ಹಣಕ್ಕಾಗಿ ದುಡಿದರೆ ಅದು ನಮಗಾಗಿ ದುಡಿಯುತ್ತದೆ ಎನ್ನುವ ಮಾತಿದೆ. ಹೀಗಾಗಿ, ಹೂಡಿಕೆ ಮಾಡುವಾಗ ಲೆಕ್ಕಾಚಾರ ಮುಖ್ಯವಾಗುತ್ತದೆ. ಪ್ರಸ್ತುತ ಹಣಕಾಸಿನ ಸ್ಥಿತಿ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹಣಕಾಸಿನ ಉದ್ದೇಶಗಳು, ತೆರಿಗೆ ಮುಂತಾದ ಸಂಗತಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಆಕರ್ಷಕ ಹೂಡಿಕೆ ಅವಕಾಶಗಳ ಬಗ್ಗೆ ನಾವು ಆಸಕ್ತಿ ವಹಿಸುವುದು ಅಗತ್ಯ.
ಭವಿಷ್ಯದ ಬಗ್ಗೆ ನಾವು ಯೋಜನೆ ರೂಪಿಸುವಾಗ ಯಾವುದೇ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆಯೂ ಯೋಚಿಸಬೇಕು. ಸಾಮಾನ್ಯವಾಗಿ ಗ್ರಾಹಕರು ಬ್ಯಾಂಕ್ ಅಥವಾ ಅಂಚೆ ಕಚೇರಿಯ ಉಳಿತಾಯ ಖಾತೆಗಳಲ್ಲಿ ಮುಂದಿನ ಮೂರು ತಿಂಗಳಿಗೆ ತಗಲುವ ವೆಚ್ಚದಷ್ಟು ಹಣವನ್ನು ಇಡುತ್ತಾರೆ. ನಿಗದಿತ ಠೇವಣಿ ಇಟ್ಟರೆ ಆಪತ್ಕಾಲದಲ್ಲಿ ಬಿಡಿಸಿಕೊಳ್ಳುವುದು ಕಷ್ಟ, ಅದಕ್ಕಾಗಿ ಬ್ಯಾಂಕಿಗೇ ಹೋಗಬೇಕಾಗುತ್ತದೆ. ಉಳಿತಾಯ ಖಾತೆಯಾದರೆ ಹಣ ಠೇವಣಿ ಇಡುವುದು ಹಾಗೂ ಹಿಂಪಡೆಯುವುದು ಸುಲಭ. ಚೆಕ್ ಮೂಲಕವೂ ಪಾವತಿಸಬಹುದು ಅಥವಾ ಎಟಿಎಂ ಕಾರ್ಡ್ ಇದ್ದರೆ ಬ್ಯಾಂಕ್ ಅವಧಿ ಮುಗಿದ ಮೇಲೂ, ರಜಾದಿನಗಳಲ್ಲೂ ಹಣ ಡ್ರಾ ಮಾಡಬಹುದು. ಈಗ ಯುಪಿಐ ವ್ಯವಸ್ಥೆಯ ಮೂಲಕ ಮೊಬೈಲ್ ಗಳಲ್ಲೇ ಖಾತೆಯನ್ನು ನಿರ್ವಹಿಸಿ, ಹಣ ವರ್ಗಾವಣೆಯಂತಹ ಸೇವೆಯನ್ನೂ ನಿಃಶುಲ್ಕವಾಗಿ ಪಡೆಯಬಹುದು. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಉಳಿತಾಯ ಖಾತೆ ಅತ್ಯಂತ ವಿಶ್ವಾಸರ್ಹತೆ ಹಾಗೂ ಜನಪ್ರಿಯತೆ ಉಳಿಸಿಕೊಂಡಿದೆ. ಜತೆಗೆ ವಿಮೆಯಂತಹ ಹಲವು ಸೌಲಭ್ಯಗಳನ್ನು ಗ್ರಾಹಕರಿಗೆ ಕಲ್ಪಿಸಿವೆ.
