ಒಂದು ಗಾಜಿನ ಪೆಟ್ಟಿಗೆ. ತಳದಲ್ಲಿ ಬಣ್ಣ ಬಣ್ಣದ ಕಲ್ಲುಗಳು ಹಾಗೂ ಚಿಪ್ಪುಗಳು. ಪೆಟ್ಟಿಗೆ ತುಂಬ ಸ್ವಚ್ಛವಾದ ನೀರು, ತೂಗು ಹಾಕಿರುವ ವಿದ್ಯುದ್ದೀಪ. ಆಮ್ಲಜನಕ ಪೂರೈಸುವ ಕೊಳವೆ. ಇದರ ನಡುವೆ ಲಾಲಿತ್ಯದಿಂದ ಆಡುವ ಬಗೆಬಗೆಯ ಆಲಂಕಾರಿಕ ಮೀನುಗಳು. ಅವುಗಳಿಗೆ ಆಹಾರ ಕೊಡುತ್ತಾ, ಆಟವಾಡುವುದನ್ನು ನೋಡುತ್ತಿದ್ದರೆ ಎಂತಹ ನೋವು ಅಥವಾ ಒತ್ತಡವೂ ಮಾಯ!
ಇದು ಅಂತಿಂಥ ಮಾಯಾಪೆಟ್ಟಿಗೆ ಅಲ್ಲ, ಅಕ್ವೇರಿಯಂ!
ಇಂಥ ಮೀನು ಸಾಕಣೆ ಕೆಲವರಿಗೆ ಉದ್ಯೋಗ, ಹಲವರಿಗೆ ಹವ್ಯಾಸ. ಆಕರ್ಷಕ ಅಕ್ವೇರಿಯಂ ಮನೆ ಅಥವಾ ಹೋಟೆಲ್ ಗಳ ಸೌಂದರ್ಯ ಹೆಚ್ಚಿಸುವವು. ವಾಸ್ತುವಿನ ಹೆಸರಿನಲ್ಲೂ ಅಕ್ವೇರಿಯಂ ಇಡುವುದುಂಟು. ಮಕ್ಕಳು ಇಷ್ಟಪಡುತ್ತಾರೆ ಎಂದು ಕೆಲವು ಹಿರಿಯರೂ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುತ್ತಾರೆ. ನಾನಾ ಜಾತಿ, ಬಣ್ಣ ಹಾಗೂ ಗಾತ್ರದ ಮೀನುಗಳು ತಮ್ಮ ದೇಹವನ್ನು ಬಳುಕಿಸುತ್ತಾ ಅಕ್ವೇರಿಯಂ ತುಂಬ ಚಲಿಸುತ್ತಿದ್ದರೆ, ನೀವು ಹಾಕಿದ ಆಹಾರ ತಿನ್ನಲು ಓಡೋಡಿ ಬಂದರೆ ಅದನ್ನು ನೋಡುತ್ತಾ ಕಾಲ ಕಳೆಯಬೇಕೆನಿಸುತ್ತದೆ.
