ಈ ಸೃಷ್ಟಿಯಲ್ಲಿ ಮಾನವ ಜನ್ಮವು ಸರ್ವಶ್ರೇಷ್ಠವಾಗಿದೆ. ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಪ್ರಮುಖವಾಗಿ ಷೋಡಶ ಸಂಸ್ಕಾರಗಳನ್ನು ಆಚರಣೆಗೆ ತರಬೇಕಾಗಿದೆ. ಅವುಗಳಲ್ಲಿ ವಿವಾಹ ಸಂಸ್ಕಾರಕ್ಕೆ ಹೆಚ್ಚು ಮಹತ್ವವಿದೆ.
ವಿವಾಹ ಅಥವಾ ಮದುವೆ ಎಂದರೆ ಕೇವಲ ಒಂದು ಸಂಭ್ರಮವಲ್ಲ, ಅದು ಜವಾಬ್ದಾರಿ. ಸಂಸ್ಕೃತದಲ್ಲಿ ‘ವಿವಾಹ’ವೆಂದರೆ “ವಿಶೇಷೇಣವಹತೀತಿ ವಿವಾಹಃ”ಎಂದು ಬಣ್ಣಿಸಲಾಗಿದೆ. ಅಂದರೆ, ವಿಶೇಷವಾದ ಭಾರವನ್ನು ಹೊರುವುದು ಎಂದರ್ಥ.
ಮದುವೆಯಾದ ಗಂಡಾಗಲಿ, ಹೆಣ್ಣಾಗಲಿ ಗೃಹಸ್ಥರಾದೊಡನೆ ಪತಿ-ಪತ್ನಿ, ಸಂಸಾರಗಳ ಗಂಟುಬೀಳುತ್ತವೆ. ಮಕ್ಕಳಾಗುತ್ತವೆ, ಅವನ್ನು ಬೆಳೆಸುವ ಜವಾಬ್ದಾರಿಯ ಜತೆಗೆ ಮನೆಗೆ ಬರುವ ಅತಿಥಿಗಳು, ಬಂಧುಗಳನ್ನು ಸತ್ಕರಿಸುವ ಜವಾಬ್ದಾರಿಯೂ ಒದಗುತ್ತದೆ. ಹಿರಿಯರ ಯೋಗಕ್ಷೇಮವನ್ನೂ ನೋಡಿಕೊಳ್ಳಬೇಕಾಗುವುದು. ವಿವಾಹ ಬಂಧನವಿಲ್ಲದೆ ಸ್ತ್ರೀ-ಪುರುಷರನ್ನು ಸ್ವಚ್ಛಂದವಾಗಿ ಇರಲು ಬಿಟ್ಟರೆ ಇದು ಮೃಗರಾಜ್ಯವಾದೀತು! ಆದ್ದರಿಂದ ಗಂಡು-ಹೆಣ್ಣನ್ನು ಸಮಾಜ ಒಪ್ಪುವಂತೆ ಪತಿ-ಪತ್ನಿಯರನ್ನಾಗಿ ಮಾಡುವುದೇ ವಿವಾಹ. ವಿವಾಹ ಸಂಸ್ಕಾರದ ಮುಖ್ಯ ಉದ್ದೇಶಗಳು ಆತ್ಮೋನ್ನತಿ ಮತ್ತು ಧರ್ಮ ಪ್ರಜಾಸಂಪತ್ತಿ.
ಈ ವಿವಾಹಗಳಲ್ಲಿ ಧರ್ಮಶಾಸ್ತ್ರಗಳ ಪ್ರಕಾರ ಎಂಟು ವಿಧಗಳಿವೆ. ಅವುಗಳೆಂದರೆ
1) ಬ್ರಾಹ್ಮವಿವಾಹ, 2) ದೈವ, 3) ಆರ್ಷ, 4) ಪ್ರಜಾಪತ್ಯ, 5) ಅಸುರ, 6) ಗಾಂಧರ್ವ, 7) ರಾಕ್ಷಸ ಹಾಗೂ 8) ಪೈಶಾಚ ವಿವಾಹವೆಂಬುದಾಗಿ ವಿಂಗಡಿಸಲಾಗಿದೆ.
- ಬ್ರಾಹ್ಮವಿವಾಹ: ಕನ್ಯೆಯ ತಂದೆಯು ತಾನಾಗಿ ವರನಿಗೆ ಕನ್ಯಾದಾನ ಮಾಡುವುದು.
- ದೈವವಿವಾಹ: ಯಜ್ಞ-ಯಾಗಾದಿಗಳು ಅಥವಾ ದೈವಿಕ ಸಂಬಂಧಿ ಕಾರ್ಯಗಳ ಸಂದರ್ಭದಲ್ಲಿ, ಕನ್ಯಾದಾನ ಮಾಡುವುದು.
- ಆರ್ಷವಿವಾಹ: ವರನಿಂದ ಒಂದು ಅಥವಾ ಎರಡು ಗೋಮಿಥುನವನ್ನು (ಹಸು ಮತ್ತು ಎತ್ತು) ಪಡೆದು ಕನ್ಯಾದಾನ ಮಾಡುವುದು.
- ಪ್ರಜಾಪತ್ಯ ವಿವಾಹ: ವಧು-ವರರನ್ನು ಜೊತೆಯಾಗಿ ಬಾಳಿರಿ ಎಂದು ಹೇಳುತ್ತಾ ವರನನ್ನು ಪೂಜಿಸಿ, ಆದರಿಸಿ, ಕನ್ಯಾದಾನ ಮಾಡುವುದು. ಹಿಂದೂ ವಿವಾಹ ಪದ್ಥತಿಯೂ ಇದೇ ಆಗಿದೆ.
- ಅಸುರ ವಿವಾಹ: ಶಕ್ತ್ಯನುಸಾರ ಕನ್ಯೆಯ ಮಾತಾಪಿತೃಗಳಿಗೆ ಹಾಗೂ ಸಂಬಂಧಿಕರಿಗೆ ಮತ್ತು ಕನ್ಯೆಗೂ ಧನವನ್ನು ಕೊಟ್ಟು ಸ್ವಚ್ಛಂದದಿಂದ ಮದುವೆಯಾಗುವುದು.
- ಗಾಂಧರ್ವ ವಿವಾಹ: ಕನ್ಯೆಯು ಹಾಗೂ ವರನು ಪರಸ್ಪರ ಇಚ್ಛಾಪೂರ್ವಕವಾಗಿ, ಅನ್ಯೋನ್ಯವಾಗಿ ಸಂಗಮಿಸಿ ಮಾಡಿಕೊಳ್ಳುವ ವಿವಾಹ.
- ರಾಕ್ಷಸ ವಿವಾಹ: ವಿವಾಹಕ್ಕೆ ವಿರೋಧಿಸುವ ಕನ್ಯೆಯ ಸಂಬಂಧಿಗಳನ್ನು ಹಿಂಸಿಸಿ, ಅವರ ಮೇಲೆ ದೌರ್ಜನ್ಯ ಮಾಡಿ, ಕನ್ಯೆಯನ್ನು ಅಪಹರಿಸಿ ಮದುವೆಯಾಗುವುದು.
- ಪೈಶಾಚ ವಿವಾಹ: ಕನ್ಯೆಯ ಶೀಲಭಂಗ ಮಾಡಿ ಮದುವೆಯಾಗುವುದು. ಇದು ಪಾಪಕಾರವು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.
ನಾವು ಈಗ ಆಚರಿಸುವ ಪ್ರಜಾಪತ್ಯ ವಿವಾಹದಲ್ಲಿ ಹದಿನಾರು ವಿಧಿಗಳಿರುತ್ತವೆ. ಅವುಗಳೆಂದರೆ,
- ಸಂಕಲ್ಪ - ಗಣಪತಿಪೂಜೆ, ಪುಣ್ಯಾಹ, ನಾಂದಿ
- ವರಪೂಜೆ
- ನಿಶ್ಚಿತಾರ್ಥ/ವಾಜ್ಞಿಶ್ಚಯ
- ಮಧುಪರ್ಕ
- ಗೌರೀಪೂಜೆ
- ನಿರೀಕ್ಷಣೆ/ಮುಹೂರ್ತ
- ಕನ್ಯಾದಾನ
- ಮಾಂಗಲ್ಯ
- ಅಕ್ಷತಾರೋಪಣ
- ಲಾಜಾಹೋಮ
- ಸಪ್ತಪದಿ
- ಐರಣೀದಾನ
- ಅರುಂಧತಿ ದರ್ಶನ
- ಗೃಹಪ್ರವೇಶ
- ದೇವತೋತ್ಥಾಪನ
- ಔಪಾಸನ ಉಪಕ್ರಮ
ಸಂಕಲ್ಪ - ಗಣಪತಿಪೂಜೆ, ಪುಣ್ಯಾಹ, ನಾಂದಿ: ವರನ ತಂದೆ-ತಾಯಿ ಮತ್ತು ಮನೆಯವರು ತಮ್ಮ ಗುರುಹಿರಿಯರಲ್ಲಿ ಹಾಗೂ ದೇವವರ್ಗ ಮತ್ತು ಪಿತೃವರ್ಗಗಳಲ್ಲಿ ಸರ್ವವೂ ಮಂಗಳವಾಗಲಿ ಎಂದು ಪ್ರಾರ್ಥಿಸಿ ಎಲ್ಲವೂ ನಿರ್ವಿಘ್ನವಾಗಿ ನಡೆಯಲಿ ಎಂದು ಮಹಾಗಣಪತಿಯನ್ನು ಪ್ರಾರ್ಥಿಸುತ್ತಾ ಕರ್ಮದೀಕ್ಷೆಯನ್ನು ಸ್ವೀಕರಿಸುವುದೇ ಸಂಕಲ್ಪ.