ಪ್ರಸ್ತುತ ಸನ್ನಿವೇಶದಲ್ಲಿ ಈ ಸರಳ ಹಣಕಾಸಿನ ವ್ಯವಸ್ಥೆ ಹೆಚ್ಚು ಜನಪ್ರಿಯವಾಗುತ್ತಿದೆ. ತಮಗೆ ಬೇಕಾದಾಗ ಹಣ ಪಡೆಯುವ ಸ್ವಾತಂತ್ರ್ಯ ಮತ್ತು ಖಾತೆಯಲ್ಲಿದ್ದ ಹಣಕ್ಕೆ ಒಂದಿಷ್ಟು ಬಡ್ಡಿಯೂ ದೊರೆಯುವುದರಿಂದ ಉಳಿತಾಯ ಖಾತೆ ಬಗ್ಗೆ ಗ್ರಾಹಕರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಗ್ರಾಹಕರು ಈಗ ಬ್ಯಾಂಕ್ ಗೆ ಭೇಟಿ ನೀಡಬೇಕಾಗಿಲ್ಲ ಅಥವಾ ಸಂಕೀರ್ಣವಾದ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಕೇವಲ 5 ನಿಮಿಷಗಳಲ್ಲಿ ಯಾವುದೇ ಸ್ಥಳದಿಂದ ಸ್ಮಾರ್ಟ್ ಫೋನ್ ಮೂಲಕವೇ ಬ್ಯಾಂಕ್ ಖಾತೆ ತೆರೆಯಬಹುದು. ತೆರಿಗೆ ಪಾವತಿ ಮಾಡಬಹುದು.
ಗ್ರಾಹಕರು ಉಳಿತಾಯ ಖಾತೆ ಮೂಲಕ ಜಾಣತನದಿಂದ ವ್ಯವಹಾರ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. ಇತ್ತೀಚಿಗೆ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಹಾಗೂ ಅಂಚೆ ಕಚೇರಿ ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಶೇಕಡಾ 3.5ರಷ್ಟು ಕಡಿಮೆ ಮಾಡಿರುವುದು ನಿಜ. ಆದರೂ, ಹಲವು ಬ್ಯಾಂಕ್ ಗಳು ಉಳಿತಾಯ ಖಾತೆಯಲ್ಲಿ ಉಳಿಯುವ ಮೊತ್ತಕ್ಕೆ ಹೆಚ್ಚಿನ ಬಡ್ಡಿದರ ನೀಡುವುದನ್ನು ಮುಂದುವರಿಸಿವೆ. ಪ್ರತಿದಿನದ ಉಳಿತಾಯ ಮೊತ್ತ 1 ಲಕ್ಷ ರೂ.ಗಳಿಗೂ ಹೆಚ್ಚು ಇದ್ದರೆ ಗ್ರಾಹಕರು 1.7 ಪಟ್ಟು ಹೆಚ್ಚಿನ ಲಾಭ ಪಡೆಯಬಹುದು. ಇದಕ್ಕಾಗಿ ಸರಿಯಾದ ಬ್ಯಾಂಕ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉಳಿತಾಯ ಖಾತೆಯಿಂದ ಗಳಿಸುವ 10 ಸಾವಿರದವರೆಗಿನ ಬಡ್ಡಿ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಪೋಷಕರು ತಮ್ಮ ಚಿಕ್ಕಮಕ್ಕಳ ಹೆಸರಿನಲ್ಲಿ ಹಣ ಠೇವಣಿ ಇಡುವ ಮೂಲಕ 1,500 ರೂ. ವರೆಗೆ ತೆರಿಗೆ ವಿನಾಯ್ತಿ ಪಡೆಯಬಹುದು. ಕೆಲವು ಖಾಸಗಿ ಬ್ಯಾಂಕ್ ಗಳು ಉಳಿತಾಯ ಖಾತೆಯಲ್ಲಿ ನಿರ್ದಿಷ್ಟ ದಿವಸಗಳ ಕಾಲ ಇರಿಸಿದ ಹಣವನ್ನು ಠೇವಣಿ ಎಂದು ಸ್ವಯಂಚಾಲಿತವಾಗಿ ಪರಿಗಣಿಸಿ (ಸ್ವೀಪ್-ಇನ್), ಹೆಚ್ಚುವರಿ ಬಡ್ಡಿಯನ್ನೂ ನೀಡುತ್ತವೆ. ಆದರೆ, ಈ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.