ತಜ್ಞರ ಪ್ರಕಾರ, ಅಕ್ವೇರಿಯಂನಲ್ಲಿ ಮೀನುಗಳನ್ನು ವೀಕ್ಷಿಸುವುದರಿಂದ ರಕ್ತದೊತ್ತಡ, ದುಗುಡಗಳು ಕಡಿಮೆಯಾಗುತ್ತವೆ. ಮನಸ್ಸಿನಲ್ಲಿ ಪ್ರಶಾಂತ ಭಾವನೆಯನ್ನು ಮೂಡುತ್ತದೆ. ಮಕ್ಕಳಲ್ಲಿ ಈ ಹವ್ಯಾಸ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಅವರ ಬುದ್ಧಿಯನ್ನು ಚುರುಕಾಗಿಸುತ್ತದೆ. ಹೀಗಾಗಿ, ದೊಡ್ಡ ಮನೆಗಳಲ್ಲಿ ಗಾಜಿನ ಟ್ಯಾಂಕ್, ರೂಮ್ ಡಿವೈಡರ್, ವಾಲ್ ಮತ್ತು ಕೇಬಲ್ ಅಕ್ವೇರಿಯಂಗಳನ್ನು ಬಳಸಿದರೆ, ಸಣ್ಣ ಮನೆಗಳಲ್ಲಿ ದೊಡ್ಡ ಗಾಜಿನ ಬಾಟಲಿ ಮತ್ತು ಬೌಲ್ ಗಳಲ್ಲಿ ಮೀನುಗಳನ್ನು ಸಾಕುತ್ತಾರೆ. ಜಾಗದ ಕೊರತೆ ಉಳ್ಳವರಿಗೆ ಈಗ ಪೀಠೋಪಕರಣಗಳ ಜತೆಗೇ ಜೋಡಿಸಿರುವ ಅಕ್ವೇರಿಯಂಗಳೂ ಮಾರುಕಟ್ಟೆಗೆ ಬಂದಿವೆ.ಇವುಗಳನ್ನು ಟೀಪಾಯ್ ಕೆಳಗೆ, ಟೀವಿ ಸ್ಟ್ಯಾಂಡ್ ಮಧ್ಯೆ ಇರಿಸಬಹುದು. ವಾತಾವರಣಕ್ಕೆ ಅನುಗುಣವಾಗಿ ಈ ಮೀನುಗಳ ಆರೈಕೆಯ ಅಗತ್ಯವಿರುತ್ತದೆ.
ಬೇಸಗೆಯಲ್ಲಿ ರಕ್ಷಣೆ
ಮನುಷ್ಯರಂತೆ ಮೀನುಗಳಿಗೂ ಬಿಸಿಲಿನಿಂದ ರಕ್ಷಣೆಯ ಅಗತ್ಯವಿದೆ. ಸದಾ ತಂಪಾದ ನೀರಿನಲ್ಲಿ ಸ್ವಚ್ಛಂದವಾಗಿ ಜೀವಿಸಲು ಯತ್ನಿಸುವ ಮೀನುಗಳಿಗೆ ಬೇಸಗೆಯಲ್ಲೂ ಅದೇ ತಂಪು ವಾತಾವರಣವನ್ನು ಸೃಷ್ಟಿಸಬೇಕಿದೆ. ಹೀಗಾಗಿ, ಅಕ್ವೇರಿಯಂ ಅನ್ನು ಸೂರ್ಯನ ಕಿರಣಗಳು ನೇರವಾಗಿ ಬೀಳದ, ಹೀಟರ್, ಓವನ್ ಮುಂತಾದ ಸಾಧನಗಳಿಲ್ಲದ ಸ್ಥಳದಲ್ಲಿರಿಸಬೇಕು.
ಎಚ್ಚರಿಕೆ ಕ್ರಮಗಳೇನು?
