ನಮ್ಮದೊಂಥರ ವಿಚಿತ್ರ ಸ್ಥಿತಿ. ಮಳೆಗಾಲದಲ್ಲಿ ಬಿಡದೆ ಮಳೆ ಸುರಿಯುತ್ತಿರುವಾಗ, ಪ್ರವಾಹ ಉಕ್ಕೇರಿ ಹರಿಯುತ್ತಿರುವಾಗ ನೀರಿನ ಬಗ್ಗೆ ಕಾಳಜಿಯೇ ಇಲ್ಲ. ಆದರೆ, ಬೇಸಗೆ ಬಂತೆಂದರೆ ನೀರಿಗಾಗಿ ಹಾಹಾಕಾರ. ಜಲಸಂರಕ್ಷಣೆಯ ಕುರಿತು ಉದ್ದುದ್ದ ಭಾಷಣ ಮಾಡುತ್ತೇವೆ. ವಾಸ್ತವದಲ್ಲಿ ಎಷ್ಟು ಜನ ಜಲ ಸಂರಕ್ಷಣೆಗೆ ಒತ್ತು ಕೊಟ್ಟಿದ್ದೇವೆ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ.
ಸರಕಾರವೂ ಎಚ್ಚೆತ್ತುಕೊಂಡಿದ್ದು, ಪ್ರಸ್ತುತ ನಗರದಲ್ಲಿ 30x40 ಅಳತೆಯ ನಿವೇಶನಗಳಲ್ಲಿ ನಿರ್ಮಾಣಗೊಳ್ಳುವ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹವನ್ನು ಕಡ್ಡಾಯಗೊಳಿಸಿದೆ. ಹೊಸದಾಗಿ ಕಟ್ಟಡ ನಿರ್ವಿುಸುವ ಸಂದರ್ಭದಲ್ಲಿಯೇ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ವೆಚ್ಚವನ್ನು ಕಡಿಮೆಗೊಳಿಸಬಹುದಾಗಿದೆ ಎಂಬುದು ತಜ್ಞರ ಸಲಹೆ. ಹಳೆಯ ಕಟ್ಟಡಗಳಿಗೂ ಕಡಿಮೆ ವೆಚ್ಚದಲ್ಲಿ ಮಳೆನೀರು ಸಂಗ್ರಹ ಸಾಧನವನ್ನು ಅಳವಡಿಸಿಕೊಳ್ಳವವರಿಗೆ ಕೆಲವು ಮಾಹಿತಿಗಳು ಇಲ್ಲಿವೆ.
ಸ್ವಾವಲಂಬಿಯಾದ ಯಾರಾದರೂ ಮೊದಲು ಯೋಚಿಸುವುದು ಸ್ವಂತಕ್ಕೊಂದು ಸೂರು ಹೊಂದಬೇಕೆಂಬುದಾಗಿ. ಆದರೆ, ಮನೆಯೊಂದಿಗೆ ನೀರು ಹಾಗೂ ವಿದ್ಯುತ್ತಿನ ವಿಚಾರದಲ್ಲೂ ನಾವು ಸ್ವಾವಲಂಬಿಗಳಾಗಲು ಅವಕಾಶವಿದೆ, ಅದೂ ಅತ್ಯಂತ ಕಡಿಮೆ ವೆಚ್ಚದಲ್ಲಿ!