ಪುಣ್ಯಾಹವೆಂದರೆ ಅಲ್ಲಿ ನೆರೆದಿರುವ ಪುರೋಹಿತ ವರ್ಗ ಮೂರು ವೇದಗಳ ಮಂಗಳ ಸಂಜ್ಞಕಗಳನ್ನು ಹೇಳಿ ಪುಣ್ಯಾಹ, ಸ್ವಸ್ತಿ, ವೃಧ್ಧಿ, ಶ್ರೀಗಳು ಬಂದೊದಗಲಿ ಎಂದು ಆಶೀರ್ವದಿಸುವ ಕ್ರಮ.
ನಾಂದಿ ಎಂದರೆ ನಮ್ಮ ಪೂರ್ವಿಕರ ಸ್ಮರಣಾರ್ಥ ಆಶೀರ್ವಾದ ಅಪೇಕ್ಷೆ. ಅದಕ್ಕಾಗಿ ಮಾಡುವ ಪೂಜೆ. ಇದರಲ್ಲಿ ಲೌಕಿಕ ಮತ್ತು ಅಲೌಕಿಕ ಪಿತೃಸಂಬಂಧಗಳನ್ನು ಆರಾಧಿಸುವುದು.
ವರಪೂಜೆ: ಕನ್ಯಾರ್ಥಿಯಾಗಿ ಬರುವ ವರನನ್ನು ಮತ್ತು ಅವರ ಬಂಧು-ಬಳಗವನ್ನು ಆಹ್ವಾನಿಸಿ ವರನಿಗೆ ಉಪಚರಿಸುವ ವಿಧಾನ.
ನಿಶ್ಚಿತಾರ್ಥ/ವಾಜ್ಞಿಶ್ಚಯ: ತ್ರಿಪುರುಷ ನಾಮಗಳನ್ನು (ತಂದೆ, ತಾತ ಮತ್ತು ಮುತ್ತಾತರ ಹೆಸರುಗಳು) ಹೇಳಿ ಇಂತಹ ಹೆಸರಿನ ವಧುವನ್ನು ಇಂತಹ ಹೆಸರಿನ ವರನಿಗೆ ದೇವ-ದ್ವಿಜ ಸನ್ನಿದಾನದಲ್ಲಿ ವಿವಾಹ ಮಾಡಿಕೊಡುತ್ತೇನೆ ಎಂದು ಕನ್ಯೆಯ ಪಿತೃ ಹೇಳುವ ಕ್ರಮ.
ಮಧುಪರ್ಕ: ಮಧುವೆಂದರೆ ಜೇನುತುಪ್ಪ, ವರನನ್ನು ಆಸನದಲ್ಲಿ ಕೂರಿಸಿ ಅವನ ಕೈಕಾಲು ತೊಳೆದು ಆಚಮನ ಮಾಡಿಸಿ ಜೇನುತುಪ್ಪವನ್ನು ಕುಡಿಸುತ್ತಾರೆ.
