ಏಕಾಗ್ರತೆಗೆ ಪೂರಕ ವೃಕ್ಷಾಸನ
ವೃಕ್ಷ ಎಂಬುದು ಸಂಸ್ಕೃತ ಪದ. ಮರ ಎಂದು ಅದರ ಅರ್ಥ. ಆಸನ ಎಂದರೆ ದೇಹದ ನಿಲುಮೆ. ವೃಕ್ಷಾಸನವು ಮರದ ಆಕಾರವನ್ನು ಹೋಲುತ್ತದೆ. ವಿದ್ಯಾರ್ಥಿಗಳಿಗೆ ಈ ಆಸನ ಬಹು ಉಪಯುಕ್ತ.
ಬಾಲ್ಯದಲ್ಲಿ ಈ ಆಸನವನ್ನು ಕಲಿತರೆ ದೇಹದ ಮೇಲೆ ನಿಯಂತ್ರಣ ಹಾಗೂ ಏಕಾಗ್ರತೆಗೆ ಸಹಕಾರಿಯಾಗುತ್ತದೆ. ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಏಕಾಗ್ರತೆಗಾಗಿ ಈ ರೀತಿ ಒಂಟಿಗಾಲಿನಲ್ಲಿ ನಿಂತು ತಪಸ್ಸು ಮಾಡುತ್ತಿದ್ದರು. ವೃಕ್ಷಾಸನ ಅಭ್ಯಾಸ ಮಾಡಿಕೊಂಡರೆ, ನಿಂತು ಮಾಡಬಹುದಾದ ಇತರ ಎಲ್ಲ ಆಸನಗಳನ್ನೂ ಕಲಿಯುವುದು ಸುಲಭವಾಗುತ್ತದೆ.
ಅಭ್ಯಾಸ ಕ್ರಮ: ಎರಡೂ ಕೈ ಮೇಲೆತ್ತಿ ತಾಡಾಸನದಲ್ಲಿ (ಸ್ಥಿತಿ) ನಿಲ್ಲಬೇಕು. ಬಲಗಾಲ ಮಂಡಿಯನ್ನು ಬಗ್ಗಿಸಿ ಎಡತೊಡೆಯ ಮೂಲೆಗೆ ಸೇರಿಸಬೇಕು. ಅನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ನೇರವಾಗಿ ತಲೆ ಮೇಲೆ ಎತ್ತಿ ಹಿಡಿದು ಅಂಗೈಗಳನ್ನು ಜೋಡಿಸಬೇಕು. ಈ ಸ್ಥಿತಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತಾ ಸ್ವಲ್ಪ ಹೊತ್ತು ನಿಲ್ಲಬೇಕು. ಆನಂತರ ವಿಶ್ರಮಿಸಬೇಕು. ಹಾಗೆಯೇ ಇನ್ನೊಂದು ಬದಿಯಿಂದ ಎಡಗಾಲಿನ ಮಂಡಿ ಬಗ್ಗಿಸಿ ಮೇಲೆ ತಿಳಿಸಿದಂತೆ ಮಾಡಬೇಕು.
ಒಂದೇ ಕಾಲಿನ ಮೇಲೆ ಶರೀರದ ಭಾರವನ್ನು ಹಾಕಿ, ಸಮತೋಲನ ತಪ್ಪದಂತೆ ನಿಂತು ಕಾಲಿನ ಹೆಬ್ಬೆರಳಿನ ಹಿಂಭಾಗವನ್ನು ನೆಲಕ್ಕೆ ಒತ್ತಬೇಕು. ಆರಂಭದಲ್ಲಿ ಈ ಆಸನ ತುಸು ಕಷ್ಟವಾಗಬಹುದು. ಆನಂತರ ಸರಳ, ಸುಲಭವಾಗುತ್ತದೆ.