ಮನೆಯ ಛಾವಣಿ ಹಾಗೂ ಪರಿಸರವನ್ನೇ ಬಳಸಿಕೊಂಡು ಮಳೆನೀರು ಸಂಗ್ರಹ ಮಾಡಿಕೊಳ್ಳಬಹುದು. ಅದನ್ನು ಶುದ್ಧೀಕರಿಸಿ ಮನೆಯ ಬಾವಿಗೆ ಮರುಪೂರಣ ಮಾಡಿದರೆ, ಎಂತಹ ಬೇಸಗೆಯಲ್ಲೂ ನೀರಿನ ಅಭಾವವಿಲ್ಲದೆ ನೆಮ್ಮದಿಯಿಂದ ದಿನ ಕಳೆಯಬಹುದು. ಸೌರಶಕ್ತಿಯನ್ನು ಅಳವಡಿಸಿಕೊಳ್ಳುವುದು ಒಂದು ಸಲಕ್ಕೆ ವೆಚ್ಚದಾಯಕವಾಗಿ ಕಂಡರೂ ನಮಗೆ ವಿದ್ಯುತ್ ಬಿಲ್ ನಲ್ಲಿ ಉಳಿತಾಯವಾಗುತ್ತದೆ, ಸಬ್ಸಿಡಿಯೂ ಸಿಗುತ್ತದೆ. ಸ್ನಾನಕ್ಕೆ ಬಿಸಿನೀರು ಮಾಡಿಕೊಳ್ಳಲೂ ಅವಕಾಶವಿದೆ. ಪ್ರತಿ ತಿಂಗಳೂ ವಿದ್ಯುತ್ ಶುಲ್ಕದ ರೂಪದಲ್ಲಿ ಹಣ ಪಾವತಿಸುವುದು ತಪ್ಪುತ್ತದೆ. ನಮ್ಮ ಇತಿ-ಮಿತಿಯಲ್ಲೇ ಇವುಗಳ ಅಳವಡಿಕೆ ಸಾಧ್ಯ. ಬೇಕಾಗಿರುವುದು ಹೆಚ್ಚು ಹಣವಲ್ಲ, ಅದಮ್ಯ ಇಚ್ಛಾಶಕ್ತಿ.
ದುಬಾರಿ ವೆಚ್ಚದಲ್ಲಿ ಮನೆ ಕಟ್ಟಿಸಿಕೊಂಡು, ಅಲ್ಪ ವೆಚ್ಚದ ಮಳೆನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳಲು ಹಿಂದೇಟು ಹಾಕಿದರೆ ಹೇಗೆ? ಪ್ರತೀ ತಿಂಗಳು ಜಲಮಂಡಳಿಗೆ ಅಥವಾ ಪಂಚಾಯತ್ ಗೆ ನೀರಿನ ಬಿಲ್ ಪಾವತಿಸುವುದು ತಪ್ಪುತ್ತದಲ್ಲ ಎಂದು ಯೋಚಿಸಬಾರದೇಕೆ? ಸರಕಾರದ ಇಲಾಖೆಗಳೇ ನಿಮಗೆ ಮಳೆನೀರು ಸಂಗ್ರಹದ ಬಹುಪಾಲು ಯೋಚನೆಗಳನ್ನು ನೀಡುತ್ತವೆ.
ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಕಟ್ಟಡಗಳಿಗೆ ವಿಧಿಸುವ ದಂಡದ ಪ್ರಮಾಣವನ್ನು ಜಲಮಂಡಲಿ ಇತ್ತೀಚೆಗಷ್ಟೇ ಹೆಚ್ಚಿಸಿದೆ. ಸಾವಿರಾರು ರೂಪಾಯಿಗಳನ್ನು ದಂಡ ರೂಪದಲ್ಲಿ ಪಾವತಿಸುವ ಬದಲು ಸುಮಾರು 10 ಸಾವಿರ ರೂ. ಹೂಡಿಕೆ ಮಾಡಿದರೆ, ಮಳೆಗಾಲದಲ್ಲಿ ನಿಮ್ಮ ಬಾವಿ ಅಥವಾ ಕೊಳವೆಬಾವಿ ತುಂಬುತ್ತದೆ, ಬೇಸಗೆಯಲ್ಲಿ ಅದು ಬತ್ತುವುದೇ ಇಲ್ಲ. ಸುತ್ತಲೂ ಅಂತರ್ಜಲ ವೃದ್ಧಿಗೆ ಅದು ಕಾರಣವಾಗುತ್ತದೆ. ಅದಕ್ಕಾಗಿ ಸ್ಥಳೀಯ ಮಟ್ಟದಲ್ಲೇ ತಂತ್ರಜ್ಞಾನ ಲಭ್ಯವಿದ್ದು, ಬಹುತೇಕ ಯಶಸ್ವಿಯೂ ಆಗಿದೆ.