ಗೌರೀಪೂಜೆ: ಕನ್ಯೆಯು ತನಗೆ ಉತ್ತಮವಾದ ವರ ಸಿಗಲಿ ಮತ್ತು ದೀರ್ಘ ಸುಮಂಗಲಿತನವು ಲಭಿಸಲಿ ಎಂದು ಶಚಿದೇವಿಯನ್ನು ಪೂಜೆಸಿ, ಸುಮಂಗಲಿಯರಿಗೆ ಬಾಗೀನವನ್ನು ನೀಡುವಳು.
ನಿರೀಕ್ಷಣೆ/ಮುಹೂರ್ತ: ಶುಭ ಮುಹೂರ್ತದಲ್ಲಿ ಧಾನ್ಯ ರಾಶಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ವರ ಮತ್ತು ಪಶ್ಚಿಮಾಭಿಮುಖವಾಗಿ ನಿಂತಿರುವ ವಧು ಅಂತರ್ಪಟದಿಂದಾಚೆಗೆ ಮೊದಲ ಬಾರಿ ಪರಸ್ಪರ ಮುಖ ನೋಡುವುದೇ ನಿರೀಕ್ಷಣೆ. ಈ ಸಂದರ್ಭದಲ್ಲಿ ಜೀರಿಗೆ, ಮಾಲೆಗಳನ್ನು ಪರಸ್ಪರ ಹಾಕುವುದು ಸಂಪ್ರದಾಯ.
ಕನ್ಯಾದಾನ: ವರನ ಗೋತ್ರ ಪ್ರವರ ತ್ರಿಪುರುಷರ ನಾಮವನ್ನು ಹೇಳಿ ಚತುಥ್ರ್ಯಂತ್ಯವಾಗಿ ವರನ ಹೆಸರು ಹೇಳಿ ಹಾಗೆಯೇ ಕನ್ಯೆಯ ಹೆಸರನ್ನು ದ್ವಿತೀಯಾಂತ್ಯವಾಗಿ ಹೇಳಿ ನಾರಾಯಣ ಸ್ವರೂಪಿಯಾದ ವರನಿಗೆ ಲಕ್ಷ್ಮೀಸ್ವರೂಪಿಯಾದ ವಧುವನ್ನು ಪ್ರಜೋತ್ಪಾದನೆಗಾಗಿ ಸಮರ್ಪಿಸುತ್ತಿದ್ದೇನೆ ಎಂದು ವಧುವಿನ ತಂದೆ ಧಾರೆ ಎರೆಯುವರು.
ಮಾಂಗಲ್ಯ: ಹರಿದ್ರಾ ಕುಂಕುಮ ಸೌಭಾಗ್ಯಾವತಿಯಾಗಿ ಶೋಭಿತವಾಗಿರುವ ವಧುವಿಗೆ “ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತು ನಾ | ಕಂಠೇ ಬದ್ನಾಮಿ ಸುಭಗೇ ತ್ವಂಜೀವ ಶರದಾಂಶತಂ||” ಎಂದು ಮೂರು ಬಾರಿ ಉಚ್ಛರಿಸಿ ಕರಿಮಣಿ, ಮಂಗಲ ಸೂತ್ರವನ್ನು ವಧುವಿನ ಕಂಠದಲ್ಲಿ ಧಾರಣೆ ಮಾಡುವುದೇ ಮಾಂಗಲ್ಯ.
ಅಕ್ಷತಾರೋಪಣ: ವಧು-ವರರು ಆಯುವೃದ್ಧಿಕರವಾದ ಹರಿದ್ರಾಶ್ವೇತಾಕ್ಷತೆಯನ್ನು ಪರಸ್ಪರ ತಲೆಯ ಮೇಲೆ ಹಾಕಿಕೊಳ್ಳುವರು,
ಲಾಜಾಹೋಮ: ವರನು ವಧುವಿನ ತಮ್ಮನಿಂದ ಎರಡು ಮುಷ್ಟಿ ಲಾಜ (ಅರಳು)ವನ್ನು ಪಡೆದು ಅದಕ್ಕೆ ಆಜ್ಯವನ್ನು ಬೆರೆಸಿ ವಧುವಿನ ಅಂಜಲಿಯನ್ನು ಹಿಡಿದು ಯಜ್ಞಕ್ಕೆ ಸಮರ್ಪಿಸಿ, ಅನಂತರ ವಧು-ವರರು ಪಾಣಿಗ್ರಹಿತರಾಗಿ ಹೋಮದ ಪ್ರದಕ್ಷಿಣೆ ಮಾಡುವರು.