ವೃಕ್ಷಾಸನ ದೇಹದ ಸಮತೋಲನ ಸ್ಥಿತಿಯನ್ನು ಕಾಪಾಡುವ ಭಂಗಿಯಾಗಿದೆ. ಇಲ್ಲಿ ಕಾಲುಗಳು, ತೋಳುಗಳು, ಶಿರಸ್ಸು ಇತ್ಯಾದಿ ಭಾಗಗಳನ್ನು ಮರದ ಬೇರು, ಗೆಲ್ಲುಗಳು, ಎಲೆಗಳಿಗೆ ಹೋಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾದ ಆಸನವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಈ ಆಸನವನ್ನು ಕಲಿತು ನಿತ್ಯ ನಿರಂತರವಾಗಿ ಅಭ್ಯಾಸ ಮಾಡಬೇಕು.
ಉಪಯೋಗಗಳು: ದೇಹದ ಅಂಗಾಂಗಳು ಎಳೆತಕ್ಕೆ ಒಳಗಾಗುತ್ತದೆ. ಮನಸ್ಸಿನ ದೃಢತೆ ಹಾಗೂ ಏಕಾಗ್ರತೆ ಹೆಚ್ಚಿ, ಒತ್ತಡ ನಿಯಂತ್ರಣಗೊಳ್ಳುತ್ತದೆ. ಪೃಷ್ಠದ ಭಾಗ ಬಲಿಷ್ಠವಾಗುತ್ತದೆ. ಹೇಗೆ ಕಟ್ಟಡಕ್ಕೆ ಅಡಿಪಾಯ ಮುಖ್ಯವೋ ಹಾಗೆಯೇ ವ್ಯಕ್ತಿಯ ಕಾಲುಗಳ ಆರೋಗ್ಯ ಬಹಳ ಅಗತ್ಯ. ನಮ್ಮ ಕಾಲುಗಳು ಸುಸ್ಥಿತಿಯಾಗಿದ್ದರೆ ದೇಹದ ಅಡಿಪಾಯ ಗಟ್ಟಿಯಾಗುತ್ತದೆ (ಪಂಚಾಂಗ). ಆಸನದಿಂದ ಮೂಲಾಧಾರ ಚಕ್ರ ಪುನಃಶ್ಚೇತನಗೊಳ್ಳುತ್ತದೆ. ಕೀಲುಗಳ ಸಂಧಿವಾತದ ಸಮಸ್ಯೆ ನಿವಾರಣೆಗೆ ಸಹಕಾರಿ. ಬೆನ್ನುಮೂಳೆಯು ಬಲಗೊಳ್ಳುತ್ತದೆ. ಈ ಆಸನದಿಂದ ಕಾಲಿನ ಮಾಂಸಖಂಡಗಳು ಪಳಗುತ್ತವೆ. ಸಮಸ್ಥಿತಿಯಲ್ಲಿ ನೆಲೆಸಲು ಅಭ್ಯಾಸವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಆಸನ ಬಹಳ ಪ್ರಯೋಜನಕಾರಿಯಾಗಿದೆ.
ಸೂಚನೆ: ಹೆಚ್ಚಿನ ರಕ್ತದೊತ್ತಡ, ಅರೆ ತಲೆನೋವು, ಮಂಡಿನೋವು ಇದ್ದವರು ಈ ಆಸನವನ್ನು ಅಭ್ಯಾಸ ಮಾಡುವುದು ಸೂಕ್ತವಲ್ಲ. ಸುಮಾರು 40 ವರ್ಷ ಮೇಲ್ಪಟ್ಟವರು ಆರಂಭದಲ್ಲಿ ಗೋಡೆಗೆ ಒರಗಿ ನಿಂತು ಅಭ್ಯಾಸ ಮಾಡುವುದು ಉತ್ತಮ. ಆಸನ ಅಭ್ಯಾಸ ಮಾಡುವಾಗ ದೃಷ್ಟಿ ನೇರವಾಗಿರಬೇಕು. ಎರಡೂ ಕೈಗಳನ್ನು ಶಿರಸ್ಸಿನ ಮೇಲೆ ತರುವಾಗ ತೋಳುಗಳು ಕಿವಿಗೆ ಒತ್ತಿರಬೇಕು. ಇದರಿಂದ ತೋಳುಗಳ ನರಗಳು, ಮೊಣಕೈಗಳು ಬಲಗೊಳ್ಳುತ್ತವೆ.