ಈ ಹಿಂದಿನಂತೆ ಹಂಚುಗಳನ್ನು ಬಳಸಿ. ಇಳಿಜಾರಾದ ಛಾವಣಿ ನಿರ್ಮಿಸುವ ಪದ್ಧತಿ ಇತ್ತೀಚೆಗೆ ಮರೆಯಾಗುತ್ತಿದೆ. ಆರ್.ಸಿ.ಸಿ. ಕಟ್ಟಡಗಳನ್ನೇ ಬಹುತೇಕ ನಿರ್ಮಿಸುತ್ತಿದ್ದು, ಅವುಗಳ ಛಾವಣಿ ಸಮತಟ್ಟಾಗಿರುತ್ತದೆ. ಈ ಕಟ್ಟಡಗಳು ನೆಲಮಟ್ಟದಲ್ಲಿ ನೀರಿನ ಟ್ಯಾಂಕ್ ಗಳನ್ನೂ ಹೊಂದಿರುತ್ತವೆ. ಇವುಗಳು ಸಾವಿರಾರು ಲೀ. ನೀರು ಸಂಗ್ರಹಣ ಸಾಮರ್ಥ್ಯವನ್ನು ಹೊಂದಿರುತ್ತವೆ.
ಕನಿಷ್ಠ ವೆಚ್ಚದಲ್ಲಿ ಅಳವಡಿಕೆ ಹೇಗೆ ?
ಮನೆಯಲ್ಲಿ ಈಗಾಗಲೇ ಸಂಪ್ ಇದ್ದರೆ ಅದನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಮಳೆನೀರು ಅದಕ್ಕೆ ಸೇರುವ ಹಾಗೆ ಮಾಡಬಹುದು. ಅಥವಾ ಉತ್ತಮ ಗುಣಮಟ್ಟದ ಫಿಲ್ಟರ್ ಅಳವಡಿಸಿದರೆ, ಶುದ್ಧ ನೀರು ನೇರವಾಗಿ ಸಂಪ್ ಸೇರಿ, ಬಳಕೆಗೆ ಲಭ್ಯವಾಗುತ್ತದೆ. ನಿಮಗೆ ಗೊತ್ತಿರಬಹುದು, ನಮಗೆ ನೀರು ಅತ್ಯಂತ ಶುದ್ಧ ರೂಪದಲ್ಲಿ ಸಿಗುವುದು ಮಳೆಯಿಂದಲೇ. 30x40 ಅಡಿ ಅಳತೆಯಲ್ಲಿ ನಿರ್ವಣಗೊಂಡಿರುವ ಕಟ್ಟಡದಲ್ಲಿ ಶೇ. 100 ಮಳೆನೀರು ಸಂಗ್ರಹ ಅಳವಡಿಸುವುದಾದರೆ ಮತ್ತು ಅವುಗಳಲ್ಲಿ ಈಗಾಗಲೇ ಸಂಪ್ ಇದ್ದರೆ, ವೆಚ್ಚ ಹತ್ತು ಸಾವಿರ ರೂ.ಗಳನ್ನು ಮೀರುವುದಿಲ್ಲ. ಇದರಿಂದ 1 ಲಕ್ಷ ಲೀಟರ್ ವರೆಗೆ ನೀರು ಸಂಗ್ರಹಿಸಲು ಸಾಧ್ಯವಿದೆ. ಈ ತಂತ್ರಜ್ಞಾನ ಸರಳವಾಗಿದ್ದು, ದುಬಾರಿಯೂ ಅಲ್ಲ. ಛಾವಣಿಗೆ ಕೇವಲ ಪೈಪ್ ಲೈನ್ ಮತ್ತು ಸಂಪ್ ಗೆ ಸೇರುವ ಮೊದಲು ಫಿಲ್ಟರ್ ಅಳವಡಿಸಿದರೆ ಸಾಕು. ಮನೆಯಲ್ಲಿ ಹೊಸದಾಗಿ ಸಂಪ್ ನಿರ್ಮಿಸುವುದಿದ್ದರೆ ಸುಮಾರು 40 