುತ್ತಾ ಇರುವುದನ್ನು ಕಾಣಬಹುದು. ಪ್ರಶಾಂತ ವಾತಾವರಣದಲ್ಲಿ ಸೈಕ್ಲಿಂಗ್ ಮಾಡಿದರೆ ಮನಸ್ಸು ಉಲ್ಲಸಿತವಾಗುತ್ತದೆ.
ಸೈಕ್ಲಿಂಗ್ನಿಂದ ಮನಸ್ಸಿನ ಆರೋಗ್ಯಕ್ಕೆ ಆಗುವ ಉಪಯೋಗಗಳು ಇಂತಿವೆ:
ಒತ್ತಡ ಕಡಿಮೆ ಮಾಡಿ ಖುಷಿಯನ್ನು ಹೆಚ್ಚಿಸುತ್ತದೆ :
ಒತ್ತಡ ಕಡಿಮೆ ಮಾಡಿಕೊಂಡು ನಗು ನಗುತ್ತಾ ದಿನ ಕಳಿಯಬೇಕು ಎಂದು ಬಯಸುವವರು ಕೇವಲ 10 ನಿಮಿಷ ಸೈಕ್ಲಿಂಗ್ ಮಾಡಿದರೂ ಸಾಕು. ಸೈಕ್ಲಿಂಗ್ ಅವಧಿಯಲ್ಲಿ ದೇಹದಲ್ಲಿ ಖುಷಿಯನ್ನು ಹೆಚ್ಚಿಸುವಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳು ಧನಾತ್ಮಕ ಚಿಂತನೆಯನ್ನು ಹೆಚ್ಚು ಮಾಡಿ, ಮನಸ್ಸಿನ ನೋವುಗಳನ್ನು ದೂರ ಮಾಡುತ್ತದೆ.
ಆತಂಕ ನಿವಾರಣೆಯಾಗುತ್ತದೆ :
ಸೈಕ್ಲಿಂಗ್ ಮಾಡುವುದರಿಂದ ಆತಂಕ ಹಾಗೂ ಒತ್ತಡ ನಿವಾರಣೆಯಾಗುತ್ತದೆ. ದೇಹದಲ್ಲಿ ಕಾರ್ಟಿಸೋಲ್ ಹಾಗೂ ಅಡ್ರೆನಲಿನ್ ಎಂಬ ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಸೈಕ್ಲಿಂಗ್‌ನಿಂದ ನಮ್ಮ ಗಮನ ಉಸಿರಾಟ ಹಾಗೂ ಪೆಡಲ್ ಕಡೆಗಿರುತ್ತದೆ. ಆದ್ದರಿಂದ ನಕಾರಾತ್ಮಕ ಅಂಶಗಳು ಹಾಗೂ ಆತಂಕದಿಂದ ಮನಸು ದೂರವಾಗಿರುತ್ತದೆ. ಸೈಕ್ಲಿಂಗ್‌ನಿಂದ ಮಿದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಆತ್ಮವಿಶ್ವಾಸ ಹೆಚ್ಚು ಮಾಡುತ್ತದೆ:
ಸೈಕ್ಲಿಂಗ್ ಮಾಡುವಾಗ ದೇಹವು ನ್ಯೂರೋಟ್ರಾನ್ಸ್‌ಮಿಟ್ಟರ್ ಎಂಬ ಹಾರ್ಮೋನು ಅನ್ನು ಬಿಡುಗಡೆ ಮಾಡುತ್ತದೆ. ಇದು ದೈಹಿಕವಾಗಿ, ಮಾನಸಿಕವಾಗಿ ದೃಢವಾಗಿ ಹಾಗೂ ಆತ್ಮವಿಶ್ವಾಸದಿಂದ ಇರಲು ಸಹಾಯ ಮಾಡುತ್ತದೆ. ಸೈಕ್ಲಿಂಗ್ ವ್ಯಕ್ತಿಯಲ್ಲಿ ಧನಾತ್ಮಕ ಅಂಶ, ಸ್ವಾಭಿಮಾನ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ನಿಯಮಿತ ಸೈಕ್ಲಿಂಗ್‌ನಿಂದ ದೇಹವು ತೂಕ ಕಳೆದುಕೊಂಡು ಆಕರ್ಷಕ ದೇಹಾಕೃತಿ ಪಡೆಯುವುದರಿಂದ ಕೂಡ ಆತ್ಮವಿಶ್ವಾಸ ಹೆಚ್ಚುತ್ತದೆ.
ನಿದ್ದೆಗೆ ಸಹಾಯಕವಾಗುತ್ತದೆ :
ನಿದ್ದೆ ಹಾಗೂ ಆರೋಗ್ಯದ ನಡುವೆ ನೇರ ಸಂಬಂಧವಿದೆ. ಸೈಕ್ಲಿಂಗ್ ಒಂದು ವ್ಯಾಯಾಮವಾಗಿದ್ದರಿಂದ ದೇಹ ದಣಿದು ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಉತ್ತಮ ನಿದ್ದೆ ದೈಹಿಕ, ಮಾನಸಿಕ ಆರೋಗ್ಯಕ್ಕೂ ಉತ್ತಮ.
ಮಾನಸಿಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ :
ಖಿನ್ನತೆಯಂತಹ ಮಾನಸಿಕ ರೋಗಗಳ ವಿರುದ್ಧ ಹೋರಾಡಲು ಸೈಕ್ಲಿಂಗ್ ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ ಮಾನಸಿಕ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಸೈಕ್ಲಿಂಗ್ ಈ ರೋಗಗಳಿಗೆ ಉತ್ತಮ ಪರಿಹಾರ ಎಂದು ತಜ್ಞರು ಹೇಳುತ್ತಾರೆ. ಖಿನ್ನತೆಯಿಂದ ಬಳಲುತ್ತಿರುವವರು ದಿನಕ್ಕೆ 20ರಿಂದ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡಿದರೆ ಒಳ್ಳೆಯದು.