ಮನೆಯ ಛಾವಣಿಗೆ ಶೀಟ್ ಹೊದಿಸಿದ್ದರೆ ಅಥವಾ ತಾರಸಿಯ ಎತ್ತರ ಕಡಿಮೆಯಿದ್ದರೆ ಬಿಸಿಲಿನ ತಾಪ ಮನೆಯೊಳಗೂ ಬರುತ್ತದೆ. ಆಗ ಫ್ಯಾನ್ ಹಾಕಿದ್ದರೂ ಬಿಸಿ ಗಾಳಿಯೇ ಬರುತ್ತಿರುತ್ತದೆ. ಇಂಥ ಮನೆಗಳಲ್ಲಿ ಅಕ್ವೇರಿಯಂಗಳ ಬಗ್ಗೆ ಕೊಂಚ ಹೆಚ್ಚು ಎಚ್ಚರಿಕೆ ವಹಿಸಬೇಕು. ಮೀನುಗಳಿಗೆ ಹಿತಕರ ವಾತಾವರಣ ಒದಗಿಸುವ ಸಲುವಾಗಿ ಆಗಾಗ ನೀರು ಬದಲಿಸುತ್ತಿರಬೇಕು. ಸಂಜೆ ಹೊತ್ತಿಗೆ ನೀರು ಬದಲಿಸಿದರೆ ಮೀನುಗಳಿಗೆ ಹೆಚ್ಚು ಅನುಕೂಲ. ಕಿಟಕಿಯ ಪಕ್ಕದಲ್ಲಿ ಅಕ್ವೇರಿಯಂ ಇರಿಸಿದ್ದರೆ ಕಿಟಕಿ ಮುಚ್ಚಿ, ಪರದೆ ಎಳೆದು ಬಿಸಿಲಿನ ಶಾಖ ತಾಗದಂತೆ ನೋಡಿಕೊಳ್ಳಬೇಕು. ಅಕ್ವೇರಿಯಂನಲ್ಲಿ ಬಣ್ಣ ಬಣ್ಣದ ಮೀನುಗಳು ಆಕರ್ಷಕವಾಗಿ ಕಾಣಲೆಂದು ಅದರಲ್ಲಿ ದೀಪವನ್ನು ಅಳವಡಿಸಿರುತ್ತಾರೆ. ಹಳೆಯ ಮಾದರಿ ದೀಪವಾಗಿದ್ದರೆ ಅದರಿಂದಲೂ ಶಾಖ ಉತ್ಪತ್ತಿಯಾಗುತ್ತದೆ. ದೀಪ ಯಾವುದೇ ಇದ್ದರೂ ಮಲಗುವ ಹೊತ್ತಲ್ಲಿ ಅದನ್ನು ಆರಿಸಿಬಿಟ್ಟರೆ ಮೀನುಗಳಿಗೆ ತಂಪಾದ ವಾತಾವರಣ ಸೃಷ್ಟಿಯಾಗುತ್ತದೆ.
ಎಷ್ಟು ಆಹಾರ ಕೊಡಬೇಕು?
ಮೀನುಗಳನ್ನು ಸಾಕುವ ಮುನ್ನ ಆರೈಕೆ ಕುರಿತಾದ ಮಾಹಿತಿ ಕೈಪಿಡಿಯನ್ನು ಓದಿಕೊಂಡಿದ್ದರೆ ಒಳಿತು. ಈ ಮೀನುಗಳಿಗೆ ಸಮಪ್ರಮಾಣದಲ್ಲಿ ಆಹಾರ ನೀಡಬೇಕು. ಕೆಲವು ಜಾತಿಯ ಮೀನುಗಳಿಗೆ ದಿನಕ್ಕೆರಡು ಬಾರಿ ಆಹಾರ ಹಾಕಿದರೆ ಸಾಕು. ಮರಿ ಮೀನುಗಳಿದ್ದರೆ ಸ್ವಲ್ಪ ಜಾಸ್ತಿ ಆಹಾರ ಬೇಕಾಗುತ್ತದೆ. ಕೆಲವು ಮೀನುಗಳು ತಳದಲ್ಲಿ ನಿಲ್ಲುವ, ಇನ್ನೂ ಕೆಲವು ನೀರಿನ ಮೇಲೆ ತೇಲುವ ಆಹಾರವನ್ನು ತಿನ್ನಲು ಇಷ್ಟಪಡುತ್ತವೆ. ನಿಗದಿತ ಸಮಯಕ್ಕೆ ಅವುಗಳಿಗೆ ಆಹಾರವುಣಿಸಬೇಕು.
