ನಗರ ಪ್ರದೇಶದ ಮನೆಗಳಲ್ಲಿ ಕೈತೋಟಗಳಿಗೆ ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ. ಮನೆ ಮುಂದೆ ಸ್ವಲ್ಪ ಜಾಗ ಸಿಕ್ಕರೂ ಕಾರು, ಬೈಕು ನಿಲ್ಲಿಸಲು ಬೇಕು. ಹಿತ್ತಲಿದ್ದರೂ ಬಟ್ಟೆ ಒಗೆಯಲು. ಒಣಹಾಕಲು ಜಾಗ ಮೀಸಲಿಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಸೊಪ್ಪು, ಹಣ್ಣು-ತರಕಾರಿಗಳು ದುಬಾರಿ. ಅಲ್ಲದೆ, ಅನೇನು ರಾಸಾಯನಿಕಗಳನ್ನು ಹಾಕಿ ಬೆಳೆಸುತ್ತಾರೋ, ಅವುಗಳನ್ನು ಕೆಡದಂತೆ ಎಷ್ಟು ಬಗೆಯ ರಾಸಾಯನಿಕಗಳನ್ನು ಬೆರೆಸುತ್ತಾರೋ? ದೇವನೇ ಬಲ್ಲ.
ಈ ಸಂದರ್ಭದಲ್ಲಿ ನಗರದ ಜನರಿಗೆ ಆಶಾಭಾವ ಮೂಡಿಸಿದ್ದು ತಾರಸಿ ತೋಟದ ಕೃಷಿ. ಕಡಿಮೆ ಜಾಗದಲ್ಲಿ ಹಲವು ಸೊಪ್ಪು, ತರಕಾರಿಗಳನ್ನು ಹಾಗೂ ಹೂಗಿಡಗಳನ್ನು ಬೆಳೆದು, ಯಶಸ್ವಿಯಾದವರು ಹಲವರಿದ್ದಾರೆ. ಅದೇ ಜನರೀಗ ಪೌಷ್ಟಿಕಾಂಶಯುಕ್ತ ಹಾಗೂ ಸತ್ವಯುತವಾದ ಮೈಕ್ರೋಗ್ರೀನ್ಸ್ (ಮೊಳಕೆ ಸಸಿಗಳು) ಬೆಳೆಯುವತ್ತಲೂ ಒಲವು ತೋರುತ್ತಿದ್ದಾರೆ.
ನಮ್ಮ ಆಧುನಿಕ ಆಹಾರ ಪದ್ಧತಿಯೇ ಹೆಚ್ಚುತ್ತಿರುವ ಕಾಯಿಲೆಗಳಿಗೆ ಕಾರಣ ಎನ್ನುವುದು ಈಗ ಎಲ್ಲರಿಗೂ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಮೈಕ್ರೋಗ್ರೀನ್ಸ್ ಉತ್ತಮ ಹಾಗೂ ಆರೋಗ್ಯಕರ ಆಹಾರವಾಗಿದೆ. ಆಬಾಲ ವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡುವ ಪದಾರ್ಥವಾಗಿದೆ.
ತಾರಸಿಯಲ್ಲಿ ಸ್ಥಳಾವಕಾಶ ಇರುವ ಜನರು ಮೈಕ್ರೋ ಗ್ರೀನ್ಸ್ ಬೆಳೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಈಗ ಆರೋಗ್ಯದ ಕಾಳಜಿ ಹೊಂದಿರುವ ಜನರೆಲ್ಲ ತಾರಸಿಯಲ್ಲೇ ಅಥವಾ ಕಿಟಕಿಗಳ ಬದಿಯಲ್ಲೇ ಸಣ್ಣ ಸಣ್ಣ ಕುಂಡಗಳಲ್ಲಿ ಮೈಕ್ರೋಗ್ರೀನ್ಸ್ ಬೆಳೆಯುತ್ತಿದ್ದಾರೆ.