ಸಾವಿರ ರೂ. ಖರ್ಚಾಗುತ್ತದೆ. ಸಂಪ್ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗುತ್ತಿದ್ದರೆ. ಮನೆಯಂಗಳದಲ್ಲಿ ಇಂಗುಗುಂಡಿ ನಿರ್ಮಿಸಿ, ಅಂತರ್ಜಲ ಮರುಪೂರಣ ಮಾಡಿಕೊಳ್ಳಬಹುದು. ಇದರಿಂದ ಮನೆಯ ಬಾವಿ ಅಥವಾ ಕೊಳವೆಬಾವಿ ಚಾರ್ಜ್ ಆಗುತ್ತದೆ.
ಮಾಹಿತಿಗೆ ಇಲ್ಲಿ ಭೇಟಿ ಕೊಡಿ
ಬೆಂಗಳೂರಿನಲ್ಲಿ ಮಳೆನೀರು ಸಂಗ್ರಹದ ಕುರಿತು ಮಾಹಿತಿ ನೀಡುವುದಕ್ಕಾಗಿಯೇ ಜಲಮಂಡಳಿ ಎರಡು ಕೇಂದ್ರಗಳನ್ನು ಸ್ಥಾಪಿಸಿದೆ. ಜಯನಗರ ಐದನೇ ಬ್ಲಾಕ್ ನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ 26 ಪ್ರಾತ್ಯಕ್ಷಿಕೆಗಳು ಲಭ್ಯವಿವೆ. ಈ ಕೇಂದ್ರದಲ್ಲಿ ಆಸಕ್ತರಿಗೆ ಮಾಹಿತಿ ನೀಡಲು ಇಬ್ಬರು ಪೂರ್ಣಾವಧಿ ಎಂಜಿನಿಯರ್ ಗಳು ಕೂಡ ಇರುತ್ತಾರೆ. ಈ ಕೇಂದ್ರಕ್ಕೆ ಭೇಟಿ ನೀಡಿದವರ ಪೈಕಿ ಶೇ. 70ರಷ್ಟು ಜನರು ತಮ್ಮ ಮನೆಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಯನ್ನುಅಳವಡಿಸಿಕೊಂಡಿದ್ದಾರೆ ಎನ್ನುವುದು ಉಲ್ಲೇಖನೀಯ. ನಮ್ಮ ಬಜೆಟ್ ಗೆ ತಕ್ಕಂತೆ ಯಾವೆಲ್ಲ ಮಾದರಿಯಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಪ್ರಾತ್ಯಕ್ಷಿಕೆಯೊಂದಿಗೆ ನೀಡುತ್ತಿರುವ ಕಾರಣ, ಅದು ಪರಿಣಾಮಕಾರಿ ಎನಿಸಿದೆ. ಮತ್ತೊಂದು ಕೇಂದ್ರ ಮಲ್ಲೇಶ್ವರಂ ಐಐಎಸ್ಸಿ ಆವರಣದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿದ್ದು (ಕೆಎಸ್ಸಿಎಸ್ಟಿ), ಅಲ್ಲೂ ಮಳೆನೀರು ಸಂಗ್ರಹದ ಮಾಹಿತಿ ಒದಗಿಸಲಾಗುತ್ತಿದೆ.