1) ಜಪಿಸುವವರಿಗೆ ವಿಪ್ರತ್ವವನ್ನು, ದ್ವಿಜತ್ವವನ್ನು, ಬ್ರಾಹ್ಮಣತ್ವವನ್ನು, ಶ್ರೋತ್ರೀಯತ್ವವನ್ನೂ ಕರುಣಿಸುವ ಮಹಾಮಂತ್ರವೇ ಗಾಯತ್ರೀ ಮಂತ್ರ. ಇದೇ ಸಾವಿತ್ರೀ ಮಂತ್ರ. ಬುದ್ಧಿಶಕ್ತಿ, ಜ್ಙಾನಸಂಪತ್ತು, ಐಶ್ವರ್ಯ, ಸುಲಕ್ಷಣಗಳು, ಶಾಂತಿ-ಸಮೃದ್ಧಿಗಳು, ಸಜ್ಜನಿಕೆ, ಧಾರ್ಮಿಕತೆ, ಸುಖ, ತೃಪ್ತಿ, ಅಪೇಕ್ಷಿತ ಫಲ, ಇಷ್ಟಾರ್ಥ ಸಿದ್ಧಿ ಎಲ್ಲವೂ ಗಾಯತ್ರೀ ಮಂತ್ರದಲ್ಲಿದೆ. ಗಾಯತ್ರೀ ಮಂತ್ರದ ಉಪಾಸನೆಯನ್ನು ಮಾಡದಿದ್ದಲ್ಲಿ ಬ್ರಹ್ಮೋಪದೇಶವೆಂಬ ಸಂಸ್ಕಾರ ಬರಿಯ ಒಂದು ಆಚರಣೆ ಮಾತ್ರ.
2) ಅದು ವೈದಿಕಮಂತ್ರ. ಅಪೌರುಷೇಯವಾದ ವೇದದಲ್ಲಿ ಬಂದಿರುವ ಮಂತ್ರ, ಇದು ಶ್ರೌತ ಮಂತ್ರ.
3) ಹಿರಣ್ಯಗರ್ಭಸ್ವರೂಪನೂ, ಸರ್ವಾಂತರ್ಯಾಮಿಯೂ ಸರ್ವಲೋಕ ಚಕ್ಷುವೂ ಆಗಿರುವ ಸವಿತೃ (ಸೂರ್ಯ) ದೇವನ ಉಪಾಸನಾ ಮಂತ್ರವಿದು.
4) ವೇದಗಳಲ್ಲೇ ಅತಿ ಶ್ರೇಷ್ಠವಾದ ಗಾಯತ್ರೀ ಛಂದಸ್ಸಿನಲ್ಲಿರುವ ಮಂತ್ರವಿದು.
5) ಓಂಭೂರ್ಭುವಸ್ಸುವಃ ಎಂಬ ಪ್ರಣವ ಹಾಗೂ ವ್ಯಾಹೃತಿಗಳಿಂದ ಕೂಡಿರುವ ಮಂತ್ರವಿದು.
6) ಬ್ರಹ್ಮತೇಜೋಬಲಂ ಬಲಂ ಎಂದ ರಾಜರ್ಷಿಯಾಗಿದ್ದು, ಅನಂತರ ಬ್ರಹ್ಮರ್ಷಿಯಾದ ವಿಶ್ವಾಮಿತ್ರನಿಂದ ಪ್ರಣೀತವಾದ ಮಂತ್ರವಿದು.
7) ಸೂರ್ಯನ ಉಪಾಸನೆಯನ್ನು ಮಾಡಿ ವಿಶ್ವಾಮಿತ್ರನು ಸೂರ್ಯನಿಂದ ಅನಗ್ರಹಿಸಿಕೊಂಡ ಮಂತ್ರವಿದು.
8) ನಮ್ಮ ಬುದ್ಧಿಶಕ್ತಿಯನ್ನು ಪ್ರಚೋದಿಸು ಎಂದು ಪ್ರಾರ್ಥಿಸುವ ಮಂತ್ರವಿದು.
9) ತೇಜಸ್ಸನ್ನು ಕರುಣಿಸು ಎಂದು ಧ್ಯಾನಮಾಡುವ ಮಂತ್ರವಿದು.
10) ಬ್ರಹ್ಮ ತೇಜಸ್ಸನ್ನು, ಅಂತರಂಗ ಬಹಿರಂಗ ಶುದ್ಧಿಯನ್ನು ಹೊಂದುವುದರ ಮೂಲಕ ಬ್ರಹ್ಮಜ್ಞಾನವನ್ನು ಕರುಣಿಸುವ ಮಹಾಮಂತ್ರವಿದು.