ಸಪ್ತಪದಿ: ಅಗ್ನಿಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಲ್ಪಟ್ಟ ಧಾನ್ಯದ ರಾಶಿಯ ಮೇಲೆ ವಧುವಿನ ಹೆಜ್ಜೆಯನ್ನು ವರನು ಇರಿಸುತ್ತಾ ಅನ್ನಕ್ಕಾಗಿ, ಬಲಕ್ಕಾಗಿ, ಧನಸಮೃಧ್ಧಿಗಾಗಿ, ಸುಖಕ್ಕಾಗಿ, ಪ್ರಜೆಗಳಿಗಾಗಿ, ಋತುಗಳಿಗಾಗಿ, ಅನುಗಾಲ ಮೈತ್ರಿಗಾಗಿ ಕ್ರಮವಾಗಿ ಧಾನ್ಯದ ಮೇಲೆ ಇಡುವ ಹೆಜ್ಜೆಯೇ ಸಪ್ತಪದಿ. ಭಾರತೀಯ ಸಂವಿಧಾನದಲ್ಲಿ ಹಿಂದೂ ವಿವಾಹ ಪದ್ದತಿಯಲ್ಲಿ ಈ ಸಪ್ತಪದಿ ಪ್ರಮುಖ ಸ್ಥಾನ ಪಡೆದಿದೆ.
ಐರಣೀದಾನ: ವಧುವಿನ ತಂದೆ-ತಾಯಿ ವರನ ತಂದೆ-ತಾಯಿಗೆ ದೀಪಗಳನ್ನು ದಾನ ಮಾಡಿ, ವಧುವಿನ ತಾಯಿಯು ಬಾಗೀನ ನೀಡಿ ವರನಿಗೆ ಒಪ್ಪಿಸುವುದೇ ಐರಣೀದಾನ.
ಅರುಂಧತಿ ದರ್ಶನ: ವಿವಾಹ ವ್ರತದಲ್ಲಿರುವ ವಧು-ವರರು ಸಪ್ತಋಷಿ ನಕ್ಷತ್ರ ಪುಂಜ ಮತ್ತು ಅರುಂಧತಿ ನಕ್ಷತ್ರ ದರ್ಶನ ಅನಂತರ ವಿವಾಹ ವ್ರತದಿಂದ ವಿಮುಕ್ತರಾಗುತ್ತಾರೆ.
ಗೃಹಪ್ರವೇಶ: ವಿವಾಹಾನಂತರ ವರನು ವಧುವಿನ ಬೈತಲೆಗೆ ಸಿಂಧೂರವನ್ನು ಹಚ್ಚಿಬೇಕು. ಅನಂತರ ಆಕೆ ಸುಮಂಗಲಿ. ಹೀಗೆ ಸುಮಂಗಲಿಯಾದ ವಧುವು ವರನ ಗೃಹವನ್ನು ಧಾನ್ಯ ತುಂಬಿದ ಸೇರನ್ನು ಒದ್ದು ‘ಈ ಮನೆಯು ಲಕ್ಷ್ಮೀನಿವಾಸವಾಗಲಿ’ ಎಂದು ಪ್ರಾರ್ಥೀಸಿ ಪ್ರವೇಶಿಸುವಳು.
ದೇವತೋತ್ಥಾಪನ: ಗೃಹಪ್ರವೇಶವಾದೊಡನೆ ವಿವಾಹ ಸಂಪನ್ನವಾಗುತ್ತದೆ. ಇದಾದನಂತರ ಆಹ್ವಾನಿಸಿದ ದೇವಗಣ ಮತ್ತು ಪಿತೃಗಣವನ್ನು ವಿಸರ್ಜಿಸಿ, ಯಥಾಸ್ಥಾನಕ್ಕೆ ಮರಳಿಸುವುದೇ ದೇವತೋತ್ಥಾಪನ.
ಔಪಾಸನ ಉಪಕ್ರಮ: ಬ್ರಹ್ಮಚಾರಿಯಾಗಿದ್ದ ವರನು ವಿವಾಹಾನಂತರ ಗೃಹಸ್ಥನಾಗುತ್ತಾನೆ. ತದನಂತರ ಪತಿ-ಪತ್ನಿಯರು ಒಟ್ಟಿಗೆ ಮಾಡುವ ಹೋಮವೇ ಔಪಾಸನ.