ಬೆಳೆಸುವ ವಿಧಾನ
ಮೈಕ್ರೊಗ್ರೀನ್ಸ್ ಬೆಳೆಯಲು ಹೆಚ್ಚು ಸಮಯವೇನೂ ಬೇಕಿಲ್ಲ. ಎರಡರಿಂದ ಮೂರು ಇಂಚು ಆಳವಿರುವ ಯಾವುದೇ ಟ್ರೇ ಅಥವಾ ಪಾತ್ರೆ, ಪ್ಲಾಸ್ಟಿಕ್ ಕಂಟೈನರ್ ಅಥವಾ ಮಣ್ಣಿನ ಕುಂಡಗಳಲ್ಲಿ ಮಣ್ಣು, ಗೊಬ್ಬರ ತುಂಬಿಸಿ, ನೀರುಹಾಕಿ ಹದಗೊಳಿಸಬೇಕು. ಅನಂತರ ಬೀಜಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ಕನಿಷ್ಠ ನಾಲ್ಕು ಗಂಟೆಗಳ ಕಾಲ ಸೂರ್ಯನ ಬೆಳಕು ಬೀಳುವ ಜಾಗದಲ್ಲಿರಿಸಬೇಕು. ನಿತ್ಯ ಬೆಳಗ್ಗೆ ಹಾಗೂ ಸಂಜೆ ನೀರು ಸಿಂಪಡಿಸಬೇಕು. ಬೀಜಗಳು ವಾರದೊಳಗೆ ಮೊಳಕೆಯೊಡೆದು, ಸುಮಾರು 20 ದಿನಗಳಲ್ಲಿ ಎಲೆಗಳನ್ನು ತಳೆಯುತ್ತವೆ. ಗಿಡಗಳು 2ರಿಂದ ಮೂರು ಇಂಚು ಬೆಳೆದಾಗ ಕೊಯ್ಲು ಮಾಡಿದರೆ ಸೂಕ್ತ. ಮಣ್ಣು ಒಳಗದಂತೆ ನಿಯಮಿತವಾಗಿ ನೀರು ಚಿಮುಕಿಸಲು ಮರೆಯಬೇಡಿ. ಕಳೆಗಿಡಗಳನ್ನು ಆಗಾಗ ಕೀಳುತ್ತಿದ್ದರೆ ಮೈಕ್ರೋಗ್ರೀನ್ಸ್ ಸಮೃದ್ಧವಾಗಿ ಬೆಳೆಯುತ್ತದೆ. ಒಂದು ಬಾರಿ ಗಿಡಗಳನ್ನು ಕತ್ತರಿಸಿದ ಮೇಲೆ ಮತ್ತೆ ಅದೇ ಮಣ್ಣನ್ನು ಹದ ಮಾಡಿಕೊಂಡು ಹೊಸ ಬೀಜಗಳನ್ನು ಬಿತ್ತಬಹುದು.
ಉತ್ತಮ ರುಚಿ
ಮೈಕ್ರೊಗ್ರೀನ್ಸ್ ರುಚಿ ವಿಶೇಷವಾಗಿದೆ, ಯಾವುದೇ ಆಹಾರದ ಜತೆಗೆ ಬಳಸಿದರೂ ವಿಶಿಷ್ಟ ಪರಿಮಳ ನೀಡುತ್ತದೆ. ಪೌಷ್ಟಿಕಾಂಶಗಳ ಆಗರವಾಗಿರುವ ಈ ಚಿಗುರುಗಳನ್ನು ಜನ ಸಲಾಡ್ ರೂಪದಲ್ಲಿ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ಇತ್ತೀಚೆಗೆ ರೆಸ್ಟೋರೆಂಟ್ ಗಳಲ್ಲೂ ಮೈಕ್ರೋಗ್ರೀನ್ಸ್ ಸಲಾಡ್ ಹೆಚ್ಚು ಜನಪ್ರಿಯವಾಗಿದೆ. ಅದು ವಿಟಮಿನ್, ಖನಿಜ ಮತ್ತು ಅಮಿನೋ ಆಸಿಡ್ ನ ಮೂಲವಾಗಿದೆ. ಇದರಲ್ಲಿ ಎಷ್ಟು ಪ್ರಮಾಣದ ಪೌಷ್ಟಿಕಾಂಶಗಳಿವೆ ಎನ್ನುವುದನ್ನು ಅರಿಯಲು ತೀವ್ರವಾದ ಸಂಶೋಧನೆಗಳು ಎನ್ನುತ್ತಾರೆ ಆಹಾರ ತಜ್ಞರು.
ಸತ್ವಯುತ ಆಹಾರ
ಆಹಾರ ತಜ್ಞರ ಪ್ರಕಾರ, ಮೈಕ್ರೋಗ್ರೀನ್ಸ್ ನೀರು ಹಾಗೂ ಮಣ್ಣಿನ ಸತ್ವಗಳನ್ನು ಹೀರಿಕೊಂಡು ಬೆಳೆಯುವ ಗಿಡವಾದ್ದರಿಂದ ಇದರಲ್ಲಿ ಪೌಷ್ಟಿಕಾಂಶದ ಸಾಂದ್ರತೆ ಹೇರಳವಾಗಿರುತ್ತದೆ. ಜೀವಸತ್ವಗಳೂ ಜಾಸ್ತಿ ಇರುತ್ತವೆ. ಲಘು ಪೋಷಕಾಂಶಗಳನ್ನು ಹೊಂದಲು ಇದನ್ನು ಬಳಸಬಹುದು. ಏಕದಳ ಧಾನ್ಯದ 100 ಗ್ರಾಂ ಮೊಳಕೆ ಸಸಿಗಳಲ್ಲಿ ಎರಡರಿಂದ ಮೂರು ಪ್ರೋಟೀನ್ ಅಂಶಗಳಿರುತ್ತವೆ. ಅದೇ 100 ಗ್ರಾಂ ಬೇಳೆಕಾಳು, ದ್ವಿದಳ ಧಾನ್ಯ ಅಥವಾ ಎಣ್ಣೆ ಬೀಜಗಳಿಂದ ಬೆಳೆಸಿದ ಸಸ್ಯಗಳಲ್ಲಿ 10ರಿಂದ 12 ಬಗೆಯ ಪ್ರೋಟೀನ್ ಸತ್ವಗಳಿರುತ್ತವೆ ಎಂದು ಹೇಳಲಾಗಿದೆ. ಹೀಗಾಗಿ, ಒಬ್ಬ ವ್ಯಕ್ತಿ ದಿನಕ್ಕೆ 50 ಗ್ರಾಂ ಮೈಕ್ರೋಗ್ರೀನ್ಸ್ ಅನ್ನು ಹಸಿಯಾಗಿ ಅಥವಾ ಸಲಾಡ್ ರೂಪದಲ್ಲಿ ಸೇವಿಸಿದರೆ ಸಾಕು.
ಏನೇನು ಬೆಳೆಯಬಹುದು?
ಸಾಸಿವೆ, ಸೂರ್ಯಕಾಂತಿ, ಕೆಂಪು ಹರಿವೆ, ಬಟಾಣಿ, ಕೊತ್ತಂಬರಿ, ಮೆಂತ್ಯೆ, ಬಿಳಿ ಸಾಸಿವೆ, ಮೂಲಂಗಿ, ಬೀಟ್ರೂಟ್, ಈರುಳ್ಳಿ, ಎಲೆಕೋಸು, ಹುರುಳಿ, ಪಾಲಕ್, ಸಬ್ಬಸಿಗೆ, ಕಡ್ಲೆಬೀಜ, ಕಡ್ಲೆಕಾಳು ಇತ್ಯಾದಿ ಬೀಜಗಳನ್ನು ಬಿತ್ತಿ ಸಾವಯವ ಪದ್ಧತಿಯಲ್ಲಿ ಹೆಚ್ಚು ಖರ್ಚು ಹಾಗೂ ಶ್ರಮವಿಲ್ಲದೆ ಮನೆಯಲ್ಲಿಯೇ ಮೈಕ್ರೊಗ್ರೀನ್ಸ್ ಬೆಳೆಯಬಹುದು.