ಹುಡುಗಿಯರಿಗೆ ತಾವು ತೆಳ್ಳಗೆ–ಬೆಳ್ಳಗೆ ಇರಬೇಕು ಅನ್ನುವ ಆಸೆ. ಆದರೆ, ಮುಖ ಇದ್ದಕ್ಕಿದ್ದಂತೆ ಬೆಳ್ಳಗೆ ಆಗೋದು ಆರೋಗ್ಯದ ಲಕ್ಷಣ ಅಲ್ಲವೇ ಅಲ್ಲ. ಕೆಲವರ ಮುಖ ಬಿಳಚಿಕೊಂಡರೆ, ಹಳದಿ ಬಣ್ಣಕ್ಕೆ ತಿರುಗಿದರೆ ಅವರಿಗೆ ರಕ್ತಹೀನತೆ ಉಂಟಾಗಿದೆ ಎಂದೇ ಅರ್ಥ ಎನ್ನುತ್ತದೆ ವೈದ್ಯವಿಜ್ಞಾನ.
ವಿಚಿತ್ರ ಎಂದರೆ, ಬಹುತೇಕರಿಗೆ ತಾವು ರಕ್ತಹೀನತೆಯಿಂದ ಬಳಲುತ್ತಿದ್ದೇವೆ ಅನ್ನುವುದೇ ತಿಳಿದಿರುವುದಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ತಮ್ಮ ಮುಖದ ಚರ್ಮ ಬೆಳ್ಳಗಾಗಿದೆ ಅಂತ ಖುಷಿಪಡುತ್ತಾರೆ.
ರಕ್ತಹೀನತೆ ಇದ್ದರೂ ಚರ್ಮದ ಮೈಬಣ್ಣ ಬಿಳಚಿಕೊಳ್ಳುತ್ತದೆ. ಇಲ್ಲವೇ ಹಳದಿಯಾಗುತ್ತದೆ. ಸ್ವಲ್ಪ ಶ್ರಮದಾಯಕ ಕೆಲಸ ಮಾಡಿದರೂ ಆಯಾಸ ಕಾಣಿಸಿಕೊಳ್ಳುವುದು. ಕಣ್ಣುಗಳು ನಿಸ್ತೇಜಗೊಳ್ಳುತ್ತವೆ. ತಲೆ ಸುತ್ತು ಬಂದಂತಾಗುವುದು, ಕೈಕಾಲು ತಣ್ಣಗಾಗುವುದು, ಕೂದಲು ಉದುರುವುದು, ಕಿವಿಯಲ್ಲಿ ರಿಂಗಣಿಸಿದ ಸದ್ದು ಕೇಳಿದಂತಾಗುತ್ತದೆ. ದೇಹದಲ್ಲಿ ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ ಮತ್ತು ವಿಟಮಿನ್ ಬಿ12 ಕೊರತೆಯಿಂದಾಗಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ.
ತಡೆಗಟ್ಟುವುದು ಹೇಗೆ?:
ಕಬ್ಬಿಣಾಂಶ ಸಮೃದ್ಧವಾಗಿರುವ ಆಹಾರ ಸೇವನೆ. ಸೇಬು, ಬಾಳೆ, ದ್ರಾಕ್ಷಿ, ಕಿತ್ತಳೆ ಹಣ್ಣು ಸೇವಿಸಬೇಕು. ಪಾಲಕ್ ಸೊಪ್ಪು, ಬೀಟ್ರೂಟ್, ಕೋಸುಗಡ್ಡೆ, ಮೆಂತ್ಯೆ, ಶೇಂಗಾ ಬೀಜ, ದ್ವಿದಳ ಧಾನ್ಯಗಳು, ಮಾಂಸದ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು.