ಮನೆ ಆವರಣದ ಮರಗಳ ಕೊಂಬೆ ಮೇಲೆ, ತಾರಸಿಯ ಅಂಚಿನಲ್ಲಿ, ಕಿಟಕಿಗಳ ಪಕ್ಕದಲ್ಲಿ ಆಗಾಗ ಜೇನು ಗೂಡು ಕಟ್ಟುವುದುಂಟು. ಆಗೆಲ್ಲ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ?
ಹಲವು ಔಷಧೀಯ ಗುಣಗಳ ಆಗರವೂ ಆಗಿರುವ ಜೇನುತುಪ್ಪ ಸವಿಯಲು ಬಲು ರುಚಿ. ಆದರೆ, ಆಗಾಗ ಜೇನುಹುಳ ಕಡಿಯುವುದುಂಟು. ಆಗೆಲ್ಲ ಒಂದು ದಿನವಿಡೀ ನೋವು ಅನುಭವಿಸಿದಾಗ, ಈ ಜನ್ಮದಲ್ಲಿ ಮತ್ತೊಮ್ಮೆ ಜೇನಿನ ಸಹವಾಸ ಬೇಡ ಎಂದು ಅಂದುಕೊಳ್ಳುವುದೂ ಇದೆ.
ತೊಟ್ಟಿಯಿಂದ ನೀರು ಸೋರುತ್ತಿದ್ದರೆ, ಮನೆ ಪಕ್ಕ ಕಾರಂಜಿ ಇದ್ದರೆ, ಹೂವು, ಹಣ್ಣು ಹಾಗೂ ತರಕಾರಿಗಳ ಗಿಡಗಳನ್ನು ಬೆಳೆಸಿದ್ದರೆ ಜೇನು ಸಹಜವಾಗಿಯೇ ಆಕರ್ಷಿತವಾಗಿ ಮನೆ ಪಕ್ಕ ಯಾವುದಾದರೊಂದು ಸೂಕ್ತ ಸ್ಥಳದಲ್ಲಿ ಗೂಡು ಕಟ್ಟುತ್ತದೆ. ಜೇನು ಹುಳಗಳು ನಿಮ್ಮ ಮನೆಯೊಳಗೆ ಅಥವಾ ಪರಿಸರದಲ್ಲಿ ಹಾರಾಡುತ್ತಿದ್ದರೆ ಪಕ್ಕದಲ್ಲಿ ಎಲ್ಲೋ ಒಂದು ಕಡೆ ಅದು ಗೂಡು ಕಟ್ಟಿದೆ ಎಂದೇ ಅರ್ಥ. ಕೆಲವು ಜೇನು ದಣಿವಾರಿಸಿಕೊಳ್ಳಲು ಕೊಂಬೆಯ ಮೇಲೆ ಕೂರುವುದುಂಟು. ಇವು ಒಂದೆರಡು ದಿನ ಮಾತ್ರ ನಿಲ್ಲುತ್ತವೆ. ಗೂಡು ಕಟ್ಟದೆ ಹಾರಿ ಹೋಗುತ್ತವೆ.
ಆದರೆ, ಜೇನು ಒಂದು ಸಲ ಗೂಡು ಕಟ್ಟಿತೆಂದರೆ ಅದರಲ್ಲಿ ಸಂಸಾರ ಹೂಡಿ, ಮರಿ ಮಾಡಿ, ಜೇನು ಉತ್ಪಾದಿಸಿ, ಕೊನೆಗೆ ಹುಟ್ಟುಗಳನ್ನೆಲ್ಲ ಖಾಲಿ ಮಾಡಿಯೇ ಅಲ್ಲಿಂದ ಜಾಗ ಬದಲಾಯಿಸುವುದು. ಜೇನು ಕಟ್ಟಿತೆಂದು ಬೆಂಕಿ ಅಥವಾ ಹೊಗೆ ಹಾಕಿ ಗೂಡನ್ನು ಸುಡುವುದು ಸರ್ವಥಾ ಸಲ್ಲದು. ಸ್ವಭಾವತಃ ಅಪಾಯಕಾರಿಯಲ್ಲದ ಜೇನು ಪರಾಗಸ್ಪರ್ಶದ ಮೂಲಕ ಸಸ್ಯಸಂತತಿ ಹಾಗೂ ಫಲ ಸಮೃದ್ಧಿಗೆ ಕಾರಣವಾಗುತ್ತದೆ.
