ವಿಶ್ವವು ತ್ರಿಗುಣಾತ್ಮಕವಾದುದು. ತ್ರಿಗುಣಗಳೆಂದರೆ ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ. ಈ ಮೂರು ಮುಖ್ಯ ಗುಣಗಳಿಂದ ಕೂಡಿದ ಜಗತ್ತಿನಲ್ಲಿ ಈ ಮೂರೂ ಗುಣಗಳು ಮಿಶ್ರವಾದ ಜೀವಿಗಳಿವೆ. ಇವುಗಳಿಂದ ಮಾನವರಾದ ನಾವೂ ಹೊರತಲ್ಲ.
ಪ್ರತಿಯೊಬ್ಬರ ಸ್ವಭಾವದ ಮೇಲೆ ಪ್ರಭಾವ ಬೀರುವ ಈ ಮೂರೂ ಗುಣಗಳು ನಮ್ಮ ಸ್ವಭಾವವು ಒಮ್ಮೊಮ್ಮೆ ಒಂದೊಂದು ರೀತಿ ತೋರಿಬರುವುದಕ್ಕೆ ಕಾರಣವಾಗಿವೆ. ಒಂದಕ್ಕಿಂದ ಒಂದು ಭಿನ್ನವಾದ ವೃತ್ತಿಗಳಿಂದ ಕೂಡಿದ ಇವು ಅದಕ್ಕನುಗುಣವಾಗಿ ನಮ್ಮ ನಡತೆಯಲ್ಲಿ ಬದಲಾವಣೆಯನ್ನುಂಟು ಮಾಡುತ್ತವೆ.
ಈ ಗುಣಗಳ ವೃತ್ತಿ ನಿರೂಪಣೆಯಾದರೂ ಏನು?
- ಶಮ, ದಮ, ತಿತಿಕ್ಷಾ (ಮನಸ್ಸಿನ ಸಂಯಮ, ಇಂದ್ರಿಯನಿಗ್ರಹ, ಸಹಿಷ್ಣುತೆ) ವಿವೇಕ, ಸತ್ಯ, ದಯೆ, ಸ್ಮೃತಿ, ಸಂತೋಷ, ತ್ಯಾಗ, ವಿಷಯಗಳ ಕುರಿತು ಅನಿಚ್ಛೆ, ಲಜ್ಜೆ, ಆತ್ಮರತಿ, ದಾನ, ವಿನಯ, ಸರಳತೆ ಇವುಗಳು ಸತ್ತ್ವಗುಣದ ವೃತ್ತಿಗಳು.
- ಇಚ್ಛೆ, ಪ್ರಯತ್ನ, ಮದ, ತೃಷ್ಣೆ, ಗರ್ವ, ಭೇದಬುದ್ಧಿ, ವಿಷಯಭೋಗ, ಯುದ್ಧಾದಿಗಳಲ್ಲಿ ಮದಜನಿತ ಉತ್ಸಾಹ, ಸ್ವಕೀರ್ತಿಯಲ್ಲಿ ಪ್ರೀತಿ, ಹಾಸ್ಯ, ಪರಾಕ್ರಮ, ಹಠ ಇವು ರಜೋಗುಣದ ವೃತ್ತಿಗಳಾಗಿವೆ.
- ಇನ್ನು ಅಸಹಿಷ್ಣುತೆ, ಲೋಭ, ಸುಳ್ಳು, ಹಿಂಸೆ, ಯಾಚನೆ, ಡಂಭಾಚಾರ, ಕಲಹ, ಶೋಕ, ಮೋಹ, ವಿಷಾದ, ದೀನತೆ, ನಿದ್ದೆ, ಆಸೆ, ಭಯ, ಅಕರ್ಮಣ್ಯತೆ ಇವುಗಳೆಲ್ಲಾ ತಮೋಗುಣದ ವೃತ್ತಿಗಳಾಗಿವೆ.
- ಈ ಮೂರೂ ಗುಣಗಳ ಸಮ್ಮಿಶ್ರದಿಂದಲೇ ಮಾನವನು ಧರ್ಮ, ಅರ್ಥ, ಕಾಮರೂಪೀ ಪುರುಷಾರ್ಥಗಳನ್ನು ಸಾಧಿಸುತ್ತಾನೆ. ಸತ್ತ್ವಗುಣದಿಂದ ಶ್ರದ್ಧೆಯೂ ರಜೋಗುಣದಿಂದ ಆಸಕ್ತಿಯೂ ತಮೋಗುಣದಿಂದ ಧನವೂ ಪ್ರಾಪ್ತಿಯಾಗುವುದರಿಂದ ಈ ಮೂರೂ ಗುಣಗಳ ಮಿಶ್ರಣದಿಂದಲೇ ಕ್ರಿಯೆಗಳು ನಡೆಯುತ್ತವೆ.
ನಮ್ಮಲ್ಲಿ ಯಾವ ಗುಣಜಾಗೃತ ಅಗಿದೆಯೆಂಬುದನ್ನು ತಿಳಿಯುವುದು ಹೇಗೆ?
- ಸಾತ್ತ್ವಿಕ ಗುಣವೇ ಶ್ರೇಷ್ಠವೂ ಮೋಕ್ಷದಾಯಕವೂ ಆಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಂದ್ರಿಯಗಳ ಕಾರಣದಿಂದ ನಮ್ಮ ವೃತ್ತಿಯು ಸಾತ್ತ್ವಿಕ, ರಾಜಸ ಮತ್ತು ತಾಮಸ ಗುಣಗಳಿಂದ ಪ್ರಭಾವಿತವಾಗುತ್ತದೆ.