ತಾಳ್ಮೆಯಿಂದ ನಿರ್ವಹಣೆ
ಟ್ಯಾಂಕ್ ಗಳು ಅಗಲವಾಗಿದ್ದರೆ ಮೀನುಗಳಿಗೆ ಓಡಾಡಲು ಹೆಚ್ಚು ಜಾಗ ಸಿಗುತ್ತದೆ. ಅದನ್ನು ಸ್ವಚ್ಛಗೊಳಿಸುವುದೂ ಸುಲಭ. ವಾರಕ್ಕೊಮ್ಮೆಯಾದರೂ ಅಕ್ವೇರಿಯಂ ಸ್ವಚ್ಛಗೊಳಿಸಬೇಕು. ಮಾಂಸಾಹಾರಿ ಜಾತಿಯ ಕ್ಯಾಟ್ ಫಿಶ್ ಗಳಿದ್ದರೆ ಟ್ಯಾಂಕ್ ಸ್ವಚ್ಛಗೊಳಿಸುತ್ತವೆ. ನೀರಿನ ಕೊಳವೆಗೆ ಫಿಲ್ಟರ್ ಅಳವಡಿಸಿದ್ದರೆ ನೀರನ್ನು ವಾರಕ್ಕೊಮ್ಮೆ ಬದಲಿಸಿದರೆ ಸಾಕು. ಒಂದೇ ಸಲಕ್ಕೆ ಪೂರ್ತಿಯಾಗಿ ತೆಗೆಯಬಾರದು. ಶೇ. 20-30 ಭಾಗ ನೀರನ್ನು ಮಾತ್ರ ಬದಲಿಸಬೇಕು. ಇಲ್ಲದಿದ್ದರೆ ಮೀನುಗಳಿಗೆ ಪ್ರಾಣಾಪಾಯವಾಗುವ ಸಂಭವ ಇರುತ್ತದೆ. ಟ್ಯಾಂಕ್ ತೊಳೆಯುವ ಮುನ್ನ ಮೀನುಗಳನ್ನು ಹೊರತೆಗೆದು, ನೀರಿರುವ ಬಕೆಟ್ ನಲ್ಲಿ ಬಿಡಬೇಕು. ಪಾಚಿ ತೆಗೆಯುವ ಪ್ಯಾಡ್ ನಿಂದ ಫಿಶ್ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಕೆಳಭಾಗದ ಕಲ್ಲುಗಳು ಹಾಗೂ ಇತರ ವಸ್ತುಗಳಲ್ಲೇ ಮೀನುಗಳ ಮಲ ಇತ್ಯಾದಿ ತ್ಯಾಜ್ಯಗಳು ಸೇರಿಕೊಂಡಿರುವುದರಿಂದ ತುಸು ರಭಸದಿಂದ ಹರಿಯುವ ನೀರಿನ ಅಡಿಯಲ್ಲಿಟ್ಟು ತೊಳೆಯಬೇಕು. ಗ್ಲಾಸ್ ಶೈನರ್ ಬಳಸುವುದಿದ್ದರೆ ಹೊರಭಾಗದಲ್ಲಿ ಮಾತ್ರ ಬಳಸಿ. ಒಳಭಾಗದಲ್ಲಿ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸಬೇಡಿ. ಇದೆಲ್ಲ ತಾಳ್ಮೆಯಿಂದ ಮಾಡಬೇಕಾದ ಕೆಲಸಗಳು. ಅಕ್ವೇರಿಯಂ ಒಳಗೆ ಕೃತಕ ಬೆಳಕನ್ನು ಹರಿಸುವಾಗ ಎಚ್ಚರವಿರಬೇಕು. ವಿದ್ಯುತ್ ಸೋರಿಕೆ ಇದ್ದರೆ ಮೀನುಗಳ ಜೀವಕ್ಕೆ ಅಪಾಯವಿದೆ.
ಯಾವ ಮೀನು ಸಾಕಬೇಕು?
ಅಕ್ವೇರಿಯಂನೊಳಗೆ ಟೆಟ್ರಾ, ರೇನ್ ಬೋ ಹಾಗೂ ಕ್ಯಾಟ್ ಫಿಶ್ ಗಳನ್ನು ಇಟ್ಟರೆ ಚೆನ್ನಾಗಿ ಕಾಣುತ್ತವೆ. ಬೇರೆ ಎಷ್ಟೇ ಜಾತಿಯ ಮೀನುಗಳಿದ್ದರೂ ಗೋಲ್ಡ್ ಫಿಶ್ ಒಂದನ್ನು ಆಯ್ಕೆ ಮಾಡಿಕೊಳ್ಳಲು ಮರೆಯಬೇಡಿ. ಈ ಮೀನು ಎಲ್ಲರನ್ನೂ ಆಕರ್ಷಿಸುತ್ತದೆ. ಮೀನುಗಳ ಜೊತೆಗೆ ಅಲಂಕಾರಿಕ ಸಸ್ಯ, ಬೆಣಚು ಕಲ್ಲುಗಳು, ಕಾರಲ್ ದಿಣ್ಣೆಗಳನ್ನು ಇಟ್ಟರೂ ಆಕರ್ಷಕವಾಗಿರುತ್ತದೆ.