ಬಡ್ಡಿ ಕಮ್ಮಿ, ಶುಲ್ಕ ಜಾಸ್ತಿ
ಆದರೆ, ಉಳಿತಾಯ ಖಾತೆಯಲ್ಲಿ ಇಡುವ ಹಣ ವ್ಯರ್ಥ ಅಥವಾ ನಿಷ್ಕ್ರಿಯ ಎಂದು ಭಾವಿಸುವವರೇ ಹೆಚ್ಚು. ಇದರಿಂದ ಹೆಚ್ಚಿನ ಲಾಭ ಇಲ್ಲ ಎನ್ನುವ ಅಭಿಪ್ರಾಯವಿದೆ. ಒಂದು ಲೆಕ್ಕಾಚಾರದ ಪ್ರಕಾರ, ಬ್ಯಾಂಕ್ ಗಳ ಠೇವಣಿದಾರರು ಕಡಿಮೆ ಬಡ್ಡಿ ದರವಿದ್ದರೂ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಉಳಿತಾಯ ಖಾತೆಯಲ್ಲಿಡುವ ಮೂಲಕ ವರ್ಷಕ್ಕೆ ಅಪಾರ ಪ್ರಮಾಣದಲ್ಲಿ ಹಣ ಕಳೆದುಕೊಳ್ಳುತ್ತಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಬಡ್ಡಿ ಹಣ ಮಿತಿಗಿಂತ ಜಾಸ್ತಿ ಬಂದಲ್ಲಿ ತೆರಿಗೆ ರೂಪದಲ್ಲಿ ಅದಕ್ಕೆ ಕತ್ತರಿ ಬೀಳುತ್ತದೆ. ಅದನ್ನೂ ನಷ್ಟವೆಂದೇ ಪರಿಗಣಿಸಬೇಕಾಗುತ್ತದೆ. ಕನಿಷ್ಠ ಮೊತ್ತವನ್ನು ಕಾಪಾಡದಿದ್ದರೂ ದಂಡ ಹಾಕುತ್ತಾರೆ. ಎಸ್ಸೆಮ್ಮೆಸ್ ಶುಲ್ಕ, ವಾರ್ಷಿಕ ನಿರ್ವಹಣಾ ಶುಲ್ಕ ಹಾಗೂ ಎಟಿಎಂ ಶುಲ್ಕವೆಂದು ಒಂದಷ್ಟು ಹಣ ಕಡಿತವಾಗುತ್ತದೆ. ಕಾರ್ಡ್ ಕಳೆದುಹೋದರೆ, ಪಿನ್ ಮರೆತಿದ್ದರೆ, ಬದಲಿ ಪಾಸ್ ಬುಕ್ ಬೇಕಿದ್ದರೆ, ಸ್ಟೇಟ್ ಮೆಂಟ್ ತೆಗೆಸಿದರೆ ನೀವು ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ, ಹಲವು ಅನುಕೂಲಗಳ ಹೊರತಾಗಿಯೂ ಉಳಿತಾಯ ಖಾತೆ ಇತ್ತೀಚಿನ ವರ್ಷಗಳಲ್ಲಿ ಹೆಸರಿಗೆ ಮಾತ್ರ ಎಂಬಂತಾಗಿದೆ.
ಉಳಿತಾಯ ಖಾತೆಗಳಂತೆ ನಿಗದಿತ ಠೇವಣಿಯ ಬಡ್ಡಿದರಗಳಲ್ಲೂ ಕಡಿತವಾಗಿದೆ. ಈಗ ಒಂದು ವರ್ಷದ ನಿಗದಿತ ಅವಧಿ ಠೇವಣಿಗೆ ಶೇಕಡಾ 6.5ರಷ್ಟು ಬಡ್ಡಿ ದೊರೆಯುತ್ತದೆ. 2014ರಲ್ಲಿ ಅದು ಶೇ. 9.1ರಷ್ಟಿತ್ತು. ಮೂರು ವರ್ಷಗಳ ನಿಗದಿತ ಠೇವಣಿಗೆ ಶೇ. 8.75ರಷ್ಟಿದ್ದ ಬಡ್ಡಿ ಈಗ ಶೇ. 6.25ಕ್ಕೆ ಕುಸಿದಿದೆ.
ಸಾಮಾನ್ಯ ಹಣಕಾಸಿನ ವ್ಯವಹಾರಕ್ಕೆ ಉಳಿತಾಯ ಖಾತೆ ಅತ್ಯುತ್ತಮವೆನಿಸಿದೆ. ಸೂಕ್ತವಾದ ಬ್ಯಾಂಕ್ ನಲ್ಲಿ ಮತ್ತು ಜಾಣತನದಿಂದ ಉಳಿತಾಯ ಖಾತೆ ತೆರೆಯುವ ಮೂಲಕ ನಿಮ್ಮ ಹಣವನ್ನು ಬಂಡವಾಳವನ್ನಾಗಿ ಪರಿವರ್ತಿಸಿ ನಿಮಗಾಗಿ ದುಡಿಯುವಂತೆ ಮಾಡಬಹುದು.