- ಗುಣಗಳಲ್ಲಿ ಯಾವ ಗುಣ ನಮ್ಮಲ್ಲಿ ಹೆಚ್ಚಿದೆ ಎಂಬುದನ್ನು ತಿಳಿದುಕೊಳ್ಳಲು ಮಧ್ಬಾಗವತದಲ್ಲಿ ಸುಲಭ ಉಪಾಯಗಳನ್ನು ಹೇಳಲಾಗಿದೆ.
- ಯಾವಾಗ ಮನಸ್ಸು ಪ್ರಸನ್ನವಾಗುವುದೋ ಇಂದ್ರಿಯಗಳು ಶಾಂತವಾಗುವುದೋ ದೇಹವು ನಿರ್ಭೀತವಾಗುವುದೋ ಮನಸ್ಸಿನಲ್ಲಿ ಆಸಕ್ತಿಗಳಿಲ್ಲವಾಗುವುದೋ ಆಗ ಸತ್ತ್ವಗುಣವು ವೃದ್ಧಿಯಾಗಿದೆ ಎಂದರ್ಥ.
- ಬುದ್ಧಿಚಾಂಚಲ್ಯ, ಜ್ಞಾನೇಂದ್ರಿಯಗಳು ಅಸಂತುಷ್ಟವಾಗಿರುವುದು, ಕರ್ಮೇಂದ್ರಿಯಗಳು ವಿಕಾರದಿಂದ ಕೂಡಿರುವುದು, ಮನಸ್ಸು ಭ್ರಾಂತವಾಗಿ ಶರೀರವು ಅಸ್ವಸ್ಥವಾದಾಗ ರಜೋಗುಣ ಹೆಚ್ಚಿದೆ ಎಂದು ಅರಿಯಬೇಕು.
- ಯಾವಾಗ ಚಿತ್ತವು ಜ್ಞಾನೇಂದ್ರಿಯಗಳ ಮೂಲಕ ಶಬ್ದಾದಿ ವಿಷಯಗಳನ್ನು ಅರಿಯಲು ಅಸಮರ್ಥವಾದಾಗ ಮತ್ತು ಖಿನ್ನವಾಗಿ ಲೀನವಾಗತೊಡಗಿದಾಗ, ಮನಸ್ಸು ಬರಿದಾಗಿ, ಅಜ್ಞಾನ ವಿಷಾದಗಳು ಹೆಚ್ಚಿದಾಗ ತಮೋಗುಣವು ವೃದ್ಧಿಯಾಗಿದೆ ಎಂದರ್ಥ.
- ಹೀಗೆ ಕಾಲಕಾಲಕ್ಕೆ ನಮ್ಮ ಮನಸ್ಸಿನ ನಡೆಯನ್ನು ಪರೀಕ್ಷಿಸಿಕೊಳ್ಳುವ ಮೂಲಕ ಯಾವ ಗುಣದಿಂದ ನಾವು ಪ್ರಭಾವಿತರಾಗಿದ್ದೇವೆ ಎಂಬುದನ್ನು ಅರಿಯಬಹುದು.
- ಮನಸ್ಸಿನ ನಿಯಂತ್ರಣದಿಂದ ಸಾತ್ತ್ವಿಕಗುಣವನ್ನೇ ಹೆಚ್ಚೆಚ್ಚು ಬೆಳೆಸಿಕೊಂಡಾಗ ನಾವು ನೆಮ್ಮದಿಯ ಜೀವನವನ್ನು ಅನುಭವಿಸುವುದಲ್ಲದೆ ಇತರರಿಗೂ ಇದರಿಂದ ಒಳ್ಳೆಯದೇ ಆಗುತ್ತದೆ. ಅಸೂಯೆ, ಕ್ರೋಧ, ಮದಾದಿ ಸಂಗತಿಗಳು ಪರಸ್ಪರರಲ್ಲಿ ಸಹಬಾಳ್ವೆಗೆ ತೊಂದರೆಯನ್ನುಂಟುಮಾಡುತ್ತವೆ.
- ಶರೀರದಿಂದ ಬಿಡುಗಡೆ ಹೊಂದಲು ಸತ್ತ್ವಗುಣವೇ ಸುಲಭ ಮಾರ್ಗ. ಯಾಕೆಂದರೆ ಸತ್ತ್ವಗುಣದಿಂದ ಸ್ವರ್ಗವೂ ರಜೋಗುಣದಿಂದ ಮತ್ತೆ ಮನುಷ್ಯಲೋಕವೂ ಹಾಗೂ ತಮೋಗುಣದಿಂದ ನರಕವು ಪ್ರಾಪ್ತಿಯಾಗುತ್ತದೆ. ಸಾತ್ತ್ವಿಕತೆ ನಮ್ಮಲ್ಲಿ ಇಲ್ಲವಾದಾಗ ರಜ ತಮೋಗುಣಗಳಿಂದಾಗಿ ಭೂಲೋಕವೇ ನರಕವಾಗುತ್ತದೆ.
- ಇವತ್ತು ಇದೇ ಕಾರಣದಿಂದಾಗಿಯೇ ನಾವು ಬದುಕುತ್ತಿರುವ ಈ ನೆಲ ನರಕರೂಪವನ್ನು ಪಡೆದುಕೊಳ್ಳುತ್ತಿದೆಯೇ? ಎಂಬುದನ್ನು ನಮ್ಮಲ್ಲಿ ನಾವು ಕೇಳಿಕೊಳ್ಳಬೇಕಾಗಿದೆ; ಬದಲಾವಣೆಯನ್ನು ತರಬೇಕಿದೆ.
- ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