ಒಂದೊಮ್ಮೆ ಜೇನನ್ನು ಓಡಿಸಲೇಬೇಕಾದ ಅನಿವಾರ್ಯತೆ ಇದ್ದರೆ ಜೇನುತುಪ್ಪವನ್ನು ಸಂಗ್ರಹಿಸುವಾಗ ಅನುಸರಿಸುವ ವಿಧಾನವೇ ಸೂಕ್ತ. ಅದು ಅತಿ ಸುಲಭವಾದುದು ಕೂಡ. ಗೂಡಿನ ಸಮೀಪ ಧೂಪ ಅಥವಾ ಹೊಗೆ ಹಾಕಿದರೆ ಜೇನು ಹುಳಗಳೆಲ್ಲ ಓಡಿ ಹೋಗುತ್ತವೆ. ಆಮೇಲೆ ಗೂಡನ್ನು ತೆಗೆದುಬಿಟ್ಟರೆ ಅವು ಪುನಃ ಬರುವುದಿಲ್ಲ. ಗೂಡು ಉಳಿದಿದ್ದರೆ ಮಾತ್ರ ಅವು ಮರಳಿ ಬರುತ್ತವೆ. ಇನ್ನೊಂದು ಸುಲಭ ಉಪಾಯವೆಂದರೆ, ನುರಿತ ಜೇನು ಕೃಷಿಕರು ಆ ಹುಳಗಳನ್ನೆಲ್ಲ ಸುರಕ್ಷಿತವಾಗಿ ಹಿಡಿದು ಪೆಟ್ಟಿಗೆಗೆ ಸ್ಥಳಾಂತರಿಸುವರು. ಜೇನನ್ನು ಹಿಡಿಯುವಾಗ ಅಥವಾ ಓಡಿಸುವಾಗ ಅವು ಕಚ್ಚದಂತೆ ದಪ್ಪನೆಯ ಬಟ್ಟೆಗಳನ್ನು ಮುಖಕ್ಕೆ ಹೆಲ್ಮೆಟ್, ಕೈಗವಸು ಇತ್ಯಾದಿಗಳನ್ನು ಧರಿಸಿರಬೇಕು. ಜೇನು ಹುಳಗಳು ಬೆಳಗ್ಗೆ ಹಾಗೂ ಸಂಜೆಯ ಹೊತ್ತಿಗೆ ಗೂಡಿನಲ್ಲೇ ಇರುವುದರಿಂದ ಆ ಹೊತ್ತಿಗೆ ಉಪಾಯವಾಗಿ ಅವುಗಳನ್ನು ಹಿಡಿಯುವುದಾಗಲೀ, ಓಡಿಸುವುದಾಗಲೀ ಮಾಡಬೇಕು. ಹೀಗೆ ಮಾಡುವಾಗ ಸುತ್ತ ಮಕ್ಕಳು ಅಥವಾ ಬೇರೆ ಯಾರೂ ಇಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಓಡಿ ಹೋಗುವ ಹುಳಗಳು ಅವರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಸಾಧ್ಯವಾದಷ್ಟು ಕತ್ತಲಿನ ಸಮಯದಲ್ಲಿ ಈ ಕಾರ್ಯಾಚರಣೆ ಮಾಡುವುದು ಸೂಕ್ತ. ಕೆಲವರು ಸಾಬೂನಿನ ನೊರೆ ಬೆರೆಸಿದ ನೀರನ್ನು ಗೂಡಿಗೆ ಚಿಮುಕಿಸಿ ಹುಳಗಳನ್ನು ಓಡಿಸುತ್ತಾರೆ. ಸಾಬೂನಿನಲ್ಲಿ ರಾಸಾಯನಿಕಗಳು ಇರುವುದರಿಂದ ಇದು ಹುಳಗಳಿಗೆ ಸುರಕ್ಷಿತವಲ್ಲ.